Namma Metro Phase II: ಆರ್ವಿ ರಸ್ತೆ-ಬೊಮ್ಮಸಂದ್ರ ಮಾರ್ಗ; ಇನ್ನೊಂದು ವರ್ಷದಲ್ಲಿ ಮೆಟ್ರೋ ರೈಲು ಸಂಚಾರ ಸಾಧ್ಯತೆ
216 ಬೋಗಿಗಳ ಸರಬರಾಜಿಗಾಗಿ ಚೀನಾದ ಸಿಆರ್ಆರ್ಸಿ ಕಂಪನಿಯೊಂದಿಗೆ ಮೆಟ್ರೋ ನಿಗಮ ಒಪ್ಪಂದ ಮಾಡಿಕೊಂಡಿತ್ತು. ಆದರೆ ಎಂದು ಬೋಗಿಗಳು ಬರಬಹುದು ಎಂಬುದರ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ.
ಬೆಂಗಳೂರು: ನಗರದ ಜನಪ್ರಿಯ ಸಾರಿಗೆ ವ್ಯವಸ್ಥೆ ಎನಿಸಿರುವ ‘ನಮ್ಮ ಮೆಟ್ರೋ’ದ (The Bangalore Metro Rail Corporation Ltd – BMRCL) 73 ಕಿಮೀ ಉದ್ದದ 2ನೇ ಹಂತದ ಮಾರ್ಗ ನಿರ್ಮಾಣ ಯೋಜನೆ ಚುರುಕಾಗಿ ಸಾಗಿದೆ. ಯೋಜನೆಯ ಒಂದು ಭಾಗ ಶೀಘ್ರ ಪೂರ್ಣಗೊಳ್ಳುವ ಸ್ಥಿತಿಯಲ್ಲಿದೆ. ಈ ಮಾರ್ಗದಲ್ಲಿ ಸಾಗುವ ರೈಲುಗಳಿಗಾಗಿ 72 ಬೋಗಿ ಒದಗಿಸಲು ಮೆಟ್ರೋ ನಿಗಮವು ಪ್ರಕಟಿಸಿದ್ದ ಟೆಂಡರ್ಗೆ ನಾಲ್ಕು ಕಂಪನಿಗಳು ಆಸಕ್ತಿ ತೋರಿವೆ.
ಬೆಂಗಳೂರು ಮೆಟ್ರೋ ನಿಗಮವು ಈ ಮೊದಲು 216 ಬೋಗಿಗಳ ಸರಬರಾಜಿಗಾಗಿ ಚೀನಾದ ಸಿಆರ್ಆರ್ಸಿ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಸಕಾಲದಲ್ಲಿ ಬೋಗಿಗಳನ್ನು ಒದಗಿಸಲು ಸಿಆರ್ಆರ್ಸಿ ವಿಫಲವಾದ ಕಾರಣ ಕಳೆದ ಏಪ್ರಿಲ್ನಲ್ಲಿ ಮೆಟ್ರೋ ನಿಗಮವು ಬೋಗಿಗಳ ಸರಬರಾಜಿಗಾಗಿ ಪರ್ಯಾಯ ವ್ಯವಸ್ಥೆ ರೂಪಿಸಿಕೊಳ್ಳಲೆಂದು ಟೆಂಡರ್ ಪ್ರಕಟಿಸಿತ್ತು.
ಆರ್ವಿ ರಸ್ತೆ-ಬೊಮ್ಮಸಂದ್ರ (ರೀಚ್ 5) ಮಾರ್ಗದಲ್ಲಿ ತಲಾ 6 ಬೋಗಿಗಳಿರುವ 12 ರೈಲುಗಳು ಸಂಚರಿಸಲಿವೆ. ಈ ಮಾರ್ಗವನ್ನು ಸಾರ್ವಜನಿಕ ಬಳಕೆಗೆ ಜುಲೈ 2023ರಂದು ಮುಕ್ತಗೊಳಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸಿಲ್ಕ್ ಬೋರ್ಡ್ ಮತ್ತು ಜಯದೇವ ಇಂಟರ್ಚೇಂಜ್ ಸ್ಟೇಷನ್ಗಳ ಕಾಮಗಾರಿ ತಡವಾದ ಕಾರಣ ಈ ಮಹಾತ್ವಾಕಾಂಕ್ಷಿ ಯೋಜನೆಯು ನಿಧಾನಗತಿಯಲ್ಲಿ ಸಾಗುತ್ತಿದೆ.
ಟೆಂಡರ್ನಲ್ಲಿ ಬಿಇಎಂಎಲ್, ಅಲ್ಸ್ಟೊಮ್ ಟ್ರಾನ್ಸ್ಪೋರ್ಟ್, ಮಿಟ್ಷುಬಿಷಿ ಎಲೆಕ್ಟ್ರಿಕ್ ಮತ್ತು ತಿತಾಗಡ್ ವ್ಯಾಗನ್ಸ್ ಲಿಮಿಟೆಡ್ ಕಂಪನಿಗಳು ಟೆಂಡರ್ನಲ್ಲಿ ಪಾಲ್ಗೊಂಡಿದ್ದವು. ದೇಶದ ವಿವಿಧ ಮೆಟ್ರೊ ನಿಗಮಗಳಿಗೆ ಬೋಗಿಗಳನ್ನು ಸರಬರಾಜು ಮಾಡಿದ ಅನುಭವ ಈ ಕಂಪನಿಗಳಿಗೆ ಇದೆ. ಯಶಸ್ವಿ ಬಿಡ್ದಾರರಿಗೆ ಬೋಗಿಗಳನ್ನು ಪೂರೈಸಲು ನಾಲ್ಕೂವರೆ ವರ್ಷಗಳ ಕಾಲಾವಕಾಶ ಸಿಗಲಿದೆ. ಪ್ರಸ್ತುತ ಬಿಡ್ಗಳ ತಾಂತ್ರಿಕ ಮೌಲ್ಯಮಾಪನ ಪ್ರಕ್ರಿಯೆ ಚಾಲ್ತಿಯಲ್ಲಿದೆ.
