Independence Day Celebration 2026 Live: ಅರಣ್ಯ ಸಿಬ್ಬಂದಿ ಗುಂಡಿಗೆ ಮೂವರು ಬಲಿ: ತೀವ್ರ ಸ್ವರೂಪ ಪಡೆದುಕೊಂಡ ಪ್ರತಿಭಟನೆ
Independence Day Parade 2026 Live Updates: ಭಾರತದಾದ್ಯಂತ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಡಗರ ಮನೆಮಾಡಿದೆ. ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಹಾಗೂ ಬೆಂಗಳೂರಿನ ಮಾಣಿಕ್ ಷಾ ಮೈದಾನದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಧ್ವಜಾರೋಹಣ ನೆರವೇರಿಸಿದ್ದಾರೆ. ಈ ನಡುವೆ ರಾಜ್ಯದ ಕರಾವಳಿಯಲ್ಲಿ ಸಾಧಾರಣ ಮಳೆ ಹಾಗೂ ಒಳನಾಡಿನಲ್ಲಿ 50 ಕಿ.ಮೀ ವೇಗದ ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ ಸೇರಿದಂತೆ ಪ್ರಮುಖ ಸುದ್ದಿಗಳ ಕ್ಷಣಕ್ಷಣದ ಲೈವ್ ಅಪ್‌ಡೇಟ್ಸ್ ಇಲ್ಲಿದೆ.

Breaking News Today Live Updates in Kannada: ದೇಶಾದ್ಯಂತ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮುಗಿಲು ಮುಟ್ಟಿದ್ದು, ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದಾರೆ. ಇತ್ತ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಧ್ವಜಾರೋಹಣ ನೆರವೇರಿಸಲಿದ್ದು, 30ಕ್ಕೂ ಹೆಚ್ಚು ತುಕಡಿಗಳಿಂದ ಆಕರ್ಷಕ ಪಥಸಂಚಲನ ನಡೆಯಲಿದೆ. ಕಾರ್ಯಕ್ರಮಕ್ಕಾಗಿ ಮೈದಾನದ ಸುತ್ತಲೂ 2,000 ಪೊಲೀಸರು ಹಾಗೂ 100 ಸಿಸಿಟಿವಿಗಳ ಮೂಲಕ ಬಿಗಿ ಭದ್ರತೆ ಒದಗಿಸಲಾಗಿದ್ದು, ಮಧ್ಯಾಹ್ನ 12ರವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಮತ್ತೊಂದೆಡೆ, ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಒಳನಾಡಿನ ಧಾರವಾಡ, ಮೈಸೂರು ಹಾಗೂ ಬೆಂಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ಗಂಟೆಗೆ 40-50 ಕಿ.ಮೀ ವೇಗದ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.
Tv9 Kannada Live TV ಇಲ್ಲಿ ವೀಕ್ಷಿಸಿ
LIVE NEWS & UPDATES
-
ಬೆಂಗಳೂರಿನ ಲೋಕಭವನದಲ್ಲಿ ಲಘು ಉಪಾಹಾರ ಕೂಟ
80ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಲೋಕಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಲಘು ಉಪಾಹಾರ ಕೂಟ ಆಯೋಜಿಸಿದ್ದಾರೆ. ವಿಧಾನ ಪರಿಷತ್ ಸಭಾಪತಿ ಸಲೀಂ ಅಹಮದ್, ವಿಧಾನಸಭೆ ಸ್ಪೀಕರ್ ಜಿ.ಎಸ್. ಪಾಟೀಲ್, ಸಿಎಂ ಡಿ.ಕೆ. ಶಿವಕುಮಾರ್, ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ, ವಿಧಾನ ಪರಿಷತ್ ಸದಸ್ಯ ಕೆ. ಗೋವಿಂದರಾಜ್, ಮಾಜಿ ಸಚಿವ ಸೊಗಡು ಶಿವಣ್ಣ, ಸಿಎಸ್ ಶಾಲಿನಿ ರಜನೀಶ್, ಎಸಿಎಸ್ ಗೌರವ್ ಗುಪ್ತ, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಭಾಗಿ.
-
ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ನಲ್ಲಿ ಬೆಂಕಿ
ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇಡೀ ಬಸ್ ಹೊತ್ತಿ ಉರಿದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಗೊಲ್ಲಹಳ್ಳಿಯಲ್ಲಿ ನಡೆದಿದ್ದು, ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡದ್ದನ್ನು ತಕ್ಷಣ ಗಮನಿಸಿದ್ದ ಚಾಲಕ, ಬಸ್ನಿಂದ ಪ್ರಯಾಣಿಕರನ್ನು ಕೆಳಗಿಳಿಸಿದ್ದಾನೆ. ಬಳಿಕ ಕೆಎಸ್ಆರ್ಟಿಸಿ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಗೌರಿಬಿದನೂರು ಡಿಪೋಗೆ ಸೇರಿದ ಕೆಎ 40 F-1278 ಸಂಖ್ಯೆಯ ಬಸ್ ಇದಾಗಿದ್ದು, ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ.
