ಬೆಂಗಳೂರಿನ ಆಸ್ತಿ ಮಾಲೀಕರ ಜೇಬಿಗೆ ಬೀಳಲಿದೆ ಕತ್ತರಿ! ಎಲಿವೇಟೆಡ್ ಕಾರಿಡಾರ್ ಯೋಜನೆಗೆ ಆಸ್ತಿ ತೆರಿಗೆ ಹೆಚ್ಚಳದ ಪ್ರಸ್ತಾಪ

Bengaluru Property Tax: ಬೆಂಗಳೂರಿನಲ್ಲಿ ಪ್ರಸ್ತಾಪಿಸಲಾಗಿರುವ ಎಲಿವೇಟೆಡ್ ಕಾರಿಡಾರ್‌ಗಳ ಯೋಜನೆಗೆ ಹಣಕಾಸು ಹೊಂದಿಸಲು ನಗರದ ಆಸ್ತಿ ಮಾಲೀಕರ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಲು ಯೋಜನೆಯ ವಿಸ್ತೃತ ಯೋಜನಾ ವರದಿ ಶಿಫಾರಸು ಮಾಡಿದೆ. ಯೋಜನೆಯಿಂದಾಗಿ ಆಸ್ತಿಗಳ ಮೌಲ್ಯ ಹೆಚ್ಚಾಗುವುದರಿಂದ ಈ ಮೂಲಸೌಕರ್ಯ ವೆಚ್ಚವನ್ನು ಭರಿಸಲು ಆಸ್ತಿ ತೆರಿಗೆ ಆಧಾರಿತ ವಿಶೇಷ ಸೆಸ್ ವಿಧಿಸುವ ಪ್ರಸ್ತಾಪ ಮುಂದಿಡಲಾಗಿದೆ.

ಬೆಂಗಳೂರಿನ ಆಸ್ತಿ ಮಾಲೀಕರ ಜೇಬಿಗೆ ಬೀಳಲಿದೆ ಕತ್ತರಿ! ಎಲಿವೇಟೆಡ್ ಕಾರಿಡಾರ್ ಯೋಜನೆಗೆ ಆಸ್ತಿ ತೆರಿಗೆ ಹೆಚ್ಚಳದ ಪ್ರಸ್ತಾಪ
ಸಾಂದರ್ಭಿಕ ಚಿತ್ರ
Image Credit source: tv9
Edited By:

Updated on: Jun 25, 2026 | 9:15 AM

ಮುಖ್ಯಾಂಶಗಳು

  • ಆಸ್ತಿ ತೆರಿಗೆ ಹೆಚ್ಚಳಕ್ಕೆ ಡಿಪಿಆರ್​ನಲ್ಲಿ ಶಿಫಾರಸು.
  • ಹೊಸ ಕಾರಿಡಾರ್‌ಗಳು ಸಂಪೂರ್ಣ ಟೋಲ್ ಮುಕ್ತ.
  • ಆದ್ರೆ, ಆಸ್ತಿ ಮಾಲೀಕರ ಜೇಬಿಗೆ ಬೀಳಲಿದೆ ಕತ್ತರಿ

ಬೆಂಗಳೂರು, ಜೂನ್ 25: ರಾಜಧಾನಿ ಬೆಂಗಳೂರಿನ (Bengaluru) ಆಸ್ತಿ ಮಾಲೀಕರಿಗೆ ಭವಿಷ್ಯದಲ್ಲಿ ಹೆಚ್ಚುವರಿ ತೆರಿಗೆಯ ಬಿಸಿ ತಟ್ಟುವ ಸಾಧ್ಯತೆ ದಟ್ಟವಾಗಿದೆ. ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಪ್ರಸ್ತಾಪಿಸಲಾಗಿರುವ ಬೃಹತ್ ಎಲಿವೇಟೆಡ್ ಕಾರಿಡಾರ್‌ ಮತ್ತು ಫ್ಲೈಓವರ್‌ ಯೋಜನೆಗಳ ನಿರ್ಮಾಣ ವೆಚ್ಚವನ್ನು ಸರಿದೂಗಿಸಲು ಆಸ್ತಿ ತೆರಿಗೆಯನ್ನು (Property Tax) ಹೆಚ್ಚಿಸುವಂತೆ ಯೋಜನೆಯ ವಿಸ್ತೃತ ಯೋಜನಾ ವರದಿ (DPR) ಸರ್ಕಾರಕ್ಕೆ ಶಿಫಾರಸು ಮಾಡಿದೆ. ಎಲಿವೇಟೆಡ್ ಕಾರಿಡಾರ್ ಬರುವ ಪ್ರದೇಶಗಳಲ್ಲಿ ಕನೆಕ್ಟಿವಿಟಿ ಉತ್ತಮಗೊಂಡು ಜಮೀನು ಹಾಗೂ ಮನೆಗಳ ಮೌಲ್ಯ ಹೆಚ್ಚಾಗುವುದರಿಂದ, ಅದರ ಲಾಭ ಪಡೆಯುವ ಮಾಲೀಕರಿಂದಲೇ ಈ ವೆಚ್ಚವನ್ನು ವಸೂಲಿ ಮಾಡುವುದು ನ್ಯಾಯಸಮ್ಮತ ಎಂದು ಅಧಿಕಾರಿಗಳು ವಾದಿಸಿದ್ದಾರೆ.

