ಬೆಂಗಳೂರಿನ 917 ಕಡೆಗಳಲ್ಲಿ ಪೊಲೀಸರ ದಿಢೀರ್ ದಾಳಿ: 71ಕ್ಕೂ ಹೆಚ್ಚು ಮಕ್ಕಳ ರಕ್ಷಣೆ

ಬೆಂಗಳೂರು ಪಶ್ಚಿಮ ಹಾಗೂ ನೆಲಮಂಗಲದಲ್ಲಿ ಪೊಲೀಸರು ಭರ್ಜರಿ ಜಂಟಿ ಕಾರ್ಯಾಚರಣೆ ನಡೆಸಿ 71ಕ್ಕೂ ಹೆಚ್ಚು ಬಾಲಕಾರ್ಮಿಕರನ್ನು ರಕ್ಷಿಸಿದ್ದಾರೆ. ವಿವಿಧ ಅಂಗಡಿಗಳು, ಗ್ಯಾರೇಜ್‌ಗಳು ಮತ್ತು ಸಣ್ಣ ಕೈಗಾರಿಕೆಗಳ ಮೇಲೆ ದಾಳಿ ನಡೆಸಿ ಮಕ್ಕಳನ್ನು ಶೋಷಣೆಯಿಂದ ಪಾರು ಮಾಡಲಾಗಿದೆ. ಬಾಲಕಾರ್ಮಿಕ ಪದ್ಧತಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ಮುಂದುವರಿಯಲಿದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ. ರಕ್ಷಿಸಿದ ಮಕ್ಕಳನ್ನು ಮಕ್ಕಳ ಸಾಂತ್ವನ ಕೇಂದ್ರಕ್ಕೆ ರವಾನಿಸಲಾಗಿದೆ.

ಬೆಂಗಳೂರಿನ 917 ಕಡೆಗಳಲ್ಲಿ ಪೊಲೀಸರ ದಿಢೀರ್ ದಾಳಿ: 71ಕ್ಕೂ ಹೆಚ್ಚು ಮಕ್ಕಳ ರಕ್ಷಣೆ
ಬಾಲಕಾರ್ಮಿಕ ರಕ್ಷಣೆ
Edited By:

Updated on: Sep 12, 2026 | 7:19 PM

ನೆಲಮಂಗಲ, ಸೆ.12: ರಾಜಧಾನಿ ಬೆಂಗಳೂರು ಪಶ್ಚಿಮ ವಿಭಾಗ ಹಾಗೂ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶ್ರಮಿಕರಾಗಿ ದುಡಿಯುತ್ತಿದ್ದ ಸಣ್ಣ ಸಣ್ಣ ಮಕ್ಕಳನ್ನು ರಕ್ಷಿಸಲು ಪೊಲೀಸರು ಭರ್ಜರಿ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು 71ಕ್ಕೂ ಹೆಚ್ಚು ಬಾಲಕಾರ್ಮಿಕರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲಕಾರ್ಮಿಕರನ್ನು ಕಾನೂನುಬಾಹಿರವಾಗಿ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂಬ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಡಿವೈಎಸ್ಪಿ ಉಮಾರಾಣಿ ಹಾಗೂ ಸಿಪಿಐ ನರೇಂದ್ರ ಬಾಬು ಅವರ ನೇತೃತ್ವದಲ್ಲಿ ಪೊಲೀಸರ ವಿಶೇಷ ತಂಡ ದಿಢೀರ್ ದಾಳಿ ನಡೆಸಿದೆ.

ದಾಳಿಯ ವೇಳೆ ಸಣ್ಣ ವಯಸ್ಸಿನ ಮಕ್ಕಳನ್ನು ಕಠಿಣ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದುದು ಪತ್ತೆಯಾಗಿದೆ. ಈ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಒಟ್ಟು 5 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ರಕ್ಷಿಸಲ್ಪಟ್ಟ ಎಲ್ಲಾ ಮಕ್ಕಳನ್ನು ಸುರಕ್ಷಿತವಾಗಿ ಮಕ್ಕಳ ಸಾಂತ್ವನ ಕೇಂದ್ರಕ್ಕೆ ರವಾನಿಸಲಾಗಿದೆ.

ಇನ್ನೊಂದೆಡೆ, ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸರು ಬಾಲಕಾರ್ಮಿಕ ಪದ್ಧತಿ ತಡೆಗಟ್ಟಲು ಬೃಹತ್ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿದ್ದಾರೆ. ವಿಭಾಗದಾದ್ಯಂತ ಒಟ್ಟು 917 ವ್ಯಾಪಾರ ಮಳಿಗೆಗಳು, ಗ್ಯಾರೇಜ್ ಹಾಗೂ ಸಣ್ಣ ಪ್ರಮಾಣದ ಉದ್ದಿಮೆಗಳ ಮೇಲೆ ದಿಢೀರ್ ದಾಳಿ ನಡೆಸಲಾಗಿದೆ. ಈ ಬೃಹತ್ ಕಾರ್ಯಾಚರಣೆಯಲ್ಲಿ ಒಟ್ಟು 71 ಬಾಲಕಾರ್ಮಿಕರನ್ನು ರಕ್ಷಿಸಲಾಗಿದೆ.