-
-
ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟಿಗೆ ಮೂವರು ಬಲಿ ಪ್ರಕರಣ ತೀವ್ರ ಸ್ವರೂಪ
ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟಿಗೆ ಮೂವರು ಬಲಿ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಪ್ರತಿಭಟನೆ ಮುಂದುವರೆದಿದೆ. ಹನೂರು ಠಾಣೆ ಬಳಿಯ ಸರ್ಕಲ್ನಿಂದ ತೆರಳದ ಪ್ರತಿಭಟನಾಕಾರರು, ಮೃತರ ಕುಟುಂಬದವರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಧರಣಿ ನಡೆಸಿದ್ದಾರೆ. ಅಲ್ಲದೇ ಎನ್ಕೌಂಟರ್ ಮಾಡಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ. ಸಚಿವರು, ಶಾಸಕರ ಮನವಿಗೂ ಬಗ್ಗದೆ ಮುಂದುವರಿದ ಪ್ರತಿಭಟನೆ ಮುಂದುವರೆಸಿದ್ದಾರೆ.
-
ಸ್ವಾತಂತ್ರ್ಯ ದಿನಾಚರಣೆಯ ವೇಳೆ ಖಡ್ಗ ಪ್ರದರ್ಶನ
ಇಂದು (ಆಗಸ್ಟ್ 15) ಸ್ವಾತಂತ್ರ್ಯ ದಿನಾಚರಣೆಯ ವೇಳೆ ಕೆಲ ಮುಸ್ಲಿಂ ಮುಖಂಡರು ಖಡ್ಗ ಪ್ರದರ್ಶನ ಮಾಡಿರುವ ಘಟನೆ ಕೋಲಾರದ ಮಹಾಲಕ್ಷ್ಮೀ ಬಡಾವಣೆಯಲ್ಲಿ ನಡೆದಿದೆ. ಖಡ್ಗ ಹಿಡಿದು ಧ್ವಜಾರೋಹಣ ಮಾಡಿ ರಾಷ್ಟ್ರಗೀತೆ ಹಾಡಿದ್ದು, ಸದ್ಯ ಈ ವಿಡಿಯೋ ಫುಲ್ ವೈರಲ್ ಆಗಿದೆ.
-
ಹೆಚ್.ಡಿ.ದೇವೇಗೌಡ ಭೇಟಿಯಾದ B.L.ಸಂತೋಷ್
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರು ಮಾಜಿ ಪ್ರಧಾನಿ ಹೆಎಚ್ಡಿ ದೇವೇಗೌಡ ಅವರನ್ನು ಭೇಟಿ ಮಾಡಿದ್ದಾರೆ. ಪತ್ನಿ ಚೆನ್ನಮ್ಮ ನಿಧನ ಹಿನ್ನೆಲೆಯಲ್ಲಿ ಬೆಂಗಳೂರಿನ ಪದ್ಮನಾಭನಗರದ ನಿವಾಸಕ್ಕೆ ಭೇಟಿ ನೀಡಿ ದೇವೇಗೌಡರಿಗೆ ಸಾಂತ್ವನ ಹೇಳಿದರು.
-
-
ತೀವ್ರ ಸ್ವರೂಪ ಪಡೆದ ಹನೂರು ಎನ್ಕೌಂಟರ್
ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟಿಗೆ ಮೂವರು ಸಾವನ್ನಪ್ಪಿರುವ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮೂವರ ಎನ್ಕೌಂಟರ್ ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಹನೂರಿನ ಅರಣ್ಯಧಿಕಾರಿ ಕಚೇರಿಗೆ ನುಗ್ಗಲು ಯತ್ನಿಸುತ್ತಿರುವ ಯತ್ನಿಸಿದ್ದಾರೆ. ಹೀಗಾಗಿ ಅರಣ್ಯ ಇಲಾಖೆ ಕಚೇರಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
-
ತ್ಯಾಗದಿಂದ ಬಂದ ಸ್ವಾತಂತ್ರ್ಯವನ್ನು ರಕ್ಷಿಸುವುದು ಪ್ರತಿಯೊಬ್ಬರ ಹೊಣೆ: ಡಾ. ಮೋಹನ್ ಭಾಗವತ್ ಸಂದೇಶ
80ನೇ ಸ್ವಾತಂತ್ರ್ಯ ದಿನೋತ್ಸವದ ಶುಭ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ದೇಶದ ಜನತೆಗೆ ವಿಶೇಷ ಸಂದೇಶ ನೀಡಿದ್ದಾರೆ. ಸ್ವಾತಂತ್ರ್ಯ ದಿನವು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ಮತ್ತು ಆಚರಣೆಯ ವಿಷಯವಾಗಿದ್ದು, ನಮಗೆ ದೊರೆತಿರುವ ಈ ಸ್ವಾತಂತ್ರ್ಯವನ್ನು ಕಾಪಾಡಿಕೊಂಡು ಮುನ್ನಡೆಸುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅವರು ಕರೆ ನೀಡಿದ್ದಾರೆ.
