ಬೆಂಗಳೂರು: ಅಪಾರ್ಟ್‌ಮೆಂಟ್ ವಿರುದ್ಧ ರೋಡಿಗಿಳಿದ ಜನರು, ಕಂಪ್ಲೇಂಟ್ ಕೊಟ್ಟರೂ ಕಣ್ಮುಚ್ಚಿ ಕುಳಿತ ಪಾಲಿಕೆ
ಬೆಂಗಳೂರಿನ ಚಿಕ್ಕಲ್ಲಸಂದ್ರದಲ್ಲಿ ಹೊಸ ಅಪಾರ್ಟ್‌ಮೆಂಟ್ ನಿರ್ಮಾಣದಿಂದ ಆ ನಗರದ ಜನರಿಗೆ ಸಮಸ್ಯೆ ಉಂಟಾಗಿದೆ. ಕಿರಿದಾದ ರಸ್ತೆಯನ್ನು ಆಕ್ರಮಿಸಿ ಕಾಂಪೌಂಡ್ ನಿರ್ಮಾಣ ಮಾಡುತ್ತಿರುವುದರಿಂದ ಸ್ಥಳೀಯರು ಪ್ರತಿಭಟನೆ ಮಾಡಿದ್ದಾರೆ. ಈ ಬಗ್ಗೆ ಬಿಬಿಎಂಪಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರು, ಏಪ್ರಿಲ್ 12: ಅದು ನಿತ್ಯ ನೂರಾರು ವಾಹನಗಳು ಓಡಾಡುವ ರಸ್ತೆ. ಆದರೆ ಇದೀಗ ಆ ರಸ್ತೆಯಲ್ಲಿ ತಲೆ ಎತ್ತುತ್ತಿರುವ ಅಪಾರ್ಟ್‌ಮೆಂಟ್ (apartment) ಇಡೀ ಏರಿಯಾ ಜನರ ವಿರೋಧಕ್ಕೆ ಕಾರಣವಾಗಿದೆ. ಇರುವ ಚಿಕ್ಕ ರಸ್ತೆಯನ್ನ ಆಕ್ರಮಿಸಿಕೊಂಡು ಕಾಂಪೌಂಡ್ ನಿರ್ಮಿಸಲಾಗುತ್ತಿದ್ದು, ಇತ್ತ ರೂಲ್ಸ್ ಬ್ರೇಕ್ ಆಗಿದ್ದರೂ ಪಾಲಿಕೆ (BBMP) ಕಣ್ಮುಚ್ಚಿ ಕುಳಿತಿರೋದು ಏರಿಯಾ ಜನರ ಆಕ್ರೋಶ ಕೆರಳಿಸಿದೆ. ಮನವಿ ನೀಡಿ ಸುಸ್ತಾದ ಜನರು ರಸ್ತೆಗಿಳಿದು ಪ್ರತಿಭಟನೆ ಮಾಡಿದ್ದಾರೆ.
ಕಿರಿದಾದ ರಸ್ತೆಯಲ್ಲೇ ಕಾಂಪೌಂಡ್ ನಿರ್ಮಾಣ: ಏರಿಯಾ ಜನರಿಂದ ಪ್ರತಿಭಟನೆ
ಉತ್ತರಹಳ್ಳಿ ಹೋಬಳಿಯ ಚಿಕ್ಕಲ್ಲಸಂದ್ರದ ರಸ್ತೆಯಲ್ಲಿ ನಿನ್ನ ಏರಿಯಾ ಜನರು ಪ್ರತಿಭಟನೆ ಮಾಡಿದ್ದಾರೆ. ಅಷ್ಟಕ್ಕೂ ಈ ಜನರ ಸಿಟ್ಟಿಗೆ ಕಾರಣವಾಗಿರುವುದು ಇದೇ ರಸ್ತೆಯಲ್ಲಿ ತಲೆ ಎತ್ತಿರುವ ಕೋಮರ್ಲ, ನಂದಾ ಬ್ರಿಗೇಡ್ ಅಪಾರ್ಟ್‌ಮೆಂಟ್. ಸದ್ಯ ಮುಗಿಲೆತ್ತರ ಕಟ್ಟಡ ಕಟ್ಟಿರುವ ಅಪಾರ್ಟ್‌ಮೆಂಟ್ ಗ್ರೂಪ್, ಇದೀಗ ಇರುವ ಕಿರಿದಾದ ರಸ್ತೆ ಬಳಿಯೇ ಕಾಂಪೌಂಡ್ ನಿರ್ಮಿಸೋಕೆ ಹೊರಟಿರೋದು ಏರಿಯಾ ಜನರ ಆಕ್ರೋಶದ ಕಟ್ಟೆ ಒಡೆಯುವಂತೆ ಮಾಡಿದೆ. ಮೊದಲೇ ಚಿಕ್ಕದಾದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದ್ದರೂ ಕಾಂಪೌಂಡ್ ಕಟ್ಟೋಕೆ ಹೊರಟಿರುವ ಅಪಾರ್ಟ್‌ಮೆಂಟ್ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ರಾಜ್ಯ ಸಿವಿಲ್ ಸೇವೆ ಹುದ್ದೆ ನೇಮಕಾತಿ ಅಧಿಸೂಚನೆಗೆ ತಡೆ
