ಬೆಂಗಳೂರು: ರಾತ್ರಿ ಇಡೀ ಸುರಿದ ಮಳೆಯಿಂದ ಹಲವೆಡೆ ಸಂಚಾರಕ್ಕೆ ಅಡ್ಡಿ, ಟ್ರಾಫಿಕ್ ಜಾಮ್
Bengaluru Rains and Traffic Jam: ಬೆಂಗಳೂರು ನಗರದಾದ್ಯಂತ ಬುಧವಾರ ರಾತ್ರಿಯಿಡೀ ಸುರಿದ ಭಾರಿ ಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಗುರುವಾರ ಮುಂಜಾನೆಯಿಂದಲೇ ಬೆಂಗಳೂರಿನ ಹಲವು ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಟ್ರಾಫಿಕ್ ಜಾಮ್ ಬಗ್ಗೆ ಬೆಂಗಳೂರು ಸಂಚಾರ ಪೊಲೀಸರು ನೀಡಿರುವ ಮಾಹಿತಿ ಇಲ್ಲಿದೆ.

ಬೆಂಗಳೂರು, ಆಗಸ್ಟ್ 7: ಬುಧವಾರ ರಾತ್ರಿಯಿಂದಲೇ ಸುರಿದ ಭಾರಿ ಮಳೆಯ (Monsoon Rain) ಪರಿಣಾಮ ಬೆಂಗಳೂರಿನ (Bengaluru) ಹಲವೆಡೆ ರಸ್ತೆಯಲ್ಲಿ ನೀರು ನಿಂತು ಗುರುವಾರ ಬೆಳಗ್ಗೆ ಟ್ರಾಫಿಕ್ ಜಾಮ್ ಉಂಟಾಯಿತು. ಇನ್ನು ಕೆಲವೆಡೆ ಸಂಚಾರಕ್ಕೆ ಅಅಡಚಣೆಯಾಯಿತು. ನಗರದ ಹಲವು ಭಾಗಗಳಲ್ಲಿ ರಸ್ತೆಗಳಲ್ಲಿ ನೀರು ನಿಂತಿರುವುದರಿಂದ ವಾಹನ ಸಂಚಾರ ನಿಧಾನ ಇರಲಿದೆ ಎಂದು ಬೆಂಗಳೂರು ನಗರ ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ. ರಸ್ತೆಯಲ್ಲಿ ನೀರು ನಿಂತಿರುವ ಕಾರಣ, ವಡ್ಡರಪಾಳ್ಯದಿಂದ ಹೆಣ್ಣೂರು ಕಡೆಗೆ ಮತ್ತು ವಡ್ಡರಪಾಳ್ಯದಿಂದ ಗೆದ್ದಲಹಳ್ಳಿ ಕಡೆಗೆ ಎರಡೂ ದಿಕ್ಕುಗಳಲ್ಲಿ ವಾಹನ ಸಂಚಾರ ನಿಧಾನವಾಗಿದೆ. ಅದೇ ರೀತಿ, ರಾಮಮೂರ್ತಿ ನಗರದಿಂದ ಕಸ್ತೂರಿ ನಗರ ಕಡೆಗೆ ಸರ್ವೀಸ್ ರಸ್ತೆಯಲ್ಲಿ ಮಳೆ ನೀರು ನಿಂತಿದ್ದರಿಂದ ವಾಹನ ಸಂಚಾರ ನಿಧಾನವಾಗಿದೆ.
ಮಳೆ ನೀರು ನಿಂತಿರುವುದರಿಂದ ನಾಗವಾರದಿಂದ ವೀರಣ್ಣ ಪಾಳ್ಯ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಎಕ್ಸ್ ಸಂದೇಶದಲ್ಲಿ ತಿಳಿಸಿದ್ದಾರೆ.
ಬೆಂಗಳೂರು ಸಂಚಾರ ಪೊಲೀಸ್ ಎಕ್ಸ್ ಸಂದೇಶ
“ಸಂಚಾರಸಲಹೆ” ಮಳೆ ನೀರು ನಿಂತಿರುವುದರಿಂದ ನಾಗವಾರದಿಂದ ವೀರಣ್ಣ ಪಾಳ್ಯ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ. “Traffic advisory” Due to water logging The road from Nagavara towards Veeranna Palya is having slow-moving traffic. pic.twitter.com/09SpVkyfwy
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) August 7, 2025
ವಾರ ಪೂರ್ತಿ ಬೆಂಗಳೂರಿನಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಹೀಗಾಗಿ ನಗರದಲ್ಲಿ ಮುಂದಿನ ಕೆಲವು ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯುವ ನಿರೀಕ್ಷೆಯಿದೆ.
ಬೆಂಗಳೂರು ಹಾಗೂ ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಮಳೆ ಅಲರ್ಟ್
ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಕೊಪ್ಪಳ, ಬಾಗಲಕೋಟೆ ಮತ್ತು ಬೆಳಗಾವಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಉತ್ತರ ಕನ್ನಡ, ಹಾವೇರಿ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಗದಗ, ಧಾರವಾಡ, ಚಿಕ್ಕಮಗಳೂರು ಮತ್ತು ಬೆಳಗಾವಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಇದನ್ನೂ ಓದಿ: ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಮಳೆ ಅಬ್ಬರ: ಹಲವೆಡೆ ಪ್ರವಾಹ, ಅಪಾರ ಪ್ರಮಾಣದ ಬೆಳೆ ನಾಶ
ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಸೇರಿದಂತೆ ಉತ್ತರ ಒಳನಾಡಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:20 am, Thu, 7 August 25








