ಕೊರಿಯನ್ BTS ಬ್ಯಾಂಡ್ ಭೇಟಿಯಾಗಲು ಮನೆ ಬಿಟ್ಟಿದ್ದ 13 ವರ್ಷದ ಬಾಲಕಿ: ಮುಂದೇನಾಯ್ತು ನೋಡಿ

ಬೆಂಗಳೂರಿನ 13 ವರ್ಷದ ಬಾಲಕಿಯೊಬ್ಬಳು ಬಿಟಿಎಸ್ (BTS) ತಂಡವನ್ನು ಭೇಟಿಯಾಗಲು ದಕ್ಷಿಣ ಕೊರಿಯಾಗೆ ಹೋಗಲು ಮನೆ ಬಿಟ್ಟು ಹೋಗಿದ್ದಳು. ಕೆ-ಪಾಪ್‌ನ ಅತಿಯಾದ ಪ್ರಭಾವದಿಂದಾಗಿ ಈ ಘಟನೆ ನಡೆದಿದೆ. ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ಪೊಲೀಸರು ಬಾಲಕಿಯನ್ನು ರಕ್ಷಿಸಿ, ಸೂಕ್ತ ಸಲಹೆ ನೀಡಿ ಪೋಷಕರಿಗೆ ಒಪ್ಪಿಸಿದ್ದಾರೆ. ಮಕ್ಕಳ ಮೇಲೆ ಮೊಬೈಲ್ ಹಾಗೂ ಆನ್‌ಲೈನ್ ವಿಷಯಗಳ ಪ್ರಭಾವದ ಬಗ್ಗೆ ಪೋಷಕರು ಜಾಗೃತರಾಗಿರಬೇಕು.

ಕೊರಿಯನ್ BTS ಬ್ಯಾಂಡ್ ಭೇಟಿಯಾಗಲು ಮನೆ ಬಿಟ್ಟಿದ್ದ 13 ವರ್ಷದ ಬಾಲಕಿ: ಮುಂದೇನಾಯ್ತು ನೋಡಿ
ಸಾಂದರ್ಭಿಕ ಚಿತ್ರ
Edited By:

Updated on: Oct 01, 2026 | 9:43 AM

ಮುಖ್ಯಾಂಶಗಳು

  • ಮಕ್ಕಳಲ್ಲಿ ಕೊರಿಯಾ ಪ್ರಭಾವಗಳು ಹೆಚ್ಚಾಗುತ್ತಿದೆ.
  • ಪಾಪ್ ಬ್ಯಾಂಡ್ ಗಾಯಕರನ್ನು ಭೇಟಿಯಾಗಲು ಕೊರಿಯಾಗೆ ಹೋಗಬೇಕೆಂಬ ಹಠ
  • ಪೋಷಕರ ಮನವೊಲಿಸಿ ಸುರಕ್ಷಿತವಾಗಿ ಅವರ ವಶಕ್ಕೆ ಒಪ್ಪಿಸಿದ್ದಾರೆ.

ಬೆಂಗಳೂರು, ಅ.1: ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಕೊರಿಯಾ ಪ್ರಭಾವಗಳು ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಮೂವಿ, ವೆಬ್​​ ಸೀರೀಸ್ ಗಳು. ಇದೀಗ “ಮೇಡ್ ಇನ್ ಕೊರಿಯಾ” ಸಿನಿಮಾದ ರೀತಿಯಲ್ಲೇ ನಿಜ ಜೀವನದಲ್ಲೂ ಆಘಾತಕಾರಿ ಘಟನೆಯೊಂದು ನಡೆದಿದೆ. ಮೇಡ್ ಇನ್ ಕೊರಿಯಾ ಸಿನಿಮಾದಲ್ಲಿ ಹೀರೋಯಿನ್​​​​ ಚಿಕ್ಕ ವಯಸ್ಸಿನಿಂದ ಕೊರಿಯಾ ಮೂವಿಗಳನ್ನು ನೋಡಿ ಅದರಿಂದ ಪ್ರೇರಣೆಗೊಂಡು ಕೊರಿಯಾಗೆ ಹೋಗಬೇಕು ಎಂಬ ಆಸೆ ಹುಟ್ಟಿಕೊಳ್ಳುತ್ತದೆ. ಅದಕ್ಕಾಗಿ ಆಕೆ ಮಾಡುವ ಪ್ರಯತ್ನ ಹಾಗೂ ಸವಾಲುಗಳು ಸಿನಿ ಪ್ರೇಕ್ಷಕರಿಗೆ ಥ್ರಿಲ್ ನೀಡುತ್ತದೆ. ಅದೇ ರೀತಿಯ ಘಟನೆಯೊಂದು ಬೆಂಗಳೂರಿನಲ್ಲೂ ನಡೆದಿದೆ. ಇಲ್ಲೊಬ್ಬ 13 ವರ್ಷದ ಅಪ್ರಾಪ್ತ ಬಾಲಕಿ ದಕ್ಷಿಣ ಕೊರಿಯಾದ ಖ್ಯಾತ ‘ಬಿಟಿಎಸ್’ (BTS) ಪಾಪ್ ಬ್ಯಾಂಡ್ ಗಾಯಕರನ್ನು ಭೇಟಿಯಾಗಲು ಕೊರಿಯಾಗೆ ಹೋಗಬೇಕೆಂಬ ಹಠಕ್ಕೆ ಬಿದ್ದು ಮನೆ ತೊರೆದಿದ್ದಳು, ಆದರೆ ಚಂದ್ರಾ ಲೇಔಟ್ ಠಾಣೆಯ ಹೊಯ್ಸಳ ಪೊಲೀಸರು ಬಾಲಕಿಯನ್ನು ರಕ್ಷಿಸಿದ್ದಾರೆ. ಮೂಲತಃ ಮಹಾರಾಷ್ಟ್ರದವರಾಗಿದ್ದು, ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದು ಹೆಬ್ಬಗೋಡಿಯಲ್ಲಿ ನೆಲೆಸಿರುವ ದಂಪತಿಯ 13 ವರ್ಷದ ಪುತ್ರಿ ಎಂದು ಹೇಳಲಾಗಿದೆ. ಸದ್ಯ ಪೊಲೀಸರು ಬಾಲಕಿಗೆ ಸೂಕ್ತ ಕೌನ್ಸೆಲಿಂಗ್ ಕೊಡಿಸಿ, ಪೋಷಕರ ಮನವೊಲಿಸಿ ಸುರಕ್ಷಿತವಾಗಿ ಅವರ ವಶಕ್ಕೆ ಒಪ್ಪಿಸಿದ್ದಾರೆ.

