ತಡೆಯಾಜ್ಞೆ ತೋರಿಸಿದ ಮಂತ್ರಿಮಾಲ್; ಚರಾಸ್ತಿಗಳನ್ನು ವಾಪಸ್ ಕಚೇರಿಯಲ್ಲಿ ಇಡುತ್ತಿರುವ ಬಿಬಿಎಂಪಿ
ಮಂತ್ರಿ ಮಾಲ್ ಸುಮಾರು 42,63,40,874 ರೂ. ತೆರಿಗೆ ಬಾಕಿ ಉಳಿಸಿಕೊಂಡಿದೆ. 2020ರ ಆಗಸ್ಟ್ನಲ್ಲಿ ಬಿಬಿಎಂಪಿಗೆ 10 ಕೋಟಿ ರೂ. ಮೊತ್ತದ ಚೆಕ್ ನೀಡಲಾಗಿತ್ತು. ಆದರೆ ಆ ಚೆಕ್ ಬೌನ್ಸ್ ಆಗಿತ್ತು. ಮಾಲ್ ವಿರುದ್ಧ ಕ್ರಮ ಕೈಗೊಳ್ಳಲು ಬಿಬಿಎಂಪಿ ಅಧಿಕಾರಿಗಳು ದಾಳಿ ನಡೆಸಿದ್ದರು.
ಬೆಂಗಳೂರು: ಭಾರೀ ಮೊತ್ತದ ತೆರಿಗೆ ಬಾಕಿ ಉಳಿಸಿಕೊಂಡಿರುವ ನಗರದ ಮಂತ್ರಿ ಸ್ಕ್ವೇರ್ ಮಾಲ್ (Mantri Square Mall) ಮೇಲೆ ಇಂದು ಬಿಬಿಎಂಪಿ ಅಧಿಕಾರಿಗಳು ಹಾಗೂ ಸಿಬ್ಬಂದಿ ದಾಳಿ (BBMP Raid) ನಡೆಸಿ ಮಾಲ್ಗೆ ಸಂಬಂಧಿಸಿದ ಚರಾಸ್ತಿ ಜಪ್ತಿಗೆ ಮುಂದಾಗಿತ್ತು. ಆದರೆ ಇದೀಗ ಮಾಲ್ ಪರ ವಕೀಲರು ಕೋರ್ಟ್ನಿಂದ ತಡೆಯಾಜ್ಞೆ ತಂದಿದ ಹಿನ್ನಲೆ ಬಿಬಿಎಂಪಿ ಸಿಬ್ಬಂದಿ ವಶಕ್ಕೆ ಪಡೆದ ಚರಾಸ್ತಿಗಳನ್ನು ಮತ್ತೆ ಕಚೇರಿಯ ಒಳಗೆ ಇಡುತ್ತಿದ್ದಾರೆ. ಚರಾಸ್ತಿ ವಶಕ್ಕೆ ಪಡೆಯದಂತೆ ಮಂತ್ರಿಮಾಲ್ ಪರ ವಕೀಲರು ಸಿಟಿ ಸಿವಿಲ್ ಕೋರ್ಟ್ನಿಂದ ಫೆಬ್ರವರಿ 2ರಂದೇ ತಡೆಯಾಜ್ಞೆ ತಂದಿದ್ದರು. ಆದರೆ ದಾಳಿ ವೇಳೆ ನ್ಯಾಯಾಲಯದ ತಡೆಯಾಜ್ಞೆ ಪ್ರತಿ ತೋರಿಸಿರಲಿಲ್ಲ, ಇದೀಗ ತಡೆಯಾಜ್ಞೆ ತೋರಿಸಿದ ಹಿನ್ನಲೆ ಚರಾಸ್ತಿ ವಾಪಸ್ ಕಚೇರಿಯಲ್ಲಿ ಇಡಲಾಗುತ್ತಿದೆ.
