AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಷೇತ್ರ ಮರುವಿಂಗಡಣೆ ಮಸೂದೆ: ರಾಹುಲ್ ಮನವಿಗೆ ಸ್ಟಾಲಿನ್ ಪ್ರತಿಕ್ರಿಯೆ, ತಮಿಳುನಾಡಿನ ಹಿತಾಸಕ್ತಿಯಲ್ಲಿ ರಾಜಿ ಇಲ್ಲ

ಲೋಕಸಭಾ ಕ್ಷೇತ್ರ ಮರುವಿಂಗಡಣೆ ಮಸೂದೆ ಕುರಿತು ರಾಹುಲ್ ಗಾಂಧಿ ಡಿಎಂಕೆ ಮುಖ್ಯಸ್ಥ ಸ್ಟಾಲಿನ್‌ಗೆ ಮನವಿ ಮಾಡಿದ್ದಾರೆ. ಮಸೂದೆ ವಿರೋಧಿಸುವಂತೆ ಕೋರಿದ್ದಾರೆ, ಇಲ್ಲವಾದರೆ ಪ್ರಜಾಪ್ರಭುತ್ವಕ್ಕೆ ಅಪಾಯ ಎಂದಿದ್ದಾರೆ. ಆದರೆ, ಸ್ಟಾಲಿನ್ ತಮಿಳುನಾಡಿನ ಹಿತಾಸಕ್ತಿಗೆ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಡಿಎಂಕೆ ತನ್ನ ಹಿಂದಿನ ನಿರ್ಧಾರ ಬದಲಿಸುತ್ತದೆಯೇ ಎಂಬುದು ರಾಜಕೀಯ ವಲಯದಲ್ಲಿ ಚರ್ಚೆಯಾಗಿದೆ. ಇದು ಇಂಡಿ ಒಕ್ಕೂಟಕ್ಕೆ ಸವಾಲಾಗಿದೆ.

ಕ್ಷೇತ್ರ ಮರುವಿಂಗಡಣೆ ಮಸೂದೆ: ರಾಹುಲ್ ಮನವಿಗೆ ಸ್ಟಾಲಿನ್ ಪ್ರತಿಕ್ರಿಯೆ, ತಮಿಳುನಾಡಿನ ಹಿತಾಸಕ್ತಿಯಲ್ಲಿ ರಾಜಿ ಇಲ್ಲ
ಎಂಕೆ ಸ್ಟಾಲಿನ್ Image Credit source: PTI
ನಯನಾ ರಾಜೀವ್
|

Updated on: Nov 29, 2026 | 12:32 PM

Share

ಚೆನ್ನೈ, ನವೆಂಬರ್ 29: ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಮಸೂದೆ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಡಿಎಂಕೆ ನಡುವಿನ ರಾಜಕೀಯ ಬೆಳವಣಿಗೆಗಳು ಕುತೂಹಲ ಮೂಡಿಸಿವೆ. ಡಿಎಂಕೆ ಮಸೂದೆಗೆ ಬೆಂಬಲ ನೀಡಲು ನಿರ್ಧರಿಸಿದೆ ಎಂಬ ಸುದ್ದಿ ಹೊರಬಿದ್ದ ಬೆನ್ನಲ್ಲೇ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಎಂಕೆ ಸ್ಟಾಲಿನ್ ಅವರನ್ನು ಭೇಟಿಯಾಗಿ ಮಸೂದೆಯನ್ನು ವಿರೋಧಿಸುವಂತೆ ಮನವಿ ಮಾಡಲು ಮುಂದಾಗಿದ್ದಾರೆ. ಈ ನಡುವೆ ಸ್ಟಾಲಿನ್ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಹಾಗಾದರೆ ಡಿಎಂಕೆ ತನ್ನ ಹಿಂದಿನ ನಿರ್ಧಾರ ಬದಲಿಸಲಿದೆಯೇ?

