ಯುಗಾದಿ ಹಬ್ಬ: ಗಗನಕ್ಕೇರಿದ ಹೂವು ಮತ್ತು ಹಣ್ಣುಗಳ ಬೆಲೆ, ಗ್ರಾಹಕ ಕಂಗಾಲು
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿ ನಡೆದಿದೆ. ಹೂವುಗಳ ಬೆಲೆ ಗಗನಕ್ಕೇರಿದೆ, ಹಣ್ಣುಗಳ ಬೆಲೆ ಸ್ವಲ್ಪ ಏರಿಕೆಯಾಗಿದೆ. ಆದರೆ ತರಕಾರಿಗಳ ಬೆಲೆ ಸ್ಥಿರವಾಗಿದೆ. ಬೇಸಿಗೆಯ ತೀವ್ರತೆ ಮತ್ತು ಹೆಚ್ಚಿದ ಬೇಡಿಕೆಯಿಂದಾಗಿ ಹೂವುಗಳ ಬೆಲೆ ಏರಿಕೆಯಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಗ್ರಾಹಕರು ಹೆಚ್ಚಿನ ಬೆಲೆ ನೀಡಿ ಖರೀದಿಸುವಂತಾಗಿದೆ.

ಬೆಂಗಳೂರು, ಮಾರ್ಚ್ 29: ಯುಗಾದಿ (Ugadi) ಹಿಂದೂಗಳಿಗೆ ಹೊಸ ವರ್ಷವಾಗಿದೆ (New Year). ಈ ಹಿನ್ನೆಲೆಯಲ್ಲಿ ಯುಗಾದಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹೀಗಾಗಿ, ಬೆಂಗಳೂರಿನ (Bengaluru) ಕೆಆರ್ ಮಾರುಕಟ್ಟೆ (KR Market) ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿ ನಡೆದಿದೆ. ಹೂವು, ಹಣ್ಣು-ಹಂಪಲು, ತರಕಾರಿಯ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ, ಹಣ್ಣುಗಳ ದರ ಕೊಂಚ ದುಬಾರಿಯಾಗಿದ್ದು, ಹೂವುಗಳ ದರ ಗಗನ ಕುಸುಮವಾಗಿದೆ. ಇನ್ನು ತರಕಾರಿ ದರ ಯಥಾಸ್ಥಿತಿ ಇದೆ. ಬೆಲೆ ಏರಿಕೆಯಾದರೂ ಗ್ರಾಹಕರು ಬೇರೆ ವಿಧಿಯಿಲ್ಲದೆ ದುಬಾರಿ ಬೆಲೆ ತೆತ್ತು ಖರೀದಿಸುತ್ತಿದ್ದಾರೆ.
ವಿಪರೀತ ಬೇಸಿಗೆ ಮತ್ತು ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಹೂವುಗಳ ಬೆಲೆ ಏರಿಕೆಯಾಗಿದೆ ಎಂದು ವ್ಯಾಪಾರಸ್ತರು ಹೇಳಿದ್ದಾರೆ. ಇನ್ನು, ತರಕಾರಿಗಳ ಬೆಲೆಯಲ್ಲಿ ತಟಸ್ಥವಾಗಿರುವ ಹಿನ್ನೆಲೆಯಲ್ಲಿ ಗ್ರಾಹಕರು ಕೊಂಚ ನಿರಾಳರಾಗಿದ್ದಾರೆ.
