ಬೆಂಗಳೂರು: ಹನುಮಾನ್ ಚಾಲಿಸಾ ಹಾಕಿದ್ದಕ್ಕೆ ಹಲ್ಲೆ: ಹಿಂದೂ ಕಾರ್ಯಕರ್ತರ ರ್‍ಯಾಲಿ, ತೇಜಸ್ವಿ ಸೂರ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು
ಬೆಂಗಳೂರಿನ ನಗರತ್ಪೇಟೆಯಲ್ಲಿರುವ ಮೊಬೈಲ್ ಅಂಗಡಿಯಲ್ಲಿ ಜೋರಾಗಿ ಸೌಂಡ್ ಇಟ್ಟು ಹನುಮಾನ ಚಾಲಿಸಾ ಹಾಡು ಹಾಕಿದ್ದಕ್ಕೆ ಯುವಕನ ಮೇಲೆ ಹಲ್ಲೆ ಮಾಡಲಾಗಿತ್ತು. ಹಲ್ಲೆ ಮಾಡಿದ್ದ ಐವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದೀಗ ಹಿಂದೂ ಕಾರ್ಯಕರ್ತರು ನಗರತ್ಪೇಟೆಯಲ್ಲಿ ರ್‍ಯಾಲಿ ನಡೆಸಲು ಯೋಚಿಸಿದ್ದಾರೆ.
ಬೆಂಗಳೂರು, ಮಾರ್ಚ್ 19: ನಗರತ್ಪೇಟೆಯಲ್ಲಿನ (Nagarathpet) ಮೊಬೈಲ್ ಅಂಗಡಿಯಲ್ಲಿ ಹನುಮಾನ್ ಚಾಲಿಸಾ (Hanuman Chalisa) ಹಾಡು ಹಾಕಿದ್ದಕ್ಕೆ ಅಂಗಡಿ ಮಾಲಿಕನ ಮೇಲೆ ಹಲ್ಲೆ ನಡೆಸಿದ್ದನ್ನು ಖಂಡಿಸಿ ಘಟನಾ ಸ್ಥಳದಲ್ಲಿ ಹನುಮ ಭಕ್ತರು ರ್‍ಯಾಲಿ ನಡೆಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ್ದ ಸಂಸದ ತೇಜಸ್ವಿ ಸೂರ್ಯ (Tejasvi Surya), ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಅವರನ್ನು ಪೊಲೀಸರು ವಶಕ್ಕೆ ಪಡೆದರು. ಇನ್ನು ಬಿಜೆಪಿ ಶಾಸಕ ಸುರೇಶ್ ಕುಮಾರ್ ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು.
ಕೆಪಿಸಿಸಿ ಕಾನೂನು ಘಟಕ ಮತ್ತು ಜನಾಂದೋಲನ ಸಂಘಟನೆ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಮುಖ್ಯ ಚುನಾವಣಾ ಅಧಿಕಾರಿಗೆ ದೂರು ನೀಡಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮತ್ತು ಬಸವನಗುಡಿ ಶಾಸಕ ರವಿಸುಬ್ರಮಣ್ಯ ಅವರು ಮಾರ್ಚ್ 18 ರಂದು ಸ್ಥಳಕ್ಕೆ ಭೇಟಿ ನೀಡಿದ್ದರು. ಅಂಗಡಿಯ ಮುಂದೆ ಗುಂಪು ಸೇರಿಸಿ ಇಂದು (ಮಾ.19) ಮಧ್ಯಾಹ್ನ 12 ಗಂಟೆಗೆ ಹನುಮಾನ್ ಚಾಲೀಸ ಪಠಣೆ ಮಾಡಲು ಕರೆ ನೀಡಿದ್ದಾರೆ. ಅಲ್ಲದೇ ಧಾರ್ಮಿಕ ಘೋಷಣೆಗಳನ್ನು ಕೂಗಿರುತ್ತಾರೆ. ಸರ್ವೋಚ್ಚ ನ್ಯಾಯಾಲಯದ ಆದೇಶ ಮತ್ತು ಚುನಾವಣಾ ಆಯೋಗದ ಪ್ರಕಾರ, ಚುನಾವಣೆಯ ಸಂದರ್ಭದಲ್ಲಿ ಕೋಮು, ಮತ, ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತಹ ಕೃತ್ಯವೆಸಗುವುದು ಅಪರಾಧ. ನೀತಿ ಸಂಹಿತೆ ಉಲ್ಲಂಘಿಸಿ ಪ್ರತಿಭಟನೆಗೆ ಕರೆ ನೀಡಲಾಗಿದೆ. ಹೀಗಾಗಿ ತೇಜಸ್ವಿ ಸೂರ್ಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ದೂರು ನೀಡಿದೆ.