ಇನ್ನು ಈ ರಸ್ತೆಯಲ್ಲಿ ನಿತ್ಯ ಶಾಲಾ ವಾಹನಗಳು ಸಂಚಾರ ಮಾಡುತ್ತೆ, ಅಲ್ಲದೇ ಪಕ್ಕದಲ್ಲೇ ದೇವಸ್ಥಾನ ಕೂಡ ಇರೋದರಿಂದ ಹೆಚ್ಚಿನ ಜನರು ಕೂಡ ಸಂಚರಿಸುತ್ತಾರೆ. ಆದರೆ ಇದೀಗ ರಸ್ತೆಗೆ ಅಂತಾ 5 ಅಡಿ ಜಾಗ ಕೂಡ ಬಿಡದೇ ಕಾಂಪೌಂಡ್ ಕಟ್ಟಲಾಗುತ್ತಿದೆ ಅಂತಾ ಜನರು ಆರೋಪಿಸಿದ್ದಾರೆ. ಇನ್ನು ನಕಲಿ ರಿಪೊರ್ಟ್ ಕೊಟ್ಟು ರಸ್ತೆ ಬದಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದಿದ್ದಾರೆ ಅಂತಿರೋ ಜನರು, ಬಿಬಿಎಂಪಿಯ ಕಮಿಷನರ್ಗೆ ದೂರು ನೀಡಿದರೂ ಯಾವುದೇ ಕ್ರಮ ಆಗದಿರೋದಕ್ಕೆ ರಸ್ತೆಗಿಳಿದು ಪ್ರತಿಭಟಿಸಿದ್ದಾರೆ.
ಸದ್ಯ ಈ ರಸ್ತೆಯಲ್ಲಿ ಈಗಾಗಲೇ ಟ್ರಾಫಿಕ್ ಸಮಸ್ಯೆ ಇದ್ದರೂ ಪಾಲಿಕೆ ಮಾತ್ರ ಆಗುತ್ತಿರುವ ಸಮಸ್ಯೆಗೆ ಪರಿಹಾರ ನೀಡೋಕೆ ಮುಂದೆ ಬರ್ತಿಲ್ಲ ಅಂತಾ ಸ್ಥಳೀಯರಾದ ಕುಮಾರ್ ಎಂಬುವವರು ಅಳಲು ತೋಡಿಕೊಂಡಿದ್ದಾರೆ. ಇತ್ತ ರಸ್ತೆ ಬದಿಯಲ್ಲೇ ಕಾಂಪೌಂಡ್ ನಿರ್ಮಾಣದ ಪ್ಲಾನ್ ನಡೆಯುತ್ತಿರುವುದರಿಂದ ಮುಂದೆ ಮತ್ತಷ್ಟು ಟ್ರಾಫಿಕ್ ಕಿರಿಕಿರಿ ಎದುರಾಗುವ ಆತಂಕ ಜನರಲ್ಲಿ ಮನೆ ಮಾಡಿದೆ.
ಇದನ್ನೂ ಓದಿ: ಬಳ್ಳಾರಿ ಜಿಲ್ಲೆಯ ಬಹುತೇಕ ಪಿಎಚ್‌ಸಿಗಳಲಿಲ್ಲ ಮರಣೋತ್ತರ ಪರೀಕ್ಷೆ ಕೇಂದ್ರಗಳು
ಸದ್ಯ ಪಾಲಿಕೆಗೆ ದೂರು ನೀಡಿದರೂ ಕ್ರಮ ಆಗದೇ ಬೇಸತ್ತ ಜನ ಪ್ರತಿಭಟನೆ ನಡೆಸಿದ್ದು, ಸದ್ಯ ಪಾಲಿಕೆ ಇನ್ನಾದರೂ ಎಚ್ಚೆತ್ತುಕೊಂಡು ರಸ್ತೆಗಾಗಿ ಜಾಗ ಬಿಡಿಸುವ ಕೆಲಸ ಮಾಡುತ್ತ ಅನ್ನೋದನ್ನ ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:04 am, Sat, 12 April 25