ಇದನ್ನೂ ಓದಿ: “ಹೇಳಲ್ಲ, ಮಾಡಿ ತೋರಿಸ್ತೀನಿ”: ಮಸೀದಿ ಬಳಿ ಗಣೇಶ ಮೆರವಣಿಗೆ, ಪಟಾಕಿ ಹೊಡೆಯುವಂತಿಲ್ಲ ಎಂದ ಇನ್ಸ್‌ಪೆಕ್ಟರ್ ಧನಂಜಯ್

ಶಾಲಾ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡು ಶೋಷಣೆ ಮಾಡುತ್ತಿದ್ದ ಅಂಗಡಿಗಳು ಹಾಗೂ ಸಂಸ್ಥೆಗಳ ಮಾಲೀಕರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಸಂಪೂರ್ಣ ಸಿದ್ಧತೆ ನಡೆಸಿದೆ. ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟವಾಡುವ ಹಾಗೂ ಬಾಲಕಾರ್ಮಿಕರನ್ನು ಕೆಲಸಕ್ಕೆ ಇಟ್ಟುಕೊಳ್ಳುವವರ ವಿರುದ್ಧ ಮುಂದಿನ ದಿನಗಳಲ್ಲೂ ಇಂತಹ ಕಟ್ಟುನಿಟ್ಟಿನ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.

5,897 ಸ್ಥಳಗಳಲ್ಲಿ ಪರಿಶೀಲನೆ, 18 ಪ್ರಕರಣ ದಾಖಲು

ಬೆಂಗಳೂರು ನಗರ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ನಡೆದ ಈ ಮೆಗಾ ಡ್ರೈವ್‌ನಲ್ಲಿ ನಗರದ ಒಟ್ಟು 5,897 ಸ್ಥಳಗಳಲ್ಲಿ ಏಕಕಾಲಕ್ಕೆ ತೀವ್ರ ತಪಾಸಣೆ ನಡೆಸಲಾಯಿತು. ಗ್ಯಾರೇಜ್‌ಗಳು, ಸಣ್ಣ ಪ್ರಮಾಣದ ಕಾರ್ಖಾನೆಗಳು, ಹೋಟೆಲ್‌ಗಳು, ಬೇಕರಿಗಳು ಹಾಗೂ ವ್ಯಾಪಾರ ಮಳಿಗೆಗಳ ಮೇಲೆ ದಾಳಿ ನಡೆಸಿದ ಪೊಲೀಸರು, ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ ಮಾಲೀಕರ ವಿರುದ್ಧ ಒಟ್ಟು 18 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ರಕ್ಷಿಸಲ್ಪಟ್ಟ ಮಕ್ಕಳನ್ನು ಸುರಕ್ಷಿತವಾಗಿ ಮಕ್ಕಳ ರಕ್ಷಣಾ ಸಮಿತಿ (CWC) ಹಾಗೂ ಸಾಂತ್ವನ ಕೇಂದ್ರಗಳಿಗೆ ಹಸ್ತಾಂತರಿಸಲಾಗಿದ್ದು, ಅವರಿಗೆ ಸೂಕ್ತ ಪುನರ್ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ.

ಪೊಲೀಸ್ ವಿಭಾಗ ಪರಿಶೀಲಿಸಿದ ಸ್ಥಳಗಳು ರಕ್ಷಿಸಲ್ಪಟ್ಟ ಬಾಲಕಾರ್ಮಿಕರು ದಾಖಲಾದ ಪ್ರಕರಣಗಳು
ಪಶ್ಚಿಮ ವಿಭಾಗ 742 84 1 ಪ್ರಕರಣ
ಪೂರ್ವ ವಿಭಾಗ 927 71 3 ಪ್ರಕರಣಗಳು
ಕೇಂದ್ರ ವಿಭಾಗ 492 63 –
ಉತ್ತರ ವಿಭಾಗ 327 62 –
ಈಶಾನ್ಯ ವಿಭಾಗ 412 55 –
ದಕ್ಷಿಣ ವಿಭಾಗ 515 54 –
ಸಿಸಿಬಿ (CCB) 420 45 9 ಪ್ರಕರಣಗಳು
ವೈಟ್‌ಫೀಲ್ಡ್ ವಿಭಾಗ 857 22 –
ನೈರುತ್ಯ ವಿಭಾಗ 150 17 3 ಪ್ರಕರಣಗಳು
ವಾಯುವ್ಯ ವಿಭಾಗ 337 14 2 ಪ್ರಕರಣಗಳು
ಆಗ್ನೇಯ ವಿಭಾಗ 375 13 –
ಎಲೆಕ್ಟ್ರಾನಿಕ್ ಸಿಟಿ ವಿಭಾಗ 343 3 –
ಒಟ್ಟು 5,897 503 18 ಪ್ರಕರಣಗಳು

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:20 pm, Sat, 12 September 26

ಮಂಜುನಾಥ ಎಚ್​. ವಿ.

ಮಂಜುನಾಥ ಹೆಚ್ ವಿ. ಇವರು ಹುಟ್ಟಿದ್ದು ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟದಲ್ಲಿ. ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ. ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದರು. 8 ವರ್ಷಗಳ ಕಾಲ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿದ್ದಾರೆ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಆಗಿ ವೃತ್ತಿ ನಿರ್ವಹಿಸಿದ್ದು ಸಾಮಾಜಿಕವಾಗಿ ನ್ಯಾಯ ಒದಗಿಸುವ ಕೆಲಸವನ್ನ ಮಾಡಿದ್ದಾರೆ. ಕಳೆದ 9 ವರ್ಷಗಳಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಟಿವಿ9 ಕನ್ನಡ ಸಂಸ್ಥೆಗೆ ಬೆಂಗಳೂರು ಹಾಗೂ ನೆಲಮಂಗಲ ಭಾಗದ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕ್ರಿಕೆಟ್ ಆಡುವುದು, ಕ್ರೈಂ ಇನ್ವೆಷ್ಟಿಗೇಷನ್, ಬುಕ್ ಹಾಗೂ ಪೇಪರ್ ಓದುವ ಹವ್ಯಾಸವಿದೆ.

Read More
Loading...
Unable to load recommendations.
Follow Us