ಗ್ರಾಹಕರಿಗೆ ವಿದ್ಯುತ್​ ಸ್ಮಾರ್ಟ್ ಮೀಟರ್ ಶಾಕ್: ದರ ಶೇ.400ರಿಂದ 800ರಷ್ಟು ಏರಿಕೆ

| Updated By: ರಮೇಶ್ ಬಿ. ಜವಳಗೇರಾ

Updated on: Mar 05, 2025 | 10:05 PM

ವಿದ್ಯುತ್​ ದರ ಏರಿಕೆಯ ಸಲುವಾಗಿ ಬೆಸ್ಕಾಂ ಪ್ರಸ್ತಾವನೆ ಸಲ್ಲಿಸಿದ್ದು, ಈಗಾಗಲೇ ಗ್ರಾಹಕರಿಗೆ ನಡುಕ ಶುರುವಾಗಿದೆ. ಇದರ ಮಧ್ಯೆ ಹಲವು ವರ್ಷಗಳಿಂದ ಇಂಧನ ಇಲಾಖೆ ಜಾರಿ ಮಾಡಲು ಉದ್ದೇಶಿಸಿದ್ದ ಸ್ಮಾರ್ಟ್​ ಮೀಟರ್​ಗಳ ಅಳವಡಿಕೆಗೆ ಕೊನೆಗೂ ಕಾಲ ಕೂಡಿ ಬಂದಿದ್ದು, ಫೆಬ್ರವರಿ 15 ರಿಂದ ಅನ್ವಯ ಆಗುವಂತೆ ಸ್ಮಾರ್ಟ್ ಮೀಟರ್ ಗಳ ಅಳವಡಿಕೆ ಕಡ್ಡಾಯಗೊಳಿಸಿ ಬೆಸ್ಕಾಂ ಆದೇಶ ಹೊರಡಿಸಿದೆ. ಇನ್ನು ಈ ಸ್ಮಾರ್ಟ್​ ಮೀಟರ್​​ಗಳ ದರ ಕೇಳಿದ್ರೆ ಶಾಕ್ ಆಗುತ್ತೆ.

ಗ್ರಾಹಕರಿಗೆ ವಿದ್ಯುತ್​ ಸ್ಮಾರ್ಟ್ ಮೀಟರ್ ಶಾಕ್: ದರ ಶೇ.400ರಿಂದ 800ರಷ್ಟು ಏರಿಕೆ
Electricity Smart Meter
Follow us on

ಬೆಂಗಳೂರು, (ಮಾರ್ಚ್​ 05): ಕಳೆದ ವರ್ಷದಿಂದಲೂ ಸ್ಮಾರ್ಟ್​ ಮೀಟರ್​ಗಳನ್ನ ಕಡ್ಡಾಯ ಮಾಡುವ ಸಲುವಾಗಿ ಕಸರತ್ತು ನಡೆಸಿದ್ದ ಬೆಸ್ಕಾಂ ಕೊನೆಗೂ ಈ ಕುರಿತಾಗಿ ಆದೇಶ ಹೊರಡಿಸಿದ್ದು, ಫೆಬ್ರವರಿ 15ರಿಂದ ಅನ್ವಯವಾಗುವಂತೆ ಸ್ಮಾರ್ಟ್​ ಮೀಟರ್​ ಬಳಕೆ ಕಡ್ಡಾಯ ಎಂದು ಹೇಳಿದೆ. ಹೊಸ ವಿದ್ಯುತ್​ ಸಂಪರ್ಕ ಪಡೆಯುವ ಹಾಗೂ ಈಗಾಗಲೇ ಸ್ಟಾಟಿಕ್​ ಮೀಟರ್​ ಬಳಕೆದಾರರಿಗೂ ಇದು ಅನ್ವಯವಾಗಲಿದೆ. ಆದರೆ ಸ್ಟಾಟಿಕ್​ ಮೀಟರ್​​ಗಳಿಗಿಂತ ಸ್ಮಾರ್ಟ್​ ಮೀಟರ್​ಗಳು ದುಬಾರಿಯಾಗಿದ್ದು, ಇದೀಗ ಗ್ರಾಹಕರ ನಿದ್ದೆಗೆಡಿಸಿದೆ.

