ಕ್ಯಾರಿ ಬ್ಯಾಗ್‌ಗೆ ಗ್ರಾಹಕನಿಂದ 15 ರೂ. ವಸೂಲಿ; ಬೆಂಗಳೂರಿನ ಹೋಟೆಲ್‌ಗೆ ಬಿತ್ತು 10 ಸಾವಿರ ರೂ. ದಂಡ!

ಬೆಂಗಳೂರಿನ ಮೇಘನಾ ಫುಡ್ಸ್‌ಗೆ ಗ್ರಾಹಕರಿಂದ ₹15ರ ಬ್ರಾಂಡೆಡ್ ಕ್ಯಾರಿ ಬ್ಯಾಗ್‌ಗೆ ಶುಲ್ಕ ವಸೂಲಿ ಮಾಡಿದ ಪ್ರಕರಣದಲ್ಲಿ ಗ್ರಾಹಕ ಆಯೋಗ ₹10,000 ದಂಡ ವಿಧಿಸಿದೆ. ರೆಸ್ಟೋರೆಂಟ್‌ನ ಹೆಸರು ಮತ್ತು ಲೋಗೋ ಇರುವ ಬ್ಯಾಗ್‌ಗೆ ಹಣ ಪಡೆಯುವುದು ಅನ್ಯಾಯದ ವ್ಯಾಪಾರ ಪದ್ಧತಿ ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಗ್ರಾಹಕರಿಗೆ ಪರಿಹಾರ ನೀಡುವುದರ ಜೊತೆಗೆ ಗ್ರಾಹಕ ಕಾನೂನು ನೆರವು ನಿಧಿಗೆ ದಂಡ ಪಾವತಿಸುವಂತೆ ಆದೇಶಿಸಿದೆ.

ಕ್ಯಾರಿ ಬ್ಯಾಗ್‌ಗೆ ಗ್ರಾಹಕನಿಂದ 15 ರೂ. ವಸೂಲಿ; ಬೆಂಗಳೂರಿನ ಹೋಟೆಲ್‌ಗೆ ಬಿತ್ತು 10 ಸಾವಿರ ರೂ. ದಂಡ!
ಸಾಂದರ್ಭಿಕ ಚಿತ್ರ

Updated on: Nov 20, 2026 | 2:34 PM

ಮುಖ್ಯಾಂಶಗಳು

  • ಬೆಂಗಳೂರಿನ ಮೇಘನಾ ಫುಡ್ಸ್‌ಗೆ ಕ್ಯಾರಿ ಬ್ಯಾಗ್ ಶುಲ್ಕ ವಿಧಿಸಿದ್ದಕ್ಕೆ ದಂಡ.
  • ₹15ರ ಬ್ರಾಂಡೆಡ್ ಬ್ಯಾಗ್ ಮಾರಾಟ ಅನ್ಯಾಯದ ವ್ಯಾಪಾರವೆಂದು ಆಯೋಗ ಅಭಿಪ್ರಾಯ.
  • ಗ್ರಾಹಕರಿಗೆ ಪರಿಹಾರ, ಗ್ರಾಹಕ ಕಾನೂನು ನೆರವು ನಿಧಿಗೆ ದಂಡ ಪಾವತಿಸಲು ಆದೇಶ.

