ದುಬಾರಿ ಬೆಲೆಗೆ ಬಾರ್​ಗಳಿಗೆ ಕನ್ನಡಾಂಬೆ ಫೋಟೊ ಮಾರಿದ ಅಬಕಾರಿ ಇಲಾಖೆ: ಫೋಟೊಗಳಲ್ಲಿ ಅನ್ಯ ಬಾವುಟ: ವ್ಯಾಪಕ ಆಕ್ರೋಶ

ಹಣ ಮಾಡುವ ಧಾವಂತದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಭುವನೇಶ್ವರಿಗೆ ಅವಮಾನ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ದುಬಾರಿ ಬೆಲೆಗೆ ಬಾರ್​ಗಳಿಗೆ ಕನ್ನಡಾಂಬೆ ಫೋಟೊ ಮಾರಿದ ಅಬಕಾರಿ ಇಲಾಖೆ: ಫೋಟೊಗಳಲ್ಲಿ ಅನ್ಯ ಬಾವುಟ: ವ್ಯಾಪಕ ಆಕ್ರೋಶ
ಬೆಂಗಳೂರಿನ ಬಾರ್ ಒಂದರಲ್ಲಿ ಕಂಡು ಬಂದಿರುವ ಭುವನೇಶ್ವರಿ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Nov 02, 2022 | 9:13 AM

ಬೆಂಗಳೂರು: ಕನ್ನಡ ರಾಜ್ಯೋತ್ಸವದ ಹೆಸರಿನಲ್ಲಿ ಅಬಕಾರಿ ಇಲಾಖೆಯು ಅಕ್ರಮವಾಗಿ ಹಣ ಲೂಟಿ ಮಾಡಿದೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿಬಂದಿವೆ. ಬೆಂಗಳೂರಿನ ಬಾರ್, ವೈನ್ಸ್, ಪಬ್​​ಗಳಿಗೆ ಭುವನೇಶ್ವರಿ ಫೋಟೊ ನೀಡಿ ₹ 1 ಸಾವಿರದಿಂದ ₹ 5 ಸಾವಿರದವರೆಗೆ ಹಣ ಪಡೆಯಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಚಿತ್ರಗಳಲ್ಲಿರುವ ಕನ್ನಡಾಂಬೆ ಭುವನೇಶ್ವರಿಯ ಪ್ರತೀಕವಾಗಿರುವ ಕಲಾಕೃತಿಗಳಲ್ಲಿ ಕನ್ನಡ ಬಾವುಟದ ಬದಲು ಬೇರೊಂದು ಬಾವುಟ ಕಾಣಿಸಿಕೊಂಡಿರುವುದು ಜನರಲ್ಲಿ ಆಕ್ರೋಶ ಮೂಡಿಸಿದೆ. ಹಲವು ಬಾರ್​ ಮಾಲೀಕರು ಸಹ ಅಬಕಾರಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಣ ಮಾಡುವ ಧಾವಂತದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಭುವನೇಶ್ವರಿಗೆ ಅವಮಾನ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಕನ್ನಡ ರಾಜ್ಯೋತ್ಸವ ಸಂದರ್ಭವನ್ನೇ ಬಂಡವಾಳ ಮಾಡಿಕೊಂಡಿರುವ ಅಧಿಕಾರಿಗಳು ಭುವನೇಶ್ವರಿಯ ಕೈಗೆ ಕೆಂಪು-ಹಳದಿಯ ಕನ್ನಡ ಬಾವುಟದ ಬದಲು ಬೇರೆ ಬಾವುಟ ನೀಡಿದ್ದಾರೆ ಎಂದು ದೂರಲಾಗಿದೆ. ಭುವನೇಶ್ವರಿ ಫೋಟೋ ಮೇಲೆ ಕನ್ನಡ ಸಾಹಿತ್ಯ ಪರಿಷತ್ತಿನ ಚಿಹ್ನೆಯೂ ಇದೆ.

