ಬಿಎಂಟಿಸಿಯ ಜಾಗ ಭೂಗಳ್ಳರ ಪಾಲು; ಆಸ್ತಿ ಒತ್ತುವರಿದಾರರ ಜೊತೆಗೆ ಅಧಿಕಾರಿಗಳೂ ಶಾಮೀಲು
ಬಿಎಂಟಿಸಿ ಇಲಾಖೆ ಬಳಿ ಸಾವಿರಕ್ಕೂ ಹೆಚ್ಚು ಎಕರೆ ಭೂಮಿಯಿದೆ. ಆದರೆ ಆ ಆಸ್ತಿಗಳನ್ನು ಭೂಗಳ್ಳರು ಒತ್ತುವರಿ ಮಾಡಲು ಮುಂದಾಗಿದ್ದಾರೆ. ಇದನ್ನು ರಕ್ಷಣೆ ಮಾಡಬೇಕಾದ ಅಧಿಕಾರಿಗಳೇ ಭೂಗಳ್ಳರ ಜೊತೆಗೆ ಶಾಮೀಲಾಗಿರುವ ಆರೋಪ ಕೇಳಿ ಬಂದಿದೆ. ಒತ್ತುವರಿ ತೆರವು ಮಾಡಬೇಕಿದ್ದ ಬಿಎಂಟಿಸಿಯ ಕೆಲ ಅಧಿಕಾರಿಗಳು ಅಕ್ಕಪಕ್ಕದ ಸೈಟ್ ಮಾಲೀಕರ ಜೊತೆಗೆ ಶಾಮೀಲಾಗಿ ಸೈಲೆಂಟ್ ಆಗಿದ್ದಾರೆ ಎಂದು ಸಾರಿಗೆ ನೌಕರರ ಮುಖಂಡರು ಆರೋಪ ಮಾಡುತ್ತಿದ್ದಾರೆ.
ಬೆಂಗಳೂರು, ಸೆ.25: ಬಿಎಂಟಿಸಿಯಲ್ಲಿ (BMTC) ಒಟ್ಟು 1026 ಎಕರೆ ಆಸ್ತಿಯಿದೆ. ಆದರೆ ಆ ಆಸ್ತಿಯಲ್ಲಿ ಸುಮಾರು ನೂರು ಎಕರೆಯಷ್ಟು ಭೂಗಳ್ಳರು ಒತ್ತುವರಿ ಮಾಡಿ ಕಬ್ಜಾ ಮಾಡಲು ಮುಂದಾಗಿದ್ದಾರೆ. ಒತ್ತುವರಿ ಬಗ್ಗೆ ಗೊತ್ತಿದ್ರು, ಬಿಎಂಟಿಸಿಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವ ಆರೋಪ ಕೇಳಿ ಬಂದಿದೆ. ನೂರಾರು ಕೋಟಿ ರುಪಾಯಿ ಬೆಲೆ ಬಾಳುವ ಆಸ್ತಿಗೆ ಯಾವುದೇ ಕಾಂಪೌಂಡ್, ಬೇಲಿಯನ್ನು ಹಾಕದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಶಾಂತಿನಗರ, ಪದ್ಮನಾಭ ನಗರ, ಉತ್ತರಹಳ್ಳಿ, ಕೆಂಗೇರಿ, ಬೆಟ್ಟದಾಸಪುರ, ಬನಶಂಕರಿ ಸೇರಿದಂತೆ ಬೆಂಗಳೂರಿನ ಸಾಕಷ್ಟು ಏರಿಯಾಗಳಲ್ಲಿ ಒಂದು ಸಾವಿರ ಎಕರೆಗೂ ಹೆಚ್ಚು ಜಾಗವಿದೆ.