ಬೆಂಗಳೂರು, ನವೆಂಬರ್ 20: ಹೋಟೆಲ್‌ಗಳಲ್ಲಿ ಊಟ ಮಾಡಿದರೆ ಅಥವಾ ಆನ್‌ಲೈನ್‌ನಲ್ಲಿ ಆಹಾರ ಆರ್ಡರ್ ಮಾಡಿದರೆ ಕ್ಯಾರಿ ಬ್ಯಾಗ್‌ಗೆ ಪ್ರತ್ಯೇಕವಾಗಿ ಹಣ ವಸೂಲಿ ಮಾಡುವುದು ಸಾಮಾನ್ಯವಾಗಿದೆ. ಆದರೆ ಗ್ರಾಹಕರಿಗೆ ನೀಡುವ ಬ್ಯಾಗ್ ಮೇಲೆ ಹೋಟೆಲ್‌ನ ಹೆಸರು, ಲೋಗೋ ಮತ್ತು ಬ್ರ್ಯಾಂಡ್ ಇದ್ದರೆ ಅದಕ್ಕೆ ಗ್ರಾಹಕರಿಂದ ಹಣ ಪಡೆಯಬಹುದೇ? ಇಂತಹದ್ದೇ ಪ್ರಶ್ನೆ ಇದೀಗ ಬೆಂಗಳೂರಿನಲ್ಲಿ ಚರ್ಚೆಗೆ ಗ್ರಾಸವಾಗಿದೆ. ರೆಸ್ಟೋರೆಂಟ್‌ನ ಹೆಸರಿರುವ ಆಹಾರ ಪಾರ್ಸೆಲ್ ಬ್ಯಾಗ್‌ಗೆ 15 ರೂಪಾಯಿ ಶುಲ್ಕ ವಿಧಿಸಿದ್ದಕ್ಕಾಗಿ ಬೆಂಗಳೂರಿನ ಮೆಘನಾ ಫುಡ್ಸ್‌ಗೆ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ 10 ಸಾವಿರ ರೂಪಾಯಿ ದಂಡ ವಿಧಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

15 ಬ್ಯಾಗ್ ಶುಲ್ಕಕ್ಕೆ ಗ್ರಾಹಕನ ಆಕ್ಷೇಪ!

ಬೆಂಗಳೂರಿನ ಗಿರಿನಗರ ನಿವಾಸಿ 25 ವರ್ಷದ ಪ್ರಣವ ಕೆ.ಎನ್. ಅವರು 2026ರ ಮೇ 8ರಂದು ರಾಜಾಜಿನಗರದ ಡಾ. ರಾಜ್‌ಕುಮಾರ್ ರಸ್ತೆಯಲ್ಲಿರುವ ಮೆಘನಾ ಫುಡ್ಸ್‌ನಿಂದ ಜೊಮ್ಯಾಟೊ ಮೂಲಕ ಪನೀರ್ ಬಿರಿಯಾನಿ ಆರ್ಡರ್ ಮಾಡಿದ್ದರು. ಈ ವೇಳೆ ಆಹಾರದ ಬಿಲ್‌ನಲ್ಲಿ 15 ರೂಪಾಯಿ ರೆಸ್ಟೋರೆಂಟ್ ಪ್ಯಾಕೇಜಿಂಗ್ ಶುಲ್ಕ ವಿಧಿಸಲಾಗಿತ್ತು. ಜಿಎಸ್‌ಟಿ ಸೇರಿ ಈ ಮೊತ್ತ 15.70 ರೂಪಾಯಿಯಾಗಿತ್ತು. ಒಟ್ಟು ಬಿಲ್ 451.50 ರೂಪಾಯಿ ಆಗಿದ್ದರೆ, ಪ್ರತ್ಯೇಕವಾಗಿ 17.50 ರೂಪಾಯಿ ಪ್ಲಾಟ್‌ಫಾರ್ಮ್ ಶುಲ್ಕವನ್ನೂ ವಿಧಿಸಲಾಗಿತ್ತು.

Loading...

ಆದರೆ ರೆಸ್ಟೋರೆಂಟ್‌ನ ಹೆಸರು, ಲೋಗೋ ಮತ್ತು ಬ್ರ್ಯಾಂಡ್ ಗುರುತು ಹೊಂದಿರುವ ಕ್ಯಾರಿ ಬ್ಯಾಗ್‌ಗೆ ಗ್ರಾಹಕರಿಂದ ಹಣ ಪಡೆಯುವುದು ಸರಿಯಲ್ಲ ಎಂಬುದು ಪ್ರಣವ್ ಅವರ ವಾದವಾಗಿತ್ತು. ಬ್ಯಾಗ್ ಮೂಲಕ ರೆಸ್ಟೋರೆಂಟ್‌ಗೆ ಉಚಿತ ಪ್ರಚಾರವೂ ಸಿಗುತ್ತದೆ. ಅದರ ವೆಚ್ಚವನ್ನೂ ಗ್ರಾಹಕರೇ ಭರಿಸುವುದು ಅನ್ಯಾಯ ಎಂದು ಆಕ್ಷೇಪಿಸಿದ್ದರು.

