ಬೆಂಗಳೂರಿನ ಸ್ಟಾರ್ ಹೋಟೆಲ್‌ನಲ್ಲಿ ತೂಕ ಇಳಿಸುವ ಇಂಜೆಕ್ಷನ್ ಚಿಕಿತ್ಸೆ ಆರೋಪ: ಆರೋಗ್ಯ ಇಲಾಖೆ ದಾಳಿ, ಕೊರಿಯಾ ಔಷಧ ವಶ

ಬೆಂಗಳೂರಿನ ಪ್ರತಿಷ್ಠಿತ ಸ್ಟಾರ್ ಹೋಟೆಲ್‌ನಲ್ಲಿ ತೂಕ ಇಳಿಸುವ ಇಂಜೆಕ್ಷನ್ ಚಿಕಿತ್ಸೆ ನೀಡಲು ಸಿದ್ಧತೆ ನಡೆದಿದೆ ಎಂಬ ದೂರಿನ ಹಿನ್ನೆಲೆಯಲ್ಲಿ, ಜಿಲ್ಲಾ ಆರೋಗ್ಯಾಧಿಕಾರಿ ನೇತೃತ್ವದ ತಂಡ ಹೋಟೆಲ್ ಮೇಲೆ ದಾಳಿ ನಡೆಸಿದೆ. ಪರಿಶೀಲನೆ ವೇಳೆ ಔಷಧಗಳು, ತೂಕ ಇಳಿಸುವ ಪೌಡರ್ ಹಾಗೂ ಕೊರಿಯಾ ದೇಶದ ಇಂಜೆಕ್ಷನ್ ಬಾಕ್ಸ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಬೆಂಗಳೂರಿನ ಸ್ಟಾರ್ ಹೋಟೆಲ್‌ನಲ್ಲಿ ತೂಕ ಇಳಿಸುವ ಇಂಜೆಕ್ಷನ್ ಚಿಕಿತ್ಸೆ ಆರೋಪ: ಆರೋಗ್ಯ ಇಲಾಖೆ ದಾಳಿ, ಕೊರಿಯಾ ಔಷಧ ವಶ
ಸಾಂದರ್ಭಿಕ ಚಿತ್ರ
Edited By:

Updated on: Nov 06, 2026 | 7:34 AM

ಮುಖ್ಯಾಂಶಗಳು

  • ಸ್ಟಾರ್ ಹೋಟೆಲ್‌ನಲ್ಲಿ ತೂಕ ಇಳಿಸುವ ಇಂಜೆಕ್ಷನ್ ಆರೋಪ
  • ಕೊರಿಯಾ ಇಂಜೆಕ್ಷನ್ ಬಾಕ್ಸ್, ಪೌಡರ್ ವಶಕ್ಕೆ
  • ವೈದ್ಯೆಯ ಎಂಬಿಬಿಎಸ್ ಪ್ರಮಾಣಪತ್ರ ಪರಿಶೀಲನೆಗೆ ಪತ್ರ

ಬೆಂಗಳೂರು, ನವೆಂಬರ್ 6: ತೂಕ ಇಳಿಸುವ ಇಂಜೆಕ್ಷನ್ ಚಿಕಿತ್ಸೆ ನೀಡಲು ಬೆಂಗಳೂರಿನ ಪ್ರತಿಷ್ಠಿತ ಸ್ಟಾರ್ ಹೋಟೆಲ್‌ನಲ್ಲಿ ಸಿದ್ಧತೆ ನಡೆದಿತ್ತು ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ನವೆಂಬರ್ 5 ರಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೋಟೆಲ್ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಡಾ. ಮಾನ್ಸಿ ಸರೀನ್ ಹಾಗೂ ಮತ್ತೊಬ್ಬ ಮಹಿಳೆಯ ವಿರುದ್ಧ ಇಂಡಿಯನ್ ಅಸೋಸಿಯೇಷನ್ ಆಫ್ ಡರ್ಮಟಾಲಜಿಸ್ಟ್ಸ್ (ಐಎಡಿ) ಆರೋಗ್ಯ ಇಲಾಖೆಗೆ ತುರ್ತು ದೂರು ಸಲ್ಲಿಸಿತ್ತು. ಮಧ್ಯಾಹ್ನ 12 ಗಂಟೆಯಿಂದಲೇ ಚಿಕಿತ್ಸೆ ಆರಂಭಿಸಲು ಸಿದ್ಧತೆ ನಡೆಸಲಾಗುತ್ತಿದ್ದು, ತುರ್ತು ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಮನವಿ ಮಾಡಲಾಗಿತ್ತು.