-
ಜಾನುವಾರು ಹುಡುಕಲು ಹೋದವರ ಮೇಲೆ ಗುಂಡಿನ ದಾಳಿ ಆರೋಪ: ಹನೂರಿನಲ್ಲಿ ರಸ್ತೆ ತಡೆದು ಗ್ರಾಮಸ್ಥರ ಆಕ್ರೋಶ
ಜಿಲ್ಲೆಯ ಹನೂರು ತಾಲೂಕಿನ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಗೆ ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಗ್ರಾಮಸ್ಥರ ಆಕ್ರೋಶ ಮುಗಿಲುಮುಟ್ಟಿದೆ.
-
ಕಾರಿನ ಗಾಜು ಒಡೆದ ಕಿಡಿಗೇಡಿಗಳ ಬಂಧನ
ಕರಿಹೋಬನಹಳ್ಳಿಯಲ್ಲಿ ಯುವತಿಗೆ ಕಿರುಕುಳ ನೀಡಿ, ಕಾರಿನ ಗಾಜು ಒಡೆದು ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಜಗನ್ ಮತ್ತು ನಂಜುಂಡ ಎಂಬಿಬ್ಬರನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ. ಮೊಬೈಲ್ ಪರಿಶೀಲನೆ ವೇಳೆ ಶಾಲಾ ಮಕ್ಕಳು ಸೇರಿದಂತೆ ಹಲವು ಹುಡುಗಿಯರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಕಿರುಕುಳ ನೀಡುತ್ತಿದ್ದ ಹಾಗೂ ಕೃತ್ಯದ ಸುದ್ದಿ ಲಿಂಕ್‌ಗಳನ್ನು ಹಂಚಿಕೊಂಡು ವಿಕೃತ ಖುಷಿಪಡುತ್ತಿದ್ದ ವಿಷಯ ಬೆಳಕಿಗೆ ಬಂದಿದೆ.
-
ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು ಹರಿವು: ಮಂಡ್ಯದಲ್ಲಿ ರೈತರ ಭಾರಿ ಪ್ರತಿಭಟನೆ!
ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ 3,000 ಕ್ಯೂಸೆಕ್ ನೀರು ಬಿಡುಗಡೆ ಮಾಡಿರುವುದನ್ನು ಖಂಡಿಸಿ ರೈತರು ಮಂಡ್ಯ ನಗರದ ಸಂಜಯ ವೃತ್ತದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಭಾರಿ ಪ್ರತಿಭಟನೆ ನಡೆಸಿದರು. “ತಮಿಳುನಾಡಿಗೆ ನೀರು ಬಿಡುವುದಿಲ್ಲ” ಎಂದು ಹೇಳಿದ್ದ ಸರ್ಕಾರ, ಈಗ ಕದ್ದುಮುಚ್ಚಿ ನೀರು ಹರಿಸುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಈ ನಡುವೆ ರೈತರಿಗೆ ಕರೆ ಮಾಡಿದ ಜಿಲ್ಲಾಧಿಕಾರಿ, ನೀರು ಬಿಟ್ಟಿಲ್ಲವೆಂದು ಸಮಜಾಯಿಷಿ ನೀಡಿದ್ದಾರೆ.
-
ಸಿದ್ದಗಂಗಾ ಮಠದಲ್ಲಿ ಸ್ವಾತಂತ್ರ್ಯ ಸಂಭ್ರಮ: ಡಿಸಿಎಂ ಪರಮೇಶ್ವರ್ ಧ್ವಜಾರೋಹಣ
80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಐತಿಹಾಸಿಕ ಸಿದ್ದಗಂಗಾ ಮಠದಲ್ಲಿ ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಶಾಸಕರಾದ ಜ್ಯೋತಿ ಗಣೇಶ್, ಸುರೇಶ್ ಗೌಡ, ಡಿಸಿ ಶುಭ ಕಲ್ಯಾಣ್ ಹಾಗೂ ಶ್ರೀಮಠದ ಸಾವಿರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು.