ಇನ್ನು ಪ್ರತಿಭಟನೆ ನಡೆದಿದ್ದ ಸ್ಥಳದಲ್ಲಿ ಪೊಲೀಸರು ರೂಟ್ ಮಾರ್ಚ್ ಮಾಡಿದರು. ಸ್ಥಳಕ್ಕೆ ಹೆಚ್ಚಿನ ಪೋಲಿಸರನ್ನು ನಿಯೋಜಿಸಲಾಗಿದ್ದು, ಸಂಪೂರ್ಣ ನಗರವನ್ನು ಪೊಲೀಸರು ಹತೋಟಿಗೆ ತೆಗೆದುಕೊಂಡಿದ್ದಾರೆ.
ಅಷ್ಟಕ್ಕೂ ನಡೆದಿದ್ದು ಏನು?
ಮಾರ್ಚ್ 17 ರಂದು ನಗರತಪೇಟೆಯ ಕೃಷ್ಣ ಟೆಲಿಕಾಂ ಶಾಪ್ನ ಮುಖೇಶ್ ಮೇಲೆ ನಾಲ್ಕೈದು ಮಂದಿ ಹಲ್ಲೆ ನಡೆಸಿದ್ದರು. ಸಂಜೆ ವೇಳೆ ಅಂಗಡಿಯಲ್ಲಿ ಜೋರಾಗಿ ಹುಮಾನ್ ಚಾಲಿಸಾ ಹಾಕಿದ್ದಕ್ಕೆ ಮುಖೇಶ್ ಮೇಲೆ ಹಲ್ಲೆ ಮಾಡಲಾಗಿದೆ. ಹಲ್ಲೆಯ ದೃಶ್ಯ ಸಿಸಿಕ್ಯಾಮಾರದಲ್ಲಿ ಸೆರೆಯಾಗಿದೆ. ಸದ್ಯ ಹಲ್ಲೆ ಪ್ರಕರಣ ಸಂಬಂಧ ಪೊಲೀಸರು ಸುಲೇಮಾನ್, ಶನವಾಜ್, ಜಾಹೀದ್, ರೋಹಿತ್ ಮತ್ತು ತರುಣ್ ಒಟ್ಟು ಐವರು ಆರೋಪಿಗಳನ್ನ ಬಂಧಿಸಿದ್ದಾರೆ. ಈ ಮಧ್ಯೆ ಇಂದು, ಘಟನೆ ಖಂಡಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ಹನುಮಾನ್ ಚಾಲಿಸ್ ರ್‍ಯಾಲಿಗೆ ಕರೆ ನೀಡಿದರು. ನಗರತಪೇಟೆಯ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಪ್ರತಿಭಟನೆ ಆರಂಭಿಸಿದರು. ಪ್ರತಿಭಟನೆಯಲ್ಲಿ ಹಲ್ಲೆಗೊಳಗಾದ ಮುಖೇಶ್ ಸಹ ಭಾಗಿಯಾಗಿದ್ದರು. ಇದೇ ವೇಳೆ ಬಿಜೆಪಿಯ ರಾಜಾಜಿನಗರ ಕ್ಷೇತ್ರದ ಶಾಸಕ ಸುರೇಶ್ ಕುಮಾರ್ ಸಹ ಸ್ಥಳಕ್ಕೆ ಆಗಮಿಸಿ, ಱಲಿಗೆ ಬೆಂಬಲ ನೀಡಿದರು.
ಇದನ್ನೂ ಓದಿ: ಹನುಮಾನ್ ಚಾಲಿಸಾ ಹಾಕಿದ್ದಕ್ಕೆ ಹಲ್ಲೆ ಪ್ರಕರಣ: ಹಿಂದೂ ಕಾರ್ಯಕರ್ತರಿಂದ ರ್‍ಯಾಲಿ, ನಗರತ್ಪೇಟೆಯಲ್ಲಿ ಉದ್ವಿಗ್ನ ಪರಿಸ್ಥಿತಿ
ಆದರೆ, ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಅವಕಾಶ ಇಲ್ಲದೆ ಇರುವ ಕಾರಣಕ್ಕೆ, ಪ್ರತಿಭಟನಾ ನಿರತ ಮುಖೇಶ್ ಸೇರಿದಂತೆ ಕೆಲವರನ್ನು ಪೊಲೀಸರು ವಶಕ್ಕೆ ಪಡೆಯಲು ಮುಂದಾದರು. ಆಗ ಕೆರಳಿದ ಶಾಸಕ ಸುರೇಶ್ ಕುಮಾರ್, ಪೊಲೀಸ್ ಜೀಪಿಗೆ ಅಡ್ಡ ನಿಂತರು. ಈ ವೇಳೆ ಮಫ್ತಿಯಲ್ಲಿದ್ದ ಪೊಲೀಸರು ಸುರೇಶ್ಕುಮಾರ್ ಅವರನ್ನು ಎಳೆದಾಡಿದರು. ಸ್ಥಳದಲ್ಲಿ ಹೈಡ್ರಾಮಾ ಸೃಷ್ಟಿಯಾಯಿತು.