ಹೇಗಿದೆ ಸ್ಮಾರ್ಟ್ ಮೀಟರ್ ದರ?

ಇನ್ನು  ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯ ಮಾಡಲಾಗಿದ್ದು,  ಮುಂದಿನ ದಿನಗಳಲ್ಲಿ ಎಸ್ಕಾಂ ವ್ಯಾಪ್ತಿಯಲ್ಲೂ ಈ ಸ್ಮಾರ್ಟ್​ ಮೀಟರ್​ ಜಾರಿಗೊಳಿಸಲಾಗುತ್ತದೆ.  ಸದ್ಯ ಚಾಲ್ತಿಯಲ್ಲಿರುವ ಸ್ಟಾಟಿಕ್ ಮೀಟರ್​ಗಳಿಗೂ ಹೊಸ ಸ್ಮಾರ್ಟ್​ ಮೀಟರ್​ಗಳ ದರಕ್ಕೂ ಅಜಗಜಾಂತರ ವ್ಯತ್ಯಾಸವಿದೆ.  ಸ್ಮಾರ್ಟ್​ ಮೀಟರ್ ದರ ಶೇ.400ರಿಂದ 800ರಷ್ಟು ಏರಿಕೆಯಾಗಿದ್ದು, ಹೊಸ ಸಂಪರ್ಕಕ್ಕೆ ಸ್ಮಾರ್ಟ್​ ಮೀಟರ್​ ಕಡ್ಡಾಯವಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಆಟೋ ಮೀಟರ್ ದರ ಏರಿಕೆಗೆ ಮುಹೂರ್ತ ಫಿಕ್ಸ್ , ಎಷ್ಟು ಹೆಚ್ಚಳ?

ಎಲ್ ಟಿ ಸಿಂಗಲ್ ಫೇಸ್ 2 ಸ್ಟಾಟಿಕ್​​ ಮೀಟರ್​​​ ದರ 980 ರೂಪಾಯಿ ಇದ್ದು, ಸ್ಮಾರ್ಟ್​​ ಮೀಟರ್​​ ದರ 4,800 ರೂ. ಇದೆ. ಎಲ್ ಟಿ 3 ಫೇಸ್ 4 ಸ್ಟಾಟಿಕ್​​ ಮೀಟರ್ 2,430 ರೂಪಾಯಿ ಇದ್ರೆ, ಸ್ಮಾರ್ಟ್​​ ಮೀಟರ್​​ ದರ 8,500 ರೂ. ಆಗಿದೆ. ಇನ್ನು ಎಲ್ ಟಿ 3 ಫೇಸ್ CT ಆಪರೇಟೆಡ್ 3450 ರಿಂದ 10,900 ರೂಪಾಯಿ ಆಗಿದೆ.

ಇದನ್ನೂ ಓದಿ
ಪ್ರೋತ್ಸಾಹ ಧನ ಬಾಕಿ ಮಧ್ಯೆ ಹಾಲಿನ ದರ ಏರಿಕೆಗೆ ಸರ್ಕಾರ ಚಿಂತನೆ
ಬೆಂಗಳೂರಿನಲ್ಲಿ ಆಟೋ ಮೀಟರ್ ದರ ಏರಿಕೆಗೆ ಮುಹೂರ್ತ ಫಿಕ್ಸ್
ಟಿಕೆಟ್ ದರ ಏರಿಕೆ ಪರಿಣಾಮ: 5 ಲಕ್ಷಕ್ಕಿಳಿದ ಮೆಟ್ರೋ ಪ್ರಯಾಣಿಕರ ಸಂಖ್ಯೆ
ನಂದಿನಿ ಹಾಲಿನ ದರ ಏರಿಕೆ ಬಗ್ಗೆ KMF ಅಧ್ಯಕ್ಷ ನೀಡಿದ್ರು ಬಿಗ್​ ಅಪ್ಡೇಟ್​