ರಾಹುಲ್ ಗಾಂಧಿ ಮನವಿ: 850 ಸ್ಥಾನಗಳಾದರೆ ಪ್ರಜಾಪ್ರಭುತ್ವಕ್ಕೆ ಅಪಾಯ ರಾಹುಲ್ ಗಾಂಧಿ ಅವರು ಸ್ಟಾಲಿನ್ ಅವರನ್ನು ಉದ್ದೇಶಿಸಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿದ್ದಾರೆ. ಡಿಎಂಕೆ ಪಕ್ಷವು ಸಂವಿಧಾನ ಮತ್ತು ರಾಜ್ಯಗಳ ಹಕ್ಕುಗಳನ್ನು ರಕ್ಷಿಸುವಲ್ಲಿ ಐತಿಹಾಸಿಕ ಪಾತ್ರ ವಹಿಸಿದೆ ಎಂದು ಶ್ಲಾಘಿಸಿದ್ದಾರೆ. ಈಗಲೂ ಅದೇ ನಿಲುವಿನಲ್ಲಿ ಮುಂದುವರಿದು ಕ್ಷೇತ್ರ ಮರುವಿಂಗಡಣೆ ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ವಿರೋಧಿಸುವಂತೆ ಸ್ಟಾಲಿನ್ ಮತ್ತು ಡಿಎಂಕೆಗೆ ಮನವಿ ಮಾಡಿದ್ದಾರೆ.

ಲೋಕಸಭೆಯ ಸ್ಥಾನಗಳ ಸಂಖ್ಯೆಯನ್ನು 850ಕ್ಕೆ ಹೆಚ್ಚಿಸುವ ಪ್ರಸ್ತಾಪದಿಂದ ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ತಮ್ಮ ರಾಜಕೀಯ ಅನುಕೂಲಕ್ಕೆ ತಕ್ಕಂತೆ ದೇಶದ ಚುನಾವಣಾ ಕ್ಷೇತ್ರಗಳ ನಕ್ಷೆಯನ್ನೇ ಬದಲಿಸುವ ಅವಕಾಶ ಸಿಗಬಹುದು. ಇದರಿಂದ ಭಾರತದ ಪ್ರಜಾಪ್ರಭುತ್ವಕ್ಕೆ ಅಪಾಯ ಎದುರಾಗಲಿದೆ ಎಂಬುದು ರಾಹುಲ್ ಗಾಂಧಿ ಅವರ ಆರೋಪ. ಈ ಮಸೂದೆಯನ್ನು ಸೋಲಿಸಲು ಎಲ್ಲರೂ ಒಗ್ಗಟ್ಟಾಗಬೇಕು ಎಂದು ಅವರು ಕರೆ ನೀಡಿದ್ದಾರೆ.

ಸ್ಟಾಲಿನ್ ಹೇಳಿಕೆಯಿಂದ ಹೊಸ ಚರ್ಚೆ: ನಿರ್ಧಾರ ಬದಲಾಗುತ್ತಾ? ರಾಹುಲ್ ಗಾಂಧಿ ಅವರ ಮನವಿಗೆ ಪ್ರತಿಕ್ರಿಯಿಸಿರುವ ಸ್ಟಾಲಿನ್, ಡಿಎಂಕೆಯ ಐತಿಹಾಸಿಕ ಪಾತ್ರವನ್ನು ಗುರುತಿಸಿದ್ದಕ್ಕಾಗಿ ಧನ್ಯವಾದ ತಿಳಿಸಿದ್ದಾರೆ. ತಮಿಳುನಾಡು ಮತ್ತು ತಮಿಳು ಜನರ ಹಿತಾಸಕ್ತಿಯನ್ನೇ ಪ್ರತಿಯೊಂದು ನಿರ್ಧಾರದಲ್ಲೂ ಮೊದಲ ಆದ್ಯತೆಯಾಗಿ ಪರಿಗಣಿಸುತ್ತೇವೆ. ಈ ನಿಲುವಿನಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಅಲ್ಲದೆ, ಮುಂದಿನ ದಿನಗಳಲ್ಲಿ ಇತಿಹಾಸ ನಮ್ಮನ್ನು ಕಟ್ಟಬೊಮ್ಮನ್‌ಗಳೆಂದು ಗುರುತಿಸಬೇಕೇ ಹೊರತು ಎಟ್ಟಪ್ಪನ್‌ಗಳೆಂದು ಅಲ್ಲ ಎಂಬ ಅರ್ಥದ ಹೇಳಿಕೆಯನ್ನೂ ನೀಡಿದ್ದಾರೆ. ಕಟ್ಟಬೊಮ್ಮನ್ ಬ್ರಿಟಿಷರ ವಿರುದ್ಧ ಹೋರಾಡಿದ ವೀರನಾಗಿ ಗುರುತಿಸಿಕೊಂಡಿದ್ದರೆ, ಎಟ್ಟಪ್ಪನ್ ದ್ರೋಹದ ಸಂಕೇತವಾಗಿ ಪ್ರಸಿದ್ಧನಾಗಿದ್ದಾನೆ.

