ಬೆಂಗಳೂರು ಪೊಲೀಸ್‌ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ: 5 ಹೊಸ ಕಮಿಷನರೇಟ್‌, 6,633 ಹೊಸ ಹುದ್ದೆ ಸೃಷ್ಟಿಗೆ ಪ್ರಸ್ತಾವನೆ

ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ, ಭೌಗೋಳಿಕ ವಿಸ್ತರಣೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಬೆಂಗಳೂರು ಪೊಲೀಸ್ ಕಮಿಷನರೇಟ್ ವ್ಯವಸ್ಥೆಯಲ್ಲಿ ಬೃಹತ್ ಬದಲಾವಣೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಪ್ರಸ್ತುತ ಇರುವ ಕಮಿಷನರೇಟ್ ಅನ್ನು 5 ಪ್ರತ್ಯೇಕ ವಲಯಗಳಾಗಿ ವಿಂಗಡಿಸಿ, ಹುದ್ದೆಯನ್ನು ಸೃಷ್ಟಿಸಲು ನಗರ ಪೊಲೀಸ್ ಆಯುಕ್ತರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಬೆಂಗಳೂರು ಪೊಲೀಸ್‌ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ: 5 ಹೊಸ ಕಮಿಷನರೇಟ್‌, 6,633 ಹೊಸ ಹುದ್ದೆ ಸೃಷ್ಟಿಗೆ ಪ್ರಸ್ತಾವನೆ
ಪೊಲೀಸ್ ಇಲಾಖೆ
Image Credit source: ksp.karnataka.gov.in
Edited By:

Updated on: Aug 04, 2026 | 8:23 PM

ಬೆಂಗಳೂರು, ಆಗಸ್ಟ್​​ 04: ಬೆಂಗಳೂರು ಪೊಲೀಸ್‌ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ ಕುರಿತಾಗಿ ಸರ್ಕಾರಕ್ಕೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್​​ ಪ್ರಸ್ತಾವನೆ ಸಲ್ಲಿಸಿದ್ದಾರೆ. ಬೆಂಗಳೂರು‌ ಕಮಿಷನರೇಟ್‌ (Bengaluru Police Commissionerate) ಅನ್ನು 5 ಹೊಸ ಕಮಿಷನರೇಟ್‌ ವಲಯಗಳಾಗಿ ವಿಭಜಿಸಲು ಮತ್ತು 6,633 ಹೊಸ ಹುದ್ದೆ ಸೃಷ್ಟಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಐದು ಪ್ರತ್ಯೇಕ ಕಮಿಷನರೇಟ್​ಗಳಾಗಿ ವಿಭಜಿಸಲು ಸರ್ಕಾರಕ್ಕೆ ಪ್ರಸ್ತಾವನೆ 

ಬೆಂಗಳೂರು ಪೊಲೀಸ್ ಕಮಿಷನರೇಟ್‌ ಅನ್ನು ಐದು ಪ್ರತ್ಯೇಕ ಕಮಿಷನರೇಟ್​ಗಳಾಗಿ ವಿಭಜಿಸಲು ನಗರ ಪೊಲೀಸ್ ಆಯುಕ್ತರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಯೋಜನೆಯಡಿ, ಪ್ರಸ್ತುತ ಬೆಂಗಳೂರು ಪೊಲೀಸ್​ ಆಯುಕ್ತರು, ಮುಖ್ಯ ಆಯುಕ್ತರ ಹುದ್ದೆ ಸೃಜನೆಯಾಗಲಿದ್ದು, ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ ಹಾಗೂ ದಕ್ಷಿಣ ಎಂಬ ಐದು ಘಟಕಗಳು ಸೃಷ್ಟಿಯಾಗಲಿವೆ. ಈ ಬದಲಾವಣೆಗೆ ಸುಮಾರು 7,648 ಕೋಟಿ ರೂ. ವೆಚ್ಚವಾಗಲಿದ್ದು, 6,633 ಹೊಸ ಹುದ್ದೆಗಳ ಸೃಷ್ಟಿಗೆ ಮನವಿ ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯಕ್ಕೆ ಮಿಜೋರಾಂನ ಆರೋಗ್ಯ ಸಚಿವೆ ಶ್ರೀಮತಿ ಲಾಲ್ರಿನ್‌ಪುಯಿ ಭೇಟಿ

