- Kannada News Photo gallery Non-stop light fishing in the deep sea at From Udupi to Karwar, taja suddi
ಸಮುದ್ರದ ಆಳದಲ್ಲಿ ಅಕ್ರಮ ಶಿಕಾರಿ: ನಿಷೇಧದ ನಡುವೆಯೂ ನಡೆಯುತ್ತಿದೆ ಮತ್ಸ್ಯ ಬೇಟೆ
ಕರ್ನಾಟಕದ ಕರಾವಳಿಯಲ್ಲಿ ಅಕ್ರಮ ಮೀನುಗಾರಿಕೆಯಿಂದ ಮೀನು ಸಂಕುಲದಲ್ಲಿ ಭಾರಿ ಇಳಿಕೆಯಾಗುತ್ತಿರುವುದು ಬಹಿರಂಗವಾಗಿದೆ. ಬಲೆಗಳಿಗೆ ಬದಲಾಗಿ ಹೆಚ್ಚಿನ ವೋಲ್ಟೇಜ್‌ನ ಲೈಟ್‌ಗಳನ್ನು ಬಳಸಿ ಮೀನು ಹಿಡಿಯುವ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಸಾವಿರಕ್ಕೂ ಹೆಚ್ಚು ಬೋಟ್‌ಗಳು ಈ ಅಕ್ರಮದಲ್ಲಿ ತೊಡಗಿಕೊಂಡಿವೆ ಎಂದು ತಿಳಿದುಬಂದಿದೆ. ಸರ್ಕಾರ ಮತ್ತು ಮೀನುಗಾರಿಕಾ ಇಲಾಖೆಯ ನಿರ್ಲಕ್ಷ್ಯದಿಂದ ಈ ಸಮಸ್ಯೆ ಉಲ್ಬಣಗೊಳ್ಳುತ್ತಿದೆ ಎನ್ನಲಾಗುತ್ತಿದೆ.
Updated on: Mar 05, 2025 | 8:53 PM

ಕರಾವಳಿಯ ಆರ್ಥಿಕತೆಯ ಜೀವನಾಡಿ ಮೀನುಗಾರಿಕೆ. ಆದರೆ ಮತ್ಸ್ಯೋದ್ಯಮ ಇತಿಹಾಸದಲ್ಲಿ ಕಂಡು ಕೇಳರಿಯದ ಕುಸಿತ ಕಂಡಿದೆ. ಮೀನಿನ ಭೇಟೆ ಸಿಗದೆ ಸಣ್ಣಪುಟ್ಟ ಮೀನುಗಾರರು ಕೆಲಸ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿದೆ. ಹಾಗಾದರೆ ದಿಢೀರಾಗಿ ಸಮುದ್ರದಲ್ಲಿ ಮತ್ಸ್ಯ ಸಂತತಿಗಳು ಇಳಿಮುಖ ಆಗಲು ಕಾರಣವನ್ನು ಹುಡುಕಿಕೊಂಡು ಹೋದ ಟಿವಿ9 ತಂಡಕ್ಕೆ ಭಯಾನಕ ಸತ್ಯ ಕಂಡಿದೆ.

ಹೌದು. ಕಡಲ ಮಕ್ಕಳ ನೋವಿಗೆ ಧ್ವನಿಯಾಗಿ ಟಿವಿ9 ತಂಡ ನೇರವಾಗಿ ಆಳ ಸಮುದ್ರದಲ್ಲಿ ಕಾರ್ಯಾಚರಣೆಗೆ ಇಳಿದಿತ್ತು. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಸಮುದ್ರ ಕಿನಾರೆಯಿಂದ ಎಲ್ಲಾ ಸಿದ್ಧತೆಯನ್ನು ಮಾಡಿ ಸಣ್ಣ ದೋಣಿಯ ಮೂಲಕ ಆಳ ಸಮುದ್ರಕ್ಕೆ ಟಿವಿ9 ತಂಡ ಹೊರಟು ನಿಂತಿತ್ತು. ಪಡು ಕಡಲಿನಲ್ಲಿ ಸೂರ್ಯ ಮುಳುಗಿ ರಾತ್ರಿ ಆಗುವ ಹೊತ್ತಿಗೆ ಟಿವಿ9 ತಂಡ ಅಬ್ಬರದ ಅಲೆಗಳನ್ನು ಸೀಳಿ ಆಳ ಸಮುದ್ರಕ್ಕೆ ಇಳಿದೆ ಬಿಟ್ಟಿತ್ತು.

