Bengaluru Weather: ಬೆಂಗಳೂರಿನಲ್ಲಿ ತುಂತುರು ಮಳೆಯ ಜೊತೆಗೆ ಕೊರೆಯುವ ಚಳಿ
ಸತತ ಮೋಡಕವಿದ ವಾತಾವರಣ ಜೊತೆಗೆ ತುಂತುರು ಮಳೆಯಿಂದ ಉಷ್ಣಾಂಶ ಕಡಿಮೆಯಾಗಿದ್ದು, ಚಳಿಗಾಲದ ಅನುಭವ ತಂದುಕೊಡುತ್ತಿದೆ.
ಬೆಂಗಳೂರು: ನಗರದಲ್ಲಿ ಹಗಲಿರುಳು ತುಂತುರು ಮಳೆ ಸುರಿಯುತ್ತಿದ್ದು ಉಷ್ಣಾಂಶ ಕುಸಿದಿದೆ. ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಸುರಿಯುತ್ತಿರುವಷ್ಟು ಭರ್ಜರಿ ಮಳೆ ಉದ್ಯಾನನಗರಿಯಲ್ಲಿ ಬೀಳುತ್ತಿಲ್ಲ. ಆದರೆ ಕಳೆದ ಮೂರ್ನಾಲ್ಕು ದಿನಗಳಿಂದ ಸೂರ್ಯನೇ ಕಾಣಿಸುತ್ತಿಲ್ಲ. ಸತತ ಮೋಡಕವಿದ ವಾತಾವರಣ ಜೊತೆಗೆ ತುಂತುರು ಮಳೆಯಿಂದ ಉಷ್ಣಾಂಶ ಕಡಿಮೆಯಾಗಿದ್ದು, ಚಳಿಗಾಲದ ಅನುಭವ ತಂದುಕೊಡುತ್ತಿದೆ. ಜೂನ್ ಅಂತ್ಯದಲ್ಲಿ 30 ಡಿಗ್ರಿ ಸೆಲ್ಸಿಯಸ್ನಷ್ಟಿದ್ದ ನಗರದ ಗರಿಷ್ಠ ಉಷ್ಣಾಂಶ ಈಗ 25 ಡಿಗ್ರಿ ಸೆಲ್ಸಿಯಸ್ ಆಸುಪಾಸಿಗೆ ಬಂದಿದೆ. ಕನಿಷ್ಠ ಉಷ್ಣಾಂಶ ಪ್ರಮಾಣವು 18 ಡಿಗ್ರಿಗೆ ಇಳಿದಿದೆ. ನಗರದಲ್ಲಿ ಇನ್ನೂ ಎರಡು ದಿನಗಳ ಕಾಲ ತಂಪಾದ ವಾತಾವರಣ ಇರಲಿದ್ದು, ಹಗುರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಗರಿಷ್ಠ ತಾಪಮಾನವು 24 ಡಿಗ್ರಿಗೆ ಸೆಲ್ಸಿಯಸ್ಗೆ ಬರಬಹುದು ಎಂದು ಅಂದಾಜಿಸಲಾಗಿದೆ.
ಚಳಿಗಾಲದ ಹವಾಮಾನವೇ ನಗರದಲ್ಲಿ ಕಂಡು ಬರುತ್ತಿದೆ. ನಿನ್ನೆಯ (ಜುಲೈ) ಗರಿಷ್ಠ ಉಷ್ಣಾಂಶ 23.7 ಡಿಗ್ರಿ ಸೆಲ್ಸಿಯಸ್ ಇತ್ತು. ಚಳಿಗಾಲದಲ್ಲಿಯೂ ನಗರದಲ್ಲಿ ಉಷ್ಣಾಂಶ ಈ ಮಟ್ಟಕ್ಕೆ ಕುಸಿಯುವುದು ಅಪರೂಪ. ಇಡೀ ದಿನ ನಗರದ ಹಲವೆಡೆ ಜುಮುರು ಮಳೆ ಮುಂದುವರಿದಿತ್ತು. ನಗರದಲ್ಲಿ ಕಂಡುಬರುತ್ತಿರುವ ಚಳಿಗಾಲದ ಹವಾಮಾನಕ್ಕೆ ಮುಂಗಾರು ಮಾರುತಗಳೇ ಮುಖ್ಯ ಕಾರಣ. ಇದರ ಜೊತೆಗೆ ಬಂಗಾಳ ಕೊಲ್ಲಿಯ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಕಾಣಿಸಿಕೊಂಡಿರುವುದೂ ನಗರದ ಉಷ್ಣಾಂಶದ ಪರಿಣಾಮ ಬೀರಿದೆ.
ಶಾಲಾ ಕಾಲೇಜುಗಳಿಗೆ ರಜೆ
ಕರ್ನಾಟಕದ ವಿವಿಧೆಡೆ ಮುಂಗಾರು ಮಳೆಯ ಆರ್ಭಟ ಮುಂದುವರಿದಿದೆ. ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸುರಿಯುತ್ತಿದೆ. ಮಲೆನಾಡು ಭಾಗವಾದ ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿಯೂ ಮಳೆ ಬಿರುಸಾಗಿದೆ. ಕಾವೇರಿ, ತುಂಗಭದ್ರಾ, ಕೃಷ್ಣಾ ಸೇರಿದಂತೆ ಬಹುತೇಕ ಎಲ್ಲ ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿವೆ. ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು ಜಿಲ್ಲೆಗಳ ಶಾಲೆ, ಕಾಲೇಜು ಮತ್ತು ಅಂಗನವಾಡಿಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.
ಸುಳ್ಯ: ಕುಸಿದ ಗುಡ್ಡ, ದಿಕ್ಕಾಪಾಲಾಗಿ ಓಡಿದ ಜನ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪಟ್ಟಣದ ವಾಣಿಜ್ಯ ಸಮುಚ್ಚಯ ಸಮೀಪ ಗುಡ್ಡ ಕುಸಿದಿದೆ. ಕೊಡಗಿನಲ್ಲಿ ಇತ್ತೀಚೆಗೆ ಭೂಕಂಪವಾಗಿತ್ತು. ಅದಾದ ನಂತರ ಇಲ್ಲಿಯೂ ಮಣ್ಣು ಸಡಿಲವಾಗಿತ್ತು. ಹಠಾತ್ ಗುಡ್ಡ ಕುಸಿದಾಗ ಜನರು ಹೆದರಿ ಓಡಿದರು.
Published On - 11:14 am, Fri, 8 July 22