ಬೆಂಗಳೂರು ಕಮಿಷನರೇಟ್‌ ಐದು ವಿಭಾಗಗಳ ವಿಂಗಡಣೆ ಸಂಬಂಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಹಿರಿಯ ಅಧಿಕಾರಿಗಳ ಜತೆ ಸಾಧಕ-ಬಾಧಕಗಳ ಸಮಾಲೋಚನೆ ಬಳಿಕ ಸಿಎಂ ಡಿಕೆ ಶಿವಕುಮಾರ್​ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಕೇಂದ್ರ ಕಮಿಷನರೇಟ್​ನಲ್ಲಿ ಓರ್ವ ಸಂಚಾರ ಡಿಸಿಪಿ, ಕೇಂದ್ರ ಕಚೇರಿ ಡಿಸಿಪಿ, ಸಶಸ್ತ್ರ ಮೀಸಲು ಪಡೆ ಕೇಂದ್ರ ಸೇರಿ ಐವರು ಡಿಸಿಪಿ ಗಳಿದ್ದು, ಪ್ರಸುತ್ತ ಕೇಂದ್ರ ವಿಭಾಗದ ಡಿಸಿಪಿ ಜತೆಗೆ, ಗಾಂಧೀನಗರ, ಇಂದಿರಾನಗರ ಹೆಸರಿನ ಹೊಸದಾಗಿ ಕಾನೂನು ಸುವ್ಯವಸ್ಥೆ ವಿಭಾಗ ರಚನೆಯಾಗಲಿದೆ.

ಕೇಂದ್ರ ಕಮಿಷನರೇಟ್‌

ಕೇಂದ್ರ ಸಂಚಾರ ವಿಭಾಗ ಅಸ್ತಿತ್ವಕ್ಕೆ ಬರಲಿದೆ. ಈ ಆಯುಕ್ತರ ವ್ಯಾಪ್ತಿಗೆ ವಿಧಾನಸೌಧ ಮತ್ತು ವಿಕಾಸಸೌಧ, ಲೋಕಭವನ, ಹೈಕೋರ್ಟ್‌, ನ್ಯಾಯಾಂಗ ಸಮುಚ್ಚಯಗಳು, ಚಿನ್ನಸ್ವಾಮಿ ಹಾಗೂ ಕಂಠೀರವ ಕ್ರೀಡಾಂಗಣಗಳು, ಫ್ರೀಡಂ ಪಾರ್ಕ್‌, ಮೆಟ್ರೋ ನಿಲ್ದಾಣಗಳು, ಬೈಯಪ್ಪನಹಳ್ಳಿ ಮೆಟ್ರೋ ಡಿಪೋ, ಕೆಎಸ್‌ಆರ್‌ಟಿಸಿ ರೈಲ್ವೆ ನಿಲ್ದಾಣ, ವಲಯ ಕಚೇರಿ ಮತ್ತು ಮೆಜೆಸ್ಟಿಕ್‌ ಬಸ್‌ ನಿಲ್ದಾಣ ಸೇರಿ ಇತರೆ ಸ್ಥಳಗಳು ಬರಲಿವೆ.

ಉತ್ತರ ಕಮಿಷನರೇಟ್‌

ಉತ್ತರ ವಿಭಾಗದ ಕಮಿಷನರೇಟ್​ನಲ್ಲಿ ಹಾಲಿ ಉತ್ತರ ವಿಭಾಗ, ಈಶಾನ್ಯ ವಿಭಾಗಗಳ ಜತೆ ಹೊಸದಾಗಿ ಯಶವಂತಪುರ ರಚನೆಯಾಗಲಿದೆ. ಉತ್ತರ ವಿಭಾಗ (ಸಂಚಾರ) ಹಾಗೂ ಸಿಎಎಆರ್‌ ಉತ್ತರ ಡಿಸಿಪಿ ವಿಭಾಗಗಳು ಸೇರಲಿವೆ. ಅದೇ ರೀತಿ ಅಮೃತಹಳ್ಳಿ ಉಪ ವಿಭಾಗ ನೂತನವಾಗಿ ಸ್ಥಾಪನೆಯಾಗಲಿದೆ. ಯಲಹಂಕ ಹಾಗೂ ಕೆ.ಜಿ.ಹಳ್ಳಿ ಉಪ ವಿಭಾಗ ಸಹ ಉತ್ತರಕ್ಕೆ ಸೇರ್ಪಡೆಯಾಗಲಿವೆ.