ದೂರಿನ ಹಿನ್ನೆಲೆಯಲ್ಲಿ, ಹೋಟೆಲ್‌ನಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲು ಅನುಮತಿ ಇದೆಯೇ, ವೈದ್ಯರಿಗೆ ಅಗತ್ಯ ವೈದ್ಯಕೀಯ ಅರ್ಹತೆ ಇದೆಯೇ ಹಾಗೂ ಬಳಸಲಾಗುವ ಇಂಜೆಕ್ಷನ್‌ಗಳು ಕಾನೂನುಬದ್ಧವಾಗಿವೆಯೇ ಎಂಬುದನ್ನು ಪರಿಶೀಲಿಸಲು ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮದನಿ ನೇತೃತ್ವದ ತಂಡ ಹೋಟೆಲ್‌ಗೆ ಭೇಟಿ ನೀಡಿತು.

Loading...

ವಿದೇಶದಿಂದ ಆಮದು ಮಾಡಿಕೊಂಡ ಇಂಜೆಕ್ಷನ್‌ಗಳು ಪತ್ತೆ

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ 2007ರ ಅಡಿ ನೋಂದಣಿ ಮಾಡಲಾಗಿದೆಯೇ, ವೈದ್ಯರ ವಿದ್ಯಾರ್ಹತೆ ಮತ್ತು ನೋಂದಣಿ ವಿವರಗಳೇನು, ಇಂಜೆಕ್ಷನ್ ಉತ್ಪನ್ನದ ತಯಾರಕರು ಯಾರು, ಅದರ ಬ್ಯಾಚ್ ನಂಬರ್, ಎಕ್ಸ್‌ಪೈರಿ ದಿನಾಂಕ ಹಾಗೂ ಗುಣಮಟ್ಟ ಏನು ಎಂಬ ಅಂಶಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ. ಈ ವೇಳೆ ವಿದೇಶದಿಂದ ಆಮದು ಮಾಡಿಕೊಂಡ ಇಂಜೆಕ್ಷನ್‌ಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ಪರಿಶೀಲನೆ ವೇಳೆ ಹಲವು ಔಷಧಗಳು, ತೂಕ ಇಳಿಸುವ ಪೌಡರ್ ಹಾಗೂ ವಿದೇಶದಲ್ಲಿ ತಯಾರಾದ ಇಂಜೆಕ್ಷನ್‌ಗಳು, ಕೊರಿಯಾ ದೇಶದ ಕೆಲವು ಇಂಜೆಕ್ಷನ್ ಬಾಕ್ಸ್ ಹಾಗೂ ಕವರ್‌ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಅಧಿಕಾರಿಗಳೂ ಸ್ಥಳಕ್ಕೆ ಭೇಟಿ ನೀಡಿ, ಪತ್ತೆಯಾದ ಉತ್ಪನ್ನಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

