ಯುವಜನತೆಗೆ ಎಐ ಶಿಕ್ಷಣದ ಕೊಡುಗೆ: 80ನೇ ಸ್ವಾತಂತ್ರ್ಯೋತ್ಸವದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಮಹತ್ವದ ಘೋಷಣೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು 80ನೇ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಕರ್ನಾಟಕದ ಅಭಿವೃದ್ಧಿ, ಆರ್ಥಿಕ ಪ್ರಗತಿ, ಗ್ಯಾರಂಟಿ ಯೋಜನೆಗಳ ಸಾಧನೆಗಳನ್ನು ವಿವರಿಸಿದರು. ತಲಾದಾಯ ಹೆಚ್ಚಳ, ಜಿಎಸ್‌ಟಿ ಸಂಗ್ರಹಣೆಯಲ್ಲಿ ರಾಜ್ಯದ 2ನೇ ಸ್ಥಾನವನ್ನು ಎತ್ತಿಹಿಡಿದರು. ಬರ ನಿರ್ವಹಣೆ, ಬೆಂಗಳೂರಿಗೆ ಕುಡಿಯುವ ನೀರು ಹಾಗೂ ಯುವಕರಿಗಾಗಿ AI ಶಿಕ್ಷಣ, ಕೌಶಲ್ಯ ತರಬೇತಿ, ಉದ್ಯೋಗಾವಕಾಶ ಹೆಚ್ಚಿಸುವ ಕಾರ್ಯಕ್ರಮಗಳನ್ನು ಘೋಷಿಸಿದರು.

ಬೆಂಗಳೂರು, ಆ.15: ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಆಯೋಜಿಸಲಾಗಿದ್ದ 80ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಸಮಸ್ತ ರಾಜ್ಯದ ಜನತೆಯನ್ನು ಉದ್ದೇಶಿಸಿ ಸುದೀರ್ಘ ಭಾಷಣ ಮಾಡಿದರು. ತಮ್ಮ ಭಾಷಣದಲ್ಲಿ ರಾಜ್ಯದ ಅಭಿವೃದ್ಧಿಯ ದೂರದೃಷ್ಟಿ, ಆರ್ಥಿಕ ಪ್ರಗತಿ, ಬರ ನಿರ್ವಹಣೆ ಹಾಗೂ ಗ್ಯಾರಂಟಿ ಯೋಜನೆಗಳ ಸಾಧನೆಗಳನ್ನು ದೇಶದ ಮುಂದೆ ತೆರೆದಿಟ್ಟರು.
“ಕಳೆದ 2 ತಿಂಗಳಲ್ಲಿ ಜನಸ್ನೇಹಿತ ಆಡಳಿತ ನೀಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಪಂಚಾಯಿತಿ ಹಾಗೂ ಹೋಬಳಿ ಮಟ್ಟದಲ್ಲಿ ಶಾಸಕರು ಸಭೆ ನಡೆಸಿ ಸಾರ್ವಜನಿಕರ ಕುಂದುಕೊರತೆ ಮತ್ತು ಅಹವಾಲುಗಳನ್ನು ಆಲಿಸಲು ಹೊಸ ವ್ಯವಸ್ಥೆ ಜಾರಿಗೆ ತರಲಾಗಿದೆ. ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ್ದು, ಪರಿಸ್ಥಿತಿ ಪರಿಶೀಲನೆಗೆ ಪ್ರತಿಯೊಬ್ಬ ಸಚಿವರನ್ನು ಜಿಲ್ಲೆಗಳಿಗೆ ಕಳುಹಿಸಲಾಗಿದೆ. ಕೆರೆ-ಕಟ್ಟೆಗಳನ್ನು ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿದ್ದು, ಬೆಂಗಳೂರು ನಗರದ ಕುಡಿಯುವ ನೀರಿನ ಅಭಾವ ತಪ್ಪಿಸಲು ಹಾಗೂ ಮೇಕೆದಾಟು ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
“ರಾಜ್ಯದ ತಲಾದಾಯ ಪ್ರಸ್ತುತ 4.33 ಲಕ್ಷ ರೂ. ತಲುಪಿದ್ದು, ಜಿಎಸ್‌ಟಿ ಸಂಗ್ರಹಣೆಯಲ್ಲಿ ಕರ್ನಾಟಕ ದೇಶದಲ್ಲೇ 2ನೇ ಸ್ಥಾನದಲ್ಲಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಡಳಿತವನ್ನು ಸ್ಮರಿಸಿದ ಅವರು, ಕರ್ನಾಟಕದ ಆರ್ಥಿಕತೆಯನ್ನು 3 ಟ್ರಿಲಿಯನ್ ಡಾಲರ್ ತಲುಪಿಸುವ ಬೃಹತ್ ನೀಲನಕ್ಷೆ ಸಿದ್ಧಪಡಿಸಲಾಗಿದೆ,” ಎಂದರು. 5 ಗ್ಯಾರಂಟಿ ಯೋಜನೆಗಳಿಗೆ 3 ವರ್ಷಗಳಲ್ಲಿ 15,000 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ 2,000 ರೂ. ಧನಸಹಾಯ ಹಾಗೂ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಕಲ್ಪಿಸಲಾಗಿದೆ. ಇದರಿಂದ ರಾಜ್ಯದಲ್ಲಿ ವಿವಾಹಿತ ಮಹಿಳೆಯರು ಎದುರಿಸುತ್ತಿದ್ದ ದೌರ್ಜನ್ಯಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ ಎಂದು ತಿಳಿಸಿದರು.
