AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೋಂವರ್ಕ್​ ಮಾಡಿಲ್ಲ ಎಂದು ಬಾಲಕನ ಮೇಲೆ ಹಲ್ಲೆ! ‘ಪೋಷಕರಿಗೆ ಹೇಳಿದ್ರೆ ಕುತ್ತಿಗೆ ಹಿಸುಕುತ್ತೇನೆ’ ಎಂದ ಶಿಕ್ಷಕಿ

ಬೆಂಗಳೂರಿನ ನಂದಿನಿ ಲೇಔಟ್‌ನ ವೀಣಾ ವಿದ್ಯಾ ಸಂಸ್ಥೆಯಲ್ಲಿ ಹೋಂವರ್ಕ್ ಮಾಡದ 4ನೇ ತರಗತಿ ವಿದ್ಯಾರ್ಥಿಯ ಮೇಲೆ ಶಿಕ್ಷಕಿ ಆಂಗ್ಲಿನ್ ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಗುವಿನ ದೇಹದ ಮೇಲೆ ಬಾಸುಂಡೆ ಗುರುತುಗಳನ್ನು ಕಂಡು ಆಘಾತಕ್ಕೊಳಗಾದ ತಾಯಿ ಲಕ್ಷ್ಮೀ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಾಲಾ ಆಡಳಿತ ಮಂಡಳಿ ನಿರ್ಲಕ್ಷ್ಯದ ವಿರುದ್ಧವೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೋಂವರ್ಕ್​ ಮಾಡಿಲ್ಲ ಎಂದು ಬಾಲಕನ ಮೇಲೆ ಹಲ್ಲೆ! ‘ಪೋಷಕರಿಗೆ ಹೇಳಿದ್ರೆ ಕುತ್ತಿಗೆ ಹಿಸುಕುತ್ತೇನೆ’ ಎಂದ ಶಿಕ್ಷಕಿ
‘ಪೋಷಕರಿಗೆ ಹೇಳಿದ್ರೆ ಕುತ್ತಿಗೆ ಹಿಸುಕುತ್ತೇನೆ’ಎಂದ ಶಿಕ್ಷಕಿ
Shivaprasad B
| Edited By: |

Updated on:Jan 30, 2026 | 11:23 AM

Share

ಬೆಂಗಳೂರು, ಜನವರಿ 30: ಹೋಂವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ 4ನೇ ತರಗತಿ ಬಾಲಕನ ಮೇಲೆ ಶಿಕ್ಷಕಿ ಕ್ರೂರವಾಗಿ ಹಲ್ಲೆ (Teacher assaulted student) ನಡೆಸಿದ ಘಟನೆ ಜನವರಿ 10ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಂದಿನಿ ಲೇಔಟ್‌ನಲ್ಲಿರುವ ವೀಣಾ ವಿದ್ಯಾ ಸಂಸ್ಥೆಯಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕಿ ಆಂಗ್ಲಿನ್ ಬಾಲಕನಿಗೆ ಬಾಸುಂಡೆ ಬರುವ ಮಟ್ಟಿಗೆ ಥಳಿಸಿದ್ದಾರೆ ಎಂದು ಬಾಲಕನ ತಾಯಿ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ನಾನು ಶಾಲೆಗೆ ಹೋಗಲ್ಲಮ್ಮ ಎಂದಿದ್ದ ಬಾಲಕ!

ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮೀ ತಮ್ಮ ಮಗನನ್ನು ಹಾಸ್ಟೆಲ್‌ನಲ್ಲಿ ಬಿಟ್ಟು ಓದಿಸುತ್ತಿದ್ದರು. ಇತ್ತೀಚೆಗೆ ಮಗನನ್ನು ನೋಡಲು ಬಂದ ವೇಳೆ, ಆತನ ಕೈ ಮತ್ತು ದೇಹದ ಮೇಲೆ ಬಾಸುಂಡೆ ಗುರುತುಗಳನ್ನು ಕಂಡು ಶಾಕ್ ಆಗಿದ್ದರು. ಈ ವೇಳೆ ತಾಯಿಯನ್ನು ಕಂಡ ಮಗು ಅಳುತ್ತಾ ಹೋಂ ವರ್ಕ್​ ಮಾಡದ ಕಾರಣ ಶಿಕ್ಷಕಿ ಆಂಗ್ಲಿನ್ ತನಗೆ ಥಳಿಸಿರುವುದಾಗಿ ಹೇಳಿದ್ದ. ಹಲ್ಲೆ ವಿಚಾರವನ್ನು ಪೋಷಕರಿಗೆ ತಿಳಿಸಿದರೆ ಕುತ್ತಿಗೆ ಹಿಸುಕುವುದಾಗಿ ಬೆದರಿಕೆಯೂ ಹಾಕಿದ್ದರಿಂದ ತಾಯಿಯ ಬಳಿ ಏನೂ ಹೇಳಿಕೊಂಡಿಲ್ಲವೆಂದೂ ಬಾಲಕ ಕಣ್ಣೀರಿಟ್ಟಿದ್ದ.

