
ಬೆಂಗಳೂರು, ಏಪ್ರಿಲ್ 04: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ (Bangladeshi Illegal Immigrants) ಮೇಲೆ ಸಿಸಿಬಿ ಮತ್ತು ನಗರ ಪೊಲೀಸರು ಬೃಹತ್ ಕಾರ್ಯಾಚರಣೆ ಕೈಗೊಂಡಿದ್ದಾರೆ. ಇದುವರೆಗೆ ಬರೋಬ್ಬರಿ 272 ಜನರನ್ನು ಬೆಂಗಳೂರಿನಿಂದ ಯಶಸ್ವಿಯಾಗಿ ಗಡಿಪಾರು ಮಾಡಲಾಗಿದೆ.
ಮಾರ್ಚ್ ಮೊದಲ ವಾರದಲ್ಲಿ ದೆಹಲಿ ಪೊಲೀಸರು ದೆಹಲಿ ಮತ್ತು ಕೊಲ್ಕತ್ತಾದಲ್ಲಿ ಐವರು ಬಾಂಗ್ಲಾ ಮೂಲದ ಉಗ್ರರ ಬಂಧನದ ಬೆನ್ನಲ್ಲೇ ದೇಶದಲ್ಲಿ ಅಕ್ರಮ ವಲಸಿಗರ ಪತ್ತೆಗೆ ಸೂಚಿಸಲಾಗಿತ್ತು. ಅದರಂತೆ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ವಲಸಿಗರ ಪತ್ತೆಗೆ ಸಿಸಿಬಿ ಮತ್ತು ಸಿಟಿ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೆತ್ತಿಕೊಂಡಿತು.
ಬೆಂಗಳೂರಿನ ಮೂಲೆಮೂಲೆಯಲ್ಲಿ ಅಕ್ರಮವಾಗಿ ವಾಸವಿದ್ದವರನ್ನು ಪತ್ತೆಹಚ್ಚಿದ ಪೊಲೀಸರು, ದಾಖಲೆಗಳಿಲ್ಲದ 272 ಜನರನ್ನು ವಶಕ್ಕೆ ಪಡೆದಿದ್ದರು. ಇವರನ್ನು ತ್ರಿಪುರಾ ಗಡಿಯ ಮೂಲಕ ಬಾಂಗ್ಲಾದೇಶಕ್ಕೆ ಯಶಸ್ವಿಯಾಗಿ ಗಡಿಪಾರು ಮಾಡಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು; 200ಕ್ಕೂ ಹೆಚ್ಚು ವಿದೇಶಿ ಪ್ರಜೆಗಳಿಗೆ ಗೇಟ್ಪಾಸ್!
ಇನ್ನು ದೇಶದಲ್ಲೇ ಅತಿ ದೊಡ್ಡ ಮಟ್ಟದ ಡಿಪೋರ್ಟೇಷನ್ ಪ್ರಕ್ರಿಯೆ ಇದಾಗಿದ್ದು, ಬೆಂಗಳೂರಿನಿಂದ ಹೊರಹಾಕಲ್ಪಟ್ಟವರಲ್ಲಿ 178 ಪುರುಷರು, 94 ಮಹಿಳೆಯರು ಹಾಗೂ 12 ಮಕ್ಕಳು ಸೇರಿದ್ದಾರೆ. ಇವರೆಲ್ಲರನ್ನೂ ರೈಲಿನಲ್ಲಿ ತ್ರಿಪುರಾ ಗಡಿಯವರೆಗೆ ಕರೆದೊಯ್ದು, ಬಿಎಸ್ಎಫ್ ಮೂಲಕ ಅವರ ದೇಶಕ್ಕೆ ಹಸ್ತಾಂತರಿಸಲಾಯಿತು. ಪಶ್ಚಿಮ ಬಂಗಾಳದ ಚುನಾವಣೆ ಹಾಗೂ ಭದ್ರತಾ ದೃಷ್ಟಿಯಿಂದ ತ್ರಿಪುರಾ ಗಡಿಯನ್ನೇ ಗಡಿಪಾರಿಗೆ ಬಳಸಿಕೊಳ್ಳಲಾಗಿದೆ.
ಇತ್ತ ಈ ಅಕ್ರಮ ವಲಸೆಯ ಹಿಂದೆ ವ್ಯವಸ್ಥಿತ ಜಾಲವೊಂದು ಕೆಲಸ ಮಾಡುತ್ತಿದೆ. ಒಬ್ಬ ವಲಸಿಗ ಬೆಂಗಳೂರು ಸೇರಲು ಹಂತಹಂತವಾಗಿ ಟೇಕೆದಾರರ ಬಾಂಗ್ಲಾದೇಶದ ಒಳಗಿದ್ದುಕೊಂಡು ವಲಸಿಗರನ್ನು ಭಾರತದ ಗಡಿಯವರೆಗೂ ಕರೆತರುತ್ತಾನೆ. ಅಲ್ಲಿಂದ ಭಾರತದ ಗಡಿಯಲ್ಲಿ ನಿಂತು ಅಕ್ರಮವಾಗಿ ಒಳನುಗ್ಗಿಸುವ ಜವಾಬ್ದಾರಿ ಇನ್ನೊಬ್ಬ ತೆಗೆದುಕೊಳ್ಳುತ್ತಾರೆ. ಇದಕ್ಕಾಗಿ ಈತ ಪ್ರತ್ಯೇಕವಾಗಿ ಹಣ ಪಡೆಯುತ್ತಾನೆ. ಇನ್ನು ಭಾರತದ ಒಳಗೆ ಇನ್ನೋರ್ವ ಏಜೆಂಟ್ ಅವರಿಗೆ ಕೆಲಸ ಕೊಡಿಸುವ ಮತ್ತು ವಸತಿ ಕಲ್ಪಿಸುವ ಕೆಲಸ ಮಾಡುತ್ತಾನೆ. ಇವನು ಪ್ರತಿ ವಲಸಿಗನಿಂದ ಪ್ರತಿ ತಿಂಗಳು 500 ರಿಂದ 1000 ರೂ. ಕಮಿಷನ್ ನಿರಂತರವಾಗಿ ಪಡೆಯಲಾಗುತ್ತೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಸದ್ಯ ಸಿಸಿಬಿ ಪೊಲೀಸರು ಈ ಜಾಲದ ಇಬ್ಬರು ಪ್ರಮುಖ ಟೇಕೆದಾರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಏಜೆಂಟ್ರು ನಗರದ ಕಾರ್ಖಾನೆಗಳು, ಅಪಾರ್ಟ್‌ಮೆಂಟ್‌ಗಳು ಹಾಗೂ ಹೋಟೆಲ್‌ಗಳಲ್ಲಿ ಇತರೆ ವಲಸಿಗರನ್ನು ಕೂಲಿ ಕೆಲಸಕ್ಕೆ ಸೇರಿಸುತ್ತಿದ್ದರು. ಬಂಧಿತರಿಂದ ಇನ್ನು ಎಷ್ಟು ಜನ ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ. ಇನ್ನು ಮುಂದೆ ಇಂತಹ ಅಕ್ರಮ ವಲಸಿಗರಿಗೆ ಆಶ್ರಯ ನೀಡುವ ಮಾಲೀಕರ ಮೇಲೂ ಕಾನೂನು ಕ್ರಮ ಜರುಗಿಸಲು ಪೊಲೀಸರು ಮುಂದಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.