ಬಸವಣ್ಣನವರ ತತ್ವಾದರ್ಶಗಳಂತೆ ಸರ್ಕಾರ ನಡೆಯುತ್ತಿದ್ದು, ಮಹಾತ್ಮ ಗಾಂಧಿ, ನೆಹರೂ, ಸರ್ದಾರ್ ಪಟೇಲ್, ಮೌಲಾನಾ ಆಜಾದ್ ಅವರ ಹೋರಾಟವನ್ನು ಸ್ಮರಿಸಿದರು. ಜ್ಞಾನ, ವಿಜ್ಞಾನ, ತಂತ್ರಜ್ಞಾನ ಹಾಗೂ ಕೃಷಿ ಕ್ಷೇತ್ರದ ಬೆಳೆವಣಿಗೆಗೆ ಶ್ರಮಿಸುವುದಾಗಿ ತಿಳಿಸಿದರು. ಯುವಜನತೆಯ ಭವಿಷ್ಯವನ್ನು ಉಜ್ವಲಗೊಳಿಸಲು ಹಾಗೂ ತಾಂತ್ರಿಕವಾಗಿ ಸಜ್ಜುಗೊಳಿಸಲು ಹಲವು ಕ್ರಾಂತಿಕಾರಿ ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ.
ಇದನ್ನೂ ಓದಿ: ಸದಾಶಿವನಗರ ನಿವಾಸದಲ್ಲಿ ಸಿಎಂ ಡಿಕೆಶಿ ಧ್ವಜಾರೋಹಣ: ರಾಗ-ದ್ವೇಷವಿಲ್ಲದೆ ಜನರ ಸೇವೆಗೆ ಬದ್ಧ ಎಂದು ಮುಖ್ಯಮಂತ್ರಿ
ಅಧಿಕಾರಕ್ಕೆ ಬಂದ ಕ್ಷಣದಿಂದಲೇ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ ಸಿಎಂ, ಯುವ ಸಮೂಹದ ಸಶಕ್ತೀಕರಣಕ್ಕೆ ಆದ್ಯತೆ ನೀಡಲಾಗುವುದು ಎಂದರು. ರಾಜ್ಯದ ವಿದ್ಯಾರ್ಥಿಗಳು ಹಾಗೂ ಯುವಜನತೆಗೆ ಉದ್ಯೋಗ ಮಾರುಕಟ್ಟೆಯಲ್ಲಿ ಹೊಸ ಅವಕಾಶಗಳನ್ನು ಕಲ್ಪಿಸಲು ಶಿಕ್ಷಣ ಕ್ಷೇತ್ರದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಶಿಕ್ಷಣವನ್ನು ಪರಿಚಯಿಸುವ ನೂತನ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಯುವಜನರಲ್ಲಿ ದೇಶಭಕ್ತಿ, ಸಮಾನತೆ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ ರಾಜ್ಯದಲ್ಲಿ 10 ಸಾವಿರ ಭಾರತ್ ಜೋಡೋ ತಂಡಗಳನ್ನು ನಿರೂಪಿಸಲು ಬೃಹತ್ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಯುವಶಕ್ತಿಯೇ ನವ ಭಾರತದ ತಡಿಪಾಯವಾಗಿದ್ದು, ಅವರ ಅಭಿವೃದ್ಧಿಗೆ ಅಗತ್ಯವಿರುವ ಕೌಶಲ್ಯ ತರಬೇತಿ ಹಾಗೂ ಉದ್ಯೋಗಾವಕಾಶ ಹೆಚ್ಚಿಸುವ ಕಾರ್ಯಕ್ರಮಗಳನ್ನು ಸರ್ಕಾರ ಆದ್ಯತೆಯ ಮೇಲೆ ಜಾರಿಗೆ ತರುತ್ತಿದೆ.
ಇನ್ನು SSLC ಪರೀಕ್ಷೆಯಲ್ಲಿ ಶೇ. 99ರಷ್ಟು ಉತ್ತಮ ಫಲಿತಾಂಶ ಸಾಧಿಸಿದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದ ಸಿಎಂ, ಅಲ್ಪಸಂಖ್ಯಾತ ವಿದ್ಯಾರ್ಥಿವೇತನಕ್ಕಾಗಿ 494 ಕೋಟಿ ರೂ. ಬಿಡುಗಡೆ ಮಾಡಿದ್ದು, ನೇರ ಖಾತೆ ವರ್ಗಾವಣೆ (DBT) ಪ್ರಕ್ರಿಯೆ ಜಾರಿಯಲ್ಲಿದೆ ಎಂದರು. ಬೆಳೆ ವಿಮೆ ಯೋಜನೆಯಡಿ 12.35 ಲಕ್ಷ ರೈತರಿಗೆ 1,300 ಕೋಟಿ ರೂ. ಪರಿಹಾರ ನೀಡಲಾಗಿದೆ. ಕಳೆದ ಒಂದು ವರ್ಷದಲ್ಲಿ 9 ಲಕ್ಷ ಹಾಲು ಉತ್ಪಾದಕ ರೈತರ ಖಾತೆಗಳಿಗೆ 2,600 ಕೋಟಿ ರೂ. ಪ್ರೋತ್ಸಾಹಧನ ವರ್ಗಾಯಿಸಲಾಗಿದೆ.
