AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಕಿ ಇರುವ ಟ್ರಾಫಿಕ್ ಚಲನ್ ಕಟ್ಟಿಲ್ಲವೇ? ವಿದ್ಯುತ್ ಬಿಲ್‌ಗೆ ದಂಡ ಲಿಂಕ್ ಮಾಡಲು ಸುಪ್ರೀಂ ಕೋರ್ಟ್ ಮಹತ್ವದ ಸಲಹೆ!

ಬಾಕಿ ಇರುವ ಟ್ರಾಫಿಕ್ ಇ-ಚಲನ್ ದಂಡವನ್ನು ವಸೂಲಿ ಮಾಡಲು ಅಧಿಕಾರಿಗಳು ತಕ್ಷಣವೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಕೇವಲ ಇ-ಚಲನ್‌ಗಳನ್ನು ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಜನರು ಟ್ರಾಫಿಕ್ ಚಲನ್‌ಗಳನ್ನು ಪಾವತಿಸದಿದ್ದರೆ, ಅದನ್ನು ವಿದ್ಯುತ್ ಬಿಲ್ ಸೇರಿದಂತೆ ಇತರ ಸರ್ಕಾರಿ ಪಾವತಿಗಳಿಗೆ ಲಿಂಕ್ ಮಾಡುವ ಮೂಲಕ ವಸೂಲಿ ಮಾಡುವ ಮಾರ್ಗಗಳನ್ನು ಅಧಿಕಾರಿಗಳು ಪರಿಶೀಲಿಸಬಹುದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಬಾಕಿ ಇರುವ ಟ್ರಾಫಿಕ್ ಚಲನ್ ಕಟ್ಟಿಲ್ಲವೇ? ವಿದ್ಯುತ್ ಬಿಲ್‌ಗೆ ದಂಡ ಲಿಂಕ್ ಮಾಡಲು ಸುಪ್ರೀಂ ಕೋರ್ಟ್ ಮಹತ್ವದ ಸಲಹೆ!
ಟ್ರಾಫಿಕ್ ಚಲನ್‌Image Credit source: PTI
ಸುಷ್ಮಾ ಚಕ್ರೆ
|

Updated on: Sep 28, 2026 | 6:55 PM

Share

ನವದೆಹಲಿ, ಸೆಪ್ಟೆಂಬರ್ 28: ಬಾಕಿ ಇರುವ ಟ್ರಾಫಿಕ್ ಇ-ಚಲನ್ ದಂಡವನ್ನು ಪಾವತಿಸದೆ ನಿರ್ಲಕ್ಷಿಸುವ ವಾಹನ ಮಾಲೀಕರಿಗೆ ಮುಂಬರುವ ದಿನಗಳಲ್ಲಿ ಭಾರೀ ಸಂಕಷ್ಟ ಎದುರಾಗಬಹುದು. ಬಾಕಿ ಇರುವ ಸಂಚಾರ ದಂಡವನ್ನು ವಸೂಲಿ ಮಾಡಲು ವಿದ್ಯುತ್ ಬಿಲ್‌ಗಳಿಗೆ ಟ್ರಾಫಿಕ್ ಚಲನ್‌ಗಳನ್ನು ಲಿಂಕ್ ಮಾಡುವುದು ಮತ್ತು ವಾಹನ ಸಂಬಂಧಿತ ಸೇವೆಗಳನ್ನು ತಡೆಯುವುದು ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಸಲಹೆ ನೀಡಿದೆ. ದಂಡ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸುವ ಸಾಧ್ಯತೆಯ ಬಗ್ಗೆಯೂ ಕೋರ್ಟ್ ಸುಳಿವು ನೀಡಿದೆ.

‘ಬಾರ್ ಆ್ಯಂಡ್ ಬೆಂಚ್’ ವರದಿಯ ಪ್ರಕಾರ, ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಅವರು ಭಾರತದಾದ್ಯಂತ ಬಾಕಿ ಉಳಿದಿರುವ ಬೃಹತ್ ಪ್ರಮಾಣದ ಟ್ರಾಫಿಕ್ ದಂಡದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 45,000 ಕೋಟಿ ರೂ. ಇ-ಚಲನ್ ದಂಡ ಬಾಕಿ ಉಳಿದಿದ್ದು, ಈವರೆಗೆ ಕೇವಲ 25,000 ಕೋಟಿ ರೂ. ಮಾತ್ರ ವಸೂಲಿಯಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಲಾಯಿತು.

