ಒಂದೇ ಬೈಕ್ ಮೇಲೆ 100 ಕೇಸ್: ರಿಯಾಯಿತಿ ಬಳಸಿ 27,500 ರೂ. ಟ್ರಾಫಿಕ್ ಫೈನ್ ಪಾವತಿಸಿದ ಸವಾರ

ಬೆಂಗಳೂರಿನಲ್ಲಿ ಒಂದೇ ಬೈಕ್ ಮೇಲಿದ್ದ ಬರೋಬ್ಬರಿ 100 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡವನ್ನು ಬೈಕ್ ಸವಾರರೊಬ್ಬರು ಶೇ 50 ರ ರಿಯಾಯಿತಿ ದರದಲ್ಲಿ ಪಾವತಿಸಿದ್ದಾರೆ. ಮತ್ತೊಂದೆಡೆ, ಬೆಂಗಳೂರು ಸಂಚಾರ ಪೊಲೀಸರು ನಗರದಾದ್ಯಂತ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಾಚರಣೆಯಲ್ಲಿ ನೂರಾರು ಡ್ರಂಕ್ ಅಂಡ್ ಡ್ರೈವ್ ಹಾಗೂ ಅತಿವೇಗದ ಚಾಲನೆ ಪ್ರಕರಣಗಳು ದಾಖಲಾಗಿವೆ.

ಒಂದೇ ಬೈಕ್ ಮೇಲೆ 100 ಕೇಸ್: ರಿಯಾಯಿತಿ ಬಳಸಿ 27,500 ರೂ. ಟ್ರಾಫಿಕ್ ಫೈನ್ ಪಾವತಿಸಿದ ಸವಾರ
ಒಂದೇ ಬೈಕ್ ಮೇಲೆ 100 ಕೇಸ್
Image Credit source: Bangalore Traffic Police
Edited By:

Updated on: Jun 22, 2026 | 9:33 AM

ಬೆಂಗಳೂರು, ಜೂನ್ 22: ಬೆಂಗಳೂರಿನಲ್ಲಿ (Bengaluru) ಸಂಚಾರ ನಿಯಮ ಉಲ್ಲಂಘಿಸುವ (Traffic Tules Violation) ವಾಹನ ಸವಾರರ ವಿರುದ್ಧ ಪೊಲೀಸರು ಕಠಿಣ ಕ್ರಮ ಮುಂದುವರಿಸಿದ್ದಾರೆ. ಇದರ ನಡುವೆ ವಾಹನಗಳ ಮೇಲಿನ ದಂಡ ಪಾವತಿಗೆ ಸರ್ಕಾರ ಘೋಷಿಸಿರುವ ರಿಯಾಯಿತಿ ಹಿನ್ನೆಲೆಯಲ್ಲಿ, ಬೈಕ್ ಸವಾರರೊಬ್ಬರು ಒಂದೇ ದ್ವಿಚಕ್ರ ವಾಹನದ ಮೇಲಿದ್ದ ಬರೋಬ್ಬರಿ 100 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡವನ್ನು ಒಂದೇ ಬಾರಿಗೆ ಪಾವತಿಸಿದ್ದಾರೆ. ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಗೆ ಆಗಮಿಸಿದ ಸವಾರ, 100 ಪ್ರಕರಣಗಳಿಗೆ ಶೇಕಡಾ 50 ರಷ್ಟು ರಿಯಾಯಿತಿ ದರದಲ್ಲಿ ಒಟ್ಟು 27,500 ರೂಪಾಯಿ ದಂಡ ಪಾವತಿಸಿದ್ದು, ಇನ್ನು ಮುಂದೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದಾಗಿ ಪ್ರಮಾಣ ಮಾಡಿದ್ದಾರೆ.

ಮುಖ್ಯಾಂಶಗಳು

  • ಒಂದೇ ಬೈಕ್ ಮೇಲಿತ್ತು 100 ಕೇಸ್‌ಗಳು.
  • ರಿಯಾಯಿತಿಯಲ್ಲಿ 27,500 ರೂ. ದಂಡ ಪಾವತಿ.
  • ಡ್ರಂಕ್ ಅಂಡ್ ಡ್ರೈವ್: 669 ಪ್ರಕರಣ ದಾಖಲಿಸಿದ ಪೊಲೀಸರು.

