ಬಿಕ್ಲು ಶಿವ ಕೊಲೆ ಕೇಸ್: ಜೈಲಿನಿಂದ ಹೊರಬಂದಿದ್ದರೂ ಭೈರತಿ ಬಸವರಾಜ್‌ಗೆ ಎದುರಾಯ್ತು ಸಂಕಷ್ಟ
ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಕೆ.ಆರ್ ಪುರಂ ಬಿಜೆಪಿ ಶಾಸಕ ಭೈರತಿ ಬಸವರಾಜ್‌ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಜೈಲಿನಿಂದ ಬಿಡುಗಡೆ ಬೆನ್ನಲ್ಲೇ ಶಾಸಕರ ಜಾಮೀನು ರದ್ದುಪಡಿಸುವಂತೆ ಸಿಐಡಿ ಪೊಲೀಸರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಆ ಮೂಲಕ ಮತ್ತೆ ಸಂಕಷ್ಟ ಶುರುವಾಗಿದೆ.

ಬೆಂಗಳೂರು, ಏಪ್ರಿಲ್ 06: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಇದೇ ಕೇಸ್ನಲ್ಲಿ ಬಂಧನಕ್ಕೊಳಗಾಗಿದ್ದ ಕೆ.ಆರ್ ಪುರಂ ಶಾಸಕ ಭೈರತಿ ಬಸವರಾಜ್ (Byrathi Basavaraj) ಇತ್ತೀಚೆಗೆ ಜಾಮೀನು ಮೇಲೆ ಬಿಡುಗಡೆಯಾಗಿದ್ದರು. ಇದೀಗ ಜಾಮೀನು ರದ್ದುಪಡಿಸುವಂತೆ ಕೋರಿ ಸಿಐಡಿ ಪೊಲೀಸರಿಂದ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ. ಆ ಮೂಲಕ ಭೈರತಿ ಬಸವರಾಜ್‌ಗೆ ಮತ್ತೆ ಸಂಕಷ್ಟ ಶುರುವಾಗಿದೆ.
ರೌಡಿಶೀಟರ್ ಬಿಕ್ಲು ಶಿವ ಅಲಿಯಾಸ್ ಶಿವಕುಮಾರ್ ಕೊಲೆ ಪ್ರಕರಣದಲ್ಲಿ 5ನೇ ಆರೋಪಿಯಾಗಿರುವ ಕೆ.ಆರ್.ಪುರಂ ಬಿಜೆಪಿ ಶಾಸಕ ಭೈರತಿ ಬಸವರಾಜ್ 6 ತಿಂಗಳ ಬಳಿಕ ಬಲೆಗೆ ಬಿದ್ದಿದ್ದರು. ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ರಾತ್ರಿ ಪೊಲೀಸರು ಭೈರತಿಯನ್ನು ಬಂಧಿಸಿದ್ದರು. ನಂತರ ಸಿಐಡಿಗೆ ಹಸ್ತಾಂತರಿಸಲಾಗಿತ್ತು.
ಇದನ್ನೂ ಓದಿ: Byrathi Basavaraj Release: ಸೆಂಟ್ರಲ್ ಜೈಲಿನಿಂದ ಬಿಜೆಪಿ ಶಾಸಕ ಬೈರತಿ ಬಸವರಾಜ್ ರಿಲೀಸ್
7 ದಿನ ಸಿಐಡಿ ಕಸ್ಟಡಿಗೆ ನೀಡಿ 42ನೇ ACJM ಕೋರ್ಟ್ ಜಡ್ಜ್ ಆದೇಶ ಹೊರಡಿಸಿತ್ತು. 7 ದಿನಗಳ ಕಾಲ ಸಿಐಡಿ ಅಧಿಕಾರಿಗಳು 258 ಪ್ರಶ್ನೆಗಳನ್ನು ಮಾಡಿದ್ದರು. ಈ ವೇಳೆ ಬಹುತೇಕ ಪ್ರಶ್ನೆಗಳಿಗೆ ಶಾಸಕರು ಗೊತ್ತಿಲ್ಲ ಎಂದು ಉತ್ತರವನ್ನೇ ನೀಡಿದ್ದರು. ಇದರ ಜೊತೆಗೆ ಶಾಸಕರ ಎರಡು ಮೊಬೈಲ್ಗಳು ಕೂಡ ಸಿಐಡಿ ಜಪ್ತಿ ಮಾಡಿತ್ತು. ಮಾರ್ಚ್ 13ರಂದು ಷರತ್ತುಬದ್ಧ ಜಾಮೀನು ಮಂಜೂರು ಬೆನ್ನಲ್ಲೇ ಸೆಂಟ್ರಲ್ ಜೈಲಿನಿಂದ ಶಾಸಕ ಭೈರತಿ ಬಸವರಾಜ್ ಬಿಡುಗಡೆ ಆಗಿದ್ದರು.
ಪ್ರಕರಣದ ಹಿನ್ನೆಲೆ
ಕಿತ್ತಗನೂರಿನ ಜಮೀನು ವಿವಾದದ ಹಿನ್ನೆಲೆ ಕಳೆದ ವರ್ಷ ಜುಲೈ 15ರಂದು ದುಷ್ಕರ್ಮಿಗಳ ಗುಂಪೊಂದು ಮಾಜಿ ರೌಡಿ ಶೀಟರ್ ಬಿಕ್ಲು ಶಿವನನ್ನು ಮಚ್ಚು, ಲಾಂಗ್ಗಳಿಂದ ಅಟ್ಯಾಕ್ ಮಾಡಿ ಕೊಲೆ ಮಾಡಿತ್ತು. ಮೃತನ ತಾಯಿ ಭೈರತಿ ಬಸವರಾಜ್ ಸೇರಿದಂತೆ ಹಲವರ ಮೇಲೆ ದೂರು ನೀಡಿದ್ದರು. ಎಫ್ಐಆರ್ ದಾಖಲಾಗುತ್ತಿದ್ದಂತೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿ ಬಂಧನದಿಂದ ಮಧ್ಯಂತರ ರಕ್ಷಣೆ ಪಡೆದ ಭೈರತಿ ಬಸವರಾಜ್ ಪೊಲೀಸರ ಮುಂದೆ ತನಿಖೆಗೆ ಹಾಜರಾಗಿದ್ದರು. ಆದರೆ ಪ್ರಯಾಗ್ ರಾಜ್ಗೆ ತನ್ನ ಜೊತೆಯಲ್ಲೇ ಪ್ರಯಾಣಿಸಿದ ಎ1 ಆರೋಪಿ ಜಗ್ಗ ಅಲಿಯಾಸ್ ಜಗದೀಶ್ ಯಾರೆಂಬುದೇ ಗೊತ್ತಿಲ್ಲವೆಂದು ಹೇಳಿಕೆ ನೀಡಿದ್ದರು. ಈ ವೇಳೆ ಭೈರತಿ ಬಸವರಾಜ್ ತಗ್ಲಾಕಿಕೊಂಡಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



