ಬೆಂಗಳೂರು ರೈಲು ಪ್ರಯಾಣಿಕರಿಗೆ ಕೇಂದ್ರ ಸಚಿವ ಸೋಮಣ್ಣ ಗುಡ್ ನ್ಯೂಸ್: ಕೊನೆಗೂ ಈಡೇರಿತು ಬಹುಕಾಲದ ಬೇಡಿಕೆ

ಬೆಂಗಳೂರಿನ ನಾಯಂಡಹಳ್ಳಿ ರೈಲ್ವೆ ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲುಗಳಿಗೆ ನಿಲುಗಡೆ ಸೌಲಭ್ಯ ಕಲ್ಪಿಸುವ ಬಹುಕಾಲದ ಬೇಡಿಕೆ ಈಡೇರಿದೆ. ಕೇಂದ್ರ ಸಚಿವ ವಿ. ಸೋಮಣ್ಣ ಅವರು ನಾಲ್ಕು ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗೆ ಚಾಲನೆ ನೀಡಿದರು. ಇದರಿಂದ ಮೆಜೆಸ್ಟಿಕ್ ಮೇಲಿನ ಒತ್ತಡ ಕಡಿಮೆಯಾಗಲಿದ್ದು, ಬೆಂಗಳೂರು ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರು ರೈಲು ಪ್ರಯಾಣಿಕರಿಗೆ ಕೇಂದ್ರ ಸಚಿವ ಸೋಮಣ್ಣ ಗುಡ್ ನ್ಯೂಸ್: ಕೊನೆಗೂ ಈಡೇರಿತು ಬಹುಕಾಲದ ಬೇಡಿಕೆ
ವಿ ಸೋಮಣ್ಣ
Image Credit source: tv9

Updated on: Feb 17, 2026 | 9:38 AM

ಬೆಂಗಳೂರು, ಫೆಬ್ರವರಿ 17: ಬೆಂಗಳೂರಿನ (Bangalore) ನಾಯಂಡಹಳ್ಳಿ ರೈಲ್ವೆ ನಿಲ್ದಾಣದಲ್ಲಿ (Nayandahalli Railway Station) ಎಕ್ಸ್‌ಪ್ರೆಸ್ ರೈಲುಗಳಿಗೆ ನಿಲುಗಡೆ ಕಲ್ಪಿಸುವ ಬಹುಕಾಲದ ಬೇಡಿಕೆ ಕೊನೆಗೂ ಈಡೇರಿದೆ. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ (V Somanna) ಅವರು ಮಂಗಳವಾರ ನಾಲ್ಕು ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಇದುವರೆಗೆ ನಾಯಂಡಹಳ್ಳಿ ನಿಲ್ದಾಣದಲ್ಲಿ ಪ್ಯಾಸೆಂಜರ್ ರೈಲುಗಳು ಮಾತ್ರ ನಿಲ್ಲುತ್ತಿದ್ದು, ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗಾಗಿ ಪ್ರಯಾಣಿಕರು ಹಲವು ವರ್ಷಗಳಿಂದ ಬೇಡಿಕೆ ಇಟ್ಟಿದ್ದರು. ಇಂದು ಆ ಬೇಡಿಕೆ ಈಡೇರಿದ ಹಿನ್ನೆಲೆ ಪ್ರಯಾಣಿಕರಲ್ಲಿ ಸಂತಸ ಮೂಡಿದೆ. ಜತೆಗೆ, ಮೈಸೂರು–ಬಾಗಲಕೋಟೆ ಬಸವ ಎಕ್ಸ್‌ಪ್ರೆಸ್ ರೈಲಿಗೆ ಸಚಿವರು ಸಾಂಕೇತಿಕವಾಗಿ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಈ ದಿನ ತಮಗೆ ಅತ್ಯಂತ ಸಂತೋಷ ತಂದಿದೆ ಎಂದು ಹೇಳಿದರು. ಈ ಯೋಜನೆಗೆ ಸಹಕಾರ ನೀಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಧನ್ಯವಾದ ಸಲ್ಲಿಸಿದರು. ಒಟ್ಟು ನಾಲ್ಕು ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.

ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಮೇಲೆ ಇರುವ ಒತ್ತಡವನ್ನು ಕಡಿಮೆ ಮಾಡಲು ಈ ಕ್ರಮ ಸಹಕಾರಿಯಾಗಲಿದೆ ಎಂದು ಹೇಳಿದರು. ನಿಲುಗಡೆ ಸಮಯದ ಮಾಹಿತಿಯನ್ನು ಶೀಘ್ರವೇ ಪ್ರಕಟಿಸಲು ಸೂಚನೆ ನೀಡಿರುವುದಾಗಿ ತಿಳಿಸಿದರು.

ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಕೇಂದ್ರದಿಂದ ಭರಪೂರ ಅನುದಾನ: ಸೋಮಣ್ಣ

ರಾಜ್ಯದ ರೈಲ್ವೆ ಅಭಿವೃದ್ಧಿ ಕುರಿತು ಮಾತನಾಡಿದ ಸೋಮಣ್ಣ, ಹಿಂದಿನ ಸರ್ಕಾರದ ಅವಧಿಯಲ್ಲಿ ಸುಮಾರು 800 ಕೋಟಿ ರೂ. ಮಾತ್ರ ಅನುದಾನ ನೀಡಲಾಗುತ್ತಿತ್ತು. ಈಗ ಕೇಂದ್ರ ಸರ್ಕಾರದಿಂದ 7,748 ಕೋಟಿ ರೂ. ಅನುದಾನ ದೊರಕಿದೆ ಎಂದು ಹೇಳಿದರು. ರಾಜ್ಯದಲ್ಲಿ 52,000 ಕೋಟಿ ರೂ. ಮೌಲ್ಯದ ವಿವಿಧ ರೈಲ್ವೆ ಯೋಜನೆಗಳು ನಡೆಯುತ್ತಿವೆ. 707 ಮೇಲ್ಸೇತುವೆಗಳು ನಿರ್ಮಾಣಗೊಂಡಿದ್ದು, 12 ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಬೆಂಗಳೂರು ವಿಶಾಖಪಟ್ಟಣ ವಿಶೇಷ ರೈಲು ಅವಧಿ ವಿಸ್ತರಣೆ: ಇನ್ಮುಂದೆ ನಾಯಂಡಹಳ್ಳಿಯಲ್ಲಿ ಈ 4 ರೈಲುಗಳಿಗೆ ಇರುತ್ತೆ ನಿಲುಗಡೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಟೀಕೆಗಳಿಗೆ ತೀವ್ರ ಟೀಕೆ ವ್ಯಕ್ತಪಡಿಸಿದ ಸೋಮಣ್ಣ, ಅವರು ತಲೆ ಬುಡ ಇಲ್ಲದ ರೀತಿ ಮಾತನಾಡುತ್ತಾರೆ ಎಂದರು.

ವರದಿ: ಲಕ್ಷ್ಮೀ ನರಸಿಂಹ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:38 am, Tue, 17 February 26