ಮದ್ಯಪಾನ ಹಾಗೂ ಅತಿವೇಗದ ಚಾಲನೆಗೆ ಬ್ರೇಕ್: ವಿಶೇಷ ಕಾರ್ಯಾಚರಣೆ

ಬೆಂಗಳೂರು ಸಂಚಾರ ಪೊಲೀಸರು ನಗರದಾದ್ಯಂತ ಡ್ರಂಕ್ ಅಂಡ್ ಡ್ರೈವ್ ಮತ್ತು ಅತಿವೇಗದ ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡಿದ್ದಾರೆ. ಜೂನ್ 15 ರಿಂದ ಜೂನ್ 26 ರವರೆಗೆ ನಗರದ 53 ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪರಿಶೀಲನೆ ನಡೆಯುತ್ತಿದೆ. ಕಾರ್ಯಾಚರಣೆಯ ಭಾಗವಾಗಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿದ್ದ ಶಂಕೆಯ ಮೇಲೆ ಒಟ್ಟು 43,057 ವಾಹನಗಳನ್ನು ತಪಾಸಣೆ ನಡೆಸಲಾಗಿದ್ದು, ಈ ಪೈಕಿ ಡ್ರಂಕ್ ಅಂಡ್ ಡ್ರೈವ್ ಮಾಡಿದ 669 ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದೇ ವೇಳೆ ಅತಿವೇಗವಾಗಿ ವಾಹನ ಚಾಲನೆ ಮಾಡುತ್ತಿದ್ದ 46 ಚಾಲಕರ ವಿರುದ್ಧ ಕೇಸ್ ದಾಖಲಿಸಿ, ಅವರಿಂದ ಒಟ್ಟು 46 ಸಾವಿರ ರೂಪಾಯಿ ದಂಡ ಸಂಗ್ರಹಿಸಲಾಗಿದೆ.

ಯಲಹಂಕದಲ್ಲಿ ಅಪಘಾತ: ಮೂವರ ಸ್ಥಿತಿ ಗಂಭೀರ

ನಗರದ ಯಲಹಂಕ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಕಾರೊಂದು ಯು-ಟರ್ನ್ (U-Turn) ಮಾಡುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಬೈಕ್‌ಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬೈಕ್‌ನಲ್ಲಿದ್ದ ಮೂವರು ಯುವಕರು ತೀವ್ರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಸದ್ಯ ಗಾಯಾಳುಗಳನ್ನು ಯಲಹಂಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ನಾಗಾಸಾಧುಗಳ ಸೋಗಿನಲ್ಲಿ ಬಂದು ಉಂಗುರ ಲಪಟಾಯಿಸಿದ ಖದೀಮರು!

ಬೆಂಗಳೂರಿನ ಆರ್‌ಪಿಸಿ ಲೇಔಟ್‌ನಲ್ಲಿ ನಾಗಾಸಾಧುಗಳ ಸೋಗಿನಲ್ಲಿ ಬಂದ ವೇಷಧಾರಿಗಳು ಸಾರ್ವಜನಿಕರಿಗೆ ವಂಚಿಸಿರುವ ವಿಲಕ್ಷಣ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿನ ನಿವಾಸಿ ಅರುಣ್ ಶ್ರೀಪಾದ್ ಎಂಬುವರ ಬಳಿ ಬಂದ ಇಬ್ಬರು ನಕಲಿ ನಾಗಾಸಾಧುಗಳು ಕಾಶಿ ಮತ್ತು ಗಂಗಾ ಸ್ನಾನದ ಬಗ್ಗೆ ಪ್ರಸ್ತಾಪಿಸಿ ಅವರ ನಂಬಿಕೆ ಗಳಿಸಿದ್ದರು. ಬಳಿಕ ಆಶೀರ್ವಾದ ಮಾಡುವ ನೆಪದಲ್ಲಿ ಅರುಣ್ ಅವರ ಹಣೆಗೆ ತ್ರಿಶೂಲ ಇಟ್ಟು, ಅವರ ಕೈಯಲ್ಲಿದ್ದ ಬೆಲೆಬಾಳುವ ಚಿನ್ನದ ಉಂಗುರವನ್ನು ಕಸಿದು ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಟ್ರಾಫಿಕ್ ಫೈನ್ ರಿಯಾಯಿತಿ: ಬೆಂಗಳೂರಿನಲ್ಲಿ ಆರ್​ಟಿಒ 12 ವಿಶೇಷ ಕೌಂಟರ್! ಎಲ್ಲೆಲ್ಲಿ ಎಂಬ ಮಾಹಿತಿ ಇಲ್ಲಿದೆ

ವಂಚಕರು ಹೋದ ಬಳಿಕ ಮನೆಗೆ ಬರುವವರೆಗೂ ಅರುಣ್‌ ಅವರಿಗೆ ಉಂಗುರ ಕಳುವಾಗಿರುವುದು ಗೊತ್ತೇ ಇರಲಿಲ್ಲ. ಮನೆಗೆ ಬಂದ ನಂತರ ಕೃತ್ಯ ಬೆಳಕಿಗೆ ಬಂದಿದ್ದು, ಈ ಸಂಬಂಧ ಶ್ರೀಪಾದ್ ರಾವ್ ಅವರು ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us