ನಿನ್ನೆ ಡಿಎಂಕೆ ತೆಗೆದುಕೊಂಡ ನಿರ್ಧಾರವೇನು? ನವೆಂಬರ್ 28ರಂದು ಚೆನ್ನೈನಲ್ಲಿ ಎಂ.ಕೆ. ಸ್ಟಾಲಿನ್ ಅಧ್ಯಕ್ಷತೆಯಲ್ಲಿ ನಡೆದ ಡಿಎಂಕೆ ಸಂಸದೀಯ ಸದಸ್ಯರ ಸಭೆಯಲ್ಲಿ ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಬೆಂಬಲ ನೀಡುವ ನಿರ್ಣಯ ಕೈಗೊಳ್ಳಲಾಗಿತ್ತು. ಈ ನಿರ್ಧಾರಕ್ಕೆ ಎರಡು ಪ್ರಮುಖ ಕಾರಣಗಳನ್ನು ಪಕ್ಷ ಮುಂದಿಟ್ಟಿತ್ತು. – ಲೋಕಸಭೆಯಲ್ಲಿ ತಮಿಳುನಾಡಿನ ಪ್ರಸ್ತುತ ಶೇಕಡಾ 7.18ರಷ್ಟು ಪ್ರಾತಿನಿಧ್ಯ ಕಡಿಮೆಯಾಗಬಾರದು. – 1971ರ ಜನಗಣತಿಯ ಆಧಾರದ ಮೇಲೆ ರಾಜ್ಯಗಳ ನಡುವಿನ ಲೋಕಸಭಾ ಸ್ಥಾನಗಳ ಅನುಪಾತವನ್ನು ಮುಂದಿನ 25 ವರ್ಷಗಳವರೆಗೆ ಉಳಿಸಬೇಕು. ಈ ಎರಡು ಬೇಡಿಕೆಗಳನ್ನು ಹೊಸ ಮಸೂದೆಯಲ್ಲಿ ಸೇರಿಸಲಾಗಿದೆ ಎಂದು ಡಿಎಂಕೆ ಹೇಳಿದೆ. ಹೀಗಾಗಿ ಮಸೂದೆಗೆ ಬೆಂಬಲ ನೀಡಲು ನಿರ್ಧರಿಸಿರುವುದಾಗಿ ಪಕ್ಷದ ನಾಯಕರು ಸ್ಪಷ್ಟಪಡಿಸಿದ್ದರು. ತಮಿಳುನಾಡಿನ ಪ್ರಾತಿನಿಧ್ಯವನ್ನು ಉಳಿಸಿಕೊಂಡು ಸ್ಥಾನಗಳ ಸಂಖ್ಯೆಯನ್ನೂ ಹೆಚ್ಚಿಸಿಕೊಳ್ಳುವುದು ತಮ್ಮ ಹೋರಾಟದ ಗೆಲುವು ಎಂಬುದು ಸ್ಟಾಲಿನ್ ಅವರ ವಾದ.