ಇನ್ನು ಇದೇ ವೇಳೆ ಸ್ಥಳಕ್ಕೆ ಕೇಂದ್ರ ಸಚಿವೆ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ ಸಹ ಆಗಮಿಸಿದರು. ಈ ವೇಳೆ ಸೇರಿದ ಜನರ ಘೋಷಣೆ, ಪ್ರತಿಭಟನೆ ಮತ್ತಷ್ಟು ತೀವ್ರ ಸ್ವರೂಪಕ್ಕೆ ತಿರುಗಿತು. ಒಂದು ಹಂತದಲ್ಲಿ ಶೋಭಾ ಕರಂದ್ಲಾಜೆ, ರಸ್ತೆಯಲ್ಲೇ ಕುಳಿತು ಪ್ರತಿಭಟನೆಗೆ ಮುಂದಾದರು. ಆದರೆ ಪೊಲೀಸರು ಇದಕ್ಕೆ ಅವಕಾಶ ಕೊಡಲಿಲ್ಲ.
ಇದನ್ನೂ ಓದಿ: ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ; ತೀವ್ರ ಸ್ವರೂಪ ಪಡೆದ ಪ್ರಕರಣ; ಕಠಿಣ ಕ್ರಮಕ್ಕೆ ವಿಜಯೇಂದ್ರ ಆಗ್ರಹ
ಹೀಗೆ ಶೋಭಾ ಕರಂದ್ಲಾಜೆ ಅವರನ್ನ ಪೊಲೀಸರು ವಶಕ್ಕೆ ಪಡೆದರು. ಬಳಿಕ ಉಳಿದ ಕಾರ್ಯಕರ್ತರು ರಸ್ತೆ ಮಧ್ಯೆ ಕುಳಿತು ಹನುಮಾನ್ ಚಾಲಿಸಾ ಪಠಿಸಿದರು. ಅತ್ತ ಹಲ್ಲೆಗೊಳಗಾದ ಮುಖೇಶ್ ಬಿಲ್ಡಿಂಗ್ ಮೇಲಿಂದ ಕೇಸರಿ ಶಾಲು ಬೀಸಿದರು. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗದಂತೆ ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಪೊಲೀಸ್ ಜೀಪಿನಿಂದಲೇ ಎಲ್ಲರೂ ಸ್ಥಳದಿಂದ ತೆರಳುವಂತೆ ಮನವಿ ಮಾಡಿದರು.
ಬಿಜೆಪಿ ನಾಯಕರ ವಿರುದ್ಧ ಗುಂಡೂರಾವ್ ವಾಗ್ದಾಳಿ
ಮುಖೇಶ್ ನೀಡಿದ ದೂರಿನಲ್ಲಿ ಹನುಮಾನ್ ಚಾಲೀಸಾ, ಆಜಾನ್ ಬಗ್ಗೆ ಎಲ್ಲೂ ಉಲ್ಲೇಖಿಸಿಲ್ಲ, ಆದರೆ ಬಿಜೆಪಿಯವರು ಸ್ವಾರ್ಥಕೋಸ್ಕರ ಇದನ್ನ ಬಳಸ್ತಿದ್ದಾರೆ ಅಂತ ಆರೋಪಿಸಿದ್ದಾರೆ.
ಒಟ್ಟಿನಲ್ಲಿ ಚುನಾವಣೆ ಹೊತ್ತಲ್ಲಿ ನಗರತಪೇಟೆ ಹಲ್ಲೆ ಪ್ರಕರಣವನ್ನು ಬಿಜೆಪಿ ಅಸ್ತ್ರ ಮಾಡಿಕೊಂಡಿದೆ. ಸರ್ಕಾರದ ವಿರುದ್ಧ ತುಷ್ಟೀಕರಣದ ಆರೋಪ ಹೊರಿಸಿ ಪ್ರತಿಭಟನೆ ನಡೆಸುತ್ತಿದೆ. ಇತ್ತ ಸರ್ಕಾರದ ಕಡೆಯಿಂದಲೂ ಕಾಂಗ್ರೆಸ್ ನಾಯಕರು ಬಿಜೆಪಿಗೆ ತಿರುಗೇಟು ನೀಡುತ್ತಿದ್ದಾರೆ. ಇದು ಇಷ್ಟಕ್ಕೆ ಮುಗಿಯೋ ಲಕ್ಷಣಗಳು ಸದ್ಯಕ್ಕೆ ಕಾಣಿಸುತ್ತಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:40 pm, Tue, 19 March 24