AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇವಿ ಚಾರ್ಜಿಂಗ್, ಬ್ಯಾಟರಿ ವಿನಿಮಯ ಕೇಂದ್ರ ಸ್ಥಾಪಿಸುವುದು ಇನ್ನು ಸುಲಭ; ಹೊಸ ಪೋರ್ಟಲ್ ಲಾಂಚ್ ಮಾಡಿದ ಬೆಸ್ಕಾಂ

ರಾಜ್ಯದಲ್ಲಿ ವಿದ್ಯುತ್ ವಾಹನ ಮೂಲಸೌಕರ್ಯ ಬಲಪಡಿಸಲು ಬೆಸ್ಕಾಂ ಲ್ಯಾಂಡ್ ಅಗ್ರಿಗೇಟರ್ ಪೋರ್ಟಲ್ ಪ್ರಾರಂಭಿಸಿದೆ. ಇದು ಇವಿ ಚಾರ್ಜಿಂಗ್ ಮತ್ತು ಬ್ಯಾಟರಿ ವಿನಿಮಯ ಕೇಂದ್ರಗಳ ಸ್ಥಾಪನೆಗೆ ಭೂಮಾಲೀಕರು, ಸಂಸ್ಥೆಗಳು ಹಾಗೂ ಆಪರೇಟರ್‌ಗಳಿಗೆ ಸಿಂಗಲ್-ವಿಂಡೋ ವ್ಯವಸ್ಥೆ ಒದಗಿಸುತ್ತದೆ. ಕರ್ನಾಟಕದಾದ್ಯಂತ ಇವಿ ಮೂಲಸೌಕರ್ಯ ಅಭಿವೃದ್ಧಿಗೆ ಇದು ವೇಗ ನೀಡಲಿದ್ದು, ಸ್ಥಳೀಯ ಸಮುದಾಯಗಳಿಗೆ ಆರ್ಥಿಕವಾಗಿ ನೆರವಾಗಲಿದೆ ಎಂದು ಬೆಸ್ಕಾಂ ಅಭಿಪ್ರಾಯಪಟ್ಟಿದೆ.

ಇವಿ ಚಾರ್ಜಿಂಗ್, ಬ್ಯಾಟರಿ ವಿನಿಮಯ ಕೇಂದ್ರ ಸ್ಥಾಪಿಸುವುದು ಇನ್ನು ಸುಲಭ; ಹೊಸ ಪೋರ್ಟಲ್ ಲಾಂಚ್ ಮಾಡಿದ ಬೆಸ್ಕಾಂ
ಇವಿ ಚಾರ್ಜಿಂಗ್–ಬ್ಯಾಟರಿ ವಿನಿಮಯಕ್ಕೆ BESCOM ಮಹತ್ವದ ಹೆಜ್ಜೆ
ಭಾವನಾ ಹೆಗಡೆ
|

Updated on: Jan 14, 2026 | 8:34 AM

Share

ಬೆಂಗಳೂರು, ಜನವರಿ 14: ರಾಜ್ಯದಲ್ಲಿ ವಿದ್ಯುತ್ ವಾಹನ (ಇವಿ) ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಬೆಸ್ಕಾಂ (BESCOM) ಮಹತ್ವದ ಹೆಜ್ಜೆ ಇಟ್ಟಿದ್ದು, ಇವಿ ಚಾರ್ಜಿಂಗ್ ಹಾಗೂ ಬ್ಯಾಟರಿ ವಿನಿಮಯ ಕೇಂದ್ರಗಳ ಸ್ಥಾಪನೆಗಾಗಿ ವಿಶೇಷ ಲ್ಯಾಂಡ್ ಅಗ್ರಿಗೇಟರ್ ಪೋರ್ಟಲ್​ ಅನ್ನು (land aggregator portal) ಮಂಗಳವಾರ (ಜ.13) ಪ್ರಾರಂಭಿಸಿದೆ.

