ಪ್ರೋತ್ಸಾಹ ಧನ ಬಾಕಿ ಮಧ್ಯೆ ಹಾಲಿನ ದರ ಏರಿಕೆಗೆ ಸರ್ಕಾರ ಚಿಂತನೆ
ಬಸ್ ಪ್ರಯಾಣ ದರ, ಮೆಟ್ರೊ ಟಿಕೆಟ್ ದರ ಹೀಗೆ ಒಂದರ ಮೇಲೊಂದು ಎಲ್ಲವುದರ ದರ ಏರಿಕೆ ಆಗುತ್ತಿದೆ. ಇದರ ನಡುವೆ ಹಾಲಿನ ದರ ಏರಿಕೆ ವಿಚಾರ ಮತ್ತೆ ಸದನದಲ್ಲಿ ಚರ್ಚೆ ಆಗಿದೆ. ಅಧಿವೇಶನ ಮುಗಿದ ಬಳಿಕ ದರ ಏರಿಕೆ ಆಗುತ್ತಾ ಎನ್ನುವ ಆತಂಕ ಶುರುವಾಗಿದೆ.

ಬೆಂಗಳೂರು, ಮಾರ್ಚ್ 05: ಅಗತ್ಯ ವಸ್ತು, ಸಾಮಾಗ್ರಿಗಳ ಬೆಲೆ ಏರಿಕೆ ಆಯ್ತು. ಬಸ್ ಟಿಕೆಟ್ ದರ, ಮೆಟ್ರೊ ಪ್ರಯಾಣ ದರ ದುಪ್ಪಟ್ಟು ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ರಾಜ್ಯ ಸರ್ಕಾರ ಮತ್ತೊಂದು ಶಾಕ್ ನೀಡಲು ಮುಂದಾಗಿದೆ. ಅಧಿವೇಶನ ಮುಗಿದ ಬಳಿಕ ಹಾಲಿನ ದರ (Milk rate) ಏರಿಕೆ ಆಗಲಿದೆ ಎಂಬ ಚರ್ಚೆ ಈಗಾಗಲೇ ಎಲ್ಲೆಡೆ ಕೇಳಿ ಬರುತ್ತಿದೆ. ಇದಕ್ಕೆ ಪುಷ್ಟಿಕೊಡುವಂತೆ ವಿಧಾನ ಪರಿಷತ್ನಲ್ಲಿಂದು ಹಾಲಿನ ದರ ಏರಿಕೆ ಬಗ್ಗೆ ಪ್ರಸ್ತಾಪವಾಗಿದೆ.
ಹಾಲು ಉತ್ಪಾದಕರಿಗೆ ಸರ್ಕಾರ 656.07 ಕೋಟಿ ಪ್ರೋತ್ಸಾಹ ಧನ ಬಾಕಿ ಉಳಿಸಿಕೊಂಡಿದೆ. ಇದರ ವಿಚಾರವಾಗಿ ಸದನದಲ್ಲಿ ಆಕ್ಷೇಪ ಶುವಾಯಿತು. ಕರ್ನಾಟಕದಲ್ಲಿ ಒಟ್ಟು 9,04,547 ಫಲಾನುಭವಿ ರೈತರಿಗೆ ಹಾಲು ಉತ್ಪಾದನಾ ಪ್ರೋತ್ಸಾಹ ಧನ ತಲುಪಬೇಕಿದೆ. ಕಳೆದ ಅಕ್ಟೋಬರ್ ತಿಂಗಳಿಂದ ಪ್ರೋತ್ಸಾಹ ಧನ ನೀಡದೇ ಸರ್ಕಾರ ತಡೆಹಿಡಿದಿದೆ. ಈ ಬಗ್ಗೆ ವಿಧಾನ ಪರಿಷತ್ ಕಲಾಪದಲ್ಲಿ ಪರಿಷತ್ ಸದಸ್ಯೆ ಉಮಾಶ್ರೀ ಹಾಗೂ ಎಂಜಿ ಮುಳೆ ಪ್ರಶ್ನೆ ಮಾಡಿದರು. ಈ ವೇಳೆ ಹಾಲಿನ ದರ ಏರಿಕೆಯ ಸುಳಿವನ್ನ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಪುನರುಚ್ಚರಿಸಿದ್ದಾರೆ.
