Bengaluru Temperature: ಬೆಂಗಳೂರಿನಲ್ಲಿ ಏಪ್ರಿಲ್​ ತಿಂಗಳ ಕನಿಷ್ಠ ತಾಪಮಾನ 10 ವರ್ಷಗಳಲ್ಲೇ ಅತ್ಯಧಿಕ!

Bengaluru Weather: ಬೆಂಗಳೂರಿನಲ್ಲಿ ಈ ವರ್ಷ ತಾಪಮಾನ ಮೇರೆ ಮೀರುತ್ತಿದೆ. ಏಪ್ರಿಲ್‌ ತಿಂಗಳ ಕನಿಷ್ಠ ತಾಪಮಾನವೇ 25 ಡಿಗ್ರಿ ಸೆಲ್ಸಿಯಸ್ ದಾಟಿದ್ದರೆ, ಸತತ 10 ದಿನಗಳಿಂದಲೂ 37 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಇಷ್ಟೇ ಸಾಲದೆಂಬಂತೆ ಇನ್ನೂ ನಾಲ್ಕೈದು ದಿನ ಬಿಸಿಗಾಳಿಯ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

Bengaluru Temperature: ಬೆಂಗಳೂರಿನಲ್ಲಿ ಏಪ್ರಿಲ್​ ತಿಂಗಳ ಕನಿಷ್ಠ ತಾಪಮಾನ 10 ವರ್ಷಗಳಲ್ಲೇ ಅತ್ಯಧಿಕ!
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on:Apr 30, 2024 | 9:03 AM

ಬೆಂಗಳೂರು, ಏಪ್ರಿಲ್ 30: ಬೆಂಗಳೂರಿನಲ್ಲಿ (Bengaluru) ಭಾನುವಾರ ಮತ್ತು ಸೋಮವಾರದಂದು ಕನಿಷ್ಠ ತಾಪಮಾನ (Minimum Temperature) 25 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ಕಳೆದ ಹತ್ತು ವರ್ಷಗಳಲ್ಲೇ ಏಪ್ರಿಲ್‌ ತಿಂಗಳಲ್ಲಿ ಬೆಂಗಳೂರಿನಲ್ಲಿ ದಾಖಲಾದ ಹೆಚ್ಚು ಪ್ರಮಾದ ಕನಿಷ್ಠ ತಾಪಮಾನವಾಗಿದೆ. ಭಾನುವಾರ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 38.5 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 25 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಸೋಮವಾರ ಕ್ರಮವಾಗಿ 37.8 ಡಿಗ್ರಿ ಸೆಲ್ಸಿಯಸ್ ಮತ್ತು 25 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ವರ್ಷದ ಈ ಸಮಯದಲ್ಲಿ ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಕಂಡುಬರುವ ಕನಿಷ್ಠ ತಾಪಮಾನಕ್ಕಿಂತ 2.5 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ.

ಸತತ 10 ದಿನಗಳಿಂದ 37 ಡಿಗ್ರಿ ಗರಿಷ್ಠ ತಾಪಮಾನ

ಈ ಹಿಂದೆ ಬೆಂಗಳೂರಿನಲ್ಲಿ ಏಪ್ರಿಲ್ ತಿಂಗಳಲ್ಲಿ ಗರಿಷ್ಠ ತಾಪಮಾನ ಯಾವಾಗಲೂ ಒಂದು ಅಥವಾ ಎರಡು ದಿನ ಇರುತ್ತಿತ್ತು. ಆದರೆ ಈ ಬಾರಿ ಬೆಂಗಳೂರಿನಲ್ಲಿ ಸತತವಾಗಿ 10 ದಿನಗಳಿಗೂ ಅಧಿಕ 37 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಕಳೆದ ಎರಡು ದಿನಗಳಿಂದ ನಗರದಲ್ಲಿ 38 ರಿಂದ 39 ಉಷ್ಣಾಂಶ ದಾಖಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಏರಿಕೆ ಜೊತೆಗೆ ಕೆಲವು ಜಿಲ್ಲೆಗಳಲ್ಲಿ ಬಿಸಿಗಾಳಿ ಮುಂದುವರೆಯಲಿದೆ. ಈ ಹಿಂದೆ 2016 ರ ಏಪ್ರಿಲ್ 25 ರಂದು ಬೆಂಗಳೂರು ನಗರದಲ್ಲಿ 39.2 ಗರಿಷ್ಠ ಉಷ್ಣಾಂಶ ದಾಖಲಾಗಿತ್ತು. ಆದರೆ, ಸತತವಾಗಿ ಮುಂದುವರಿದಿರಲಿಲ್ಲ.

ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹೇಗಿದೆ ಪರಿಸ್ಥಿತಿ?

ಉತ್ತರ ಕರ್ನಾಟಕದ ಜಿಲ್ಲೆಗಳಾದ ಕಲಬುರಗಿ, ಬಾಗಲಕೋಟೆ ಮತ್ತು ರಾಯಚೂರಿನಲ್ಲಿ ಕನಿಷ್ಠ ತಾಪಮಾನ 3 ರಿಂದ 4.8 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿದೆ. ಕಲಬುರಗಿಯಲ್ಲಿ ಭಾನುವಾರ ಕನಿಷ್ಠ ತಾಪಮಾನ ಸಾಮಾನ್ಯವಾಗಿ ಇರುವ 26 ಡಿಗ್ರಿ ಸೆಲ್ಸಿಯಸ್‌ಗೆ ಬದಲಾಗಿ 30.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, 4.8 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗಿದೆ. ರಾಯಚೂರಿನಲ್ಲಿ ಕನಿಷ್ಠ ತಾಪಮಾನ 25 ರ ಬದಲಾಗಿ 28.8 ಡಿಗ್ರಿ ಸೆಲ್ಸಿಯಸ್ ವರದಿಯಾಗಿದೆ. ಆದರೆ ಬಾಗಲಕೋಟೆಯಲ್ಲಿ ಕನಿಷ್ಠ 28.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬಿಸಿಲ ಬೇಗೆಯಿಂದ ಹೋಟೆಲ್ ಉದ್ಯಮಕ್ಕೂ ಹೊಡೆತ: ವಹಿವಾಟು ಶೇ 30ರಷ್ಟು ಕುಸಿತ

ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟ, ಬೆಳಗಾವಿ, ಗದಗ, ಹಾವೇರಿ, ಕೊಪ್ಪಳ, ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ಮಂಡ್ಯ, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರದ 18 ಜಿಲ್ಲೆಗಳ ವಿವಿಧ ಕಡೆಗಳಲ್ಲಿ ಏಪ್ರಿಲ್ 29 ರಿಂದ ಮೇ 3 ರವರೆಗೆ ಬಿಸಿಗಾಳಿಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 9:01 am, Tue, 30 April 24