ಮೆಟ್ರೋ ದರ ಏರಿಕೆ ಶಾಕ್: ಟೆಕೆಟ್ ಮಾತ್ರವಲ್ಲ ಒನ್ ಡೇ, 3 ಡೇ, 5ಡೇ ಪಾಸ್ ದರವೂ ದುಪ್ಪಟ್ಟು
ನಮ್ಮ ಮೆಟ್ರೋ.. ನಮ್ಮ ಹೆಮ್ಮೆ.. ಬೆಂಗಳೂರಿಗರ ಜೀವನಾಡಿ.. ಲಕ್ಷಾಂತರ ಜನರಿಗೆ ಆಧಾರವಾಗಿದೆ. ಈ ಟ್ರಾಫಿಕ್ನಿಂದ ಬೇಸತ್ತು ಜನ ಮೆಟ್ರೋಗೆ ಮುಗಿಬೀಳುತ್ತಿದ್ದರು. ಅದೆಷ್ಟೋ ಜನರಿಗೆ ಮೊದಲ ಮೆಟ್ರೋ ಸಂಚಾರ ವಿಮಾನದಲ್ಲಿ ಓಡಾಡಿರೋ ಖುಷಿಯೂ ಕೊಟ್ಟಿತ್ತು. ಆದ್ರೆ ಇದೀಗ ಟಿಕೆಟ್ ದರ ಏರಿಕೆಯಿಂದಾಗಿ ಜನರು ಹಂತ ಹಂತವಾಗಿ ಮೆಟ್ರೋ ಪ್ರಯಾಣಕ್ಕೆ ಗುಡ್ಬಾಯ್ ಹೇಳುತ್ತಿದ್ದಾರೆ. ಇನ್ನು ಮೆಟ್ರೋ ಪಾಸ್ ದರ ಸಹ ದುಪ್ಪಟ್ಟಾಗಿದೆ. ಹಾಗಾದ್ರೆ, ಒನ್ ಡೇ, 3 ಡೇ,5ಡೇ ಪಾಸ್ ದರ ಎಷ್ಟು ಏರಿಕೆಯಾಗಿದೆ ಎನ್ನುವ ವಿವರ ಇಲ್ಲಿದೆ.

ಬೆಂಗಳೂರು, (ಫೆಬ್ರವರಿ 13): ಸಾಮಾನ್ಯ ದರದಲ್ಲೇ ಹಾಯಾಗಿ ನಮ್ಮ ಮೆಟ್ರೋದಲ್ಲಿ ಓಡಾಡುತ್ತಿದ್ದ ಲಕ್ಷಾಂತರ ಜನರಿಗೆ, ಮೆಟ್ರೋ ದರ ಏರಿಕೆಯಿಂದ ಶಾಕ್ ಕೊಟ್ಟಂತಾಗಿದೆ. ಅದ್ಯಾವ ಮಟ್ಟಿಗೆ ಅಂದ್ರೆ ಟಿಕೆಟ್ ದರದಲ್ಲಿ ಒನ್ ಟು ಡಬಲ್. ಟಿಕೆಟ್ ದರ ಬೆನ್ನಲ್ಲೇ ಇದೀಗ ಬಿಎಂಆರ್ಸಿಎಲ್, ಒನ್ ಡೇ, 3 ಡೇ,5ಡೇ ಪಾಸ್ ದರ ಯಥೇಚ್ಚಾಗಿ ಏರಿಕೆ ಮಾಡಲಾಗಿದೆ. ನಮ್ಮ ಮೆಟ್ರೋ ನಷ್ಟದಲ್ಲಿ ಎಂದು ಪ್ರಯಾಣಿಕರ ಸುಲಿಗೆ ಮಾಡಲಾಗುತ್ತಿದ್ಯಾ? ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.
ಮೆಟ್ರೋ ಪಾಸ್ ದರ ದಪ್ಪಟ್ಟು
ಮೆಟ್ರೋ ದಿನದ ಪಾಸ್ ಗೆ ಈ ಮೊದಲು 150 ರೂ ಇತ್ತು. 3 ದಿನದ ಪಾಸ್ 350 ರೂ. ಹಾಗೂ 5 ದಿನದ ಪಾಸ್ ಗೆ 550 ಇತ್ತು. ಆದ್ರೆ, ಇದೀಗ ಈ ಪಾಸ್ಗಳ ದುಪ್ಪಟ್ಟಾಗಿದೆ. ಈಗ ಪ್ರಸ್ತುತ 1 ದಿನದ ಪಾಸ್ ದರ 150ರಿಂದ 300 ರೂ.ಗೆ ಏರಿಕೆಯಾಗಿದ್ದರೆ, 3 ದಿನದ ಪಾಸ್ 350ರಿಂದ 600 ರೂಪಾಯಿಗೆ ಏರಿಕೆಯಾಗಿದೆ. ಇನ್ನು ಐದು ದಿನಗಳ ಪಾಸ್ 550 ರೂ.ನಿಂದ 800 ರೂಪಾಯಿವರೆಗೆ ಏರಿಕೆ ಮಾಡಲಾಗಿದೆ.
ಇದನ್ನೂ ಓದಿ: ದರ ಏರಿಕೆ ಮಾಡಿದ ಬಿಎಂಆರ್ಸಿಎಲ್ಗೆ ಸೆಡ್ಡು: ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆ!
