AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಣಿಜ್ಯ, ಕೈಗಾರಿಕಾ ಬಳಕೆಯ ವಿದ್ಯುತ್ ದರ ಏರಿಕೆಗೆ ಪ್ರಸ್ತಾವನೆ: ಬೆಸ್ಕಾಂ ನಡೆ ವಿರುದ್ಧ ಎಫ್​ಕೆಸಿಸಿಐ ತೀವ್ರ ಅಸಮಾಧಾನ

ಕರ್ನಾಟಕದ ಎಲ್ಲಾ ವಿದ್ಯುತ್​ ನಿಗಮಗಳು ನಾಲ್ಕೈದು ತಿಂಗಳ ಹಿಂದೆಯಷ್ಟೇ ವಿದ್ಯುತ್​ ದರ ಏರಿಕೆ ಮಾಡಿ ಗ್ರಾಹಕರಿಗೆ ಶಾಕ್​ ನೀಡಿದ್ದವು. ದುಬಾರಿ ದುನಿಯಾದಲ್ಲಿ ವಿದ್ಯುತ್​ ಬೆಲೆ ಏರಿಕೆಯ ಬರೆ ಜನಸಾಮಾನ್ಯರನ್ನು ಇನ್ನೂ ಕಾಡುತ್ತಿದೆ. ವಾಣಿಜ್ಯ ಹಾಗೂ ಕೈಗಾರಿಕಾ ವಲಯ ಕೂಡ ಇದಕ್ಕೆ ಹೊರತಾಗಿಲ್ಲ. ಈಗ ಮತ್ತೆ ವಿದ್ಯುತ್ ದರ ಏರಿಕೆಗೆ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗಕ್ಕೆ ಬೆಸ್ಕಾಂ ಪ್ರಸ್ತಾವನೆ ಸಲ್ಲಿಸಿದ್ದು, ಆಕ್ರೋಶಕ್ಕೆ ಗುರಿಯಾಗಿದೆ.

ವಾಣಿಜ್ಯ, ಕೈಗಾರಿಕಾ ಬಳಕೆಯ ವಿದ್ಯುತ್ ದರ ಏರಿಕೆಗೆ ಪ್ರಸ್ತಾವನೆ: ಬೆಸ್ಕಾಂ ನಡೆ ವಿರುದ್ಧ ಎಫ್​ಕೆಸಿಸಿಐ ತೀವ್ರ ಅಸಮಾಧಾನ
ಸಾಂದರ್ಭಿಕ ಚಿತ್ರ
Ganapathi Sharma
|

Updated on: Sep 12, 2025 | 8:09 AM

Share

ಬೆಂಗಳೂರು, ಸೆಪ್ಟೆಂಬರ್ 12: ಮಾರ್ಚ್,​ ಏಪ್ರಿಲ್​ ತಿಂಗಳಲ್ಲಿ ಮಾಡಿದ ವಿದ್ಯುತ್​ ದರ ಏರಿಕೆ (Electricity Tariff) ಜನಸಾಮಾನ್ಯರಿಂದ ಹಿಡಿದು ವಾಣಿಜ್ಯ ಹಾಗೂ ಕೈಗಾರಿಕೋದ್ಯಮಕ್ಕೂ ಭಾರೀ ಆಘಾತ ತಂದೊಡ್ಡಿತ್ತು. ಈಗ ಮತ್ತೆ ವಾಣಿಜ್ಯ ಬಳಕೆಯ ಮತ್ತು ಕೈಗಾರಿಕೆಗಳ ವಿದ್ಯುತ್​ ದರ ಏರಿಕೆಗೆ ಬೆಸ್ಕಾಂ (BESCOM) ಚಿಂತನೆ ನಡೆಸಿದ್ದು, ಕರ್ನಾಟಕ ವಿದ್ಯುಚ್ಛಕ್ಕಿ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ರಾಜ್ಯ ಸರ್ಕಾರದ ಒಡೆತನದಲ್ಲಿರುವ ವಿದ್ಯುತ್ ವಿತರಣಾ ಕಂಪನಿಗಳು ಕೃಷಿ ಪಂಪ್‌ಸೆಟ್‌ಗೆ ವಿದ್ಯುತ್ ದರ ಕಡಿಮೆ ಮಾಡಿ ಕೈಗಾರಿಕೆ ಮತ್ತು ವಾಣಿಜ್ಯ ಬಳಕೆಗೆದಾರರಿಗೆ ಪ್ರತಿ ಯೂನಿಟ್‌ಗೆ 10 ಪೈಸೆಯಿಂದ 1 ರೂ. ಹೆಚ್ಚಿಸಲು ತಯಾರಿ ನಡೆಸಿವೆ. ಆದರೆ ಬೆಸ್ಕಾಂ ಸಲ್ಲಿಸಿರುವ ಪ್ರಸ್ತಾವನೆಗೆ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯ ಮಹಾಸಂಸ್ಥೆ (FKCCI) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ವಿದ್ಯುತ್ ದರ ಹೆಚ್ಚಳ ಪ್ರಸ್ತಾಪಕ್ಕೆ ಕಾರಣವೇನು?