ಇದನ್ನೂ ಓದಿ: ಹಾಲು ಉತ್ಪಾದಕರ 656 ಕೋಟಿ ರೂ. ಪ್ರೋತ್ಸಾಹ ಧನ ಬಾಕಿ ಉಳಿಸಿಕೊಂಡ ಸರ್ಕಾರ
ಆರ್ಥಿಕ ಇಲಾಖೆ ಹಣ ಬಿಡುಗಡೆ ಮಾಡಬೇಕಿದೆ. ಹಾಲು ಉತ್ಪಾದನೆ ಜಾಸ್ತಿ ಆಗುತ್ತಿದೆ, ಉತ್ಪಾದನೆಗೆ ತಕ್ಕಂತೆ ಬಜೆಟ್ ಅಲೋಕೇಷನ್ ಇಲ್ಲ. 1300-1500 ಕೋಟಿ ರೂ ಮಾತ್ರ ಬಜೆಟ್ ಹಂಚಿಕೆ ಇದೆ ಎಂದು ಸದನದ ಪ್ರಶ್ನೆಗೆ ಪಶುಸಂಗೋಪನಾ ಸಚಿವ ಉತ್ತರ ನೀಡಿದ್ದಾರೆ. ಇದೇ ವೇಳೆ, ಹಾಲಿನ ದರ ಹೆಚ್ಚಳ ಮಾಡಬೇಕು ಎಂಬ ಬೇಡಿಕೆ ರೈತರಿಂದ ಇದೆ. ರೇಟ್ ಜಾಸ್ತಿ ಮಾಡಬೇಕೆಂಬ ಒತ್ತಡ ಇದೆ ಎಂದು ಪ್ರಸ್ತಾಪಿಸಿದ್ದಾರೆ. ಈ ವೇಳೆ ಮಧ್ಯ ಪ್ರವೇಶಿಸಿದ ಪರಿಷತ್ ಸದಸ್ಯ ಭೋಜೇಗೌಡ, ಹಾಲಿನ ರೇಟ್ ಜಾಸ್ತಿ ಮಾಡುವಾಗ ಗ್ರಾಹಕರನ್ನೂ ಗಮನದಲ್ಲಿಟ್ಟುಕೊಂಡು ಮಾಡಿ ಅಂತ ಕುಟುಕಿದ್ದಾರೆ.
ಇದನ್ನೂ ಓದಿ: ನಂದಿನಿ ಹಾಲಿನ ದರ ಏರಿಕೆ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ನೀಡಿದ್ರು ಬಿಗ್ ಅಪ್ಡೇಟ್
ಕಳೆದ ವರ್ಷ ಹಾಲಿನ ಪ್ರಮಾಣ ಹಾಗೂ ದರ ಹೆಚ್ಚಳ ಏರಿಕೆ ಮಾಡಿದ್ದ ಸರ್ಕಾರ, ಇದೀಗ ಹಾಲು ಒಕ್ಕೂಟಗಳ ರೈತರಿಗೆ ಪ್ರೋತ್ಸಾಹ ಧನ ಕೊಡಬೇಕು ಅಂತ ದರ ಏರಿಕೆಗೆ ಮುಂದಾಗಿದೆ. ಪ್ರತಿ ಲೀಟರ್ಗೆ 5 ಏರಿಕೆಗೆ ಒತ್ತಡವಿದ್ದು, 2 ಅಥವಾ 3 ರೂ. ಏರಿಕೆ ಬಗ್ಗೆ ಚರ್ಚೆ ಆಗುತ್ತಿದೆ. ಈ ಎಲ್ಲ ಗೊಂದಲಗಳಿಗೂ ಅಧಿವೇಶನ ಮುಗಿದ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.







