
ಬೆಂಗಳೂರು, ಜೂನ್ 06: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ (Chinnaswamy stadium) ಹೊರಗಡೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಆರ್ಸಿಬಿ (RCB) ಅಭಿಮಾನಿಗಳು ಮೃತಪಟ್ಟಿದ್ದರು. ಶುಕ್ರವಾರ (ಜೂ.06) ಎಂ.ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮಾನವ ಹಕ್ಕುಗಳ ಆಯೋಗದ (Human Rights) ಅಧ್ಯಕ್ಷ ಶ್ಯಾಂಭಟ್, ಸದಸ್ಯ ಸುರೇಶ್, ಡಿವೈಎಸ್ಪಿಗಳಾದ ಸುಧೀರ್ ಹೆಗ್ಡೆ, ಮೋಹನ್ ನೇತೃತ್ವದ ನಿಯೋಗ ಭೇಟಿ ನೀಡಿತು.
ಭೇಟಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಶ್ಯಾಂ ಭಟ್ ಕಾಲ್ತುಳಿತದಿಂದ 11 ಜನ ಮೃತಪಟ್ಟಿದ್ದು, 70 ಜನ ಗಾಯಗೊಂಡಿದ್ದಾರೆ. ಬೌರಿಂಗ್ ಮತ್ತು ವೈದೇಹಿಯಲ್ಲಿ ತಲಾ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆ್ಯಂಬುಲೆನ್ಸ್ ಇರಲಿಲ್ಲ, ಸರಿಯಾದ ಸಮಯಕ್ಕೆ ಗೇಟ್ ತೆಗೆದಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಮಾನವ ಹಕ್ಕುಗಳ ಆಯೋಗದಿಂದ 2 ಕೇಸ್ ದಾಖಲಿಸಿಕೊಂಡಿದ್ದೇವೆ. ಬೆಂಗಳೂರು ಪೊಲೀಸ್ ಕಮಿಷನರ್, ಆರೋಗ್ಯ ಇಲಾಖೆ ಕಾರ್ಯದರ್ಶಿ ಮತ್ತು ಕ್ರೀಡಾಂಗಣದವರ ಮೇಲೆ ಸುಮೋಟೋ ಕೇಸ್ ದಾಖಲು ಮಾಡಿದ್ದೇವೆ ಎಂದು ತಿಳಿಸಿದರು.
ಮೃತರ ಕುಟುಂಬಕ್ಕೆ ಸರ್ಕಾರಕ್ಕೆ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡಿದೆ. ಗಾಯಾಳುಗಳಿಗೆ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಸರ್ಕಾರ ಹೇಳಿದೆ. ಹೆಚ್ಚಿನ ಪರಿಹಾರ ಏನಾದರೂ ಬೇಕಾಗಿದ್ದರೆ ನಾವು ಸರ್ಕಾರಕ್ಕೆ ತಿಳಿಸುತ್ತೇವೆ. ನ್ಯಾಯಾಲಯ ಸೂಚನೆ ಕೊಟ್ಟರೆ ಆಯೋಗದಿಂದ ತನಿಖೆ ಮಾಡಿಸುತ್ತೇವೆ ಎಂದರು.
ಇದನ್ನೂ ಓದಿ: RCB ಮಾರ್ಕೆಟಿಂಗ್ ಮುಖ್ಯಸ್ಥ ಬಂಧನ: ಕೋರ್ಟ್ ಮೆಟ್ಟಿಲೇರಿದ ಪತ್ನಿ, ಡಿಕೆಶಿ ವಿರುದ್ಧ ಗಂಭೀರ ಆರೋಪ
ಇನ್ನೊಂದೆಡೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA) ಸಹ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದು,ಆರ್ಸಿಬಿ (RCB) ಐಪಿಎಲ್ ಟ್ರೋಫಿ ಗೆಲುವಿನ ಸಂಭ್ರಮಾಚರಣೆಯನ್ನು ವಿಧಾನಸೌಧದ ಎದುರು ನಡೆಸುವಂತೆ ಕರೆ ಕೊಟ್ಟಿದ್ದೇ ಸರ್ಕಾರ ಎಂದು ರಿಟ್ ಅರ್ಜಿಯಲ್ಲಿ ಸ್ಫೋಟಕ ಆರೋಪ ಮಾಡಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಚಿವರು ವಿಧಾನಸೌಧ ಗ್ರ್ಯಾಂಡ್ ಸ್ಟೆಪ್ಸ್ ವೇದಿಕೆಯಲ್ಲಿ ಆಟಗಾರರನ್ನು ಸನ್ಮಾನಿಸಿದ್ದಾರೆ. ಸರ್ಕಾರ, ಸಚಿವರ ಮೇಲಿನ ಜನರ ಆಕ್ರೋಶದ ಹಾದಿ ತಪ್ಪಿಸಲು ಎಫ್ಐಆರ್ ದಾಖಲಿಸಲಾಗಿದೆ ಎಂದು ರಿಟ್ ಅರ್ಜಿಯಲ್ಲಿ ಕೆಎಸ್ಸಿಎ ಉಲ್ಲೇಖಿಸಿದೆ.