
ಬೆಂಗಳೂರು, ಸೆಪ್ಟೆಂಬರ್ 20: ನಗರದಲ್ಲಿ ವ್ಹೀಲಿಂಗ್ ಪುಂಡರ ಹುಚ್ಚಾಟಕ್ಕೆ ಮತ್ತೊಂದು ಅಮೂಲ್ಯ ಜೀವ ಬಲಿಯಾಗಿದೆ. ವ್ಹೀಲಿಂಗ್ ಮಾಡುತ್ತಿದ್ದ ಪುಂಡರನ್ನು ತಪ್ಪಿಸಲು ಹೋಗಿ ಟ್ರಾವೆಲರ್ (ಟಿಟಿ) ವಾಹನವೊಂದು ಎಲೆಕ್ಟ್ರಿಕ್ ಪೋಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಮೃತಪಟ್ಟು, ಐವರು ತೀವ್ರವಾಗಿ ಗಾಯಗೊಂಡಿರುವ ಭೀಕರ ಘಟನೆ ಅನ್ನಪೂರ್ಣೇಶ್ವರಿ ನಗರದಲ್ಲಿ ತಡರಾತ್ರಿ ಸಂಭವಿಸಿದೆ.
ಲಗ್ಗೆರೆ ಸಮೀಪದ ಯುವಕರು ತಡರಾತ್ರಿ ಟಿಟಿ ವಾಹನದಲ್ಲಿ ಹೊರಟಿದ್ದರು. ಐದಾರು ಜನರಿದ್ದ ಈ ವಾಹನವನ್ನು ರವಿ ಎಂಬಾತ ಚಲಾಯಿಸುತ್ತಿದ್ದನು. ವಾಹನವು ಅನ್ನಪೂರ್ಣೇಶ್ವರಿ ನಗರದ ಮಹದೇಶ್ವರ ದೇವಾಲಯದ ಬಳಿ ಸಾಗುತ್ತಿದ್ದಾಗ, ಬೈಕ್‌ನಲ್ಲಿ ಬಂದ ಕೆಲ ಪುಂಡರು ಅಪಾಯಕಾರಿ ರೀತಿಯಲ್ಲಿ ವ್ಹೀಲಿಂಗ್ ಮಾಡುತ್ತಾ ಏಕಾಏಕಿ ವಾಹನಕ್ಕೆ ಅಡ್ಡ ಬಂದಿದ್ದಾರೆ. ಈ ವೇಳೆ ಅವರನ್ನು ತಪ್ಪಿಸಲು ಚಾಲಕ ರವಿ ಯತ್ನಿಸಿದಾಗ, ನಿಯಂತ್ರಣ ತಪ್ಪಿದ ಟಿಟಿ ವಾಹನವು ರಸ್ತೆಬದಿಯ ಎಲೆಕ್ಟ್ರಿಕ್ ಪೋಲ್‌ಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ವಾಹನದಲ್ಲಿದ್ದ ಮನೋಜ್ ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಉಳಿದ ಐವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತ ಮನೋಜ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆ ನಡೆದು ಒಂದು ಗಂಟೆ ಕಳೆದರೂ ಆಂಬುಲೆನ್ಸ್ ಸ್ಥಳಕ್ಕೆ ಆಗಮಿಸಲಿಲ್ಲ ಹಾಗೂ ಬಂದ ಆಂಬುಲೆನ್ಸ್‌ನಲ್ಲಿ ಕೇವಲ ಚಾಲಕ ಮಾತ್ರ ಇದ್ದನೆಂದು ಆರೋಪಿಸಿ ಉದ್ರಿಕ್ತ ಸ್ಥಳೀಯರು ಗಲಾಟೆ ನಡೆಸಿದರು. ನಗರದಲ್ಲಿ ನಿರಂತರವಾಗಿ ವ್ಹೀಲಿಂಗ್ ಮಾಡುತ್ತಾ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಪುಂಡರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧವೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