ಇದನ್ನೂ ಓದಿ: ಕ್ಷೇತ್ರ ಮರುವಿಂಗಡಣೆ ಮಸೂದೆ: ದಕ್ಷಿಣ ರಾಜ್ಯಗಳ ಸಿಎಂಗಳ ಸಭೆ ರದ್ದು, ಸ್ಟಾಲಿನ್, ಶರದ್ ಪವಾರ್ ಭೇಟಿಯಾಗಲಿರುವ ಖರ್ಗೆ, ರಾಹುಲ್

ಕಾಂಗ್ರೆಸ್‌ಗೆ ಈಗ ಏಕೆ ಸ್ಟಾಲಿನ್ ನೆನಪಾದರು? ಕ್ಷೇತ್ರ ಮರುವಿಂಗಡಣೆ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿದ್ದ ಕಾಂಗ್ರೆಸ್‌ಗೆ ಡಿಎಂಕೆ ಬೆಂಬಲ ನೀಡುವ ನಿರ್ಧಾರ ದೊಡ್ಡ ಹಿನ್ನಡೆಯಾಗಿದೆ. ಡಿಎಂಕೆಯ 22 ಲೋಕಸಭಾ ಸದಸ್ಯರು ಮತ್ತು 8 ರಾಜ್ಯಸಭಾ ಸದಸ್ಯರ ಬೆಂಬಲ ಮಸೂದೆಯ ವಿಚಾರದಲ್ಲಿ ಮಹತ್ವದ್ದಾಗಿದೆ. ಎನ್‌ಸಿಪಿ (ಶರದ್ ಪವಾರ್ ಬಣ) ಕೂಡ ಬೆಂಬಲದ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ ಒಗ್ಗಟ್ಟಿಗೆ ಧಕ್ಕೆಯಾಗುವ ಆತಂಕ ಕಾಂಗ್ರೆಸ್‌ಗೆ ಎದುರಾಗಿದೆ.

ಈ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇಂಡಿ ಒಕ್ಕೂಟದ ನಾಯಕರು ಚೆನ್ನೈಗೆ ತೆರಳಿ ಸ್ಟಾಲಿನ್ ಅವರನ್ನು ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ ಡಿಎಂಕೆ ಈಗಾಗಲೇ ತನ್ನ ನಿರ್ಧಾರ ಪ್ರಕಟಿಸಿರುವುದರಿಂದ ಅದನ್ನು ಬದಲಿಸುವುದು ಸುಲಭವಲ್ಲ ಎಂಬ ಅಭಿಪ್ರಾಯವೂ ಇದೆ.

ಹಾಗಾದರೆ ಡಿಎಂಕೆ ನಿರ್ಧಾರ ಬದಲಾಗಿದೆಯೇ? ಸದ್ಯದ ಮಾಹಿತಿ ಪ್ರಕಾರ, ಡಿಎಂಕೆ ತನ್ನ ಬೆಂಬಲ ನಿರ್ಧಾರವನ್ನು ಅಧಿಕೃತವಾಗಿ ವಾಪಸ್ ಪಡೆದಿಲ್ಲ. ಸ್ಟಾಲಿನ್ ಅವರ ಹೇಳಿಕೆ ತಮಿಳುನಾಡಿನ ಹಿತಾಸಕ್ತಿಯನ್ನು ಕಾಪಾಡುವ ಬದ್ಧತೆಯನ್ನು ಪುನರುಚ್ಚರಿಸಿದೆ ಅಷ್ಟೇ. ಮಸೂದೆಯನ್ನು ವಿರೋಧಿಸುವಂತೆ ರಾಹುಲ್ ಗಾಂಧಿ ಮಾಡಿರುವ ಮನವಿಗೆ ಡಿಎಂಕೆ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಮುಂದಿನ ಬೆಳವಣಿಗೆಗಳಲ್ಲಿ ಸ್ಪಷ್ಟವಾಗಬೇಕಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More