ವಿಷಯ ತಿಳಿದ ಲಕ್ಷ್ಮೀ ಈ ಬಗ್ಗೆ ಶಾಲಾ ಮುಖ್ಯಸ್ಥರನ್ನು ಪ್ರಶ್ನಿಸಿದ್ದರು. ಪೊಲೀಸರನ್ನೂ ಕರೆಯಿಸಿ ಹಲ್ಲೆ ನಡೆಸಿದ ಶಿಕ್ಷಕಿಯನ್ನು ಅಮಾನತುಗೊಳಿಸುವಂತೆಯೂ ಹೇಳಿದ್ದರು. ಈ ಮಧ್ಯೆ ಬಾಲಕ ಶಾಲೆಗೆ ಹೋಗುವುದನ್ನೇ ನಿಲ್ಲಿಸಿದ್ದ. ನಂತರ ಶಿಕ್ಷಕಿ ಸಸ್ಪೆಂಡ್ ಆಗಿರಬಹುದೆಂದು ಮಗನನ್ನು ಶಾಲೆಗೆ ಕಳುಹಿಸಲು ಹೋದಾಗ ಆಕೆಯನ್ನು ಅಮಾನತುಗೊಳಿಸಿಲ್ಲವೆಂದು ತಿಳಿದು ಮತ್ತೆ ಶಾಲೆಯ ಆಡಳಿತಕ್ಕೆ ಪ್ರಶ್ನಿಸಿದಾಗಲೂ ಅವರು ನಿರ್ಲಕ್ಷ್ಯ ತೋರಿದ್ದಾರೆ. ಇದೆಲ್ಲದರಿಂದ ಆಕ್ರೋಶಕ್ಕೊಳಗಾದ ತಾಯಿ ಗುರುವಾರ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ ಗರ್ಭಿಣಿ ಸೊಸೆಯನ್ನು ಮಾವ ಕೊಂದಿದ್ಯಾಕೆ ಗೊತ್ತಾ? ವಿಚಾರಣೆ ವೇಳೆ ಬಾಯ್ಬಿಟ್ಟ ಆರೋಪಿ!

ಮಗುವಿನ ತಾಯಿ ಹೇಳಿದ್ದೇನು?

ಬೆಂಗಳೂರಿನ ನಂದಿನಿ ಲೇಔಟ್‌ನ ವೀಣಾ ವಿದ್ಯಾ ಸಂಸ್ಥೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದ ಬಾಲಕನ ಮೇಲೆ ಶಿಕ್ಷಕಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಬಾಲಕನ ತಾಯಿ ಲಕ್ಷ್ಮೀ ಟಿವಿ9ಗೆ ಹೇಳಿಕೆ ನೀಡಿದ್ದು, ಇತ್ತೀಚೆಗೆ ಮಗನನ್ನು ನೋಡಲು ಬಂದಾಗ ಆತನ ಕೈ ಮತ್ತು ದೇಹದ ಮೇಲೆ ಬಾಸುಂಡೆ ಗುರುತು ಕಂಡೆ. ವಿಚಾರಿಸಿದಾಗ ಕಳೆದ ಎರಡು ತಿಂಗಳಿಂದ ಇಂಗ್ಲಿಷ್ ಶಿಕ್ಷಕಿ ಆಂಗ್ಲಿನ್ ಮಗುವಿಗೆ ಹೊಡೆದು, ಪೋಷಕರಿಗೆ ಹೇಳಿದರೆ ಕುತ್ತಿಗೆ ಹಿಸುಕುವುದಾಗಿ ಬೆದರಿಸಿದ್ದಾಳೆ ಎಂಬುದು ತಿಳಿದುಬಂದಿದೆ. ಎಫ್‌ಐಆರ್ ದಾಖಲಾಗಿದ್ದರೂ ಶಿಕ್ಷಕಿಯ ವಿರುದ್ಧ ತಕ್ಷಣ ಕ್ರಮ ಕೈಗೊಂಡಿಲ್ಲ ಎಂದು ಶಾಲಾ ಆಡಳಿತ ಮಂಡಳಿಯ ವಿರುದ್ಧ ಲಕ್ಷ್ಮೀ ಆಕ್ರೋಶ ವ್ಯಕ್ತಪಡಿಸಿದ್ದು, ಇದೀಗ BEOಗೆ ದೂರು ನೀಡಲು ಮುಂದಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:20 am, Fri, 30 January 26