ರಿಚಾರ್ಜ್​ ಮಾಡದಿದ್ರೆ ವಿದ್ಯುತ್ ಸಂಪರ್ಕ ಕಟ್​

ಇನ್ನು ಈ ಸ್ಮಾರ್ಟ್​ ಮೀಟರ್ ನಿರ್ವಹಣೆ ಬಗ್ಗೆ ಬೆಸ್ಕಾಂ ಮಾರ್ಗಸೂಚಿ ಹೊರಡಿಸಿದ್ದು, ಪ್ರಿಪೇಯ್ಡ್ ಗ್ರಾಹಕರು ಕನಿಷ್ಠ 100 ರೂ ಅಥವಾ ಒಂದು ವಾರದ ಸರಾಸರಿ ಬಳಕೆಗೆ ಸಮಾನವಾದ ಮೊತ್ತವನ್ನು ಕನಿಷ್ಠ ರಿಚಾರ್ಜ್ ಮಾಡಿಸಬೇಕು. ಗರಿಷ್ಠ ರಿಚಾರ್ಜ್​ಗೆ ಯಾವುದೇ ಮಿತಿ ಇರುವುದಿಲ್ಲ. ಇದಲ್ಲದೇ ಮಾಸಿಕ ನಿಗದಿತ ಶುಲ್ಕವನ್ನು ತಿಂಗಳ ಮೊದಲ ದಿನವೇ ಕಡಿತ ಮಾಡಲಾಗುತ್ತದೆ. ಬ್ಯಾಲೆನ್ಸ್​ ಶೂನ್ಯವಾದರೆ ಸಂಪರ್ಕ ಕಡಿತಗೊಳಿಸಲಾಗುತ್ತದೆ. ಈ ಬಗ್ಗೆ ಅಲರ್ಟ್ ಕೊಡಿಸಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆ ನಡುವೆ ವಿದ್ಯುತ್​ ಕಟ್ ಮಾಡಬೇಕೆಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಹೀಗಾಗಿ ಎಎಂಐ ಸಾಫ್ಟ್​ವೇರ್ ಮೂಲಕವೇ ಬೆಸ್ಕಾಂ ಸಂಪರ್ಕ ಕಡಿತ ಮಾಡಲಿದೆ. ​

ಇನ್ನು ಕೇಂದ್ರೀಯ ವಿದ್ಯುತ್​ ಪ್ರಾಧಿಕಾರ ಹಾಗೂ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ನಿರ್ದೇಶನದಂತೆ ಕ್ರಮ ವಹಿಸಲಾಗಿದ್ದು, ಗ್ರಾಹಕರಿಗೆ ಇದು ಅನಿವಾರ್ಯ ಎಂದು ಬೆಸ್ಕಾಂ ಅಧಿಕಾರಿಗಳು ಹೇಳುತ್ತಿದ್ದಾರೆ. ಅಲ್ಲದೆ ಹಳೆಯ ಸ್ಟಾಟಿಕ್​ ಮೀಟರ್​ ಸ್ಪೆಸಿಫಿಕೇಶನ್​ಗೂ ಸ್ಮಾರ್ಟ್​ ಮೀಟರ್​ ಫೀಚರ್ಸ್​ ಇರುವ ಕಾರಣ ಕೊಂಚ ದುಬಾರಿಯಾಗಲಿದ್ದು, ಅಳವಡಿಕೆಯ ನಂತರ ಇದು ಗ್ರಾಹಕರು ವಿದ್ಯುತ್​ ಬಳಕೆಯ ಬಗ್ಗೆ ತಿಳಿದುಕೊಳ್ಳಲು ಹಾಗೂ ಮಿತವಾಗಿ ಬಳಸಿಕೊಳ್ಳಲು ಸಹಕಾರಿಯಾಗಲಿದೆ. ಹೀಗಾಗಿ ಬೆಸ್ಕಾಂನ ಈ ಹೊಸ ಸ್ಮಾರ್ಟ್ ಮೀಟರ್​ಗಳಿಗೆ ಮುಂದಿನ ದಿನಗಳಲ್ಲಿ ಗ್ರಾಹಕರಿಂದ ಏನು ಪ್ರತಿಕ್ರಿಯೆ ವ್ಯಕ್ತವಾಗುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