ನೀವು ಭಯೋತ್ಪಾದಕರಾ ಎಂದು ಪ್ರಶ್ನಿಸಿ ಟೆಕ್ಕಿಗಳ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿ

ಬೆಂಗಳೂರಿನ ಹೆಚ್‌ಎಎಲ್ (HAL) ಪೊಲೀಸ್ ಠಾಣಾ ವ್ಯಾಪ್ತಿಯ ಎಇಸಿಎಸ್ ಲೇಔಟ್‌ನಲ್ಲಿ ಆಗಸ್ಟ್ 6ರಂದು ಬೆಳಗ್ಗೆ 4 ಗಂಟೆ ಸುಮಾರಿಗೆ ಇಬ್ಬರು ಸಾಫ್ಟ್‌ವೇರ್ ಉದ್ಯೋಗಿಗಳ ಮೇಲೆ ದುಷ್ಕರ್ಮಿಯೊಬ್ಬ 'ನೀವು ಭಯೋತ್ಪಾದಕರಾ?' ಎಂದು ಪ್ರಚೋದನಾಕಾರಿಯಾಗಿ ಪ್ರಶ್ನಿಸಿ, ಬೇಸ್‌ಬಾಲ್ ಬ್ಯಾಟ್‌ನಿಂದ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ. ಈ ಸಂಬಂಧ ಹೆಚ್‌ಎಎಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ನೀವು ಭಯೋತ್ಪಾದಕರಾ ಎಂದು ಪ್ರಶ್ನಿಸಿ ಟೆಕ್ಕಿಗಳ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿ
ಸಾಂದರ್ಭಿಕ ಚಿತ್ರ
Image Credit source: Tv9 Kannada
Edited By:

Updated on: Aug 09, 2026 | 10:10 AM

ಬೆಂಗಳೂರು, ಆಗಸ್ಟ್​​ 09: ನೀವು ಭಯೋತ್ಪಾದಕರಾ ಎಂದು ಪ್ರಶ್ನಿಸಿ ಇಬ್ಬರು ಟೆಕ್ಕಿಗಳ ಮೇಲೆ ದುಷ್ಕರ್ಮಿಯೋರ್ವ ಬೇಸ್‌ಬಾಲ್ ಬ್ಯಾಟ್‌ನಿಂದ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ (Bengaluru) ಹೆಚ್ಎಎಲ್ ಬಳಿಯ ಎಇಸಿಎಸ್ ಲೇಔಟ್‌ನಲ್ಲಿ ನಡೆದಿದೆ. ಸಾಫ್ಟ್‌ವೇರ್ ಉದ್ಯೋಗಿಗಳಾದ ಸಂದೀಪ್ ಕುಮಾರ್ ಗೋಂಡ್ ಹಾಗೂ ರೋಹಿತ್ ಕುಮಾರ್ ಮೇಲೆ ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಆಗಸ್ಟ್ 6ರಂದು ಬೆಳಗ್ಗೆ 4 ಗಂಟೆ ಸುಮಾರಿಗೆ ಘಟನೆ ನಡೆದಿರುವ ಬಗ್ಗೆ ಪೊಲೀಸ್​​ ದೂರು ದಾಖಲಾಗಿದೆ.

ಘಟನೆ ಏನು?

ಸಂದೀಪ್ ಕುಮಾರ್ ಗೋಂಡ್ ಮತ್ತು ರೋಹಿತ್ ಕುಮಾರ್ ಬೆಳಗ್ಗೆ 4 ಗಂಟೆ ಸುಮಾರಿಗೆ ಸ್ನೇಹಿತನಿಗಾಗಿ ಕಾಯುತ್ತ ನಿಂತಿದ್ದರು. ಈ ವೇಳೆ ಮಹೀಂದ್ರಾ ಸ್ಕಾರ್ಪಿಯೋ ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿ ಟೆಕ್ಕಿಗಳನ್ನು ನೀವು ಭಯೋತ್ಪಾದಕರಾ ಎಂದು ಪ್ರಶ್ನಿಸಿದ್ದಾನೆ. ಈ ವೇಳೆ ತಾವು ಭಾರತೀಯ ನಾಗರಿಕರು ಎಂದು ಟೆಕ್ಕಿಗಳು ಉತ್ತರಿಸಿದ್ದರೂ, ಇಬ್ಬರ ಬಳಿಯೂ ಗುರುತಿನ ಚೀಟಿ ತೋರಿಸುವಂತೆ ಆತ ಬೆದರಿಕೆ ಹಾಕಿದ್ದಾನೆ. ಐಡಿ ಕೇಳಲು ನಿನಗೆ ಯಾವ ಅಧಿಕಾರವಿದೆ ಎಂದು ಟೆಕ್ಕಿಗಳು ಪ್ರಶ್ನಿಸಿದ ಕಾರಣ ಕೋಪಗೊಂಡ ಆತ ಅವಾಚ್ಯವಾಗಿ ನಿಂದಿಸಿದ್ದಲ್ಲದೆ ಬೇಸ್‌ಬಾಲ್ ಬ್ಯಾಟ್‌ನಿಂದ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆ ದೃಶ್ಯವನ್ನು ಮೊಬೈಲ್​ನಲ್ಲಿ ಓರ್ವ ಟೆಕ್ಕಿ ಚಿತ್ರೀಕರಿಸಿದ್ದು, ಘಟನೆ ಸಮೀಪದ ಬ್ಯಾಂಕ್​ವೊಂದರ ಸಿಸಿಟಿವಿಯಲ್ಲೂ ಸೆರೆಯಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹಿಂದಿ ಮಾತನಾಡದ್ದಕ್ಕೆ ಡೆಲಿವರಿ ಬಾಯ್ ಮೇಲೆ ಹಲ್ಲೆ!

ಮದ್ಯದ ಅಮಲಿನಲ್ಲಿದ್ದನಾ ಆರೋಪಿ?

ಇನ್ನು ಟೆಕ್ಕಿಗಳ ಮೇಲೆ ಹಲ್ಲೆ ನಡೆಸಿರುವ ವ್ಯಕ್ತಿ ಮದ್ಯದ ಅಮಲಿನಲ್ಲಿದ್ದಂತೆ ಕಂಡುಬಂದಿದ್ದ. ಘಟನೆಯಲ್ಲಿ ಟೆಕ್ಕಿಗಳ ತೊಡೆಯ ಭಾಗ ಮತ್ತು ಮುಖದ ಮೇಲೆ ಆರೋಪಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಘಟನೆ ಸಂಬಂಧ ಹೆಚ್ಎಎಲ್ ಪೊಲೀಸ್ ಠಾಣೆಗೆ ಸಂತ್ರಸ್ತರು ದೂರು ನೀಡಿದ್ದು, ಹಲ್ಲೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿ ಯಾರು ಮತ್ತು ಯಾವ ಕಾರಣಕ್ಕೆ ಆತ ಈ ರೀತಿ ನಡೆದುಕೊಂಡ ಎಂಬುದು ಆತನ ಪತ್ತೆ ಬಳಿಕವೇ ಗೊತ್ತಾಗಬೇಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us