ಬೆಂಗಳೂರು: ಯುವತಿ ಜತೆ ಲಿವ್ ಇನ್ನಲ್ಲಿದ್ದ ಉತ್ತರ ಪ್ರದೇಶದ ಯುವಕ 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ
ಉತ್ತರ ಪ್ರದೇಶದ ಯುವಕನೊಬ್ಬ ಬೆಂಗಳೂರಿನಲ್ಲಿ 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದು, ಘಟನೆ ಬಗ್ಗೆ ಅನೇಕ ಅನುಮಾನಗಳು ವ್ಯಕ್ತವಾಗಿವೆ. ಮೃತ ವ್ಯಕ್ತಿಯನ್ನು ಮಯಾಂಕ್ ರಜನಿ ಎಂದು ಗುರುತಿಸಲಾಗಿದ್ದು, ಆತನ ಆತ್ಮಹತ್ಯೆಗೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಸದ್ಯ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

ಬೆಂಗಳೂರು, ಮಾರ್ಚ್ 6: ಯುವತಿಯೊಬ್ಬಳ ಜೊತೆ ಲಿವಿಂಗ್ ಟುಗೆದರ್‌ನಲ್ಲಿದ್ದ (Live-in Relationship) ಯುವಕನೊಬ್ಬ 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ (Bangalore) ಹರಳೂರು ಕೂಡ್ಲು ರಸ್ತೆಯ ಎಸ್ಎನ್ಎನ್ ರಾಜ್ ಎಟರ್ನಿಯ ಅಪಾರ್ಟ್ಮೆಂಟ್‌ನಲ್ಲಿ ನಡೆದಿರುವುದು ತಿಳಿದುಬಂದಿದೆ. ಮಾರ್ಚ್ 4 ರಂದು ಮುಂಜಾನೆ 5 ಗಂಟೆಗೆ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತಪಟ್ಟ ಯುವಕನನ್ನು ಉತ್ತರ ಪ್ರದೇಶ ಮೂಲದ ಮಾಯಾಂಕ್ ರಜನಿ ಎಂದು ಗುರುತಿಸಲಾಗಿದೆ.
ನಡೆದಿದ್ದೇನು?
ಮಾರ್ಚ್ 4ರ ನಸುಕಿನಲ್ಲಿ ಮಯಾಂಕ್ ರಜನಿ ಅಪಾರ್ಟ್ಮೆಂಟ್ನ 12ನೇ ಮಾಡಿಂದ ಕೆಳಗೆ ಹಾರಿದ್ದಾನೆ. ಅದಾದ ಸ್ವಲ್ಪ ಹೊತ್ತಿನ ಬಳಿಕ ಸೆಕ್ಯೂರಿಟಿ ಗಾರ್ಡ್ಗೆ ಯುವಕನ ಮೃತದೇಹ ಕಾಣಿಸಿದೆ. ಗಾಬರಿಗೊಂಡ ಆತ 12ನೇ ಮಹಡಿಯಲ್ಲಿರುವ ಯುವಕನ ಕೊಠಡಿಗೆ ತೆರಳಿ ಬಾಗಿಲು ಬಡಿದಿದ್ದಾನೆ. ಆಗ ತಾನೆ ಎದ್ದು ಬಂದ ಯುವತಿ, ಸೆಕ್ಯೂರಿಟಿ ಗಾರ್ಡ್ ಹೇಳಿದ ವಿಚಾರ ತಿಳಿದು ಗಾಬರಿಗೊಂಡಿದ್ದಾಳೆ.
ಉತ್ತರ ಪ್ರದೇಶದ ಮಯಾಂಕ್ 4 ವರ್ಷಗಳಿಂದ ಬೆಂಗಳೂರಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ. ಫ್ಲಾಟ್ ಬಾಡಿಗೆಗೆ ಪಡೆದು ವಾಸ ಮಾಡುತ್ತಿದ್ದ. ಕಳೆದ ಎರಡು ವರ್ಷಗಳಿಂದ ಯುವತಿ ಜೊತೆ ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದ.
ಮೃತ ಯುವಕ ಕೆಲವು ಸಮಯದಿಂದ ಬೆಂಗಳೂರಿನಲ್ಲಿ ಸ್ಟಾರ್ಟ್ ಅಪ್ ಒಂದನ್ನು ಶುರು ಮಾಡಿದ್ದ. ಅದರಲ್ಲಿ ನಷ್ಟವಾದ ಕಾರಣ ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗಿದೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅಸಹಜ ಸಾವು ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ವೈಟ್ ಆ್ಯಂಡ್ ಬ್ಲಾಕ್ ದಂಧೆ ಹೆಸರಿನಲ್ಲಿ ಕೋಟ್ಯಂತರ ರೂ ದರೋಡೆ: ಮೂವರ ಬಂಧನ
ಸ್ಟಾರ್ಟ್ಅಪ್ನಲ್ಲಿ ಆದ ನಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೇ ಅಥವಾ ಬೇರೆ ಕಾರಣಗಳಿವೆಯೇ ಎಂಬ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:13 am, Thu, 6 March 25