ಗಮನಿಸಿ: ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆಯಲ್ಲಿನ್ನು ಅತಿ ವೇಗವಾಗಿ ವಾಹನ ಚಲಾಯಿಸುವಂತಿಲ್ಲ
Bangalore airport road speed limit: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳಾಗುತ್ತಿರುವುದನ್ನು ತಡೆಯಲು ಬೆಂಗಳೂರು ಸಂಚಾರ ಪೊಲೀಸರು ಮಹತ್ವದ ಕ್ರಮಕ್ಕೆ ಮುಂದಾಗಿದ್ದಾರೆ. ವಿಮಾನ ನಿಲ್ದಾಣ ರಸ್ತೆಯಲ್ಲಿ ವೇಗಕ್ಕೆ ಕಡಿವಾಣ ಹಾಕಿದ್ದಾರೆ. ಈಗೆಷ್ಟಿದೆ ವೇಗದ ಮಿತಿ? ಇದನ್ನು ಉಲ್ಲಂಘಿಸಿದರೆ ಏನಾಗಲಿದೆ? ಎಲ್ಲ ಮಾಹಿತಿ ಇಲ್ಲಿದೆ.

ಬೆಂಗಳೂರು, ಮೇ 14: ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport) ರಸ್ತೆಯಲ್ಲಿ ಇನ್ನು ಮುಂದೆ ಅತಿ ವೇಗ ವಾಹನ ಚಲಾಯಿಸಿದರೆ ಸಂಕಷ್ಟ ಕಾದಿದೆ. ಈ ರಸ್ತೆಯಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದ ಕಾರಣ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಬೆಂಗಳೂರು ಸಂಚಾರ ಪೊಲೀಸರು ಚಾಲಕರ (Bengaluru Traffic Police) ಅತಿವೇಗಕ್ಕೆ ಕಡಿವಾಣ ಹಾಕಲು (Speed Limit) ಮುಂದಾಗಿದ್ದಾರೆ. ಅಪಘಾತಗಳನ್ನು ತಡೆಗಟ್ಟಲು ವೇಗದ ಮಿತಿ ಹೇರುವ ನಿರ್ಧಾರ ಕೈಗೊಳ್ಳಲಾಗಿದೆ. ಅದರಂತೆ, ಗಂಟೆಗೆ 80 ಕಿ.ಮೀ. ವೇಗದ ಮಿತಿ ನಿಗದಿಪಡಿಸಿ ಪ್ರಕಟಣೆ ಹೊರಡಿಸಲಾಗಿದೆ.
ಅತಿವೇಗದ ಚಾಲನೆ ಪತ್ತೆಹಚ್ಚಲು ಏರ್ಪೋರ್ಟ್ ರಸ್ತೆಯಲ್ಲಿ ಸಿಸಿಟಿವಿ ಅಳವಡಿಕೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಪೀಡ್ ಲಿಮಿಟ್ ಮೀರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಗಂಟೆಗೆ 80 ಕಿ.ಮೀ. ವೇಗದ ಮಿತಿ ಮೀರಿ ವಾಹನ ಚಲಾಯಿಸಿದರೆ ಅತಿವೇಗದ ಚಾಲನೆ ಪ್ರಕರಣ ದಾಖಲಿಸಿ ದಂಡ ಹಾಕಲು ನಿರ್ಧಾರ ಕೈಗೊಳ್ಳಲಾಗಿದೆ.
ಸಂಚಾರ ಪೊಲೀಸರ ಪ್ರಕಟಣೆಯಲ್ಲೇನಿದೆ?
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಅದರಲ್ಲೂ ಮುಖ್ಯವಾಗಿ ಚಾಲಕರು / ವಾಹನ ಸವಾರರ ಅತಿವೇಗದ ಚಾಲನೆ ಈ ಅಪಘಾತಗಳು ಉಂಟಾಗುವಲ್ಲಿ ಅತ್ಯಂತ ಪ್ರಮುಖವಾದ ಪಾತ್ರ ವಹಿಸುತ್ತಿರುವುದನ್ನು ಗಮನಿಸಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿಮಾನ ನಿಲ್ದಾಣ ರಸ್ತೆಯಲ್ಲಿ ಅತಿವೇಗದ ಚಾಲನೆಯನ್ನು ಪತ್ತೆ ಹಚ್ಚುವ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದ್ದು, ಈ ಕ್ಯಾಮೆರಾಗಳು ಸ್ವಯಂ ಚಾಲಿತವಾಗಿ ಅತಿವೇಗದ ಚಾಲನೆಯನ್ನು ಕಂಡು ಹಿಡಿಯುವ ಸಾಮರ್ಥ್ಯವನ್ನು ಹೊಂದಿವೆ ಎಂದು ಸಂಚಾರ ಪೊಲೀಸರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಸರಿಯಾಗಿ ಸಂಬಳ ಸಿಗದೆ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಚಾಲಕರ ಪರದಾಟ, ಡಿಪೋ ಎದುರು ಪ್ರತಿಭಟನೆ
ಕಾನೂನಾತ್ಮಕವಾಗಿ ನಿಗದಿಪಡಿಸಲಾಗಿರುವ ಪ್ರತಿ ಗಂಟೆಗೆ 80 ಕಿ.ಮೀಗಿಂತ ವೇಗವಾಗಿ ಚಲಿಸುವ ವಾಹನಗಳ ವಿರುದ್ಧ ಅತಿವೇಗದ ಚಾಲನೆಯ ಪ್ರಕರಣಗಳನ್ನು ದಾಖಲಿಸಿ ದಂಡ ವಿಧಿಸಲಾಗುವುದು ಎಂದೂ ಸಂಚಾರ ಪೊಲೀಸರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
(ವರದಿ: ಪ್ರದೀಪ್ ಟಿವಿ9)
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:50 pm, Tue, 14 May 24