ಬೆಸ್ಕಾಂನಿಂದ ಸಿಂಗಲ್-ವಿಂಡೋ ಪೋರ್ಟಲ್

ಈ ಪೋರ್ಟಲ್ ಮೂಲಕ ರಾಜ್ಯಾದ್ಯಂತ ಇವಿ ಚಾರ್ಜಿಂಗ್ ಮತ್ತು ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಲು ಬಯಸುವ ಖಾಸಗಿ ಭೂಮಾಲೀಕರು, ಸರ್ಕಾರಿ ಇಲಾಖೆಗಳು, ಖಾಸಗಿ ಸಂಸ್ಥೆಗಳು ಹಾಗೂ ಚಾರ್ಜ್ ಪಾಯಿಂಟ್ ಆಪರೇಟರ್‌ಗಳಿಗೆ ಬೆಸ್ಕಾಂ ಸಿಂಗಲ್-ವಿಂಡೋ ವ್ಯವಸ್ಥೆ ಒದಗಿಸಲಿದೆ. ಇದರಿಂದ ವಿದ್ಯುತ್ ವಾಹನಗಳ ಮೂಲಸೌಕರ್ಯ ಅಭಿವೃದ್ಧಿಗೆ ವೇಗ ಸಿಗಲಿದ್ದು ರಾಜ್ಯದ ಪರಿವರ್ತನೆಗೆ ಸಹಕಾರಿಯಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಭೂಮಾಲೀಕರು  ಈ ಪೋರ್ಟಲ್ ಬಳಸಿ ತಮ್ಮ ಭೂಮಿಯನ್ನು ಆದಾಯ ಹಂಚಿಕೆ ಆಧಾರದ ಮೇಲೆ ಇವಿ ಚಾರ್ಜಿಂಗ್ ಮತ್ತು ಬ್ಯಾಟರಿ ವಿನಿಮಯ ಕೇಂದ್ರಗಳ ಸ್ಥಾಪನೆಗೆ ಗುತ್ತಿಗೆ ನೀಡಬಹುದಾಗಿದೆ. ಇತ್ತ ಮಾರಾಟಗಾರರು ಮತ್ತು ಚಾರ್ಜ್ ಪಾಯಿಂಟ್ ಆಪರೇಟರ್‌ಗಳು ಪೋರ್ಟಲ್​ನ ಸ್ಥಾಪನೆ, ಕಾರ್ಯಾಚರಣೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಜೊತೆಗೆ ಬೆಸ್ಕಾಂ ಮೂಲಕ ಸಂಯೋಜಿತ ವಿದ್ಯುತ್ ಸರಬರಾಜು ವ್ಯವಸ್ಥೆಯೂ ಸಕ್ರಿಯಗೊಳ್ಳಲಿದೆ.

 ಸ್ಥಳೀಯ ಸಮುದಾಯಗಳಿಗೆ ಆರ್ಥಿಕ ನೆರವು

ನಗರ ಪ್ರದೇಶಗಳು ಹಾಗೂ ಹೆದ್ದಾರಿ ಕಾರಿಡಾರ್‌ಗಳಲ್ಲಿ ಸಾರ್ವಜನಿಕ ಇವಿ ಚಾರ್ಜಿಂಗ್ ಸೌಲಭ್ಯಗಳನ್ನು ತ್ವರಿತವಾಗಿ ಅಭಿವೃದ್ಧಿಪಡಿಸಲು ಈ ಪೋರ್ಟಲ್ ನೆರವಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಸಿಂಗಲ್-ವಿಂಡೋ ವ್ಯವಸ್ಥೆಯ ಮೂಲಕ ಲ್ಯಾಂಡ್ ಅಗ್ರಿಗೇಶನ್ ಮತ್ತು ವಿದ್ಯುತ್ ಸಂಪರ್ಕ ಪ್ರಕ್ರಿಯೆಯನ್ನು ಸುಗಮಗೊಳಿಸಲಾಗುತ್ತಿದೆ. ಇದರಿಂದ ಕಾರ್ಯವಿಧಾನದ ವೇಗ ಹೆಚ್ಚಲಿದ್ದು, ಸಾರ್ವಜನಿಕ–ಖಾಸಗಿ ಪಾಲುದಾರಿಕೆಯನ್ನು ಬಲಪಡಿಸಿ, ಸ್ಥಳೀಯ ಸಮುದಾಯಗಳಿಗೆ ಆರ್ಥಿಕವಾಗಿ ನೆರವಾಗಲಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎನ್. ಶಿವಶಂಕರ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.