-
ರಾಯಚೂರಿನಲ್ಲಿ ಉಸ್ತುವಾರಿ ಸಚಿವರಿಗೆ ಘೇರಾವ್ ಯತ್ನ: ಹೋರಾಟಗಾರರು ವಶಕ್ಕೆ!
80ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಜಯ್ ಸಿಂಗ್ ಅವರಿಗೆ ಘೇರಾವ್ ಹಾಕಲು ಯತ್ನಿಸಿದ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಯಚೂರು ಜಿಲ್ಲೆಯವರಿಗೇ ಸಚಿವ ಸ್ಥಾನ ಹಾಗೂ ಉಸ್ತುವಾರಿ ನೀಡಬೇಕೆಂದು ಆಗ್ರಹಿಸಿ ದಲಿತ, ಪ್ರಗತಿಪರ ಸಂಘಟನೆಗಳು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದವು. ಮಹಾತ್ಮಾ ಗಾಂಧಿ ಸ್ಟೇಡಿಯಂಗೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಅಂಬೇಡ್ಕರ್ ಸರ್ಕಲ್ ಬಳಿ ಬ್ಯಾರಿಕೇಡ್ ಹಾಕಿ ತಡೆಯಲಾಯಿತು.
-
ಕಲಬುರಗಿಯಲ್ಲಿ ಸ್ವಾತಂತ್ರ್ಯ ಸಂಭ್ರಮ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಧ್ವಜಾರೋಹಣ
ನಗರದ ಸಿಎಆರ್ ಮೈದಾನದಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಸಡಗರದಿಂದ ಆಚರಿಸಲಾಗಿದ್ದು, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಧ್ವಜಾರೋಹಣ ನೆರವೇರಿಸಿ ತೆರೆದ ವಾಹನದಲ್ಲಿ ಗೌರವ ವಂದನೆ ಸ್ವೀಕರಿಸಿದರು. ಶಾಸಕ ಅಲ್ಲಮಪ್ರಭು ಪಾಟೀಲ್, ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರು, ಡಿಸಿ ಇಕ್ರಂ ಷರೀಪ್ ಹಾಗೂ ಪೊಲೀಸ್ ಆಯುಕ್ತ ಡಾ. ಶರಣಪ್ಪ ಭಾಗಿಯಾಗಿದ್ದು, ಪೊಲೀಸ್ ಮತ್ತು ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ಜರುಗಿತು.
-
ಬಿಜೆಪಿ ರಾಜ್ಯ ಕಚೇರಿಯಲ್ಲಿ ಸ್ವಾತಂತ್ರ್ಯ ಸಂಭ್ರಮ: ಛಲವಾದಿ ನಾರಾಯಣಸ್ವಾಮಿ ಧ್ವಜಾರೋಹಣ
80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಚೇರಿಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಎನ್. ರವಿಕುಮಾರ್, ಕೇಶವ ಪ್ರಸಾದ್, ಮಾಜಿ ಸಂಸದ ಡಾ. ಉಮೇಶ್ ಜಾಧವ್ ಹಾಗೂ ಹರತಾಳು ಹಾಲಪ್ಪ ಉಪಸ್ಥಿತರಿದ್ದರು.
-
ಶಿವಮೊಗ್ಗದಲ್ಲಿ ಸ್ವಾತಂತ್ರ್ಯ ಸಂಭ್ರಮ: ಸಚಿವ ಮಧು ಬಂಗಾರಪ್ಪ ಧ್ವಜಾರೋಹಣ
ನೆಹರು ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಧ್ವಜಾರೋಹಣ ನೆರವೇರಿಸಿದರು. ಬಳಿಕ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಸಾವಿರಾರು ಶಾಲಾ ಮಕ್ಕಳು ಭಾಗಿಯಾಗಿದ್ದು, ಸಚಿವರಿಗೆ ಮಕ್ಕಳು ಚಪ್ಪಾಳೆ ತಟ್ಟುವ ಮೂಲಕ ಅದ್ಧೂರಿ ಸ್ವಾಗತ ಕೋರಿದರು.
