ಬೆಂಗಳೂರಲ್ಲಿ ದಿನದಿಂದ ದಿನಕ್ಕೆ ಕಾರು, ಬೈಕ್ಗಳ ಸಂಖ್ಯೆ ಹೆಚ್ಚಳ: ಟ್ರಾಫಿಕ್ ತಜ್ಞರು ಹೇಳುವುದೇನು?
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಪ್ರತಿದಿನ 3000 ಹೊಸ ವಾಹನಗಳು ರಸ್ತೆಗೆ ಇಳಿಯುತ್ತಿದ್ದು, ಇದರಲ್ಲಿ ಕಾರು ಮತ್ತು ದ್ವಿಚಕ್ರ ವಾಹನಗಳ ಪಾಲು ಸಿಂಹಪಾಲಾಗಿದೆ. ಜೂನ್‌ನಲ್ಲಿ ದಾಖಲೆಯ ಕಾರು ಮಾರಾಟವಾಗಿದ್ದು, ಇದರ ಪರಿಣಾಮವಾಗಿ ನಗರದಲ್ಲಿ ಟ್ರಾಫಿಕ್ ಸಮಸ್ಯೆ ತೀವ್ರಗೊಂಡಿದೆ.

ಮುಖ್ಯಾಂಶಗಳು
- ಬೆಂಗಳೂರಲ್ಲಿ ನಿತ್ಯ ರೋಡಿಗಿಳಿಯುತ್ತಿವೆ 3 ಸಾವಿರ ಹೊಸ ವಾಹನಗಳು
- ಜೂನ್ ತಿಂಗಳಲ್ಲೇ ಕಾರು ಮಾರಾಟದ ಹೊಸ ದಾಖಲೆ
- ರಾಜ್ಯ ಸರ್ಕಾರ ಇದಕ್ಕೆ ಬ್ರೇಕ್ ಹಾಕಬೇಕು ಎಂದ ಟ್ರಾಫಿಕ್ ತಜ್ಞರು
ಬೆಂಗಳೂರು, ಜುಲೈ 03: ಸಿಲಿಕಾನ್ ಸಿಟಿಯಲ್ಲಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಈಗಾಗಲೇ ವಿಶ್ವದಲ್ಲೇ ಅತಿ ಹೆಚ್ಚು ಟ್ರಾಫಿಕ್ ಇರುವ ನಗರಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಬೆಂಗಳೂರಲ್ಲಿ (bangaluru), ವಾಹನಗಳ ಖರೀದಿಯ ಭರಾಟೆ ಮಾತ್ರ ಕಮ್ಮಿಯಾಗಿಲ್ಲ. ಕಳೆದ ಜೂನ್ ತಿಂಗಳೊಂದರಲ್ಲೇ ಕಾರುಗಳ ಮಾರಾಟ (Car sales) ಶೇಕಡಾ 25 ರಷ್ಟು ಹೆಚ್ಚಳವಾಗಿದ್ದು, ರಾಜಧಾನಿಯಲ್ಲಿ ಪ್ರತಿದಿನ ಬರೋಬ್ಬರಿ 3 ಸಾವಿರ ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ. ಅದರಲ್ಲಿ ಕಾರು, ಬೈಕ್ಗಳ ಸಂಖ್ಯೆಯೇ ಜಾಸ್ತಿ.
ಜೂನ್ ತಿಂಗಳಲ್ಲಿ 4 ಲಕ್ಷ ಕಾರುಗಳು ಮಾರಾಟ
ಬೆಂಗಳೂರು ನಗರ ಈಗಾಗಲೇ ವಾಹನ ದಟ್ಟಣೆಯಿಂದಾಗಿ ಉಸಿರುಗಟ್ಟುತ್ತಿದೆ. ಇಂತಹ ಪರಿಸ್ಥಿತಿಯ ಮಧ್ಯೆಯೂ ಕಳೆದ ಜೂನ್ ತಿಂಗಳಲ್ಲಿ ವಾಹನಗಳ ಮಾರಾಟ ಹೊಸ ದಾಖಲೆ ಬರೆದಿದೆ. ಈ ಹಿಂದೆ ಬೆಂಗಳೂರಲ್ಲಿ ಪ್ರತಿ ತಿಂಗಳು ವೈಟ್ ಬೋರ್ಡ್, ಯೆಲ್ಲೋ ಬೋರ್ಡ್ ಸೇರಿ ಒಂದು ಕಾರು ಶೋ ರೂಂನಲ್ಲಿ 50 ಕಾರುಗಳು ಮಾರಾಟವಾಗುತ್ತಿದ್ದರೆ, ಜೂನ್ ತಿಂಗಳಲ್ಲಿ 75 ಕಾರುಗಳು ಮಾರಾಟವಾಗಿವೆ. ಇನ್ನು ಇಡೀ ದೇಶದಲ್ಲಿ ಜೂನ್ ತಿಂಗಳಲ್ಲಿ 4 ಲಕ್ಷ ಕಾರುಗಳು ಮಾರಾಟವಾಗಿವೆ.