“ಜನರು ಟ್ರಾಫಿಕ್ ಚಲನ್‌ಗಳನ್ನು ಪಾವತಿಸದಿದ್ದರೆ, ಅದನ್ನು ಅವರ ವಿದ್ಯುತ್ ಬಿಲ್‌ಗೆ ಸೇರಿಸಿ. ಅವರು ವಿದ್ಯುತ್ ಬಿಲ್ ಪಾವತಿಸಲೇಬೇಕಾಗುತ್ತದೆ, ಇಲ್ಲದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆ. ಈ ಬಗ್ಗೆ ಒಂದು ವ್ಯವಸ್ಥೆ ರೂಪಿಸಿ. ಈ ದೇಶದಲ್ಲಿ ದಂಡ ವಸೂಲಿಗೆ ನೀವು ಸೂಕ್ತ ಮಾರ್ಗವನ್ನು ಕಂಡುಕೊಳ್ಳಲೇಬೇಕು” ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ಸಿಬಿಎಸ್‌ಇ ತ್ರಿಭಾಷಾ ನೀತಿಯಿಂದ 6ನೇ ತರಗತಿ ವಿದ್ಯಾರ್ಥಿಗಳಿಗೂ ವಿನಾಯಿತಿ ನೀಡಿ; ಸುಪ್ರೀಂ ಕೋರ್ಟ್ ಆದೇಶ

ಸುಪ್ರೀಂ ಕೋರ್ಟ್ ನೀಡಿದ ಪ್ರಮುಖ ಸಲಹೆಗಳು:

ಆರ್‌ಸಿ ಮತ್ತು ಮಾಲೀಕತ್ವ ವರ್ಗಾವಣೆ ಸ್ಥಗಿತ:

ಬಾಕಿ ಚಲನ್‌ಗಳನ್ನು ಹೊಂದಿರುವ ವಾಹನಗಳ ನೋಂದಣಿ ಪ್ರಮಾಣಪತ್ರ (ಆರ್​ಸಿ) ನವೀಕರಣ, ನಕಲಿ ಆರ್‌ಸಿ ವಿತರಣೆ ಮತ್ತು ವಾಹನ ಮಾಲೀಕತ್ವ ವರ್ಗಾವಣೆಯನ್ನು ತಡೆಹಿಡಿಯಬಹುದು.

ಫಿಟ್‌ನೆಸ್ ಹಾಗೂ ಪಿಯುಸಿ ಪ್ರಮಾಣಪತ್ರ:

ದಂಡವನ್ನು ಸಂಪೂರ್ಣವಾಗಿ ಪಾವತಿಸುವವರೆಗೆ ವಾಹನದ ಫಿಟ್‌ನೆಸ್ ಪ್ರಮಾಣಪತ್ರ (ಎಫ್​ಸಿ) ಹಾಗೂ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರಗಳನ್ನು (ಪಿಯುಸಿ) ನೀಡಬಾರದು.

ಬ್ಲ್ಯಾಕ್‌ಲಿಸ್ಟ್ ಹಾಗೂ ಚಾಲನಾ ಪರವಾನಗಿ ತಡೆ:

ಪರಿವಾಹನ್ ಪೋರ್ಟಲ್‌ನಲ್ಲಿ ಅಂತಹ ವಾಹನಗಳನ್ನು ಕಪ್ಪುಪಟ್ಟಿಗೆ ಸೇರಿಸುವುದು, ಡ್ರೈವಿಂಗ್ ಲೈಸೆನ್ಸ್ ನವೀಕರಣ ತಡೆಯುವುದು ಮತ್ತು ಈಗಾಗಲೇ ನೀಡಲಾದ ಲೈಸೆನ್ಸ್‌ಗಳನ್ನು ರದ್ದುಗೊಳಿಸುವುದನ್ನು ಪರಿಗಣಿಸಬಹುದು.

ಇದನ್ನೂ ಓದಿ: ಗಿಟಾರ್‌ಗೆ ‘ಹೆಲ್ಮೆಟ್ ಇಲ್ಲ’ ಎಂದು 500 ರೂ. ದಂಡ; ಬೆಂಗಳೂರಿನ ಎಐ ಟ್ರಾಫಿಕ್ ಕ್ಯಾಮೆರಾದ ಯಡವಟ್ಟು!

ಈ ವ್ಯವಸ್ಥೆಯು ದೇಶದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲು ಅಧಿಕಾರಿಗಳು ನೈಜ ಪರಿಸ್ಥಿತಿಗೆ ತಕ್ಕಂತೆ ಪರಿಹಾರಗಳನ್ನು ಕಂಡುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪರ್ದಿವಾಲಾ ಪ್ರತಿಪಾದಿಸಿದರು. ಆದರೆ, ವಿದ್ಯುತ್ ಬಿಲ್‌ಗೆ ಟ್ರಾಫಿಕ್ ಚಲನ್‌ಗಳನ್ನು ಸೇರಿಸುವ ಆಲೋಚನೆಯು ಕೇವಲ ವಿಚಾರಣೆಯ ಸಮಯದ ಸಲಹೆಯಾಗಿದ್ದು, ತಕ್ಷಣ ಜಾರಿಗೆ ತರಬೇಕಾದ ನೇರ ಆದೇಶವಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More