ಸುಮಾರು ಮೂರುವರೆ ಗಂಟೆಗಳ ಸಣ್ಣದೋಣಿಯ ಸಮುದ್ರ ಯಾನದ ಬಳಿಕ, ಸುಮಾರು ಎರಡು ನಾಟಿಕಲ್ ಮೈಲ್ ದೂರದಲ್ಲಿ ಅಕ್ರಮ ನಡೆಯುತ್ತಿರುವ ಪ್ರಕಾಶಮಾನವಾದ ಲೈಟ್ ಟಿವಿ9 ಕ್ಯಾಮೆರಾ ಕಣ್ಣಿಗೆ ಬಿತ್ತು. ಪ್ರಕಾಶಮಾನವಾಗಿ ಕಾಣುತ್ತಿದ್ದ ಲೈಟಿನ ಜಾಡನ್ನು ಹಿಡಿದು ಹೋದಾಗ ಟಿವಿ9 ತಂಡಕ್ಕೆ ಕಂಡಿದ್ದು ಬಹುದೊಡ್ಡ ಅಕ್ರಮ ಮತ್ಸ್ಯ ಸಂಕುಲಕ್ಕೆ ವಿನಾಶವಾದ ಆಕ್ರಮವಾದ ಮೀನಿನ ಬೇಟೆ.

ಒಂದೊಂದು ಲೈಟ್ ಸಾವಿರಕ್ಕೂ ಅಧಿಕ ವೋಲ್ಟೇಜ್ ನ ಸಾಮರ್ಥ್ಯವಿದ್ದು, ಕೋರಿಯನ್ ಹೆಸರಿನ ಈ ಒಂದು ಲೈಟ್ನ ಬೆಲೆ 1 ಲಕ್ಷ ರೂ. ಇಂತಹ 20 ಲೈಟ್ಗಳನ್ನು ಆಳ ಸಮುದ್ರದಲ್ಲಿ ಲಂಗರು ಹಾಕಿದ್ದ ಬೋಟಿಗೆ ಕಟ್ಟಲಾಗಿತ್ತು. ಎಷ್ಟರಮಟ್ಟಿಗೆ ಆ ಲೈಟು ಪ್ರಕಾಶಮಾನವಾಗಿತ್ತು ಅಂದರೆ, ಸುತ್ತಲಿನ 15 ರಿಂದ 20 ಕಿ.ಮೀ ವರೆಗೆ ಆ ಬೆಳಕು ಪಸರಿಸಿತ್ತು.

ಕೇರಳದ ಗಡಿಯಿಂದ ಗೋವಾದ ಗಡಿಯವರಿಗೆ ರಾಜ್ಯದ ಸಮುದ್ರ ಪಸರಿಸಿಕೊಂಡಿದ್ದು, ಸುಮಾರು ಸಾವಿರಕ್ಕೂ ಅಧಿಕ ಬೋಟ್ಗಳು ಈ ರೀತಿಯ ಆಕ್ರಮ ಮೀನುಗಾರಿಕೆ ನಡೆಸುತ್ತಿವೆ. ಇವರ ಅಕ್ರಮ ಶಿಕಾರಿಗಳಿಗೆ ಬಂಡವಾಳ ಶಾಹಿಗಳ ದೊಡ್ಡ ದೊಡ್ಡ ಮೀನುಗಾರರ ಮುಖಂಡರ ಕೃಪಕಟಾಕ್ಷ ಇದೆ ಎಂಬುದು ಮೀನುಗಾರರ ಆರೋಪವಾಗಿದೆ.

ಎಲ್ಲಾ ಅಕ್ರಮ ನಡೆಯುತ್ತಿದ್ದರು ಉಡುಪಿಯ ಪಕ್ಕದ ಜಿಲ್ಲೆಯ ಮೀನುಗಾರಿಕಾ ಸಚಿವ ಮಾಂಕಾಳು ವೈದ್ಯ ಸುಮ್ಮನಿರುವುದು ಮೀನುಗಾರರನ್ನು ಆಕ್ರೋಶಗೊಳ್ಳುವಂತೆ ಮಾಡಿದೆ. ಸರ್ಕಾರ ಮೀನುಗಾರಿಕೆ ಇಲಾಖೆ, ಮೀನುಗಾರಿಕಾ ಸಚಿವರು ಇಲ್ಲಿಯವರೆಗೆ ಸಾಕ್ಷಿ ಇಲ್ಲ ಎಂದು ಉದ್ಧಟತನ ಹೇಳಿಕೆ ನೀಡುತ್ತಿದ್ದವರಿಗೆ ಟಿವಿ9 ತಂಡ ಆಳ ಸಮುದ್ರಕ್ಕೆ ಇಳಿದು ಸಾಕ್ಷ್ಯ ನೀಡಿದೆ. ಇನ್ನಾದರೂ ಸರಕಾರ, ಮೀನುಗಾರಿಕಾ ಇಲಾಖೆ, ಮೀನುಗಾರಿಕಾ ಸಚಿವರು ಎಚ್ಚೆತ್ತುಕೊಂಡು ಇದರ ಬಗ್ಗೆ ಕ್ರಮ ಕೈಗೊಳ್ಳುತ್ತಾ ಎಂದು ಕಾದು ನೋಡಬೇಕಾಗಿದೆ.



