ನೀರಾವರಿ ಉದ್ದೇಶಕ್ಕಾಗಿ ರೈತರು ಪಂಪ್​ ಸೆಟ್​​ಗಳಿಗೆ ಪ್ರೋತ್ಸಾಹ ಯೋಜನೆಯಡಿ ಬಳಕೆ ಮಾಡುತ್ತಿರುವ ವಿದ್ಯುತ್​ಗೆ ಸರ್ಕಾರ ಸಮರ್ಪಕವಾಗಿ ಸಬ್ಸಿಡಿ ಹಣ ಬಿಡುಗಡೆ ಮಾಡುತ್ತಿಲ್ಲ. ಹೀಗಾಗಿ ಬೆಸ್ಕಾಂಗೆ ಆದಾಯದಲ್ಲಿ ಹಿನ್ನಡೆಯುಂಟಾಗಬಹುದು ಎಂದು ನಿರೀಕ್ಷಿಸಲಾಗಿದೆ. ಬಜೆಟ್‌ನಲ್ಲಿ ಸರ್ಕಾರ ನೀಡಿರುವುದು 16021 ಕೋಟಿ ರೂ. ಮಾತ್ರ. ರಾಜ್ಯ ಸರ್ಕಾರ ಬಾಕಿ ಉಳಿದಿರುವ ಸಬ್ಸಿಡಿಯನ್ನ ಹೆಚ್ಚುವರಿಯಾಗಿ 2,36,247 ಕೋಟಿ ರೂ. ನೀಡಿದರೂ 1214.12 ಕೋಟಿ ರೂ. ಕೊರತೆ ಉಂಟಾಗಲಿದೆ. ಇದನ್ನು ಸರಿತೂಗಿಸಲು ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರ ಮೇಲೆ ಪ್ರತಿ ಯೂನಿಟ್‌ಗೆ 10 ಪೈಸೆಯಿಂದ 1 ರೂ. ವರೆಗೆ ಹೆಚ್ಚಿಸಲು ಇದೀಗ ಕೋರಲಾಗಿದೆ.

ಇದನ್ನೂ ಓದಿ: ಕೈಗೆ ಬಂದ ತುತ್ತು ಬಾಯಿಗಿಲ್ಲ? ಜಿಎಸ್​ಟಿ ದರ ಇಳಿಕೆ ಬೆನ್ನಲ್ಲೇ ವಾಣಿಜ್ಯ ಬಳಕೆ ವಿದ್ಯುತ್ ದರ ಹೆಚ್ಚಳಕ್ಕೆ ಮುಂದಾದ ಕರ್ನಾಟಕ

ಆದರೆ, ಯಾರದ್ದೋ ಹೊರೆಯನ್ನ ವಾಣಿಜ್ಯ ಹಾಗೂ ಕೈಗಾರಿಕಾ ವಲಯದ ಮೇಲೆ ಹೇರುವುದು ಸರಿಯಲ್ಲ ಎಂದು ಎಫ್​ಕೆಸಿಸಿಐ ಅಸಮಾಧಾನ ಹೊರಹಾಕಿದೆ.

ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರ ಮೇಲೆ ಹೆಚ್ಚಿನ ದರ ವಿಧಿಸುವಂತೆ ಬೆಸ್ಕಾಂ ಕೋರಿರುವುದಕ್ಕೆ ಉದ್ಯಮಿಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ದರ ಏರಿಕೆ ಆದರೆ ಗ್ರಾಹಕರ ಮೇಲೆಯೂ ಪರಿಣಾಮ ಬೀರಬಹುದು. ಉದ್ಯಮಿಗಳು ಉತ್ಪಾದನಾ ವೆಚ್ಚ ಏರಿಕೆಯಾದರೆ ಗ್ರಾಹಕರಿಗೂ ಇದನ್ನ ವರ್ಗಾಯಿಸುವ ಸಾಧ್ಯತೆ. ಸದ್ಯ ಬೆಲೆ ಏರಿಕೆಯ ಚೆಂಡು ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗದ ಅಂಗಳದಲ್ಲಿ ಬೆಸ್ಕಾಂ ಪ್ರಸ್ತಾವನೆಗೆ ಅಸ್ತು ಎನ್ನುತ್ತದೆಯಾ ಎಂಬುದನ್ನು ಕಾದುನೋಡಬೇಕಿದೆ.

ವರದಿ: ಲಕ್ಷ್ಮಿ ನರಸಿಂಹ, ಟಿವಿ9, ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