ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕಳೆದ ಎರಡು ದಿನಗಳಿಂದ ಮಳೆ (Bengaluru Rains) ಆಗುತ್ತಿದ್ದು, ಗುರುವಾರ ಕೂಡ ಮಳೆ ಮುಂದುವರೆದಿದೆ. ಮೇ 6ರ ವರೆಗೂ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಂಗಳವಾರ ಮುನ್ಸೂಚನೆ ನೀಡಿತ್ತು. ಈ ಹಿನ್ನೆಲೆ ಬೆಂಗಳೂರಿನ ಹಲವೆಡೆ ಸಾಧಾರಣ ಮಳೆ ಆಗಿದೆ. ರಸ್ತೆ, ತಗ್ಗು ಪ್ರದೇಶಗಳು ಜಲಾವೃತಗೊಂಡು ವಾಹನ ಸವಾರರು ಪರದಾಡುವಂತಾಗಿತ್ತು. ನಗರದ ರಿಚ್ಮಂಡ್ ರಸ್ತೆ, ಕಾರ್ಪೊರೇಷನ್ ವೃತ್ತ, ನಂಜಪ್ಪ ಸರ್ಕಲ್ ಸೇರಿದಂತೆ ಹಲವು ಕಡೆಗಳಲ್ಲಿ ಮಳೆಯಾಗಿದ್ದು, ವಾಹನ ಸವಾರರು ತೊಂದರೆ ಅನುಭವಿಸಿದ್ದಾರೆ. ಫ್ಲೈಓವರ್, ಸ್ಕೈವಾಕ್ ಕೆಳಗೆ ಬೈಕ್ ನಿಲ್ಲಿಸಿ ಸವಾರರು ಆಶ್ರಯ ಪಡೆದಿದ್ದಾರೆ.
ಶಾಂತಿನಗರ, ಮೆಜೆಸ್ಟಿಕ್, ರಾಜಾಜಿನಗರ, ಜಯನಗರ, ವಿಜಯನಗರ, ಚಂದ್ರಲೇಔಟ್, ನಂದಿನಿ ಲೇಔಟ್, ಬಸವೇಶ್ವರ ನಗರ, ಕಾಮಾಕ್ಷಿಪಾಳ್ಯ, ನಾಗರಬಾವಿ, ಬನಶಂಕರಿ, ಬಸವನಗುಡಿ, ಶ್ರೀನಗರ, ಗಿರಿನಗರ, ಹೆಬ್ಬಾಳ, ಆರ್.ಟಿ ನಗರ, ಜಯನಗರ, ಮತ್ತಿಕೆರೆ ಸೇರಿದಂತೆ ಹಲವೆಡೆ ಮಳೆ ಆಗಿದೆ. ಕೆಲಸ ಮುಗಿಸಿ ತೆರಳುತ್ತಿದ್ದ ದ್ವಿಚಕ್ರ ವಾಹನ ಸವಾರರು ಪರದಾಡಿದ್ದಾರೆ.
ಇದನ್ನೂ ಓದಿ: ಮಾಂಸ ಪ್ರಿಯರ ಗಮನಕ್ಕೆ: ನಾಳೆ (ಮೇ 5) ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ
ನಗರದಲ್ಲಿ ಮುಂದಿನ ಕೆಲವು ದಿನಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಅಥವಾ ರಾತ್ರಿಯಲ್ಲಿ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ನಗರದಲ್ಲಿ ಗರಿಷ್ಠ ತಾಪಮಾನವು 32-33 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿರುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಮಧ್ಯೆ, ವರ್ಷದ ಮೊದಲ ಚಂಡಮಾರುತ ಮೋಚಾ ಈ ವಾರ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ರೂಪುಗೊಳ್ಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಇದರಿಂದ ನಗರದ ವಾತಾವರಣದ ಮೇಲೂ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಮಾತ್ರವಲ್ಲದೆ, ಕೋಲಾರದಲ್ಲಿಯೂ ಸಹ ಜೋರು ಮಳೆ ಸುರಿದಿದ್ದು, ಅವಾಂತರ ಸೃಷ್ಟಿಯಾಗಿದೆ. ಜಿಲ್ಲೆಯ ಎಸ್ಎನ್ಆರ್ ಆಸ್ಪತ್ರೆಯ ತಗ್ಗು ಪ್ರದೇಶದ ಪ್ರಯೋಗಾಲಯಕ್ಕೆ ಮಳೆ ನೀರು ನುಗ್ಗಿದೆ. ಮಳೆ ನೀರನ್ನು ಆಸ್ಪತ್ರೆ ಸಿಬ್ಬಂದಿಗಳು ಹೊರ ಹಾಕುತ್ತಿದ್ದಾರೆ. ಪ್ರಯೋಗಾಲಯಕ್ಕೆ ಮಳೆ ನೀರು ನುಗ್ಗಿದ ಪರಿಣಾಮ ದುಬಾರಿ ಯಂತ್ರಗಳು ಹಾಳಾಗುವ ಆತಂಕ ಉಂಟಾಗಿದೆ. ಮಳೆ ಬಂದಾಗಲೆಲ್ಲಾ ಹೀಗೆ ನೀರು ನುಗ್ಗಿ ಅವಾಂತರ ಉಂಟಾಗುತ್ತಿದ್ದು, ಸರಿಪಡಿಸುವಂತೆ ಆಸ್ಪತ್ರೆ ಸಿಬ್ಬಂದಿ ಒತ್ತಾಯಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:36 pm, Thu, 4 May 23