ಮಳೆ ಕೊರತೆ, ಒಣ ಹವೆ ಪರಿಣಾಮ ಬೆಂಗಳೂರಿನ ತಾಪಮಾನ ಏರಿಕೆ: ಏರ್​ಪೋರ್ಟ್​ನಲ್ಲಿ ಉಷ್ಣಾಂಶ 5.7 ಡಿಗ್ರಿ ಸೆಲ್ಶಿಯಸ್ ಹೆಚ್ಚಳ

ಮಳೆಯ ಕೊರತೆಯಿಂದ ಬೆಂಗಳೂರಿನಲ್ಲಿ ತಾಪಮಾನ ವಾಡಿಕೆಗಿಂತ ಹೆಚ್ಚಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 33.9 ಡಿಗ್ರಿ ಸೆಲ್ಶಿಯಸ್ ದಾಖಲಾಗಿದ್ದು, ವಾಡಿಕೆಗಿಂತ 5.7 ಡಿಗ್ರಿ ಸೆಲ್ಶಿಯಸ್ ಏರಿಕೆಯಾಗಿದೆ. ಮುಂದಿನ ಐದು ದಿನಗಳಲ್ಲಿ ಬೆಂಗಳೂರಿನಲ್ಲಿ ಸುಮಾರು 33 ಡಿಗ್ರಿ ಸೆಲ್ಶಿಯಸ್ ತಾಪಮಾನ ಇರುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞ ಸಿಎಸ್​ ಪಾಟೀಲ್ ತಿಳಿಸಿದ್ದಾರೆ.

ಮಳೆ ಕೊರತೆ, ಒಣ ಹವೆ ಪರಿಣಾಮ ಬೆಂಗಳೂರಿನ ತಾಪಮಾನ ಏರಿಕೆ: ಏರ್​ಪೋರ್ಟ್​ನಲ್ಲಿ ಉಷ್ಣಾಂಶ 5.7 ಡಿಗ್ರಿ ಸೆಲ್ಶಿಯಸ್ ಹೆಚ್ಚಳ
ಸಾಂದರ್ಭಿಕ ಚಿತ್ರ
Image Credit source: Getty Images

Updated on: Sep 15, 2026 | 7:58 AM

ಮುಖ್ಯಾಂಶಗಳು

  • ಒಣಹವೆಯಿಂದ ಬೆಂಗಳೂರಿನ ತಾಪಮಾನದಲ್ಲಿ ಭಾರೀ ಏರಿಕೆ
  • ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಾಡಿಕೆಗಿಂತ 5.7 ಡಿಗ್ರಿ ಸೆಲ್ಶಿಯಸ್ ಹೆಚ್ಚಳ
  • ರಾಜ್ಯದಲ್ಲಿ ಶೇ 26ರಷ್ಟು ಮಳೆ ಕೊರತೆ ದಾಖಲು

ಬೆಂಗಳೂರು, ಸೆಪ್ಟೆಂಬರ್ 15: ಕರ್ನಾಟಕದಲ್ಲಿ ಮುಂಗಾರು ಮಳೆಯ ಕೊರತೆ ಮುಂದುವರಿದಿರುವುದರಿಂದ ತಾಪಮಾನ ಸಾಮಾನ್ಯಕ್ಕಿಂತ 3ರಿಂದ 4 ಡಿಗ್ರಿ ಸೆಲ್ಶಿಯಸ್‌ವರೆಗೆ ಏರಿಕೆಯಾಗಿದೆ. ಮುಂದಿನ ಐದು ದಿನಗಳಲ್ಲಿ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ ಸುಮಾರು 33 ಡಿಗ್ರಿ ಸೆಲ್ಶಿಯಸ್ ದಾಖಲಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸೆಪ್ಟೆಂಬರ್ 13ರ ಮಾಹಿತಿ ಪ್ರಕಾರ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗರಿಷ್ಠ 33.9 ಡಿಗ್ರಿ ಸೆಲ್ಶಿಯಸ್ ದಾಖಲಾಗಿದ್ದು, ಇದು ವಾಡಿಕೆಗಿಂತ 5.7 ಡಿಗ್ರಿ ಸೆಲ್ಶಿಯಸ್ ಹೆಚ್ಚಾಗಿದೆ. ಬೆಂಗಳೂರು ನಗರದಲ್ಲಿ 32.6 ಡಿಗ್ರಿ ಸೆಲ್ಶಿಯಸ್, ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ 32.1 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ.