ಚೀನಾದ ಸಿಆರ್ಆರ್ಸಿ ಕಂಪನಿಗೆ ಡಿಸೆಂಬರ್ 2019ರಲ್ಲಿ 216 ಬೋಗಿಗಳ ಪೂರೈಕೆಗಾಗಿ ಟೆಂಡರ್ ನೀಡಲಾಗಿತ್ತು. ಈ ಬೋಗಿಗಳ ಪೂರೈಕೆ ವಿಚಾರದಲ್ಲಿ ಗೊಂದಲಗಳು ಮೂಡಿವೆ. ಒಪ್ಪಂದದ ಪ್ರಕಾರ, ಕೇಂದ್ರ ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಉಪಕ್ರಮದ ಅನುಸಾರವಾಗಿ ಆಂಧ್ರ ಪ್ರದೇಶದ ಶ್ರೀ ಸಿಟಿಯಲ್ಲಿ ಈ ಬೋಗಿಗಳನ್ನು ತಯಾರಿಸಬೇಕಿತ್ತು. ಆದರೆ ಈ ಒಪ್ಪಂದದ ಬಗ್ಗೆ ಅನಿಶ್ಚಿತತೆ ಮನೆ ಮಾಡಿದ್ದು, ಬೋಗಿಗಳ ಸರಬರಾಜು ಪ್ರಕ್ರಿಯೆ ಸಾಕಷ್ಟು ತಡವಾಗುವ ಸಾಧ್ಯತೆಯಿದೆ. ಕೊಲ್ಕತ್ತಾ ಮೂಲದ ಕಂಪನಿಯೊಂದರೊಂದಿಗೆ ಸಹಯೋಗ ಮಾಡಿಕೊಳ್ಳುವುದಾಗಿ ಸಿಆರ್ಆರ್ಸಿ ತಿಳಿಸಿದೆಯಾದರೂ, ಈ ಪ್ರಸ್ತಾವಕ್ಕೆ ಇನ್ನೂ ಬೆಂಗಳೂರು ಮೆಟ್ರೋ ಅನುಮೋದನೆ ನೀಡಿಲ್ಲ.
ಮೆಟ್ರೋ ರೀಚ್ 5: ಜುಲೈ 2023ರ ಗುರಿ
ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತು ಜಯದೇವ ಇಂಟರ್ಚೇಂಜ್ ಸ್ಟೇಷನ್ಗಳೂ ಸೇರಿದಂತೆ ನಿರ್ಮಾಣ ಚಟುವಟಿಕೆ ಪೂರ್ಣಗೊಳಿಸಲು ಬೆಂಗಳೂರು ಮೆಟ್ರೋ ಆದ್ಯತೆ ನೀಡುತ್ತಿದೆ. ನಂತರದ ದಿನಗಳಲ್ಲಿ ಹಳಿಗಳನ್ನು ಅಳವಡಿಸುವುದು, ಸಿಗ್ನಲ್ ಮತ್ತು ಟೆಲಿಕಮ್ಯುನಿಕೇಶನ್ ಅಳವಡಿಕೆಯ ಕಾರ್ಯ ಆರಂಭವಾಗಲಿದೆ. ಈ ಕಾಮಗಾರಿಗಳನ್ನು ಜುಲೈ 2023 ಒಳಗೆ ಪೂರ್ಣಗೊಳಿಸುವ ಗುರಿಯನ್ನು ಅಧಿಕಾರಿಗಳು ನಿಗದಿಪಡಿಸಿಕೊಂಡಿದ್ದಾರೆ.
‘ನಮ್ಮ ಮೆಟ್ರೋ’ ಇತ್ತೀಚೆಗೆ ಪ್ರಕಟಿಸಿದ್ದ ನ್ಯೂಸ್ಲೆಟರ್ ಪ್ರಕಾರ, ಬೊಮ್ಮಸಂದ್ರ ಮತ್ತು ಬೊಮ್ಮನಹಳ್ಳಿ ನಡುವೆ ಶೇ 99ರಷ್ಟು ಸಿವಿಲ್ ಕಾಮಗಾರಿಗಳು ಮುಕ್ತಾಯವಾಗಿದೆ. ಎಚ್ಎಸ್ಆರ್ ಲೇಔಟ್ ಮತ್ತು ಆರ್ವಿ ರೋಸ್ ನಡುವಣ ಕಾಮಗಾರಿಗಳು ಶೇ 93ರಷ್ಟು ಪ್ರಗತಿ ಕಂಡಿವೆ.
Published On - 9:17 am, Fri, 8 July 22