ಪ್ರತಿ 3 ತಿಂಗಳಿಗೊಮ್ಮೆ ಆಗ್ತಿದೆ ನೀರಿನ ದರ ಏರಿಕೆ: 2 ವರ್ಷಗಳಿಂದ‌ ಹಗಲು ದರೋಡೆ ಮಾಡ್ತಿದ್ಯಾ BWSSB?

ಕಳೆದ 2 ವರ್ಷಗಳಿಂದ BWSSB ಸಾರ್ವಜನಿಕರ ಗಮನಕ್ಕೆ ತಾರದೆ ಪ್ರತಿ 3 ತಿಂಗಳಿಗೊಮ್ಮೆ ಶೇ 3ರಷ್ಟು ನೀರಿನ ದರ ಏರಿಸುತ್ತಿದೆ. ವರ್ಷಕ್ಕೆ ಶೇ 12ರಷ್ಟು ಹೊರೆ ಹೊರಿಸುತ್ತಿದ್ದು, ಇದು ಹಗಲು ದರೋಡೆ ಎಂದು ಆರೋಪಿಸಲಾಗಿದೆ. ಯಾವುದೇ ಪ್ರಕಟಣೆ ಇಲ್ಲದೆ ಜನರಿಂದ ಸುಲಿಗೆ ಮಾಡುತ್ತಿರುವುದು ನಾಗರಿಕರಿಗೆ ಶಾಕ್ ನೀಡಿದೆ. ಒಳಚರಂಡಿ ಉಪಕರವನ್ನು ಆಯಾ ತಿಂಗಳ ಕುಡಿಯುವ ನೀರಿನ ಶುಲ್ಕದಲ್ಲಿ ಶೇ. 31.25ರಷ್ಟು ಏರಿಕೆ ಮಾಡಲಾಗಿದೆ ಎಂದೂ ದೂರಲಾಗಿದೆ.

ಪ್ರತಿ 3 ತಿಂಗಳಿಗೊಮ್ಮೆ ಆಗ್ತಿದೆ ನೀರಿನ ದರ ಏರಿಕೆ: 2 ವರ್ಷಗಳಿಂದ‌ ಹಗಲು ದರೋಡೆ ಮಾಡ್ತಿದ್ಯಾ BWSSB?
ನೀರಿನ ದರ ಸತತವಾಗಿ ಏರಿಕೆ ಆರೋಪ
Image Credit source: AI Image

Updated on: Mar 26, 2026 | 8:33 AM

ಬೆಂಗಳೂರು, ಮಾರ್ಚ್​​ 26: ಬೆಲೆ ಏರಿಕೆ ಎಂಬ ಪದ ಕೇಳಿದರೆ ಸಾಕು ಜನ ಸಾಮಾನ್ಯರು ಹೆದರಬೇಕಾದ ಸ್ಥಿತಿ ಸದ್ಯ ಕರ್ನಾಟಕದಲ್ಲಿದೆ. ನಾನಾ ಕಾರಣಗಳಿಂದಾಗಿ ಪ್ರತಿ ವಸ್ತುವಿನ ದರವೂ ಗಗನಕ್ಕೇರಿದೆ. ಈ ನಡುವೆ ಜನರಿಗೆ ಸೌಕರ್ಯಗಳನ್ನು ನೀಡಬೇಕಿದ್ದ ಇಲಾಖೆಗಳೇ ಜನರಿಂದ ಸುಲಿಗೆ ಮಾಡುತ್ತಿರುವ ಆತಂಕಕಾರಿ ವಿಷಯವೊಂದು ಬಹಿರಂಗಗೊಂಡಿದ್ದು, ನಾಗರಿಕರ ಗಮನಕ್ಕೇ ಬಾರದಂತೆ ಜೇಬಿಗೆ ಕತ್ತರಿ ಹಾಕುತ್ತಿರುವ ವಿಚಾರ ಶಾಕ್​​ ನೀಡಿದೆ. ಕಳೆದ ಎರಡು ವರ್ಷಗಳಿಂದ‌ ಬೆಂಗಳೂರಿನ ಜಲ ಮಂಡಳಿ ಸತತವಾಗಿ ನೀರಿನ ದರ ಏರಿಕೆ ಮಾಡುತ್ತಾ ಬಂದಿದ್ದರೂ, ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಯೇ ಇಲ್ಲ ಎಂಬುದು ವಿಪರ್ಯಾಸ.