BMTC ಬಿಎಂಟಿಸಿ ಬಸ್ ದಿನದ ಪಾಸ್ ದರ 80 ರೂ ಇದ್ದರೆ, ವಾರದ ಪಾಸ್ 350 ರೂಪಾಯಿ ಇದೆ. ಇಡೀ ನಗರದಲ್ಲಿ ಸುತ್ತಾಡಬಹುದಾದ ಬಿಎಂಟಿಸಿ ಬಸ್ ಪಾಸ್ ದರ ಕಡಿಮೆ ಇದ್ರೆ, ಕೇವಲ 4 ಮಾರ್ಗದಲ್ಲಿ ಮಾತ್ರ ಸಂಚಾರಿಸುವ ಮೆಟ್ರೋ ಪಾಸ್ ದರ ಬಲು ದುಬಾರಿಯಾಗಿದೆ.
ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆ
ಸಾಮಾನ್ಯ ದರದಲ್ಲೇ ಹಾಯಾಗಿ ಮೆಟ್ರೋದಲ್ಲಿ ಓಡಾಡ್ತಿದ್ದ ಲಕ್ಷಾಂತರ ಜನರಿಗೆ, ಮೆಟ್ರೋ ದರ ಏರಿಕೆಯಿಂದ ಶಾಕ್ ಕೊಟ್ಟಂತಾಗಿದೆ. ಅದ್ಯಾವ ಮಟ್ಟಿಗೆ ಅಂದ್ರೆ, ದರದಲ್ಲಿ ಒನ್ ಟು ಡಬಲ್ ಮಾಡಿರೋದು, ಈ ಮೆಟ್ರೋ ಸಹವಾಸವೇ ಬೇಡ ಅನ್ನೋ ಮಟ್ಟಿಗೆ ಜನರು ಆಕ್ರೋಶ ಹೊರಹಾಕ್ತಿದ್ದಾರೆ. ಶೇ.35ರಿಂದ 40ರಷ್ಟು ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಯೂ ಆಗಿದೆ. ಯಾಕೆಂದ್ರೆ ನಿತ್ಯ ಮೆಟ್ರೋದಲ್ಲಿ 8ರಿಂದ 9 ಲಕ್ಷ ಪ್ರಯಾಣಿಕರು ಓಡಾಡ್ತಾರೆ. ಆದ್ರೆ ದರ ಏರಿಕೆ ಬೆನ್ನಲ್ಲೇ ನಿತ್ಯ 6ರಿಂದ 7 ಲಕ್ಷಕ್ಕೆ ಪ್ರಯಾಣಿಕರ ಸಂಚಾರ ಇಳಿಕೆ ಆಗಿದೆ. ಇನ್ನು ಪ್ರಯಾಣಿಕರ ಸಂಖ್ಯೆ ಇಳಿಕೆ ಆದ್ಮೇಲೆ, ಕೆಲೆಕ್ಷನ್ನಲ್ಲೂ ಕಡಿಮೆ ಆಗೋದು ಸಹಜ ಆಗಿದೆ.
ಇಂದು ಮಧ್ಯಾಹ್ನ ಮಹತ್ವದ ತೀರ್ಮಾನ
ಇನ್ನು ಮೆಟ್ರೋ ದರ ಯಥೇಚ್ಚಾಗಿ ಏರಿಕೆಯಾಗಿರುವುದರಿಂದ ಪ್ರಯಾಣಿಕರು ಆಕ್ರೋಶಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಶುರು ಮಾಡಿದ್ದಾರೆ. ಇದರಿಂದ ಎಚ್ಚೆತ್ತ ಸಿಎಂ ಸಿದ್ದರಾಮಯ್ಯ, ಯಾವ ಯಾವ ಸ್ಟೇಜ್ಗಳಲ್ಲಿ ದುಪ್ಪಟ್ಟು ದರ ಏರಿಕೆ ಮಾಡಲಾಗಿದೆ ಎಂದು ಪರಿಶೀಲಿಸಿ ಕೂಡಲೇ ಕಡಿತಗೊಳಿಸುವಂತೆ ಬಿಎಂಆರ್ಸಿಎಲ್ಗೆ ಸೂಚನೆ ನೀಡಿದ್ದಾರೆ.
ಇದರ ಬೆನ್ನಲ್ಲೇ ಬಿಎಂಆರ್ಸಿಎಲ್ ಅಧಿಖಾರಿಗಳು ಮಹತ್ವದ ಸಭೆ ನಡೆಸಿದ್ದು, ಈ ದರ ಏರಿಕೆ ಸಂಬಂಧ ಸಂಪೂರ್ಣ ಮಾಹಿತಿಯನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ನೀಡಲಿದ್ದಾರೆ. ಬಳಿಕ ಇಂದು (ಫೆಬ್ರವರಿ 13) ಮಧ್ಯಾಹ್ನ 2.30ಕ್ಕೆ ಬಿಎಂಆರ್ಸಿಎಲ್ ಎಂಡಿ ಮಹೇಶ್ವರ ರಾವ್ ಸುದ್ದಿಗೋಷ್ಠಿ ನಡೆಸಲಿದ್ದು, ದರ ಏರಿಕೆ ಸಂಬಂಧ ಸ್ಪಷ್ಟನೆ ನೀಡಲಿದ್ದಾರೆ.