ಮಧ್ಯಾಹ್ನದ ಬಳಿಕ ತಾಪಮಾನದಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ. ಸಂಜೆ 5.30ಕ್ಕೆ ಬೆಂಗಳೂರು ನಗರದಲ್ಲಿ 30.2 ಡಿಗ್ರಿ ಸೆಲ್ಶಿಯಸ್ ಹಾಗೂ ಎಚ್‌ಎಎಲ್‌ನಲ್ಲಿ 30.4 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ.

ಬೆಂಗಳೂರು ತಾಪಮಾನ ಏರಿಕೆಗೆ ಕಾರಣವೇನು?

ಕಳೆದ ಒಂದು-ಎರಡು ವಾರಗಳಿಂದ ಮಳೆ ಕಡಿಮೆಯಾಗಿರುವುದು, ಮಣ್ಣಿನ ತೇವಾಂಶ ಇಳಿಕೆಯಾಗಿರುವುದು ಹಾಗೂ ಮೋಡಗಳ ಪ್ರಮಾಣ ಕಡಿಮೆಯಾಗಿರುವುದರಿಂದ ತಾಪಮಾನ ಏರಿಕೆಯಾಗಿದೆ ಎಂದು ಹವಾಮಾನ ಇಲಾಖೆ ತಜ್ಞ ಸಿಎಸ್ ಪಾಟೀಲ್ ಹೇಳಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯನ್ನು ಹೀಟ್ ವೇವ್ ಅಥವಾ ಉಷ್ಣ ಅಲೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಪೂರಕ ಹವಾಮಾನ ವ್ಯವಸ್ಥೆಗಳು ರೂಪುಗೊಳ್ಳದಿರುವುದರಿಂದ ಒಳನಾಡು ಕರ್ನಾಟಕಕ್ಕೆ ತೇವಾಂಶದ ಹರಿವು ಕಡಿಮೆಯಾಗಿದೆ. ಸೆಪ್ಟೆಂಬರ್ 14ರ ನಂತರ ರಾಜ್ಯದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದ್ದರೂ, ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಾತ್ರ ಸಾಧಾರಣ ಮಳೆಯಾಗಬಹುದು ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರು ಸೇರಿ ದಕ್ಷಿಣ ಒಳನಾಡಿನಲ್ಲಿನ್ನು ಮಳೆ ಯಾವಾಗ?

ಅಕ್ಟೋಬರ್ 16ರ ಬಳಿಕ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಹಾಸನ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕದಲ್ಲಿ ಭಾರೀ ಮಳೆ ಕೊರತೆ

ಈ ವರ್ಷ ಕರ್ನಾಟಕದಲ್ಲಿ ಇದುವರೆಗೆ ಸುಮಾರು ಶೇ 26ರಷ್ಟು ಮಳೆ ಕೊರತೆಯಾಗಿದೆ. ಕಡಿಮೆ ಮಳೆಯ ಹಿನ್ನೆಲೆಯಲ್ಲಿ ರೈತರು ಕಡಿಮೆ ನೀರು ಬಳಸಿ ಬೆಳೆಯುವ ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಪಾಟೀಲ್ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ರಾಜ್ಯದ ಹವಾಮಾನ ವರದಿ: ಹಲವೆಡೆ ಮೋಡಕವಿದ ವಾತಾವರಣ, ಸಾಧಾರಣ ಮಳೆ ಸಾಧ್ಯತೆ

ಹೆಚ್ಚುವರಿ ಪ್ರದೇಶಗಳನ್ನು ಬರಪೀಡಿತ ಎಂದು ಘೋಷಿಸುವ ನಿರ್ಧಾರವನ್ನು ಮಣ್ಣಿನ ತೇವಾಂಶ, ಒಣಹವೆಯ ಅವಧಿ ಹಾಗೂ ಬೆಳೆಗಳ ಸ್ಥಿತಿಗತಿ ಆಧರಿಸಿ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us