ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಡಿಜಿ-ಐಜಿಪಿಗೆ ಮಹಿಳಾ ಆಯೋಗ ನೋಟಿಸ್
Prajwal Revanna Sexual Assault Case: ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಮೊಮ್ಮಗ, ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ ವಿಡಿಯೋ ಪ್ರಕರಣ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಈ ಪ್ರಕರಣದ ವರದಿಯನ್ನು ಮೂರು ದಿನಗಳಲ್ಲಿ ಸಲ್ಲಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗ ಕರ್ನಾಟಕದ ಡಿಜಿ-ಐಜಿಪಿ ಅವರಿಗೆ ನೋಟಿಸ್ ನೀಡಿದೆ.

ಬೆಂಗಳೂರು, ಏಪ್ರಿಲ್ 30: ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಅಶ್ಲೀಲ ವಿಡಿಯೋ ಪ್ರಕರಣದ ವರದಿಯನ್ನು ಮೂರು ದಿನಗಳಲ್ಲಿ ಆಯೋಗಕ್ಕೆ ಸಲ್ಲಿಸವಂತೆ ಕರ್ನಾಟಕ ಡಿಜಿ-ಐಜಿಪಿ ಅವರಿಗೆ ರಾಷ್ಟ್ರೀಯ ಮಹಿಳಾ ಆಯೋಗ (National Commission for women) ನೋಟಿಸ್ ನೀಡಿದೆ.
ಇನ್ನು ರಾಜ್ಯ ಮಹಿಳಾ ಆಯೋಗ ಕೂಡ ಡಿಜಿ-ಐಜಿಪಿ ಮತ್ತು ಎಸ್ಐಟಿ ಮುಖ್ಯಸ್ಥರಿಗೆ ಪತ್ರ ಬರೆದಿದೆ. ವಿಡಿಯೋಗಳು ವೈರಲ್ ಆಗದಂತೆ ತಡೆಯಿರಿ. ವಿಡಿಯೋ ಲೀಕ್ ಆಗಿದ್ದು ಎಲ್ಲಿಂದ? ಲೀಕ್ ಮಾಡಿದ್ದು ಯಾರು? ಪ್ರಕರಣವನ್ನು ಕ್ರಿಮಿನಲ್ ಮೊಕದ್ದಮೆ ಅಡಿಯಲ್ಲಿ ತನಿಖೆ ನಡೆಸಬೇಕು ಎಂದು ಪತ್ರ ಬರೆದಿದೆ. ಇನ್ನು ಮಹಿಳಾ ಆಯೋಗ ಸೈಬರ್ ಕ್ರೈಂ ಜೊತೆ ಸಭೆ ನಡೆಸಿದ್ದು, ವಿಡಿಯೋ ವೈರಲ್ ಬಗ್ಗೆ ಮಹತ್ವದ ಚರ್ಚೆ ನಡೆಸಿದೆ. ವಿಡಿಯೋಗಳು ಹೆಚ್ಚು ಶೇರ್ ಆಗದಂತೆ ತಡೆಯಿರಿ ಎಂದು ಹೇಳಿದೆ.
ಏನಿದು ಪ್ರಕರಣ
ಸಂಸದ ಪ್ರಜ್ವಲ್ ರೇವಣ್ಣ ಅವರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಅಶ್ಲೀಲ ವಿಡಿಯೋಗಳು ಇರುವ ಪೆನ್ಡ್ರೈವ್ ಕಳೆದ ಕೆಲ ದಿನಗಳಿಂದ ಹಾಸನ ಜಿಲ್ಲೆಯಲ್ಲಿ ಹರದಾಡುತ್ತಿದೆ. ಈ ಹಿನ್ನೆಲೆಯಲ್ಲಿ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದರು. ಮಹಿಳಾ ಆಯೋಗದಲ್ಲಿ ದೂರು ದಾಖಲಾದ ಬೆನ್ನಲ್ಲೇ ಪ್ರಕರಣದ ಕುರಿತು ಕುಲಂಕುಶ ತನಿಖೆಗಾಗಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ.
ಇದನ್ನೂ ಓದಿ: ಅಶ್ಲೀಲ ವಿಡಿಯೋ ಪೆನ್ಡ್ರೈವ್ ಬಹಿರಂಗಕ್ಕೆ ಬಿಗ್ ಟ್ವಿಸ್ಟ್: ದೇವರಾಜೇಗೌಡಗಷ್ಟೇ ಕೊಟ್ಟಿದ್ದೆ ಎಂದ ಪ್ರಜ್ವಲ್ ಮಾಜಿ ಕಾರು ಚಾಲಕ
ಹೆಚ್ಡಿ ರೇವಣ್ಣ ವಿರುದ್ಧ ದೂರು
ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾದ ಬೆನ್ನಲ್ಲೇ ತಂದೆ ಹೆಚ್.ಡಿ.ರೇವಣ್ಣ ವಿರುದ್ಧವೂ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಈ ಹಿಂದೆ ರೇವಣ್ಣ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಹೆಚ್ಡಿ ರೇವಣ್ಣ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ಎ1 ಹೆಚ್.ಡಿ.ರೇವಣ್ಣ, ಎ2 ಪ್ರಜ್ವಲ್ ರೇವಣ್ಣ ಆಗಿದ್ದಾರೆ.
ಐಪಿಸಿ ಸೆಕ್ಷನ್ 354A (ಲೈಂಗಿಕ ಕಿರುಕುಳ ಆರೋಪ), 354D (ಮಹಿಳೆಗೆ ಮುಜುಗರ ಆಗುವಂತೆ ಮಾಡುವುದು), 506 (ಬೆದರಿಕೆ), 509 (ಮಹಿಳೆ ಮಾನಕ್ಕೆ ಹಾನಿ) ರಡಿ FIR ದಾಖಲಿಸಲಾಗಿದೆ. ಹಲವು ಮಹಿಳೆಯರ ಮೇಲೆ ದೌರ್ಜನ್ಯವೆಸಗಿದ ದೃಶ್ಯಗಳು ಹರಿದಾಡಿದ್ದವು. ಹೀಗಾಗಿ ಹೊಳೆನರಸೀಪುರ ನಗರ ಪೊಲೀಸ್ ಠಾಣೆಗೆ ಸಂತ್ರಸ್ತ ಮಹಿಳೆ ದೂರು ನೀಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:29 pm, Tue, 30 April 24