ಪೂರ್ವ, ದಕ್ಷಿಣ ಕಮಿಷನರೇಟ್‌

ವೈಟ್‌ಫೀಲ್ಡ್‌ ಹಾಗೂ ಪೂರ್ವ ವಿಭಾಗಗಳಲ್ಲಿ ಒಂದು ಸಂಚಾರ ಡಿಸಿಪಿ ವಿಭಾಗ ಹಾಗೂ ಸಶಸ್ತ್ರ ಮೀಸಲು ಪಡೆಯ ವಿಭಾಗದ ಡಿಸಿಪಿಗಳು ಇರಲಿದ್ದಾರೆ. ಈ ವಿಭಾಗಕ್ಕೆ ಹೊಸದಾಗಿ ಪೊಲೀಸ್ ಠಾಣೆಗಳು ಸಹ ರಚನೆಯಾಗಲಿವೆ. ದಕ್ಷಿಣ ಕಮಿಷನರೇಟ್​ನಲ್ಲಿ ದಕ್ಷಿಣ, ಆಗ್ನೇಯ, ಎಲೆಕ್ಟ್ರಾನಿಕ್‌ ಸಿಟಿ, ದಕ್ಷಿಣ ಸಂಚಾರ ಹಾಗೂ ಸಿಎಆರ್​ಡಿಸಿಪಿ ವಿಭಾಗಗಳು ಸೇರಲಿವೆ. ಹೊಸದಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್‌ ಉಪವಿಭಾಗ, ಠಾಣೆಗಳಾದ ಸರ್ಜಾಪುರ, ಸೂರ್ಯನಗರ, ಅತ್ತಿಬೆಲೆ, ಬನ್ನೇರುಘಟ್ಟ, ಆನೇಕಲ್‌, ಜಿಗಣಿ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯ ಕಗ್ಗಲಿಪುರ ಠಾಣೆಗಳು ಸೇರ್ಪಡೆಯಾಗಲಿವೆ.

7.5 ಸಾವಿರ ಕೋಟಿ ರೂ ಅಂದಾಜು ವೆಚ್ಚ

ಪಶ್ಚಿಮ ವಿಭಾಗದಲ್ಲಿ ಕೆಂಗೇರಿ, ಪೀಣ್ಯಾ ಹಾಗೂ ಸಂಚಾರ, ಸಿಎಆರ್​ಡಿಸಿಪಿಗಳ ಹುದ್ದೆಗಳು ಒಳಪಟ್ಟಿದ್ದು, ಈ ವಿಭಾಗಕ್ಕೆ ಹೊಸದಾಗಿ ಬೆಂಗಳೂರು ದಕ್ಷಿಣ ಜಿಲ್ಲೆಯ ತಾವರೆಕೆರೆ, ನೂತನವಾಗಿ ಆಂಧ್ರಹಳ್ಳಿ, ಕಡಬಗೆರೆ ಠಾಣೆಗಳು ರಚನೆಯಾಗಲಿವೆ. ಸಿಸಿಬಿ ಯಾವುದೇ ವಿಘಟನೆ ಇಲ್ಲದೆ ಯಥಾಸ್ಥಿತಿಯಲ್ಲಿ ಮುಂದುವರೆಯಲಿದ್ದು ಮುಖ್ಯ ಆಯುಕ್ತರ ಅಧೀನದಲ್ಲಿ ಸಿಸಿಬಿ ಕಾರ್ಯನಿರ್ವಹಿಸಲಿದೆ. ಅದೇ ರೀತಿ ಸಂಚಾರ ವಿಭಾಗವು ಸಹ ಮುಖ್ಯ ಆಯುಕ್ತರ ಅಧೀನದಲ್ಲೇ ಕಾರ್ಯನಿರ್ವಹಿಸಲಿದೆ ಎಂದು ಪ್ರಸ್ತಾಪನೆಯಲ್ಲಿ ಉಲ್ಲೇಖವಾಗಿದೆದ್ದು, ವಿಭಜನೆಗೆ 7.5 ಸಾವಿರ ಕೋಟಿ ರೂ ಅಂದಾಜು ವೆಚ್ಚವಾಗಲಿದೆ.

ಇದನ್ನೂ ಓದಿ: ಭಾರೀ ಮಳೆ ಹಿನ್ನೆಲೆ ಕುದುರೆಮುಖದಲ್ಲಿ ಟ್ರೆಕ್ಕಿಂಗ್‌ಗೆ ತಾತ್ಕಾಲಿಕ ಬ್ರೇಕ್: ಚಾರಣಿಗರಿಗೆ ನಿರಾಸೆ

ಜಿಬಿಎ ವಲಯಗಳಿಗೆ ಅನುಗುಣವಾಗಿ‌ ಪೊಲೀಸ್ ಕಮಿಷನರೇಟ್ ರಚನೆಯಾದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ನಿಯಂತ್ರಣಕ್ಕೆ ಅನುಕೂಲವಾಗಕಿದೆ. ಭೌಗೋಳಿಕವಾಗಿ, ಪ್ರಾದೇಶಿಕವಾಗಿ, ಆಡಳಿತಾತ್ಮಕ ಸಹಕಾರಿಯಾಗಲಿದ್ದು, ಸಾರ್ವಜನಿಕರಿಗೆ ಪರಿಣಾಮಕಾರಿಯಾಗಿ ಸೇವೆ ನೀಡಲು ಅನುವಾಗಲಿದೆ ಎನ್ನಲಾಗುತ್ತಿದೆ.

Bengaluru City Police Likely To Split Into Five Divisions And To Get Five Police Commissionerates

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:39 pm, Tue, 4 August 26

ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More
Loading...
Unable to load recommendations.
Follow Us