ಸ್ಕೂಟರ್ ಬೆಲೆಗಿಂತ ದಂಡದ ಮೊತ್ತವೇ ಅಧಿಕ: ಸವಾರನಿಗೆ 1.61 ಲಕ್ಷ ರೂ. ದಂಡ ವಿಧಿಸಿದ ಪೊಲೀಸ್
ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ ಒಬ್ಬ ದ್ವಿಚಕ್ರ ವಾಹನ ಸವಾರನಿಗೆ 1.61 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಈ ದಂಡದ ಮೊತ್ತ ವಾಹನದ ಬೆಲೆಗಿಂತಲೂ ಹೆಚ್ಚಾಗಿದೆ. ಹೆಲ್ಮೆಟ್ ಧರಿಸದಿರುವುದು, ಸಿಗ್ನಲ್ ಜಂಪ್ ಮಾಡುವುದು ಸೇರಿದಂತೆ ಹಲವು ನಿಯಮ ಉಲ್ಲಂಘನೆಗಳಿಗೆ ದಂಡ ವಿಧಿಸಲಾಗಿದೆ. ಪುನರಾವರ್ತಿತ ಅಪರಾಧಕ್ಕೆ ಕಠಿಣ ಕ್ರಮ ಕೈಗೊಳ್ಳದಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಫೆಬ್ರವರಿ 03: ಬೆಂಗಳೂರು ಸಂಚಾರಿ ಪೊಲೀಸರು (Bengaluru Traffic Police) ಟ್ರಾಫಿಕ್ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುತ್ತಲೇ ಇದ್ದಾರೆ. ಹಾಗೇ, ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೂ ಕೂಡ ಕೆಲವರು ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ತಿರುಗಾಡುತ್ತಿದ್ದಾರೆ. ಇಂತವರ ವಿರುದ್ಧ ಸಂಚಾರಿ ಪೊಲೀಸರು ಕ್ರಮಕೈಗೊಳ್ಳುತ್ತಿದ್ದಾರೆ. ಸಂಚಾರಿ ನಿಯಮ ಉಲ್ಲಂಘಿಸಿ ರಾಜಾರೋಷವಾಗಿ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ಚಾಲಕನ ವಿರುದ್ಧ ಬೆಂಗಳೂರು ಸಂಚಾರಿ ಪೊಲೀಸರು 1.61ಲಕ್ಷ ರೂ. ದಂಡ ವಿಧಿಸಿದ್ದಾರೆ.
KA05 JX 1344 ನಂಬರ್ನ ಸ್ಕೂಟರ್ ಬೆಲೆಗಿಂತ ಟ್ರಾಫಿಕ್ ದಂಡ ಜಾಸ್ತಿಯಾಗಿದೆ. ಸ್ಕೂಟರ್ ಬೆಲೆ 80 ಸಾವಿರ ರೂ. ದಂಡ 1 ಲಕ್ಷದ 61 ಸಾವಿರ ರೂ. ಇದೆ. ವಾಹನ ಸವಾರ ಹೆಲ್ಮೆಟ್ ಹಾಕದ, ಸಿಗ್ನಲ್ ಜಂಪ್ ಸೇರಿದಂತೆ ಹಲವು ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾನೆ. ಇದೇ ಬೈಕ್ ಸವಾರ ಕಳೆದ ವರ್ಷ 01,05,500 ರೂ. ದಂಡ ತುಂಬಿದ್ದನು. ಈ ವರ್ಷ ಹೆಚ್ಚುವರಿಯಾಗಿ 56 ಸಾವಿರ ರೂ. ದಂಡ ತುಂಬಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಫುಟ್ಪಾತ್ ಮೇಲೆ ವಾಹನ ಚಲಾಯಿಸಿದ್ರೆ ಲೈಸೆನ್ಸ್ ರದ್ದು!
ಬೆಂಗಳೂರು ಸಂಚಾರ ಪೊಲೀಸರು ಯಾಕೆ ಇನ್ನೂ ಈ ಸವಾರನ ವಿರುದ್ಧ ಕಠಿಣ ಕ್ರಮ ಕೈಗೊಂಡಿಲ್ಲ. ಆರ್ಟಿಒ ಅಧಿಕಾರಿಗಳು ವಾಹನ ಜಪ್ತಿ ಏಕೆ ಮಾಡಿಲ್ಲ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
80 ಲಕ್ಷ ರೂ. ದಂಡ ಸಂಗ್ರಹ
ಡ್ರಂಕ್ & ಡ್ರೈವ್ ವಿರುದ್ಧ ಸಂಚಾರಿ ಪೊಲೀಸರ ಕಾರ್ಯಾಚರಣೆ ಮುಂದುವರೆದಿದ್ದು, ಜನವರಿ 27ರಿಂದ ಫೆ.2ರವರೆಗೆ ತಪಾಸಣೆಯಲ್ಲಿ 80 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ. ಬೆಂಗಳೂರಿನ 50 ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ತಪಾಸಣೆ ನಡೆದಿದೆ. ಕಳೆದ 1 ವಾರದಲ್ಲಿ 800 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಮಾಹಿತಿ ನೀಡಿದರು.
ಹಾಗೇ, ಅತಿವೇಗದಿಂದ ವಾಹನ ಚಲಾಯಿಸುವವರ ವಿರುದ್ಧವೂ ಸಂಚಾರಿ ಪೊಲೀಸರು ವಿಶೇಷ ಕಾರ್ಯಚರಣೆ ನಡೆಸಿದರು. ಪೊಲೀಸರು 228 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. 2,30,000 ರೂ. ದಂಡ ಸಂಗ್ರಹಿಸಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:36 pm, Mon, 3 February 25