ಪೊಲೀಸರ ತನಿಖೆಯ ವೇಳೆ ಬಾಲಕಿಯ ಹುಚ್ಚಾಟದ ಆಘಾತಕಾರಿ ಸತ್ಯಗಳು ಹೊರಬಂದಿವೆ. ಬಾಲಕಿ ಇಡೀ ರಾತ್ರಿ ಮೊಬೈಲ್‌ನಲ್ಲಿ ಕೊರಿಯನ್ ಹಾಡುಗಳು, ವೆಬ್ ಸರಣಿಗಳು ಹಾಗೂ ಸಿನಿಮಾಗಳನ್ನು ವೀಕ್ಷಿಸುತ್ತಿದ್ದಳು. ಬಿಟಿಎಸ್ ಬಾಯ್ಸ್ ಬ್ಯಾಂಡ್ ಪ್ರಭಾವಕ್ಕೆ ಒಳಗಾಗಿದ್ದ ಆಕೆ, ತನ್ನ ವೇಷಭೂಷಣ, ಮಾತಿನ ಶೈಲಿ ಹಾಗೂ ಹಾವಭಾವಗಳನ್ನೂ ಕೊರಿಯನ್ ಸಂಸ್ಕೃತಿಗೆ ತಕ್ಕಂತೆ ಬದಲಾಯಿಸಿಕೊಂಡಿದ್ದಳು.

“ನಾನು ದಕ್ಷಿಣ ಕೊರಿಯಾಗೆ ಹೋಗಿ ಬಿಟಿಎಸ್ ತಂಡವನ್ನು ಭೇಟಿಯಾಗಬೇಕು” ಎಂದು ಆಗಾಗ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಬಾಲಕಿ, ಬುಧವಾರ ಬೆಳಿಗ್ಗೆ ಹೆಬ್ಬಗೋಡಿಯ ತನ್ನ ನಿವಾಸದಿಂದ ಯಾರಿಗೂ ಹೇಳದೆ ಹೊರಟು ಬಂದಿದ್ದಳು. ಇಡೀ ದಿನ ನಗರದ ವಿವಿಧೆಡೆ ಸುತ್ತಾಡಿದ ಆಕೆ, ಮಧ್ಯರಾತ್ರಿ ವೇಳೆಗೆ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣ ತಲುಪಿದ್ದಳು.

ಇದನ್ನೂ ಓದಿ: ನಟಿ ರನ್ಯಾ ರಾವ್ ಬಿಗ್ ಶಾಕ್ ನೀಡಿದ ಕಸ್ಟಮ್ಸ್ ಇಲಾಖೆ: ನಟಿಗೆ 89 ಕೋಟಿ ರೂ. ದಂಡ

ಮೆಟ್ರೋ ಸಿಬ್ಬಂದಿ ಸಮಯಪ್ರಜ್ಞೆ, ‘112’ ಹೊಯ್ಸಳ ಸಿಬ್ಬಂದಿ ಕಾರ್ಯಾಚರಣೆ:

ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ಮಧ್ಯರಾತ್ರಿ ವೇಳೆಗೆ ಟಿಕೆಟ್ ಇಲ್ಲದೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಬಾಲಕಿಯನ್ನು ಗಮನಿಸಿದ ಮೆಟ್ರೋ ಭದ್ರತಾ ಸಿಬ್ಬಂದಿ ತಕ್ಷಣವೇ ತುರ್ತು ಸಹಾಯವಾಣಿ ‘112’ ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಚಂದ್ರಾ ಲೇಔಟ್ ಠಾಣೆಯ ಹೊಯ್ಸಳ ಪೊಲೀಸರು ಬಾಲಕಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ವಿಚಾರ ಬಯಲಾಗಿದೆ. ಅಷ್ಟರಲ್ಲಾಗಲೇ ಬಾಲಕಿಯ ಪೋಷಕರು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಮಗಳು ಕಾಣೆಯಾಗಿರುವ ಕುರಿತು ದೂರು ನೀಡಿದ್ದರು. ತಕ್ಷಣವೇ ಹೆಬ್ಬಗೋಡಿ ಪೊಲೀಸರನ್ನು ಸಂಪರ್ಕಿಸಿದ ಚಂದ್ರಾ ಲೇಔಟ್ ಸಿಬ್ಬಂದಿ, ಪೋಷಕರನ್ನು ಠಾಣೆಗೆ ಕರೆಸಿ ಬಾಲಕಿಯನ್ನು ಒಪ್ಪಿಸಿದ್ದಾರೆ.

ಪ್ರಶ್ನೆ: ಕೊರಿಯನ್ BTS ಬ್ಯಾಂಡ್ ಇಷ್ಟು ಜನಪ್ರಿಯ ಏಕೆ?

ಉತ್ತರ: ಬಿಟಿಎಸ್ ಅಥವಾ ಬಂಗ್ಟನ್ ಬಾಯ್ಸ್ ವಿಶ್ವದಲ್ಲೇ ಅತಿ ಹೆಚ್ಚು ಜನಪ್ರಿಯತೆ ಪಡೆದ ದಕ್ಷಿಣ ಕೊರಿಯಾದ ಮ್ಯೂಸಿಕ್ ಬ್ಯಾಂಡ್ ಆಗಿದೆ. ಬಿಟಿಎಸ್ ಹಾಡುಗಳು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿಲ್ಲ. ಅವರ ಹಾಡುಗಳು ಯುವಜನತೆಯ ಮಾನಸಿಕ ಆರೋಗ್ಯ, ಸ್ವಯಂ ಪ್ರೀತಿ, ಸಾಮಾಜಿಕ ಒತ್ತಡಗಳು ಮತ್ತು ಕನಸುಗಳ ಬೆನ್ನಟ್ಟುವಿಕೆಯ ಬಗ್ಗೆ ಮಾತನಾಡುತ್ತವೆ.

ಪ್ರೆಶ್ನೆ: ಬಾಲಕಿ ಮನೆ ಬಿಟ್ಟು ಹೋಗಿದ್ದು ಏಕೆ ?

ಉತ್ತರ: ಬಿಟಿಎಸ್ ತಂಡವನ್ನು ಭೇಟಿಯಾಗಲು ದಕ್ಷಿಣ ಕೊರಿಯಾಗೆ ಹೋಗಲು ಮನೆ ಬಿಟ್ಟು ಹೋಗಿದ್ದಳು.

ಪ್ರೆಶ್ನೆ: ಬಾಲಕಿಯನ್ನು ಪತ್ತೆ ಹಚ್ಚಿದ್ದು ಹೇಗೆ?

ಉತ್ತರ: ಮೆಟ್ರೋ ನಿಲ್ದಾಣದಲ್ಲಿ ಮಧ್ಯರಾತ್ರಿ ವೇಳೆಗೆ ಟಿಕೆಟ್ ಇಲ್ಲದೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಬಾಲಕಿಯನ್ನು ಗಮನಿಸಿದ ಮೆಟ್ರೋ ಭದ್ರತಾ ಸಿಬ್ಬಂದಿ ತಕ್ಷಣವೇ ತುರ್ತು ಸಹಾಯವಾಣಿ ‘112’ ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ

 

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 9:29 am, Thu, 1 October 26

ಪ್ರಜ್ವಲ್​ ಕುಮಾರ್ ಎನ್​ ವೈ

2017 ಜೂನ್​ನಿಂದ ಟಿವಿ9 ಕನ್ನಡ ವಾಹಿನಿಯಲ್ಲಿ ಕ್ರೈಮ್ ವರದಿಗಾರನಾಗಿ ವೃತ್ತಿ. ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿ ಮಾಡುತಿದ್ದೇನೆ. ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನವನಾಗಿದ್ದು ಹಾಸನ ಮತ್ತು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಒಂದು ವರ್ಷ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕೆಲಸ ಮಾಡಿ ನಂತರ 2017 ರಿಂದ ಇಲ್ಲಿಯವರೆಗೆ ಟಿವಿ9 ನಲ್ಲಿ ಕೆಲಸ ಮಾಡುತಿದ್ದೇನೆ.

Read More
Loading...
Unable to load recommendations.
Follow Us