
ಬೆಂಗಳೂರು, ಡಿಸೆಂಬರ್ 16: ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಮೈಕೊರೆಯುವ ಚಳಿ (Weather Forecast) ಹೆಚ್ಚಾಗಿದೆ. ಶೀತ ಗಾಳಿಯ ಪ್ರಭಾವದಿಂದ ಜನಜೀವನದಲ್ಲಿ ಬದಲಾವಣೆ ಕಂಡುಬಂದಿದ್ದು, ರಾಜ್ಯ ಹವಾಮಾನ ಇಲಾಖೆ ಶೀತಗಾಳಿ ಅಲರ್ಟ್ ನೀಡಿದೆ. ಬೆಂಗಳೂರಿನ ಎಚ್‌ಎಎಲ್ ಪ್ರದೇಶದಲ್ಲಿ ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಿದ್ದು, ಇಲಾಖೆಯ ಪ್ರಕಾರ ಕಳೆದ ಎಂಟು ವರ್ಷಗಳಲ್ಲಿ ದಾಖಲಾದ ಕನಿಷ್ಠ ತಾಪಮಾನ ಇದಾಗಿದೆ.
ಭಾರತ ಹವಾಮಾನ ಇಲಾಖೆ (IMD)ಯ ಪ್ರಕಾರ, ಡಿಸೆಂಬರ್ 13ರಂದು ಬೆಂಗಳೂರಿನಲ್ಲಿ ಕನಿಷ್ಠ 13.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ಕಳೆದ ಎಂಟು ವರ್ಷಗಳಲ್ಲಿ ನಗರದಲ್ಲಿ ದಾಖಲಾದ ಅತ್ಯಂತ ಕಡಿಮೆ ಕನಿಷ್ಠ ತಾಪಮಾನವಾಗಿದೆ. 1883ರಲ್ಲಿ 8.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದರೆ, 2011ರಲ್ಲಿ 12.8, 2013ರಲ್ಲಿ 13.6, 2016ರಲ್ಲಿ 12 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಆದರೀಗ ಬರೋಬ್ಬರಿ 8 ವರ್ಷಗಳ ನಂತರ 13.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಚಳಿ ಹಿನ್ನೆಲೆಯಲ್ಲಿ ಬೆಳಗಿನ ವಾಕಿಂಗ್‌ಗೆ ಹೋಗುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಲಾಲ್‌ಬಾಗ್‌ನಲ್ಲಿ ವಾಕರ್ಸ್ ಸಂಖ್ಯೆ ಶೇ.50ರಷ್ಟು ಇಳಿಕೆಯಾಗಿದೆ. ನಾಳೆಯಿಂದ ಚಳಿ ಪ್ರಮಾಣ ಕ್ರಮೇಣ ಕಡಿಮೆಯಾಗುವ ನಿರೀಕ್ಷೆಯಿದೆ. ಇನ್ನು ಚಳಿಯ ನಡುವೆಯೇ ಮಕ್ಕಳು ಸ್ವೆಟರ್, ಜಾಕೆಟ್, ಕ್ಯಾಪ್ ಧರಿಸಿ ಶಾಲೆಗಳಿಗೆ ತೆರಳುತ್ತಿದ್ದಾರೆ. ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುತ್ತಿದ್ದಾರೆ. ವೈದ್ಯರು ಚಳಿ ಸಮಯದಲ್ಲಿ ಬೆಳಗಿನ ವ್ಯಾಯಾಮ ತಪ್ಪಿಸಿ, ಬೆಚ್ಚನೆಯ ಉಡುಪು ಧರಿಸುವುದು ಹಾಗೂ ಬಿಸಿಯಾದ ಆಹಾರ ಸೇವಿಸಲು ಸಲಹೆ ನೀಡಿದ್ದಾರೆ. ಮಕ್ಕಳ ಮತ್ತು ವೃದ್ಧರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಅಗತ್ಯವಾಗಿದೆ.
ಇದನ್ನೂ ಓದಿ ನಾಳೆಯ ಹವಾಮಾನ: ಚಳಿಗೆ ತತ್ತರಿಸಲಿದೆ ಕರ್ನಾಟಕದ ಉತ್ತರ; ಬೆಂಗಳೂರಲ್ಲೂ ಶೀತ ಗಾಳಿಯ ಅಬ್ಬರ
ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:31 am, Tue, 16 December 25