ಡಾ. ಮಾನ್ಸಿ ಸರೀನ್ ವೈದ್ಯಕೀಯ ಅರ್ಹತೆಯ ಬಗ್ಗೆಯೇ ಅನುಮಾನ

ಡಾ. ಮಾನ್ಸಿ ಸರೀನ್ ಅವರು ದೆಹಲಿ ವಿಶ್ವವಿದ್ಯಾಲಯದ ಎಂಬಿಬಿಎಸ್ ಪ್ರಮಾಣಪತ್ರ ತೋರಿಸಿದ್ದಾರೆ. ಆದರೆ ಅವರ ವೈದ್ಯಕೀಯ ಅರ್ಹತೆಯ ಬಗ್ಗೆ ಅಧಿಕಾರಿಗಳಿಗೆ ಅನುಮಾನ ಮೂಡಿದ್ದು, ಪ್ರಮಾಣಪತ್ರದ ಸತ್ಯಾಸತ್ಯತೆ ಪರಿಶೀಲಿಸಲು ರಾಷ್ಟ್ರೀಯ ವೈದ್ಯಕೀಯ ಆಯೋಗ ಹಾಗೂ ಕರ್ನಾಟಕ ವೈದ್ಯಕೀಯ ಮಂಡಳಿಗೆ ಪತ್ರ ಬರೆದು ಮಾಹಿತಿ ಕೇಳಲು ನಿರ್ಧರಿಸಿದ್ದಾರೆ. ಪ್ರಕರಣದ ಸಂಪೂರ್ಣ ಮಾಹಿತಿ ಕಲೆಹಾಕಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಮಗ್ರ ಪರಿಶೀಲನೆಗೆ ಆರೋಗ್ಯ ಸಚಿವ ಯುಟಿ ಖಾದರ್ ಸೂಚನೆ

ಈ ಬಗ್ಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಯು.ಟಿ. ಖಾದರ್, “ಹೋಟೆಲ್‌ನಲ್ಲಿ ಇಂತಹ ಚಿಕಿತ್ಸೆ ನೀಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಪ್ರತಿಷ್ಠಿತ ಹೋಟೆಲ್‌ನಲ್ಲಿ ಕುಳಿತು ಹೇಗೆ ಇಂಜೆಕ್ಷನ್ ನೀಡುತ್ತಾರೆ, ಯಾವ ಔಷಧ ನೀಡುತ್ತಾರೆ, ಇದಕ್ಕೆ ಅರ್ಹತೆ ಅಥವಾ ಅವಕಾಶ ಇದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸುತ್ತೇವೆ. ಜಿಲ್ಲಾ ಆರೋಗ್ಯಾಧಿಕಾರಿಗೂ ಸೂಚನೆ ನೀಡಿದ್ದೇನೆ” ಎಂದು ತಿಳಿಸಿದ್ದಾರೆ.

ಆರೋಗ್ಯ ತಜ್ಞರ ಎಚ್ಚರಿಕೆ

ತೂಕ ಇಳಿಸುವ ಹೆಸರಿನಲ್ಲಿ ನೀಡುವ ಇಂಜೆಕ್ಷನ್‌ಗಳನ್ನು ವೈದ್ಯಕೀಯ ಮೇಲ್ವಿಚಾರಣೆ ಇಲ್ಲದೆ ಬಳಸಿದರೆ ರಕ್ತನಾಳಗಳಿಗೆ ತೊಂದರೆ, ಅಂಗಾಂಶಗಳಿಗೆ ಹಾನಿ ಹಾಗೂ ಸೋಂಕಿನ ಅಪಾಯ ಉಂಟಾಗಬಹುದು. ಆದ್ದರಿಂದ ಇಂತಹ ಚಿಕಿತ್ಸೆ ಪಡೆಯುವ ಮೊದಲು ವೈದ್ಯರ ಅರ್ಹತೆ, ಚಿಕಿತ್ಸೆಗೆ ಇರುವ ಅನುಮತಿ ಹಾಗೂ ಔಷಧಗಳ ಗುಣಮಟ್ಟದ ಬಗ್ಗೆ ಖಚಿತಪಡಿಸಿಕೊಳ್ಳುವುದು ಅಗತ್ಯ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ವೈದ್ಯರ ಅರ್ಹತೆ ಕುರಿತ ಅನುಮಾನಗಳಿಗೆ ಆರೋಗ್ಯ ಇಲಾಖೆಯ ತನಿಖೆಯಿಂದ ಸ್ಪಷ್ಟತೆ ಸಿಗಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More
Loading...
Unable to load recommendations.
Follow Us