ಟೋಲ್ ಸಂಗ್ರಹ ಇಲ್ಲ!

ಇಂದಿರಾನಗರದ ಮೂಲಕ ಹಾದುಹೋಗುವ ಓಲ್ಡ್ ಮದ್ರಾಸ್ ರಸ್ತೆ – ಹೊಸೂರು ರಸ್ತೆ ಎಲಿವೇಟೆಡ್ ಕಾರಿಡಾರ್‌ನ ಡಿಪಿಆರ್ ಪ್ರಕಾರ, ಈ ಮಾರ್ಗದಲ್ಲಿ ನೇರವಾಗಿ ಟೋಲ್ ಸಂಗ್ರಹಿಸುವುದು ಪ್ರಾಯೋಗಿಕವಾಗಿ ಅಸಾಧ್ಯವಾಗಿದೆ. ಈ ಕಾರಿಡಾರ್ ನಿರಂತರವಾಗಿರದೆ ಮಧ್ಯೆ ಮಧ್ಯೆ ರ್‍ಯಾಂಪ್‌ಗಳು, ಅಸ್ತಿತ್ವದಲ್ಲಿರುವ ಫ್ಲೈಓವರ್‌ಗಳು ಹಾಗೂ ರಸ್ತೆಗಳನ್ನು ಒಳಗೊಂಡಿರುತ್ತದೆ. ಇಂತಹ ವಿನ್ಯಾಸದಲ್ಲಿ ಟೋಲ್ ಪ್ಲಾಜಾಗಳನ್ನು ಸ್ಥಾಪಿಸುವುದರಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗುವುದಲ್ಲದೆ, ಅದರ ನಿರ್ವಹಣಾ ವೆಚ್ಚ ಭರಿಸುವಷ್ಟು ಆದಾಯ ಬರುವುದಿಲ್ಲ. ಹೀಗಾಗಿ ಈ ಯೋಜನೆಗಳನ್ನು ಇಪಿಸಿ (EPC) ಮಾದರಿಯಲ್ಲಿ ಸರ್ಕಾರವೇ ನಿರ್ಮಿಸಲಿದ್ದು, ಸಾರ್ವಜನಿಕರಿಗೆ ಇವು ಸಂಪೂರ್ಣ ಟೋಲ್ ಮುಕ್ತವಾಗಿರಲಿವೆ.

ಆಸ್ತಿ ಮಾಲೀಕರ ಜೇಬಿಗೆ ಕತ್ತರಿ ಬೀಳುವುದು ಹೇಗೆ?

ಟೋಲ್‌ನಿಂದ ಬಾರದ ಆದಾಯವನ್ನು ಸರಿದೂಗಿಸಲು ‘ವ್ಯಾಲ್ಯೂ ಕ್ಯಾಪ್ಚರ್ ಫೈನಾನ್ಸಿಂಗ್ (Value Capture Financing)’ ತತ್ವದ ಅಡಿಯಲ್ಲಿ ಕಾರಿಡಾರ್ ಬರುವ ಸುತ್ತಮುತ್ತಲಿನ ವಲಯದ (Influence Zone) ಆಸ್ತಿಗಳ ಮೇಲೆ ಹೆಚ್ಚುವರಿ ಲೇವಿ ಅಥವಾ ಸೆಸ್ ವಿಧಿಸಲು ಪ್ರಸ್ತಾಪಿಸಲಾಗಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಆಸ್ತಿ ತೆರಿಗೆ ವ್ಯವಸ್ಥೆಯಲ್ಲೇ ಇದನ್ನು ಸೇರಿಸುವುದರಿಂದ ಸರ್ಕಾರಕ್ಕೆ ನಿರಂತರ ಹಾಗೂ ಸ್ಥಿರವಾದ ಆದಾಯ ಹರಿದುಬರಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಲೆಎತ್ತಲಿವೆ 9 ಫ್ಲೈಓವರ್​

ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (B-SMILE) ವತಿಯಿಂದ 13,262 ಕೋಟಿ ರೂಪಾಯಿ ವೆಚ್ಚದಲ್ಲಿ ಒಟ್ಟು 126 ಕಿಲೋಮೀಟರ್ ಉದ್ದದ 11 ಎಲಿವೇಟೆಡ್ ಕಾರಿಡಾರ್ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅನುಮೋದನೆ ನೀಡಲಾಗಿದೆ. ಇದರಲ್ಲಿ 9 ಫ್ಲೈಓವರ್‌ಗಳು ಸೇರಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:15 am, Thu, 25 June 26

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us