ಗಾಂಧಿ ಸರ್ನೇಮ್ ಹೆಸರಿಟ್ಟುಕೊಂಡು ಇಷ್ಟು ಕೀಳು ಹೇಳಿಕೆ ನೀಡೋದಾ?; ರಾಹುಲ್ ವಿರುದ್ಧ ರಾಜನಾಥ್ ಸಿಂಗ್ ವಾಗ್ದಾಳಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಭಾರತದ ವಿದೇಶಾಂಗ ನೀತಿಯ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿರುವ ಹೇಳಿಕೆಗಳನ್ನು "ತುಚ್ಛ ಹಾಗೂ ಖಂಡನೀಯ" ಎಂದು ಕರೆದಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಈ ಹೇಳಿಕೆಗಳು ಲೋಕಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನದ ಘನತೆಯನ್ನು ತಗ್ಗಿಸಿವೆ ಎಂದು ಶುಕ್ರವಾರ ತೀವ್ರವಾಗಿ ಖಂಡಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ. ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ವಿರೋಧ ಪಕ್ಷದ ನಾಯಕನೊಬ್ಬನಿಂದ ಇಂತಹ ಅಸಭ್ಯ ಮತ್ತು ಊಹಿಸಲೂ ಸಾಧ್ಯವಾಗದ ನಡವಳಿಕೆಯನ್ನು ಎಂದಿಗೂ ನೋಡಿರಲಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದರು.
ನವದೆಹಲಿ, ಆಗಸ್ಟ್ 14: ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ವಿದೇಶಾಂಗ ನೀತಿಯ ಬಗ್ಗೆ ಲೇವಡಿ ಮಾಡಿದ್ದ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ. “ನಿನ್ನೆ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ವಿದೇಶಾಂಗ ನೀತಿಯ ಕುರಿತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೀಡಿರುವ ಹೇಳಿಕೆಗಳು ಕೆಳಮಟ್ಟದ್ದು ಹಾಗೂ ಖಂಡನೀಯವಾಗಿವೆ. ಇದು ವೈಯಕ್ತಿಕವಾಗಿ ನನಗೂ ತೀವ್ರ ನೋವುಂಟು ಮಾಡಿದೆ. ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ, ಯಾವುದೇ ವಿರೋಧ ಪಕ್ಷದ ನಾಯಕನಿಂದ ಇಂತಹ ಅಸಭ್ಯ ಮತ್ತು ಊಹಿಸಲೂ ಸಾಧ್ಯವಾಗದ ನಡವಳಿಕೆಯನ್ನು ನಾನು ಎಂದಿಗೂ ನೋಡಿರಲಿಲ್ಲ. ಇಂತಹ ನಡವಳಿಕೆಯು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಎದುರಾಗಿರುವ ಬೆದರಿಕೆಯ ಗಂಭೀರ ಸಂಕೇತವಾಗಿದೆ. ರಾಹುಲ್ ಗಾಂಧಿ ಅವರ ಮನಸ್ಸಿನಲ್ಲಿ ಪ್ರಧಾನಿಯವರ ವಿರುದ್ಧ ಹತಾಶೆ ಇರಬಹುದು, ಆದರೆ ಇಂತಹ ಅಸಭ್ಯ ಹೇಳಿಕೆಗಳನ್ನು ಒಪ್ಪಿಕೊಳ್ಳಲಾಗದು. ಅದರಲ್ಲೂ ವಿಶೇಷವಾಗಿ ಪ್ರಧಾನಿ ಮೋದಿ ಅವರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಅಪಾರ ಗೌರವ ತಂದುಕೊಟ್ಟ ಹಾಗೂ ವಿಕಸಿತ ಭಾರತಕ್ಕೆ ಹಾದಿ ಸೃಷ್ಟಿಸಿದ ಪ್ರಧಾನಿಯಾಗಿದ್ದಾರೆ. 12 ವರ್ಷಗಳಲ್ಲಿ, ಸಂಪೂರ್ಣ ನಿಷ್ಠೆಯಿಂದ ಕೆಲಸ ಮಾಡುತ್ತಾ ಅವರು ಯಾವುದೇ ರಜೆ ತಗೆದುಕೊಂಡಿಲ್ಲ. ಅಂತಹ ಪ್ರಧಾನಿಯವರ ವಿರುದ್ಧದ ಇಂತಹ ಅಸಭ್ಯ ಹೇಳಿಕೆಗಳು ಪ್ರತಿಯೊಬ್ಬ ಭಾರತೀಯನಿಗೂ ನೋವುಂಟು ಮಾಡುತ್ತವೆ. ಈ ನಡವಳಿಕೆಯಿಂದ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾತ್ರವಲ್ಲದೆ ಭಾರತದ ಅಂತಾರಾಷ್ಟ್ರೀಯ ಪ್ರತಿಷ್ಠೆಯನ್ನೂ ಅವಮಾನಿಸಿದ್ದಾರೆ. ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನದ ಘನತೆಯನ್ನು ಧೂಳೀಪಟ ಮಾಡಿದ್ದಾರೆ. ಗಾಂಧಿ ಎಂಬ ಮನೆತನದ ಹೆಸರನ್ನು ಹೊಂದಿರುವ ಯಾರಾದರೂ ಇಂತಹ ನಾಚಿಕೆಗೇಡಿನ ಹೇಳಿಕೆ ನೀಡಬಹುದು ಎಂಬುದನ್ನು ನನಗೆ ಊಹಿಸಲೂ ಸಾಧ್ಯವಾಗುತ್ತಿಲ್ಲ” ಎಂದು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಕೇಸ್: ಪೊಲೀಸರ ವಿರುದ್ಧದ ತನಿಖೆ ಕ್ಲೋಸ್
ಭಯೋತ್ಪಾದಕರಿಗೆ ಆಪರೇಷನ್ ಸಿಂಧೂರ್ ಪ್ರಬಲ ಸಂದೇಶ ರವಾನಿಸಿದೆ; ರಾಷ್ಟ್ರಪತಿ
'ಜಮ್ಮು ಕಾಶ್ಮೀರ, ಲಡಾಖ್ ಭಾರತದ ಅವಿಭಾಜ್ಯ ಅಂಗ'; ವಿದೇಶಾಂಗ ಸಚಿವಾಲಯ
ಬೆಂಗಳೂರಿನಲ್ಲಿ ‘ಟಾಕ್ಸಿಕ್’ ಸೆಟ್ ಹಾಕಲು ಅಂದಾಜು 75 ಕೋಟಿ ರೂಪಾಯಿ ಬಜೆಟ್