ಭರ್ಜರಿ ವ್ಯಾಪಾರಕ್ಕೆ ಕಾರಣ ಏನು?
ವಾಹನಗಳ ಜಿಎಸ್‌ಟಿ 2.0 ಜಾರಿ, 12 ಲಕ್ಷ ಮಾರಾಟದ ರೂ.ವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಿರುವುದು ಈ ಭರ್ಜರಿ ವ್ಯಾಪಾರಕ್ಕೆ ಕಾರಣ ಎನ್ನಲಾಗುತ್ತಿದೆ. ಕಳೆದ ವರ್ಷ ಜೂನ್‌ನಲ್ಲಿ 3.22 ಲಕ್ಷ ಕಾರುಗಳು ಮಾರಾಟವಾಗಿವೆ. ಪ್ರತಿದಿನ 3 ಸಾವಿರ ಹೊಸ ವಾಹನಗಳು ರೋಡ್ಗೆ ಇಳಿಯುತ್ತಿದ್ದು, 2100 ದ್ವಿಚಕ್ರ ವಾಹನಗಳು, 600 ಕಾರುಗಳು, ಆಟೋ, ಲಾರಿ, ಬಸ್ ಎಲ್ಲಾ ರೀತಿಯ ವಾಹನಗಳು ಸೇರಿದಂತೆ ಒಟ್ಟು 3000 ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ.
ರಾಜ್ಯ ಸರ್ಕಾರ ಇದಕ್ಕೆ ಬ್ರೇಕ್ ಹಾಕಬೇಕು: ಟ್ರಾಫಿಕ್ ತಜ್ಞ ಶ್ರೀ ಹರಿ
ಇನ್ನು ಈ ಬಗ್ಗೆ ಮಾತನಾಡಿರುವ ಟ್ರಾಫಿಕ್ ತಜ್ಞ ಶ್ರೀ ಹರಿ, ಇದರಿಂದ ನಗರದಲ್ಲಿ ವಿಪರೀತ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಹೊಸ ವಾಹನಗಳ ಸಂಚಾರದಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತದೆ. ಇದಕ್ಕೆ ರಾಜ್ಯ ಸರ್ಕಾರ ಬ್ರೇಕ್ ಹಾಕಬೇಕು, ಇಲ್ಲ ನಗರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫ್ಲೈ ಓವರ್, ಅಂಡರ್ ಪಾಸ್ಗಳನ್ನು ನಿರ್ಮಾಣ ಮಾಡಬೇಕು ಎಂದಿದ್ದಾರೆ.
ಬೆಂಗಳೂರಲ್ಲಿ ಕಳೆದ 3 ವರ್ಷಗಳ ವಾಹನ ನೋಂದಣಿ ಅಂಕಿ-ಅಂಶ
- ವರ್ಷ 2023-24
- ಹೊಸ ಕಾರುಗಳು: 1,59,150
- ದ್ವಿಚಕ್ರ ವಾಹನಗಳು: 4,77,361
- ಒಟ್ಟು ಹೊಸ ವಾಹನಗಳು: 7,25,597
- ವರ್ಷ 2024-25
- ಹೊಸ ಕಾರುಗಳು: 1,45,322
- ದ್ವಿಚಕ್ರ ವಾಹನಗಳು: 4,73,994
- ಒಟ್ಟು ಹೊಸ ವಾಹನಗಳು: 7,22,873
- ವರ್ಷ 2025-26
- ಹೊಸ ಕಾರುಗಳು: 1,55,345
- ದ್ವಿಚಕ್ರ ವಾಹನಗಳು: 5,25,335
- ಒಟ್ಟು ಹೊಸ ವಾಹನಗಳು: 7,87,671
ಬೆಂಗಳೂರಿನ ಒಟ್ಟು ವಾಹನ ಸಾಮರ್ಥ್ಯ
- ಒಟ್ಟು ಕಾರುಗಳು: 24,79,695
- ಒಟ್ಟು ದ್ವಿಚಕ್ರ ವಾಹನಗಳು: 86,04,109