BWSSB ಕಳೆದ ಎರಡು ವರ್ಷಗಳಿಂದ‌ ಪ್ರತಿ‌ ಮೂರು ತಿಂಗಳಿಗೊಮ್ಮೆ ನೀರಿನ ದರ ಏರಿಕೆ ಮಾಡುತ್ತಿದ್ದು, ವರ್ಷದಲ್ಲಿ ನಾಲ್ಕು ಬಾರಿ ದರ ಏರಿಕೆ ಬರೆ ಹಾಕಿ ಜನರಿಂದ ವಸೂಲಿ ಮಾಡುತ್ತಿದೆ. ಪ್ರತಿ ಮೂರು ತಿಂಗಳಿಗೆ ಶೇಕಡಾ 3ರಷ್ಟು ಬೆಲೆ ಹೆಚ್ಚಳದಂತೆ ವರ್ಷಕ್ಕೆ ಶೇಕಡಾ 12ರಷ್ಟು ಹೆಚ್ಚುವರಿ ಹೊರೆ ಜನರ ಮೇಲೆ ಹಾಕಲಾಗ್ತಿದೆ. ಹೀಗಿದ್ದರೂ ಈ ಬಗ್ಗೆ ಯಾವುದೇ ಪ್ರಕಟಣೆ ನೀಡದೆ, ಸಾರ್ವಜನಿಕರ ಗಮನಕ್ಕೂ ತರದೆ ನಾಗರಿಕೆ ಸುಲಿಗೆ ಮಾಡುವ ಕೆಲಸ BWSSB ಕಡೆಯಿಂದ ಆಗ್ತಿದೆ ಎಂದು ಬಿಜೆಪಿ ಮುಖಂಡ ಎನ್. ಆರ್. ರಮೇಶ್ ಆರೋಪಿಸಿದ್ದಾರೆ.

ಇದನ್ನೂ ಓದಿ: ಚಿನ್ನದ ಚಿನ್ನದ ದರ ಹಾವು-ಏಣಿ ಆಟದ ಮಧ್ಯೆ ಬೆಂಗಳೂರಿನಲ್ಲಿ ಅಕ್ಷಯ ತೃತೀಯಕ್ಕೆ ಈಗಲೇ ಗೋಲ್ಡ್ ಬುಕ್ಕಿಂಗ್ ಜೋರು! ಜ್ಯುವೆಲ್ಲರಿಗಳಲ್ಲಿ ಕ್ಯೂ

ಇನ್ನು ಒಳಚರಂಡಿ ಉಪಕರವನ್ನು ಆಯಾ ತಿಂಗಳ ಕುಡಿಯುವ ನೀರಿನ ಶುಲ್ಕದಲ್ಲಿ ಶೇ. 31.25ರಷ್ಟು ಏರಿಕೆ ಮಾಡಲಾಗಿದೆ. ಜಲಮಂಡಳಿ ಸಂಸ್ಥೆಯ ಆರ್ಥಿಕ ಸ್ಥಿತಿ ಸುಧಾರಿಸಲು ಕುಡಿಯುವ ನೀರಿನ ಶುಲ್ಕದ ಏರಿಕೆ ಮತ್ತು ಒಳಚರಂಡಿ ಉಪಕರದ ಹೆಚ್ಚಳ ಅನಿವಾರ್ಯ ಎಂಬ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರದ ಮುಂದಿಡಲಾಗಿತ್ತು. ಈಗ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಶಿಫಾರಸ್ಸಿನಂತೆ BWSSB ಆಡಳಿತ ಮಂಡಳಿಯು ಪ್ರತಿ ಮೂರು ತಿಂಗಳಿಗೊಮ್ಮೆ ಒಳಚರಂಡಿ ಉಪಕರದ ಪ್ರಮಾಣವನ್ನು ಏರಿಕೆ ಮಾಡುತ್ತಿದೆ ಎನ್ನಲಾಗಿದೆ.

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಜನ ತತ್ತರಿಸಿರುವ ನಡುವೆ ಅವರ ಜೊತೆ ನಿಲ್ಲಬೇಕಿದ್ದ ಸರ್ಕಾರ ಎಲ್ಲವನ್ನೂ ನೋಡಿ ಕಣ್ಮುಚ್ಚಿ ಕುಳಿತಿದೆ. ಜನರಿಗೆ ಮೂಲಸೌಕರ್ಯಗಳನ್ನು ನೀಡಬೇಕಿದ್ದ ಇಲಾಖೆಗಳು, ಅರಿವಿಲ್ಲದಂತೆ ಅವರ ಜೇಬಿಗೇ ಕತ್ತರಿ ಹಾಕುವ ಕೆಲಸಕ್ಕೆ ಮುಂದಾಗಿವೆ. ತಮ್ಮ ಗಮನಕ್ಕೆ ಬಾರದೇ ಜನರು ಅದಾಗಲೇ ಬೆಲೆ ಏರಿಕೆ ಹೊರೆ ಭರಿಸುತ್ತಿದ್ದು, ಇದಕ್ಕೆ ಹೊಣೆ ಯಾರು ಎಂಬ ಪ್ರಶ್ನೆಗಳೀಗ ಕೇಳಿಬಂದಿವೆ.

ವರದಿ: ಅರುಣ್ ಕುಮಾರ್, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us