
ಬೆಂಗಳೂರು, ಜೂನ್ 16: ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಚಾಲಕನೊಬ್ಬ (Rapido Driver) ಮಹಿಳಾ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯನಗರ ಪೊಲೀಸ್ ಠಾಣೆಯಲ್ಲಿ (Jayanagar Police Station) ಎಫ್ಐಆರ್ ದಾಖಲಾಗಿದೆ. ಜೂನ್ 14 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಚಾಲಕ ಮಹಿಳಾ ಪ್ರಯಾಣಿಕರ ಮೇಲೆ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಪರ-ವಿರೋಧದ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ.
“ಯುವತಿ ಶ್ರೇಯಾ ಬಿಟಿಎಂ ಲೇಔಟ್‌ನಿಂದ ಜಯನಗರ 3ನೇ ಬ್ಲಾಕ್ಗೆ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದರು. ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಚಾಲಕ ಸುಹಾಸ್ ಪಿಕಪ್ ಮಾಡಿಕೊಂಡು ಲೋಕೆಶನ್ಗೆ ಬಿಟ್ಟಿದ್ದಾರೆ. ನಂತರ ಶ್ರೇಯಾ “ಸಂಚಾರಿ ನಿಯಮ ಪಾಲಿಸದೆ ಬೈಕ್ ಚಲಾಯಿಸುವುದು ಕಾನೂನು ಬಾಹಿರ ಎಂದು ಚಾಲಕ ಸುಹಾಸ್ಗೆ ಹೇಳಿದ್ದಾರೆ. ಆಗ, ಚಾಲಕ ಸುಹಾಸ್, ಶ್ರೇಯಾ ಜೊತೆ ಅಸಭ್ಯವಾಗಿ ವರ್ತಿಸಿ, ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ಮಾಡಿದ್ದಾರೆ. ಶ್ರೇಯಾ ಮೇಲೆ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ನೋಡಿದ ಶ್ರೇಯಾ ಸ್ನೇಹಿತರು, ಚಾಲಕ ಸಹಾಸ್ ವಿರುದ್ಧ ದೂರು ನೀಡುವಂತೆ ಶ್ರೇಯಾಗೆ ಹೇಳಿದ್ದಾರೆ. ಶ್ರೇಯಾ ಚಾಲಕ ಸುಹಾಸ್ ವಿರುದ್ಧ ದೂರು ನೀಡಿದ್ದಾರೆ” ಎಂದು ಎಫ್ಐಆರ್ನಲ್ಲಿ ದಾಖಲಾಗಿದೆ. ಶ್ರೇಯಾ ಅವರು ನೀಡಿದ ದೂರಿನ ಆಧಾರದ ಮೇಲೆ ಜಯನಗರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಜಯನಗರ 3ನೇ ಬ್ಲಾಕ್ನಲ್ಲಿ ಸ್ಕೂಟರ್ನಿಂದ ಕೆಳಗೆ ಇಳಿದ ತಕ್ಷಣ ಶ್ರೇಯಾ, ಚಾಲಕ ಸುಹಾಸ್ಗೆ ಹೊಡೆದಿದ್ದಾರೆ. ಸುಹಾಸ್ರ ಬೆನ್ನಿಗೆ ಶ್ರೇಯಾ ಎರಡು ಬಾರಿ ಹೊಡೆದಿದ್ದಾರೆ. ನಂತರ ಸುಹಾಸ್ ಸ್ಕೂಟರ್ನಿಂದ ಕೆಳಗೆ ಇಳಿದಿದ್ದಾರೆ. ಆಗ ಶ್ರೇಯಾ, ಸುಹಾಸ್ ಕೆನ್ನೆಗೆ ಹೊಡೆದಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದರಿಂದ ಕೋಪಗೊಂಡ ಸುಹಾಸ್, ಶ್ರೇಯಾ ಕೆನ್ನೆಗೆ ಹೊಡೆದಿದ್ದಾರೆ.
ಇದನ್ನೂ ಓದಿ: ಯುವತಿಗೆ ರಪ್ ಅಂತ ಹೊಡೆದ ರ‍್ಯಾಪಿಡೋ ಬೈಕ್ ಚಾಲಕ: ಏಟಿಗೆ ರಸ್ತೆಗೆ ಬಿದ್ದಳು, ವಿಡಿಯೋ ವೈರಲ್
ಪ್ರಕರಣದ ತನಿಖೆಯನ್ನು ಜಯನಗರ ಪೊಲೀಸರು ನಡೆಸುತ್ತಿದ್ದು, ಘಟನೆಗೆ ಕಾರಣವೇನು ಎಂಬುವುದು ತನಿಖೆ ಬಳಿಕ ಗೊತ್ತಾಗಲಿದೆ. ಇತ್ತೀಚಿಗೆ, ಓರ್ವ ಮಹಿಳೆ ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.
Published On - 5:34 pm, Mon, 16 June 25