ಮಂತ್ರಿ ಮಾಲ್ ಸುಮಾರು 42,63,40,874 ರೂ. ತೆರಿಗೆ ಬಾಕಿ ಉಳಿಸಿಕೊಂಡಿದೆ. 2020ರ ಆಗಸ್ಟ್ನಲ್ಲಿ ಬಿಬಿಎಂಪಿಗೆ 10 ಕೋಟಿ ರೂ. ಮೊತ್ತದ ಚೆಕ್ ನೀಡಲಾಗಿತ್ತು. ಆದರೆ ಆ ಚೆಕ್ ಬೌನ್ಸ್ ಆಗಿತ್ತು. ಮತ್ತೆ ಮತ್ತೆ ನೋಟಿಸ್ ನೀಡಿದ್ದರೂ ಮಾಲ್ ಆಡಳಿತವು ತೆರಿಗೆ ಪಾವತಿಸಲು ಕ್ರಮ ಕೈಗೊಂಡಿರಲಿಲ್ಲ. ಈ ಮಧ್ಯೆ, ಬಿಬಿಎಂಪಿಯ ತೆರಿಗೆ ಬಾಕಿ ಉಳಿಸಿಕೊಂಡಿರುವುದು ಮಂತ್ರಿ ಮಾಲ್ ಮಾಲೀಕತ್ವದ ಅಭಿಶೇಕ್ ಡೆವಲಪರ್ಸ್. ಆದರೆ, ಇಂದು ಬಿಬಿಎಂಪಿ ವಸ್ತುಗಳನ್ನು ಮುಟ್ಟುಗೋಲು ಹಾಕಿರುವುದು ಪ್ರೊಪ್‌ಕೇರ್ ಮಾಲ್ ಮ್ಯಾನೇಜ್ಮೆಂಟ್ಗೆ ಸಂಬಂಧಿಸಿದ್ದಾಗಿದೆ. ಹೀಗಾಗಿ ನಾವು ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದೇವೆ ಎಂದು ಪ್ರೊಪ್‌ಕೇರ್ ಮಾಲ್ ಮ್ಯಾನೇಜ್ಮೆಂಟ್ ಮ್ಯಾನೇಜರ್ ಸಬೀರ್ ತಿಳಿಸಿದ್ದರು.
ತೆರಿಗೆ ಪಾವತಿಸದ ವಿಚಾರವಾಗಿ ಮಂತ್ರಿ ಮಾಲ್ಗೆ ಬಿಬಿಎಂಪಿ ಬೀಗ ಜಡಿಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಮೂರ್ನಾಲ್ಕು ಬಾರಿ ಬೀಗ ಹಾಕಲಾಗಿತ್ತು. ಈ ಹಿಂದೆ 2021ರಲ್ಲಿಯೂ ಬಿಬಿಎಂಪಿ ಅಧಿಕಾರಿಗಳು ಮಾಲ್ಗೆ ಬೀಗ ಹಾಕಿದ್ದರು. ನಂತರ ಮಂತ್ರಿ ಮಾಲ್ ಬೀಗಮುದ್ರೆ ತೆರೆಯಲು ಬಿಬಿಎಂಪಿಗೆ ಹೈಕೋರ್ಟ್ ಆದೇಶ ನೀಡಿತ್ತು. ಮಂತ್ರಿ ಮಾಲ್, ಬಿಬಿಎಂಪಿ ಎರಡೂ ನಿಯಮಗಳನ್ನು ಉಲ್ಲಂಘಿಸಿವೆ. ನಿಗದಿತ ಅವಧಿಯಲ್ಲಿ ಮಂತ್ರಿ ಮಾಲ್ ತೆರಿಗೆ ಪಾವತಿಸಿಲ್ಲ. ಸೀಲ್ ಮಾಡಿ ಬಿಬಿಎಂಪಿಯೂ ನಿಯಮಾವಳಿ ಉಲ್ಲಂಘಿಸಿದೆ ಎಂದು ಹೈಕೋರ್ಟ್ ಹೇಳಿತ್ತು.
ತೆರಿಗೆ ಬಾಕಿಯ ಸ್ವಲ್ಪ ಭಾಗವನ್ನು ತಕ್ಷಣ ಪಾವತಿಸುವಂತೆ ಹೈಕೋರ್ಟ್ನ ಏಕಸದಸ್ಯ ಪೀಠ 2021ರ ಡಿಸೆಂಬರ್ನಲ್ಲಿ ಸೂಚನೆ ನೀಡಿತ್ತು. ತಕ್ಷಣ 4 ಕೋಟಿ ರೂ. ಮೊತ್ತದ ಚೆಕ್ ನೀಡಲು ಸೂಚನೆ ನೀಡಿತ್ತು. ಡಿಸೆಂಬರ್ 13ರ ಮಧ್ಯಾಹ್ನದೊಳಗೆ 2 ಕೋಟಿ ರೂ. ಡಿಡಿ ಪಾವತಿಗೆ ಸೂಚನೆ ನೀಡಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:45 pm, Sat, 18 February 23