ಬೆಂಗಳೂರು, ಮಾರ್ಚ್ 29: ವಿಜಯನಗರ (Vijayanagar) ಹಾಗೂ ಗೋವಿಂದರಾಜನಗರ (Govindarajnagar) ವಿಧಾನಸಭಾ ಕ್ಷೇತ್ರಗಳಲ್ಲಿ ಮಹಿಳಾ ಸುರಕ್ಷತೆ ಕುರಿತು ಬಿ.ಪ್ಯಾಕ್ ಮತ್ತು ಸಿಜಿಐ ಸಂಸ್ಥೆ ನಡೆಸಿದ “ಬಿ.ಸೇಫ್” ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಭಾರತೀಯ ವಿದ್ಯಾಭವನದಲ್ಲಿ ನಡೆದ ಸಮಾರಂಭದಲ್ಲಿ ನಟಿ ಆಶಾಭಟ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ವೈಷ್ಣವಿ ಹಾಗೂ ಸಿಜಿಐ ಉಪಾಧ್ಯಕ್ಷೆ ಶ್ರೀವಿದ್ಯಾ ನಟರಾಜ್ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಿದರು.
ವಿಜಯನಗರ ವಿಧಾನಸಭಾ ಕ್ಷೇತ್ರದ 9 ಬಿಬಿಎಂಪಿ ವಾರ್ಡ್ ಮತ್ತು ಗೋವಿಂದರಾಜನಗರದ 10 ಬಿಬಿಎಂಪಿ ವಾರ್ಡ್‌ಗಳಲ್ಲಿ ಬಿ.ಸೇಫ್ ಸಮೀಕ್ಷಾ ಅಧ್ಯಯನ ನಡೆಸಲಾಗಿದ್ದು, ಮಹಿಳೆಯರು ಹೆಚ್ಚಾಗಿ ಭೇಟಿ ನೀಡುವ ಆರು ಪ್ರಮುಖ ವಿಭಾಗಗಳ, 265 ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಆಡಿಟ್ ಮಾಡಲಾಗಿದೆ. ಇಲ್ಲಿನ 46 ಅಂಗನವಾಡಿ ಕೇಂದ್ರಗಳು, 131 ಬಸ್ ನಿಲ್ದಾಣಗಳು, 58 ಉದ್ಯಾನವನಗಳು, 10 ಸಾರ್ವಜನಿಕ ಆರೋಗ್ಯ ಕೇಂದ್ರ, 4 ಪೊಲೀಸ್ ಠಾಣೆ ಮತ್ತು 16 ಸಾರ್ವಜನಿಕ ಶೌಚಾಲಯಗಳಲ್ಲಿ ಮಹಿಳೆಯರಿಗೆ ಎಷ್ಟು ಸುರಕ್ಷತೆ ಇದೆ ಎಂಬುದರ ಬಗ್ಗೆ ಸಮಗ್ರವಾಗಿ ಅಭಿಪ್ರಾಯ ಸಂಗ್ರಹಿಸಿ ಅಲ್ಲಿನ ಸೌಲಭ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ.
ವರದಿ ಬಿಡುಗಡೆ ಬಳಿಕ ಮಾತನಾಡಿದ ನಟಿ ಆಶಾಭಟ್, ಇಂದು ಮಹಿಳೆ ಸಬಲೀಕರಣಕ್ಕೆ ಆದ್ಯತೆ ಹೆಚ್ಚಾಗಿದ್ದು, ಮಹಿಳಾ ಸುರಕ್ಷತೆಯೂ ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ಬಿಪ್ಯಾಕ್ ಸಮೀಕ್ಷೆ ನಡೆಸಿ, ಮಹಿಳಾ ಸುರಕ್ಷತೆಯ ಕುರಿತು ಸರ್ಕಾರದ ಗಮನ ಸೆಳೆಯುತ್ತಿರುವುದು ಶ್ಲಾಘನೀಯ ಎಂದರು.
ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಡಾ.ಕೆ. ವೈಷ್ಣವಿ ಮಾತನಾಡಿ, ಬಿ.ಪ್ಯಾಕ್ ಅವರ ನಿಸ್ವಾರ್ಥ ಕಾರ್ಯವನ್ನು ಶ್ಲಾಘಿಸುವೆ, ಸರ್ಕಾರವನ್ನು ಬೆಂಬಲಿಸುವ ಮತ್ತು ನಮ್ಮ ಕೆಲಸವನ್ನು ಸರಳಗೊಳಿಸುವ ಬಿ.ಪ್ಯಾಕ್ ನಂತಹ ಹೆಚ್ಚಿನ ಸಂಸ್ಥೆಗಳು ನಮಗೆ ಅಗತ್ಯವಿದೆ. ಅಂತಹ ಸಂಸ್ಥೆಗಳೊಂದಿಗೆ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಮತ್ತು ಸುರಕ್ಷಿತ ನಗರವನ್ನು ರೂಪಿಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.
ಸಿಎಸ್ಆರ್ ಮತ್ತು ಇಎಸ್‌ಜಿ ಯ ಮುಖ್ಯಸ್ಥರಾದ ಸುಧಾಕರ್ ಪೈ ಮಾತನಾಡಿ, ಬಿ.ಸೇಫ್ ಉಪಕ್ರಮವನ್ನು 2020ರಲ್ಲಿ ಮಹದೇವಪುರ ಮತ್ತು ಮಲ್ಲೇಶ್ವರಂನಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಯಿತು, ನಂತರ 2022ರಲ್ಲಿ ಹೆಬ್ಬಾಳ ಮತ್ತು ದಾಸರಹಳ್ಳಿಗೆ ವಿಸ್ತರಿಸಲಾಯಿತು ಇದೀಗ 2024–2025ರಲ್ಲಿ ಗೋವಿಂದರಾಜನಗರ ಮತ್ತು ವಿಜಯನಗರದಲ್ಲಿ ಸಮೀಕ್ಷೆ ನಡೆಸಿದ್ದು, ಇದರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಬಿ.ಪ್ಯಾಕ್ ಟ್ರಸ್ಟೀ ಹಾಗೂ ಮುಖ್ಯಸ್ಥರಾದ ರೇವತಿ ಅಶೋಕ್ ಮಾತನಾಡಿ, ಬಿ.ಪ್ಯಾಕ್ ನ ಬಿ.ಸೇಫ್ ಕ್ಷೇತ್ರ ಕಾರ್ಯಕ್ರಮವು, ಮಹಿಳೆಯರು ನಗರದಲ್ಲಿ ಎದುರಿಸುತ್ತಿರುವ ಪ್ರಮುಖ ಸುರಕ್ಷತಾ ಸವಾಲುಗಳನ್ನು ಗುರುತಿಸಲು ಮತ್ತು ಪರಿಹರಿಸಲು ಸಹಾಯ ಮಾಡುವಂತೆ ಬೆಂಗಳೂರಿನಾದ್ಯಂತ 6 ವಿಧಾನಸಭಾ ಕ್ಷೇತ್ರಗಳಲ್ಲಿ ಸುರಕ್ಷತಾ ಸಮೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಮುಂದಿನ ದಿನಗಳಲ್ಲಿ ಈ ಉಪಕ್ರಮವನ್ನು ನಗರದಾದ್ಯಂತ ವಿಸ್ತರಿಸಿ, ಎಲ್ಲರಿಗೂ ಸುರಕ್ಷಿತ ಸಾರ್ವಜನಿಕ ಸ್ಥಳಗಳನ್ನು ಒದಗಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಹೇಳಿದರು.
– ವಿಜಯನಗರದ ಬಿ.ಸೇಫ್ ಕ್ಷೇತ್ರದ ಸಾರ್ವಜನಿಕ ಸ್ಥಳಗಳ ಸುರಕ್ಷತ ಸಮೀಕ್ಷಾ ಸಾರಾಂಶ ಪಡೆಯಿರಿ.
– ಗೋವಿಂದರಾಜ ನಗರ ಬಿ.ಸೇಫ್ ಕ್ಷೇತ್ರದ ಸಾರ್ವಜನಿಕ ಸ್ಥಳಗಳ ಸುರಕ್ಷತ ಸಮೀಕ್ಷಾ ಸಾರಾಂಶ ಪಡೆಯಿರಿ.
ಬಿ.ಸೇಫ್ ಕ್ಷೇತ್ರದ ಕುರಿತು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ https://bpac.in/b-safe-constituency/
Published On - 5:47 pm, Sat, 29 March 25