ಹೂವುಗಳ ಬೆಲೆ
ಹೂಗಳ ಬೆಲೆ | ||
ಹೂವುಗಳು | ಹಿಂದಿನ ದರ | ಪ್ರಸ್ತುತ ದರ (ಕೆಜಿ ರೂಗಳಲ್ಲಿ) |
ಮಲ್ಲಿಗೆ | 600 | 1200 |
ಕನಕಾಂಬರ | 600 | 1000 |
ಗುಲಾಬಿ | 100 | 300 |
ಸಂಪಿಗೆ | 200 | 400 |
ಸೇವಂತಿ | 200 | 360 |
ತಾವರೆ | 10/2 | |
ಗಣಗಳ ಹೂವು | 100 | 240 |
ಚೆಂಡು ಹೂವು | 10 | 40 |
ಹಣ್ಣುಗಳ ಬೆಲೆ
ಹಣ್ಣುಗಳ ಬೆಲೆ | ||
ಹಣ್ಣುಗಳು | ಹಿಂದಿನ ದರ | ಪ್ರಸ್ತುತ ದರ (ಕೆಜಿ ರೂಗಳಲ್ಲಿ) |
ಸೇಬು | 200 | 240 |
ದಾಳಿಂಬೆ | 150 | 250 |
ಕಿತ್ತಳೆ | 100 | 120 |
ದ್ರಾಕ್ಷಿ | 80 | 120 |
ಮಾವು | 150 | 200 |
ಕಲ್ಲಂಗಡಿ | 20 | 25 |
ಬಾಳೆ ಹಣ್ಣು | 80 | 100 |
ಸಪೋಟ | 100 | 120 |
ತೆಂಗಿನಕಾಯಿ | 40 | 60 |
ಇದನ್ನೂ ಓದಿ: ಯುಗಾದಿ, ರಂಜಾನ್ ಹಬ್ಬ: ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ, ಬದಲಿ ರಸ್ತೆ ಬಳಸುವಂತೆ ಸೂಚನೆ
ಖಾಸಗಿ ಬಸ್ ಟಿಕೆಟ್ ದರ ಏರಿಕೆ
ಪ್ರತಿ ಬಾರಿ ಹಬ್ಬ ಹರಿದಿನ, ಸಾಲು ಸಾಲು ರಜೆ ಬಂದರೆ ಬೆಂಗಳೂರಿನಲ್ಲಿ ನೆಲೆಸಿರುವ ಸಾವಿರಾರು ಮಂದಿ ದೂರದ ಉರುಗಳತ್ತ ಮುಖ ಮಾಡುತ್ತಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್ ಮಾಲೀಕರು ಮನಸೋ ಇಚ್ಛೆ ಟಿಕೆಟ್ ರೇಟ್ ಫಿಕ್ಸ್ ಮಾಡಿಕೊಂಡು ಸುಲಿಗೆಗೆ ಇಳಿದಿದ್ದಾರೆ. ಹೀಗಾಗಿ, ಮತ್ತೆ ಅದೇ ಪರಿಸ್ಥಿತಿ ಮುಂದುವರೆದಿದ್ದು, ಯುಗಾದಿ, ರಂಜಾನ್ ನಿಮಿತ್ತ ಸಾಲು ಸಾಲು ರಜೆ ಹಿನ್ನೆಲೆ ಬಸ್ ಹತ್ತಲು ಮುಂದಾದ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಖಾಸಗಿ ಬಸ್ ಟಿಕೆಟ್ ದರ ಏರಿಕೆಯಾಗಿದೆ.
ಇನ್ನು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಸಹ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿ ಕಂಡುಬಂದಿದೆ. ಹೆಚ್ಚುವರಿ ಎರಡು ಸಾವಿರ ಬಸ್ಗಳ ವ್ಯವಸ್ಥೆ ಮಾಡಲಾಗಿದ್ದರೂ ಸಹ ಪ್ರಯಾಣಿಕರು ಗಂಟೆ ಗಟ್ಟಲೇ ಕಾದು ಬಳಿಕ ಬಸ್ಗಳತ್ತ ಹಿಡಿಯುವುದು ಸಾಮಾನ್ಯವಾಗಿತ್ತು. ಇನ್ನೂ, ಹೆಚ್ಚಿಗೆ ಬಸ್ಗಳ ವ್ಯವಸ್ಥೆ ಮಾಡಬೇಕು ಅಂತಲೂ ಆಗ್ರಹ ವ್ಯಕ್ತವಾಗಿದೆ.
ಒಟ್ಟಾರೆಯಾಗಿ, ಹಬ್ಬ-ಹರಿದಿನಗಳ ಬಂದರೇ ಸಾಕು ಬಸ್ಗಳ ಟಿಕೆಟ್ ದರ ಮತ್ತು ಹೂವು, ಹಣ್ಣು ಮತ್ತು ತರಕಾರಿ ಬೇಲೆ ಏರಿಕೆಯಾಗುತ್ತದೆ.
ವರದಿ: ಲಕ್ಷ್ಮೀ ನರಸಿಂಹ್
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:44 pm, Sat, 29 March 25