-
ಮಂಡ್ಯದಲ್ಲಿ 80ನೇ ಸ್ವಾತಂತ್ರ್ಯ ಸಂಭ್ರಮ: ಸಚಿವ ಚಲುವರಾಯಸ್ವಾಮಿ ಧ್ವಜಾರೋಹಣ
ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ 80ನೇ ಸ್ವಾತಂತ್ರ್ಯ ದಿನಾಚರಣೆ ಅದ್ಧೂರಿಯಾಗಿ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಧ್ವಜಾರೋಹಣ ನೆರವೇರಿಸಿದರು. ಶಾಸಕ ಗಣಿಗ ರವಿಕುಮಾರ್, ಎಂಎಲ್ಸಿ ದಿನೇಶ್ ಗೂಳಿಗೌಡ, ಡಿಸಿ ಡಾ. ಕುಮಾರ್, ಎಸ್ಪಿ ಡಾ. ಶೋಭಾರಾಣಿ ಭಾಗಿ. ಶಾಲಾ ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
-
80ನೇ ಸ್ವಾತಂತ್ರ್ಯೋತ್ಸವ: ನಾಡಿನ ಜನತೆಗೆ ಸಿಎಂ ಡಿ.ಕೆ. ಶಿವಕುಮಾರ್ ಶುಭಾಶಯ
80ನೇ ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸದಾಶಿವನಗರದ ತಮ್ಮ ನಿವಾಸದಲ್ಲಿ ಧ್ವಜಾರೋಹಣ ನೆರವೇರಿಸಿ ನಾಡಿನ ಜನತೆಗೆ ಶುಭಾಶಯ ಕೋರಿದ್ದಾರೆ. ದೇಶದ ಐಕ್ಯತೆ ಹಾಗೂ ಸಮಾನತೆಗಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಗೌರವ ಸಲ್ಲಿಸುವುದಾಗಿ ತಿಳಿಸಿದ ಅವರು, “ರಾಜ್ಯದ ಸೇವಕನಾಗಿ ಇಂದು ಧ್ವಜಾರೋಹಣ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಶಾಂತಿ, ನೆಮ್ಮದಿ ಮತ್ತು ಸಹಬಾಳ್ವೆಯನ್ನು ಕಾಪಾಡಿಕೊಂಡು ಮುನ್ನಡೆಯೋಣ,” ಎಂದು ಕರೆ ನೀಡಿದರು.
-
ಈದ್ಗಾ ಮೈದಾನದಲ್ಲಿ ಸಚಿವ ಜಮೀರ್ ಧ್ವಜಾರೋಹಣ: ಸಂಸದ ಪಿ.ಸಿ. ಮೋಹನ್ ಭಾಗಿ
ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಸಚಿವ ಜಮೀರ್ ಅಹಮದ್ ಖಾನ್ ರಾಷ್ಟ್ರಧ್ವಜ ಹಾರಿಸಿದರು. ನಿನ್ನೆಯಷ್ಟೇ ಜಿಲ್ಲಾ ಧ್ವಜಾರೋಹಣದಿಂದ ವಿನಾಯಿತಿ ಕೋರಿದ್ದನ್ನು ಬಿಜೆಪಿ ಸದನದಲ್ಲಿ ಪ್ರಶ್ನಿಸಿತ್ತು. ಇಂದು ಸ್ವಕ್ಷೇತ್ರದಲ್ಲೇ ಸಂಸದ ಪಿ.ಸಿ. ಮೋಹನ್ ಅವರೊಂದಿಗೆ ಧ್ವಜಾರೋಹಣ ನೆರವೇರಿಸಿ ಜಮೀರ್ ಸಂದೇಶ ನೀಡಿದರು.
-
ಕೆಂಪುಕೋಟೆಯಲ್ಲಿ 80ನೇ ಸ್ವಾತಂತ್ರ್ಯ ಸಂಭ್ರಮ: ಪ್ರಧಾನಿ ಮೋದಿ ಧ್ವಜಾರೋಹಣ
ರಾಷ್ಟ್ರ ರಾಜಧಾನಿಯಲ್ಲಿ ಸ್ವಾತಂತ್ರ್ಯೋತ್ಸವದ ಸಡಗರ ಮನೆಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಸೇನಾಪಡೆಗಳಿಂದ ಗೌರವ ವಂದನೆ ಸ್ವೀಕರಿಸಿದ್ದು, ಕೆಲವೇ ಕ್ಷಣಗಳಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಸಚಿವರು ಹಾಗೂ ತ್ರಿವಿಧ ಪಡೆಗಳ ಮುಖ್ಯಸ್ಥರು ಭಾಗಿಯಾಗಿದ್ದು, ಪೊಲೀಸ್ ಬ್ಯಾಂಡ್ ‘ವಂದೆ ಮಾತರಂ’ ಗೀತೆಯೊಂದಿಗೆ ಗೌರವ ಸಲ್ಲಿಸಿತು.
Published On - Aug 15,2026 7:42 AM




