
ಬೆಂಗಳೂರು, ಜುಲೈ 17: ರಾಜ್ಯದ ಪ್ರತಿಷ್ಠಿತ ಕ್ಯಾನ್ಸರ್ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಕಿದ್ವಾಯಿ ಆಸ್ಪತ್ರೆ (Kidwai Hospital) ಹೆಸರಾಗಿದೆ. ಸಾವಿರಾರು ಕ್ಯಾನ್ಸರ್ (Cancer) ರೋಗಿಗಳು ಭೇಟಿ ನೀಡುತ್ತಾರೆ. ಆದರೆ ಇದೇ ಪ್ರತಿಷ್ಠಿತ ಕಿದ್ವಾಯಿ ಆಸ್ಪತ್ರೆಯಲ್ಲಿ ಹತ್ತಾರು ಅದ್ವಾನಗಳು ಕಂಡುಬಂದಿದ್ದು, ಆಸ್ಪತ್ರೆಗೆ ಕಾಲಿಡುವ ಮುನ್ನ ಎರಡೆರೆಡು ಬಾರಿ ಯೋಚಿಸುವಂತಾಗಿದೆ. ಎಂಆರ್ಐ ಸ್ಕ್ಯಾನಿಂಗ್ ಮತ್ತು ಮೆಮೊಗ್ರಾಂ ಮಾಡಿಸಲು ಪರದಾಡುವಂತಾಗಿದೆ.
ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಕಿದ್ವಾಯಿ ಆಸ್ಪತ್ರೆಗೆ ನಿತ್ಯ ಸಾವಿರಾರು ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಆದರೆ ಆಸ್ಪತ್ರೆಯಲ್ಲಿ ಕಳೆದ ಹತ್ತು ದಿನಗಳಿಂದ ಚಿಕಿತ್ಸೆಗೆ ಬರುವ ರೋಗಿಗಳಿಗೆ ಸಂಕಷ್ಟ ಎದುರಾಗಿದೆ. ಏಕೆಂದರೆ ಎಂಆರ್ಐ ಸ್ಕ್ಯಾನಿಂಗ್, ಮೆಮೊಗ್ರಾಂ ಸೇರಿದ್ದಂತೆ ಅನೇಕ ಉಪಕರಣಗಳು ಹಾಳಾಗಿವೆ. ಈಗಾಗಲೇ ಹಾಳಾಗಿ ಹತ್ತು ದಿನ ಕಳೆದರೂ ಯಾವುದೇ ಉಪಕರಣಗಳನ್ನು ಸರಿಪಡಿಸಿಲ್ಲ. ಹೀಗಾಗಿ ರೋಗಿಗಳು ನಿತ್ಯ ಪರದಾಡುವಂತಾಗಿದೆ.
ಇದನ್ನೂ ಓದಿ: ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಯಲ್ಲಿ ಅನುದಾನ ದುರ್ಬಳಕೆ ಆರೋಪ: ತನಿಖಾ ಸಮಿತಿ ರಚಿಸಿದ ಸರ್ಕಾರ
ಉಪಕರಣಗಳು ಹಾಳಾದ ಪರಿಣಾಮ ನೂರಾರು ಕಿಲೋಮೀಟರ್ ದೂರದಿಂದ ಚಿಕಿತ್ಸೆಗೆ ಕಿದ್ವಾಯಿಗೆ ಬಂದು ರೋಗಿಗಳು ವಾಪಸ್ ಹೋಗುತ್ತಿದ್ದಾರೆ. ಇನ್ನು ಖಾಸಗಿ ಆಸ್ಪತ್ರೆಯಲ್ಲಿ ಎಂಆರ್ಐ ಚಿಕಿತ್ಸೆಗೆ ಕನಿಷ್ಠ 10 ಸಾವಿರ ರೂ ಖರ್ಚು ಆಗುತ್ತದೆ. ಹೀಗಾಗಿ ಬಡ ರೋಗಿಗಳು ಸಂಕಷ್ಟಕ್ಕೆ ಸಿಲುಕಿದಂತಾಗಿದೆ.
ಕಳೆದ 10 ದಿನಗಳಿಂದ ಆಸ್ಪತ್ರೆಯಲ್ಲಿರುವ ಉಪಕರಣಗಳು ಹಾಳಾಗಿ ರೋಗಿಗಳು ಪರದಾಡುತ್ತಿದ್ದರು ಕಿದ್ವಾಯಿ ಆಸ್ಪತ್ರೆ ಆಡಳಿತ ನಿರ್ದೇಶಕರು ಸರಿ ಪಡಿಸದೆ ನಿರ್ಲಕ್ಷ್ಯ ತೋರಿದ್ದಾರೆ. ಎಂಆರ್ಐ ಸ್ಕ್ಯಾನಿಂಗ್ ವರದಿ ಕೈ ಸೇರದೆ ವೈದ್ಯರು ಡಯಾಗ್ನೋಸ್ ಮಾಡಲಾಗದೆ ವಾಪಸ್ ಕಳಿಸುತ್ತಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಸಾವಿರಾರು ರೂ ಹಣ ಖರ್ಚು ಮಾಡಬೇಕಾದ ದುಸ್ಥಿತಿ ಎದುರಾಗಿದೆ.
ಇದನ್ನೂ ಓದಿ: ಕಿದ್ವಾಯಿ ಆಸ್ಪತ್ರೆಯಲ್ಲಿ ಒಂದಲ್ಲಾ ಎರಡಲ್ಲಾ ಸಮಸ್ಯೆ: ಅಧಿಕಾರಿಗಳ ನಿರ್ಲಕ್ಷಕ್ಕೆ ಅಸುನೀಗುತ್ತಿವೆ ಬಡ ಜೀವಗಳು
ಒಟ್ಟಿನಲ್ಲಿ ಕಿದ್ವಾಯಿ ಆಸ್ಪತ್ರೆಯಲ್ಲಿ ಸಮಸ್ಯೆಗಳ ಸರಮಾಲೆ ಎದ್ದು ಕಾಣುತ್ತಿದ್ದು, ಅಧಿಕಾರಿಗಳ ನಿರ್ಲಕ್ಷಕ್ಕೆ ಬಡ ಜೀವಗಳು ಪರದಾಡುವಂತಾಗಿದೆ. ಸರ್ಕಾರ ಇತ್ತ ಗಮನ ಹರಿಸುವ ಮೂಲಕ ಸಮಸ್ಯೆಗಳಿಗೆ ಮುಕ್ತಿ ನೀಡಿ ಬಡ ಜನರ ಪರದಾಟ ತಪ್ಪಿಸಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.