- ಬೆಂಗಳೂರಿನಲ್ಲಿರುವ ಒಟ್ಟು ವಾಹನಗಳು: 1,25,94,899 (1.25 ಕೋಟಿ)
- ಖಾಸಗಿ ವಾಹನಗಳು: 1.09 ಕೋಟಿ
- ವಾಣಿಜ್ಯ ವಾಹನಗಳು: 13,25,000
- ಪ್ರತಿದಿನ ಸಂಚರಿಸುವ ಒಟ್ಟು ವಾಹನಗಳು (ಹೊರರಾಜ್ಯದೂ ಸೇರಿ): 1.55 ಕೋಟಿ
ಇನ್ನು ಪ್ರತಿದಿನ ರಾಜಧಾನಿಯಲ್ಲಿ 500 ರಿಂದ 600 ಹೊಸ ಕಾರುಗಳು ನೋಂದಣಿ ಆಗುತ್ತಿದ್ದು, ಇದರಿಂದ ಮೂರು ವರ್ಷದಲ್ಲಿ ರಾಜಧಾನಿಯಲ್ಲಿ ಸುಮಾರು 30 ಲಕ್ಷ ಕಾರುಗಳ ಸಂಖ್ಯೆ ದಾಟಲಿದೆ. ರಾಜ್ಯದಲ್ಲಿ ಒಟ್ಟು 3.50 ಕೋಟಿ ವಾಹನಗಳಿವೆ, ಈ ಪೈಕಿ ಬೆಂಗಳೂರಿನಲ್ಲಿಯೇ ಬರೋಬ್ಬರಿ 1 ಕೋಟಿ 25 ಲಕ್ಷವಾಹನಗಳಿದ್ದು, ನೆರೆಯ ರಾಜ್ಯ, ಅಕ್ಕಪಕ್ಕದ ರಾಜ್ಯದ ವಾಹನಗಳು ಸೇರಿಸಿದರೆ 1,55 ಕೋಟಿ ವಾಹನ ಬೆಂಗಳೂರಿನಲ್ಲಿ ಪ್ರತಿದಿನ ಸಂಚಾರ ಮಾಡುತ್ತಿವೆ.
ವಾಹನ ಸವಾರರು ಆಕ್ರೋಶ
50 ಸಾವಿರ ವಾಹನಗಳು ಓಡಾಡುವ ರಸ್ತೆಯಲ್ಲಿ ಒಂದುವರೆ ಕೋಟಿ ವಾಹನಗಳು ಸಂಚಾರ ಮಾಡುತ್ತಿವೆ. ಇದರಲ್ಲಿ 1.9 ಕೋಟಿ ಬರೋಬ್ಬರಿ ಖಾಸಗಿ ವಾಹನಗಳಿದ್ದು, 13 ಲಕ್ಷದ 25 ಸಾವಿರ ವಾಣಿಜ್ಯ ವಾಹನಗಳಿವೆ. ಕಳೆದ ಮೂರು ವರ್ಷದಲ್ಲಿ ಬೆಂಗಳೂರಲ್ಲಿ 4,58,817 ಹೊಸ ಕಾರು ನೋಂದಣಿ ಆಗಿವೆ ಎನ್ನಲಾಗುತ್ತಿದೆ. ಈ ಬಗ್ಗೆ ಮಾತನಾಡಿರುವ ವಾಹನ ಸವಾರ ರಾಜು, ನಗರದಲ್ಲಿ ಇತ್ತೀಚೆಗೆ ವಿಪರೀತ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಸಾರಿಗೆ ಇಲಾಖೆ ಇದಕ್ಕೆ ಕಡಿವಾಣ ಹಾಕಬೇಕು ಎಂದಿದ್ದಾರೆ.
ಇದನ್ನೂ ಓದಿ: ನೈಸ್ ರೋಡ್ ಟೋಲ್ ದರ ಹೆಚ್ಚಳ ಬೆನ್ನಲ್ಲೇ ಬಿಎಂಟಿಸಿ ಬಸ್ ಟಿಕೆಟ್ ದರವೂ ಏರಿಕೆ ಸಾಧ್ಯತೆ
ಒಟ್ಟಿನಲ್ಲಿ ಈಗಾಗಲೇ ಬೆಂಗಳೂರಲ್ಲಿ ಟ್ರಾಫಿಕ್ ಸಮಸ್ಯೆಯಿಂದಾಗಿ ನಗರದಲ್ಲಿ ಜನರು ಓಡಾಡಲು ಹಿಂದೇಟು ಹಾಕುವ ಸಂದರ್ಭದಲ್ಲಿ, ಪ್ರತಿದಿನ ಮೂರು ಸಾವಿರದಷ್ಟು ಹೊಸ ವಾಹನಗಳು ರೋಡಿಗಿಳಿಯುತ್ತಿರುವುದು ಆತಂಕದ ವಿಷಯವೇ ಸರಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




