‘ಮೊದಲು ನೀವು ಕಾನೂನು ಪಾಲಿಸಿ’: ಸಂಚಾರಿ ಆರಕ್ಷಕರಿಗೆ ಜಂಟಿ ಪೊಲೀಸ್ ಆಯುಕ್ತರ ಪಾಠ
ಬೆಂಗಳೂರು ಸಂಚಾರ ಜಂಟಿ ಆಯುಕ್ತ ಕಾರ್ತಿಕ್ ರೆಡ್ಡಿ ಅವರು ಸಂಚಾರ ನಿಯಮ ಉಲ್ಲಂಘಿಸುವ ಪೊಲೀಸರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಸೀಟ್‌ಬೆಲ್ಟ್, ಮೊಬೈಲ್ ಬಳಕೆ ಸೇರಿದಂತೆ ನಿಯಮ ಉಲ್ಲಂಘಿಸಿದರೆ ಐಎಂವಿ ಕಾಯ್ದೆಯಡಿ ಕ್ರಮ ಜರುಗಿಸಲಾಗುವುದು. ಪೊಲೀಸರು ನಿಯಮ ಪಾಲಿಸದಿದ್ದರೆ ಸಾರ್ವಜನಿಕರನ್ನ ಪ್ರಶ್ನಿಸುವ ನೈತಿಕತೆ ಇರುವುದಿಲ್ಲ. ಟೀಕೆಗೂ ಒಳಗಾಗಬೇಕಾಗುತ್ತದೆ ಎಂದು ವಾರ್ನ್ ಮಾಡಿದ್ದಾರೆ.

ಬೆಂಗಳೂರು, ಡಿಸೆಂಬರ್ 15: ಪೊಲೀಸರಿಂದಲೇ ಸಂಚಾರ ನಿಯಮಗಳ ಉಲ್ಲಂಘನೆ ಪ್ರಕರಣಗಳ ಹೆಚ್ಚಳ ಹಿನ್ನಲೆ ಬೆಂಗಳೂರು ಸಂಚಾರ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಕ್ರಮದ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಸುತ್ತೋಲೆ ಹೊರಡಿಸಿರುವ ಅವರು ಸಂಚಾರ ನಿಯಮಗಳ ಪಾಲನೆಗೆ ಪೊಲೀಸರು ಪ್ರಾಮುಖ್ಯತೆ ನೀಡಬೇಕು. ಪೊಲೀಸರೇ ಸಂಚಾರ ನಿಯಮಗಳ ಉಲ್ಲಂಘಿಸಿದ್ರೆ ಪ್ರಶ್ನಿಸುವ ನೈತಿಕತೆ ಇರುವುದಿಲ್ಲ ಜೊತೆಗೆ ಸಾರ್ವಜನಿಕರಿಂದ ಟೀಕೆಗಳಿಗೆ ಒಳಗಾಗಬೇಕಾಗುತ್ತದೆ. ಹೀಗಾಗಿ ಸಂಚಾರ ಪೊಲೀಸರಿಂದ ನಿಯಮ ಉಲ್ಲಂಘನೆ ಕಂಡು ಬಂದಲ್ಲಿ ಐಎಂವಿ ಕಾಯ್ದೆ ಅಡಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸುತ್ತೋಲೆಯಲ್ಲಿ ಏನಿದೆ?
ಇತ್ತೀಚಿನ ದಿನಗಳಲ್ಲಿ, ಕಾನೂನನ್ನು ಜಾರಿಗೆ ತರುವ ಆರಕ್ಷಕರೇ ಸಂಚಾರ ನಿಯಮಗಳನು ಪಾಲಿಸದೇ ವಾಹನ ಚಾಲನೆ ಮಾಡುತ್ತಿರುವ ಪ್ರಕರಣಗಳು ಕಂಡುಬಂದಿರುತ್ತವೆ. ಇದರಲ್ಲಿ ಪ್ರಮುಖವಾಗಿ ಸೀಟ್‌ಬೆಲ್ಟ್ ಧರಿಸದೇ ಇರುವುದು ಹಾಗೂ ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಮತ್ತಿತರ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ವರದಿಯಾಗಿವೆ. ಸಂಚಾರ ನಿಯಮಗಳನ್ನು ಪಾಲನೆ ಮಾಡುವುದು ಕೇವಲ ನಾಗರಿಕರಿಗೆ ಅನ್ವಯಿಸುವುದಿಲ್ಲ. ಕಾನೂನಿನ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳು ಕೂಡ ಸಂಚಾರ ನಿಯಮಗಳಿಗೆ ಬಹಳ ಪ್ರಾಮುಖ್ಯತೆಯನ್ನು ನೀಡಬೇಕಾಗಿರುತ್ತದೆ.
ಇದನ್ನೂ ಓದಿ: ನಿಮಗೆ ತಿಳಿದಿರಬೇಕಾದ ಐದು ಸಂಚಾರ ನಿಯಮಗಳು ಇಲ್ಲಿವೆ
ಕಾನೂನು ಜಾರಿಗೊಳಿಸುವ ಸಂಚಾರ ಪೊಲೀಸರೇ ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ, ಸಂಚಾರ ನಿಯಮ ಪಾಲಿಸಿ ಎಂದು ಸಾರ್ವಜನಿಕರಿಗೆ ಹೇಳುವ ಯಾವುದೇ ಹಕ್ಕು ಇಲ್ಲದಂತಾಗುತ್ತದೆ. ಅಲ್ಲದೆ, ಸಾರ್ವಜನಿಕರಿಂದ ಟೀಕೆಗಳಿಗೂ ಗುರಿಯಾಗಬೇಕಾಗುತ್ತದೆ.ಸಂಚಾರ ಪೊಲೀಸರಾದ ನಾವುಗಳು ಸಂಚಾರ ನಿಯಮ ಪಾಲನೆಯಲ್ಲಿ ಶಿಸ್ತನ್ನು ಪಾಲಿಸಿದರೆ ಮಾತ್ರ ನಮ್ಮ ಅನುಸರಿಸುವ ಸಾರ್ವಜನಿಕರಿಗೆ ಸಂಚಾರ ನಿಯಮಗಳನ್ನು ಪಾಲಿಸುವ ಬಗ್ಗೆ ಶಿಸ್ತು ಮೂಡುವುದಲ್ಲದೇ, ಅವರಿಂದ ಸಂಚಾರ ನಿಯಮಗಳಿಗೆ ಗೌರವವನ್ನು ನಿರೀಕ್ಷಿಸಬಹುದು.
ಬೆಂಗಳೂರು ನಗರ ಸಂಚಾರ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ವಾಹನವನ್ನು ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್/ಸೀಟ್‌ಬೆಲ್ಟ್ ಧರಿಸುವುದರ ಜೊತೆಗೆ ಎಲ್ಲಾ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಸಂಚಾರ ಪೊಲೀಸರಿಂದ ನಿಯಮ ಉಲ್ಲಂಘನೆಗಳು ಕಂಡುಬಂದಲ್ಲಿ ಇಂತಹ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಐಎಂವಿ ಕಾಯ್ದೆ ರೀತ್ಯಾ ಕ್ರಮಕೈಗೊಳ್ಳಲಾಗುವುದೆಂಬ ಸ್ಪಷ್ಟ ಸಂದೇಶವನ್ನು ರವಾನಿಸಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



