Cholera: ಬೆಂಗಳೂರಿನಲ್ಲಿ ಮತ್ತೊಂದು ಕಾಲರಾ ಪ್ರಕರಣ ಪತ್ತೆ, ರೋಗಿಗಳ ಸಂಖ್ಯೆ 41ಕ್ಕೆ ಏರಿಕೆ
Bengaluru Cholera Case: ರಾಜ್ಯದಲ್ಲಿ ಕಳೆದ 2-3 ತಿಂಗಳಿನಿಂದ ಕಾಲರಾ ಪ್ರಕರಣ ಪ್ರಕರಣಗಳು ಪತ್ತೆಯಾಗುತ್ತಿವೆ. ಬೆಂಗಳೂರಿನಲ್ಲಿ ಈವರೆಗೆ 40 ಜನರಲ್ಲಿ ಕಾಲರಾ ರೋಗ ಅಂಶ ಕಂಡುಬಂದಿತ್ತು. ಇದೀಗ ಬಂಗಾಳ ಮೂಲದ ಬೆಂಗಳೂರಿನಲ್ಲಿ ವಾಸವಾಗಿರುವ ವ್ಯಕ್ತಿಯಲ್ಲಿ ಕಾಲರಾ ರೋಗದ ಅಂಶ ಪತ್ತೆಯಾಗಿದ್ದು, ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಆರೋಗ್ಯ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ.
ಬೆಂಗಳೂರು, ಮೇ 01: ನಗರದಲ್ಲಿ ಇಂದು (ಮೇ 01) ಮತ್ತೊಂದು ಕಾಲರಾ (Cholera) ಪ್ರಕರಣ ಪತ್ತೆಯಾಗಿದೆ. ಮಲ್ಲೇಶ್ವರಂನಲ್ಲಿರುವ ಕೆಸಿ ಜನರಲ್ ಆಸ್ಪತ್ರೆಗೆ (KC General Hospital) ದಾಖಲಾಗಿದ್ದ ಬಂಗಾಳ ಮೂಲದ 28 ವರ್ಷದ ಕಾರ್ಮಿಕನಲ್ಲಿ ಕಾಲರಾ ಲಕ್ಷಣ ಕಂಡು ಬಂದಿದೆ. ರೋಗಿಯ ರಕ್ತ ಮಾದರಿ ಲ್ಯಾಬ್ಗೆ ಕಳಸಿ ಪರಿಶೀಲಿಸಿದಾಗ ಕಾಲರಾ ಅಂಶ ಪತ್ತೆಯಾಗಿದೆ. ಈ ಮೂಲಕ ಬೆಂಗಳೂರಿನಲ್ಲಿ ಕಾಲರಾ ಪ್ರಕರಣ ಸಂಖ್ಯೆ 41ಕ್ಕೆ ಏರಿಕೆಯಾಗಿದ್ದು, ರಾಜ್ಯದಲ್ಲಿ ಒಟ್ಟು 49 ಪ್ರಕರಣಗಳು ದೃಡವಾಗಿವೆ. ಕಾಲರಾ ಬರಲು ಕಲಷಿತ ನೀರು, ಆಹಾರ ಕಾರಣ ಎಂದು ತಜ್ಞರು ಹೇಳಿದ್ದಾರೆ.
ರಾಜಧಾನಿಯಲ್ಲಿ ಹೆಚ್ಚುತ್ತಿರುವ ಕಾಲರಾ ಪ್ರಕರಣಗಳಿಗೆ ಕಲುಷಿತ ನೀರು ಆಹಾರ ಕಾರಣ ಅಂತ ಹೇಳಿದ್ದು, ಆರೋಗ್ಯ ಇಲಾಖೆ ಕುಡಿಯುವ ನೀರಿನ ಮೂಲಗಳ ಶುದ್ಧತೆ ಪರಿಶೀಲನೆಗೆ ಮುಂದಾಗಿದೆ. ರಾಜ್ಯದ ಜನರು ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವಂತೆ ಇಲಾಖೆ ಮನವಿ ಮಾಡಿದೆ.
ವಿವಿಧ ಜಿಲ್ಲೆಗಳಲ್ಲಿ ಪತ್ತೆಯಾದ ಕಾಲಾರ ಕೇಸ್
ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ 24 ಪ್ರಕರಣಗಳು, ಬೆಂಗಳೂರು ಗ್ರಾಮಾಂತರ 1, ಬೆಂಗಳೂರು ನಗರ 15, ಚಿಕ್ಕಮಗಳೂರು 1, ಕೊಡಗು 1, ಕೋಲಾರ 2 ಮತ್ತು ರಾಮನಗರದಲ್ಲಿ 2 ಪ್ರಕರಣಗಳು ಪತ್ತೆಯಾಗಿವೆ. ಒಟ್ಟು 49 ಜನರಲ್ಲಿ ಕಾಲರಾ ಅಂಶ ಪತ್ತೆಯಾಗಿದ್ದು, 48 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಗ್ಯ ಇಲಾಖೆ ಮಾರ್ಗಸೂಚಿ
- ಕೈ ಶುದ್ದವಾಗಿರಬೇಕು
- ಕೈ ಸ್ವಚ್ಚಗೊಳಿಸಿ ಆಹಾರ ಸೇವಿಸಬೇಕು
- ಶುದ್ದ ಕುಡಿಯುವ ನೀರು ಬಳಸಬೇಕು
- ಸೇವೆಜ್ ಅಥವಾ ಕುಡಿಯುವ ನೀರಿನ ಪೈಪ್ ಒಟ್ಟಾಗದಂತೆ ನೋಡಿಕೊಳ್ಳಬೇಕು
ಕಾಲರಾ ತಡೆಗಟ್ಟಲು ಏನು ಮಾಡಬಹುದು?
ಕಾಲರಾ ಬಾರದಂತೆ ತಡೆಯಲು ಮೊದಲನೆಯದಾಗಿ, ಕುಡಿಯುವ ನೀರಿನ ನೈರ್ಮಲ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ಶುದ್ಧೀಕರಿಸಿದ ಅಥವಾ ಚೆನ್ನಾಗಿ ಕುದಿಸಿದ ನೀರನ್ನೇ ಕುಡಿಯಬೇಕು.
ಸಾಬೂನು ಮತ್ತು ನೀರಿನಿಂದ ಕೈ ತೊಳೆಯುವುದು, ವಿಶೇಷವಾಗಿ ಊಟ ಅಥವಾ ಅಡುಗೆ ಮಾಡುವ ಮೊದಲು ಎಲ್ಲರೂ ನೈರ್ಮಲ್ಯದ ಅಭ್ಯಾಸಗಳನ್ನು ಅನುಸರಿಸಬೇಕು.
ಚೆನ್ನಾಗಿ ಬೆಂದಿರದ ಆಹಾರ ಸೇವನೆಯಿಂದ ದೂರವಿರಬೇಕು.
ಕಲುಷಿತ ನೀರು ಮತ್ತು ಅನಾರೋಗ್ಯಕರ ಆಹಾರ ಸೇವನೆಯಿಂದ ಕಾಲರಾ ಉಂಟಾಗುತ್ತದೆ. ಒಂದುವೇಳೆ, ಇದಕ್ಕೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದಿದ್ದಲ್ಲಿ ರೋಗಿಯು ಮೃತಪಡುವ ಸಾಧ್ಯತೆಯೂ ಇದೆ. ಈ ರೋಗವನ್ನು ತಡೆಗಟ್ಟಲು ಲಸಿಕೆ ಸಹ ಈಗ ಲಭ್ಯವಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:04 pm, Wed, 1 May 24