ಈಗಾಗಲೇ ಅಕ್ಕಪಕ್ಕದ ಸೈಟ್ ಮಾಲೀಕರು ಸ್ವಲ್ಪ ಸ್ವಲ್ಪ ಜಾಗವನ್ನು ಒತ್ತುವರಿ ಮಾಡಿ ಕಟ್ಟಡವನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ, ಆದರೆ ಒತ್ತುವರಿ ತೆರವು ಮಾಡಬೇಕಿದ್ದ ಬಿಎಂಟಿಸಿಯ ಕೆಲ ಅಧಿಕಾರಿಗಳು ಅಕ್ಕಪಕ್ಕದ ಸೈಟ್ ಮಾಲೀಕರ ಜೊತೆಗೆ ಶಾಮೀಲಾಗಿ ಸೈಲೆಂಟ್ ಆಗಿದ್ದಾರೆ ಎಂದು ಸಾರಿಗೆ ನೌಕರರ ಮುಖಂಡರು ಆರೋಪ ಮಾಡುತ್ತಿದ್ದಾರೆ.
ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರ ಸಾಧ್ಯತೆ: ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಸಂಚಾರ ಸ್ಥಗಿತದ ಆತಂಕ
ಇನ್ನೂ ಒತ್ತುವರಿ ಮಾಡಿರುವ ಜಾಗವನ್ನು ಕಾನೂನು ಮೂಲಕ ಹೋರಾಟ ಮಾಡಿ ಆ ಜಾಗದಲ್ಲಿ ಬಿಎಂಟಿಸಿಯ ನೌಕರರಿಗೆ, ಅವರ ಕುಟುಂಬದವ್ರಿಗೆ ಒಂದು ಆಸ್ಪತ್ರೆ, ನೌಕರರಿಗೆ ಮನೆ ಅಥವಾ ನೌಕರರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸ್ಕೂಲ್ ಆದ್ರು ನಿರ್ಮಾಣ ಮಾಡಿ, ಇಲ್ಲಾಂದ್ರೆ ಎರಡ್ಮೂರು ವರ್ಷಗಳಲ್ಲಿ ಎಲ್ಲಾ ಜಾಗವನ್ನು ಭೂಗಳ್ಳರು ಒತ್ತುವರಿ ಮಾಡಿ ಕಟ್ಟಡವನ್ನು ನಿರ್ಮಾಣ ಮಾಡುತ್ತಾರೆ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಬಗ್ಗೆ ಮಾತಾನಾಡಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಒಂದಿಂಚು ಭೂಮಿ ಒತ್ತುವರಿ ಮಾಡಲು ಬಿಡೋದಿಲ್ಲ ಇದಕ್ಕಾಗಿ ವಿಶೇಷವಾಗಿ ಅಧಿಕಾರಿಗಳನ್ನು ನೇಮಕ ಮಾಡ್ತಿವಿ ತನಿಖೆ ಮಾಡ್ತಿವಿ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಒತ್ತುವರಿ ತೆರವು ಮಾಡಿ ಬಿಎಂಟಿಸಿ ಆಸ್ತಿಗಳನ್ನು ರಕ್ಷಣೆ ಮಾಡಿ ಅಂದರೆ ಭೂಗಳ್ಳರ ಜೊತೆಗೆ ಶಾಮೀಲಾಗಿ ಅನ್ನ ಕೊಟ್ಟ ನಿಗಮಕ್ಕೆ ದ್ರೋಹ ಮಾಡುತ್ತಿರುವ ಅಧಿಕಾರಿಗಳಿಗೆ, ನಿಜಕ್ಕೂ ನಾಚಿಕೆ ಆಗಬೇಕು ಕೂಡಲೇ ಸಾರಿಗೆ ಸಚಿವರು ಬಿಎಂಟಿಸಿ ಆಸ್ತಿ ಉಳಿಸಲು ಅಧಿಕಾರಿಗಳನ್ನು ನೇಮಕ ಮಾಡ್ತಾರಾ? ಆಸ್ತಿ ಉಳಿಸಲು ಮುಂದಾಗುತ್ತಾರ ಎಂದು ಕಾದು ನೋಡಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