ಅಬಕಾರಿ ಇಲಾಖೆ ಕನ್ನಡ ಸಾಹಿತ್ಯ ಪರಿಷತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು ಬಾರ್, ವೈನ್ಸ್, ಪಬ್​ನಲ್ಲಿ ಈ ರೀತಿಯ ತಿರುಚಿ ಫೋಟೋ ಇರಿಸಲು ಹೇಗೆ ಅನುಮತಿ ನೀಡಿದಿರಿ ಎಂದು ಪ್ರಶ್ನಿಸುತ್ತಿದ್ದಾರೆ. ನೇರವಾಗಿ ಯಾವುದೇ ಉತ್ತರ ನೀಡದ ಕಸಾಪ ಅಧ್ಯಕ್ಷ ಮಹೇಶ್ ಜೋಷಿ, ‘ಈ ಬಗ್ಗೆ ಅಬಕಾರಿ ಅಧಿಕಾರಿಗಳಿಂದ ವಿವರಣೆ ಪಡೆಯುವೆ. ಕಸಾಪಗೆ ಅವಮಾನ ಮಾಡಲು ಯಾರೋ ಕಿಡಿಗೇಡಿಗಳು ಈ ಕೆಲಸ ಮಾಡಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

ಪೊಲೀಸ್ ಆಯುಕ್ತರಿಗೆ ದೂರು

ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಅವಮಾನ ಮಾಡಿರುವ ಕಿಡಿಗೇಡಿಗಳ ವಿರುದ್ಧ ಕನ್ನಡ ಸಾಹಿತ್ಯ ಪರಿಷತ್ ಪೊಲೀಸ್ ಹಾಗೂ ಅಬಕಾರಿ ಆಯುಕ್ತರಿಗೆ ದೂರು ನೀಡಿದೆ. ಬಾರ್ ಮತ್ತು ವೈನ್ ಸ್ಟೋರ್​ಗಳಲ್ಲಿ ಭುವನೇಶ್ವರಿ ತಾಯಿಯ ಭಾವಚಿತ್ರವನ್ನು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಅಬಕಾರಿ ಇಲಾಖೆಯ ಹೆಸರಿನಲ್ಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದು ಕಸಾಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಈ ಕೃತ್ಯ ಮಾಡುವವರ ವಿರುದ್ದ ಕನ್ನಡ ಸಾಹಿತ್ಯ ಪರಿಷತ್ ಕಾನೂನು ಕ್ರಮ‌ ತೆಗೆದುಕೊಳ್ಳಲಿದೆ. ಕನ್ನಡ ತಾಯಿ ಭುವನೇಶ್ವರಿ ಪೋಟೋಗಳು ಕೈಗೆ ಎಟಕುವ ದರದಲ್ಲಿ ಅಂತರ್ಜಾಲದಲ್ಲಿಯೂ ಲಭ್ಯವಿದೆ ಎಂದು ಪರಿಷತ್ ತಿಳಿಸಿದೆ.

ಕೆಲ ಸಮಾಜ ಘಾತುಕರು ಪಬ್ ಬಾರ್​ಗಳಿಗೆ ಭುವನೇಶ್ವರಿ ಪೋಟೋಗಳನ್ನು ದುಬಾರಿ ಬೆಲೆಗೆ ಮಾರಲು ಯತ್ನಿಸಿ, ಅಬಕಾರಿ ಇಲಾಖೆಯ ಅಧಿಕಾರಿಗಳೇ ಕೊಟ್ಟಿದ್ದಾರೆ ಎನ್ನುತ್ತಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿಗೆ ಅಪಾರಾವಾದ ಘನತೆ ಮತ್ತು ಗೌರವವಿದೆ. ಈ ಬೆಳವಣಿಗೆಯ ಬಗ್ಗೆ ತಿಳಿದ ಕೂಡಲೇ ಪೋಲಿಸ್ ಆಯುಕ್ತರಿಗೆ ಹಾಗೂ ಅಬಕಾರಿ ಆಯುಕ್ತರಿಗೆ ದೂರು ನೀಡಿದ್ದೇವೆ. ಭುವನೇಶ್ವರಿ ತಾಯಿಯ ಪೋಟೋವನ್ನ ದುರುಪಯೋಗ ಮಾಡಿಕೊಳ್ಳುವವರ ವಿರುದ್ದ ಕ್ರಮ ತಗೆದುಕೊಳ್ಳುವಂತೆ ಒತ್ತಾಯಿಸಿದ್ದೇವೆ ಎಂದು ಪ್ರಕಟಣೆಯು ತಿಳಿಸಿದೆ.

Published On - 9:11 am, Wed, 2 November 22