ಸಂಸದ ತೇಜಸ್ವಿ ಸೂರ್ಯ ಭಾವಚಿತ್ರದ ನಕಲಿ ಎಟಿಎಂ ಕಾರ್ಡ್ ವಿತರಿಸಿ ಕಾಂಗ್ರೆಸ್‌ನಿಂದ ವಿನೂತನ ಪ್ರಚಾರ
ಕಾಂಗ್ರೆಸ್ ಕಾರ್ಯಕರ್ತರು ಹಂಚಿದ ನಕಲಿ ಎಟಿಎಂ ಕಾರ್ಡ್ ನೋಡಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಾರ್ವಜನಿಕರು ಗೊಂದಲಕ್ಕೀಡಾಗಿದ್ದಾರೆ. ಅಷ್ಟಕ್ಕೂ ಕಾಂಗ್ರೆಸ್ ಕಾರ್ಯಕರ್ತರು ನಕಲಿ ಎಟಿಎಂ ಕಾರ್ಡ್ ಹಂಚಲು ಕಾರಣವೇನು? ಆ ಎಟಿಎಂ ಕಾರ್ಡ್ನಲ್ಲೇನೇನು ಬರೆಯಲಾಗಿತ್ತು? ಇಲ್ಲಿದೆ ಮಾಹಿತಿ.
ಬೆಂಗಳೂರು, ಏಪ್ರಿಲ್ 19: ಗುರು ರಾಘವೇಂದ್ರ ಬ್ಯಾಂಕ್ (Guru Raghavendra Co Operative Bank) ಹಗರಣ ಮುಂದಿಟ್ಟುಕೊಂಡು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಸಂಸದ ತೇಜಸ್ವಿ ಸೂರ್ಯ (Tejasvi Surya) ವಿರುದ್ಧ ಕಾಂಗ್ರೆಸ್ (Congress) ವಿನೂತನ ಪ್ರತಿಭಟನೆ, ಪ್ರಚಾರ ನಡೆಸುತ್ತಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಾದ್ಯಂತ ಪ್ರಚಾರ ಆರಂಭಿಸಿದ ಕೈಪಡೆ, ತೇಜಸ್ವಿ ಸೂರ್ಯ ಭಾವಚಿತ್ರ ಇರುವ ನಕಲಿ ಎಟಿಎಂ ಕಾರ್ಡ್ (Fake ATM Card) ವಿತರಣೆ ಮಾಡುತ್ತಿದೆ.
ನಕಲಿ ಎಟಿಎಂ ಕಾರ್ಡ್ನಲ್ಲಿ ತೇಜಸ್ವಿ ಸೂರ್ಯ ಹಣ ಗುಳುಂ ಮಾಡುತ್ತಿರುವ ಫೋಟೋ ಅಳವಡಿಕೆ ಮಾಡಲಾಗಿದೆ. ಅಲ್ಲದೇ, ಎಟಿಎಂ ಕಾರ್ಡ್ ಮೇಲೆ ಎಸ್ಬಿಬಿ ಬ್ಯಾಂಕ್ ಎಂದು ಉಲ್ಲೇಖಿಸಲಾಗಿದೆ. ಎಸ್ಬಿಬಿ ಬ್ಯಾಂಕ್ ಎಂದರೆ, ‘ಸೂರ್ಯ ಬಂಡಲ್ ಬ್ಯಾಂಕ್’ ಎಂದು ನಮೂದಿಸಲಾಗಿದೆ.
‘ಸೂರ್ಯನ ನಂಬಿ ಬ್ಯಾಂಕ್ನಲ್ಲಿ ಹಣ ಇಡಬೇಡಿ’ ಎಂದೂ ಕಾರ್ಡ್ ಮೇಲೆ ಮುದ್ರಣ ಮಾಡಲಾಗಿದೆ. ಕಾರ್ಡ್ ಮೇಲೆ ‘100% ನೋ ಮನಿ ಬ್ಯಾಕ್’ ಎಂದು ಮುದ್ರಿಸಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಕ್ಷೇತ್ರದಾದ್ಯಂತ ನಕಲಿ ಎಟಿಎಂ ಕಾರ್ಡ್ ವಿತರಣೆ ಮಾಡುತ್ತಿದ್ದಾರೆ. ಈ ಮೂಲಕ ಗುರು ರಾಘವೇಂದ್ರ ಬ್ಯಾಂಕ್ ಹಗರಣವನ್ನು ಚುನಾವಣಾ ಪ್ರಚಾರಕ್ಕಾಗಿ ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ.
ಗುರುವಾರದಿಂದ ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಈ ವಿನೂತನ ಅಭಿಯಾನ ಶುರುವಾಗಿತ್ತು. ಇದೀಗ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಎಲ್ಲಾ ವಿಧಾನಸಭಾ ಕ್ಷೇತ್ರಗಲ್ಲೂ ಈ ಪ್ರಚಾರ ಮಾಡಲು ಕಾಂಗ್ರೆಸ್ ಮುಂದಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹೋಟೆಲ್ ಅಂಗಡಿಗಳಿಗೆ ನಕಲಿ ಎಟಿಎಂ ಕಾರ್ಡ್ಗಳನ್ನು ಕಾಂಗ್ರೆಸ್ ಕಾರ್ಯಕರ್ತರು ವಿತರಿಸುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಹತ್ತಕ್ಕೂ ಹೆಚ್ಚು ಕಡೆ ಐಟಿ ದಾಳಿ
ಕಾಂಗ್ರೆಸ್ನ ಈ ಪ್ರತಿಭಟನೆಯಿಂದ ಜನ ಮಾತ್ರ ಗೊಂದಲಕ್ಕೀಡಾಗುವಂತಾಗಿದೆ. ತೇಜಸ್ವಿ ಸೂರ್ಯ ಭಾವಚಿತ್ರ ಇರುವ ನಕಲಿ ಎಟಿಎಂ ಕಾರ್ಡ್ ನೋಡಿ ಸಾರ್ವಜನಿಕರು ಗೊಂದಲಕ್ಕೊಳಗಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