ನೋಟಿಸ್ ನೀಡಿದರೂ ಸ್ಪಂದಿಸದ ಹೋಟೆಲ್!

ಈ ಕುರಿತು ಜೊಮ್ಯಾಟೊ ಮತ್ತು ಮೆಘನಾ ಫುಡ್ಸ್‌ಗೆ ಇಮೇಲ್ ಮೂಲಕ ದೂರು ನೀಡಿದ್ದರು. ಆಗಸ್ಟ್ 5ರಂದು ಕಾನೂನು ನೋಟಿಸ್ ಕೂಡ ಕಳುಹಿಸಿದ್ದರು. ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಆಗಸ್ಟ್ 27ರಂದು ಗ್ರಾಹಕ ಆಯೋಗದ ಮೊರೆ ಹೋಗಿದ್ದರು.

10 ಸಾವಿರ ದಂಡ ವಿಧಿಸಿದ ಗ್ರಾಹಕ ಆಯೋಗ

ಪ್ರಕರಣದ ವಿಚಾರಣೆ ವೇಳೆ ಮೆಘನಾ ಫುಡ್ಸ್ ಪರವಾಗಿ ಯಾರೂ ಹಾಜರಾಗಿರಲಿಲ್ಲ. ಹೀಗಾಗಿ ಆಯೋಗ ಏಕಪಕ್ಷೀಯವಾಗಿ ವಿಚಾರಣೆ ನಡೆಸಿತು. ರೆಸ್ಟೋರೆಂಟ್ ನಿಜವಾಗಿಯೂ ಗ್ರಾಹಕರ ಹಿತಾಸಕ್ತಿ ಗಮನಿಸಿದ್ದರೆ ತನ್ನ ಹೆಸರು ಮತ್ತು ಲೋಗೋ ಇಲ್ಲದ ಸಾಮಾನ್ಯ ಬ್ಯಾಗ್ ನೀಡಬಹುದಿತ್ತು ಎಂದು ಆಯೋಗ ಅಭಿಪ್ರಾಯಪಟ್ಟಿದೆ.

ನವೆಂಬರ್ 12ರಂದು ಬೆಂಗಳೂರು ನಗರ ನಾಲ್ಕನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಮಹತ್ವದ ಆದೇಶ ನೀಡಿದೆ. ಗ್ರಾಹಕರಿಗೆ 5 ಸಾವಿರ ರೂಪಾಯಿ ಪರಿಹಾರ ಹಾಗೂ ಮತ್ತೊಂದು 5 ಸಾವಿರ ರೂಪಾಯಿ ದಂಡ ವಿಧಿಸಿದೆ. ಈ ಮೊತ್ತವನ್ನು 45 ದಿನಗಳೊಳಗೆ ಪಾವತಿಸಬೇಕು. ತಪ್ಪಿದರೆ ಶೇಕಡಾ 8ರಷ್ಟು ಬಡ್ಡಿ ಅನ್ವಯವಾಗಲಿದೆ. ಜೊಮ್ಯಾಟೊ ವಿರುದ್ಧದ ದೂರನ್ನು ಗ್ರಾಹಕರು ಮುಂದುವರಿಸದ ಹಿನ್ನೆಲೆಯಲ್ಲಿ ಆ ಸಂಸ್ಥೆಗೆ ಸಂಬಂಧಿಸಿದ ಪ್ರಕರಣವನ್ನು ವಜಾಗೊಳಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
Loading...
Unable to load recommendations.
Follow Us