ಸಹಕಾರ ಕ್ಷೇತ್ರದಿಂದ ಪ್ರತಿದಿನ 1.10 ಕೋಟಿ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ‘ನಂದಿನಿ’ ಬ್ರ್ಯಾಂಡ್ ವಿಸ್ತರಿಸಲಾಗುತ್ತಿದೆ. ಅಲ್ಲದೆ, 275 ಸಂಚಾರಿ ಪಶುವೈದ್ಯಕೀಯ ಘಟಕಗಳು ಮನೆ ಬಾಗಿಲಿಗೇ ಸೇವೆ ನೀಡುತ್ತಿವೆ. ಈ ವರ್ಷ 38 ಲಕ್ಷ ರೈತರಿಗೆ 30,000 ಕೋಟಿ ರೂ. ಸಾಲ ಸೌಲಭ್ಯ ಒದಗಿಸುವ ಗುರಿ ಹೊಂದಲಾಗಿದೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ KPSC ಪರೀಕ್ಷೆ ಅಕ್ರಮ ವಿಚಾರಗಳ ಕುರಿತು ಮಾತನಾಡಿದ ಸಿಎಂ, “ವಿದ್ಯಾರ್ಥಿಗಳ ಆತಂಕವನ್ನು ನಿವಾರಿಸುವುದು ನನ್ನ ಕರ್ತವ್ಯ. ಪರೀಕ್ಷಾ ಪದ್ಧತಿಯಲ್ಲಿ ವೈಜ್ಞಾನಿಕ ಬದಲಾವಣೆ ತರಲು ಪರಿಣಿತ ಅಧಿಕಾರಿಗಳ ಸಮಿತಿ ರಚಿಸಲಾಗಿದ್ದು, 2 ತಿಂಗಳಲ್ಲಿ ವರದಿ ಬಂದ ನಂತರ ದೇಶಕ್ಕೇ ಮಾದರಿಯಾಗುವ ಪರೀಕ್ಷಾ ಕ್ರಮ ಜಾರಿಗೆ ತರಲಾಗುವುದು,” ಎಂದು ಭರವಸೆ ನೀಡಿದರು.
ರಾಜ್ಯದ ಹಿಂದುಳಿದ ತಾಲೂಕುಗಳಲ್ಲಿ ಹೊಸ ಕೈಗಾರಿಕೆಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಇದರಿಂದ ಸ್ಥಳೀಯ ಯುವಕರಿಗೆ ದೊಡ್ಡ ಮಟ್ಟದಲ್ಲಿ ಉದ್ಯೋಗ ಸೃಷ್ಟಿಯಾಗಲಿದ್ದು, ರಾಜ್ಯದಲ್ಲಿ ಸಮತೋಲಿತ ಕೈಗಾರಿಕಾ ಅಭಿವೃದ್ಧಿಗೆ ಹಾದಿ ಸುಗಮವಾಗಲಿದೆ. ಕಲ್ಯಾಣ ಕರ್ನಾಟಕ ಭಾಗದ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದ್ದು, ‘ಕಲ್ಯಾಣಪಥ’ ಯೋಜನೆಯಡಿ 1,150 ಕಿಲೋಮೀಟರ್ ಉದ್ದದ ರಸ್ತೆಗಳ ನಿರ್ಮಾಣ ಕಾರ್ಯ ವೇಗವಾಗಿ ನಡೆಯುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಜಲ ಭದ್ರತೆ ಸುಧಾರಿಸಲು 112 ಪ್ರಮುಖ ಜಲಸಂಪನ್ಮೂಲ ಯೋಜನೆಗಳಿಗೆ ಒಟ್ಟು 16,000 ಕೋಟಿ ರೂ. ವೆಚ್ಚದ ಅನುಮೋದನೆ ನೀಡಲಾಗಿದೆ. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಸೇರಿದಂತೆ ಬಯಲುಸೀಮೆ ಜಿಲ್ಲೆಗಳ ಕುಡಿಯುವ ನೀರಿನ ದಾಹ ತೀರಿಸುವ ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿಗಳು ಭರದಿಂದ ಸಾಗುತ್ತಿವೆ. ನವೆಂಬರ್ ವೇಳೆಗೆ ತುಮಕೂರು ಜಿಲ್ಲೆಗೆ ಯೋಜನೆಯ ಮೂಲಕ ಕುಡಿಯುವ ನೀರು ತಲುಪಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:43 am, Sat, 15 August 26




